Aadhaar Mitra: ಆಧಾರ್ ಬಗ್ಗೆ ಎಐ ಆಧಾರಿತ ಚಾಟ್ಬಾಟ್ ಸಹಾಯ; ಏನಿದು ಆಧಾರ್ ಮಿತ್ರಾ?
UIDAI Aadhaar Chatbot: ಯುಐಡಿಎಐ ಸಂಸ್ಥೆ ಆಧಾರ್ ಕಾರ್ಡ್ದಾರರಿಗೆ ಸಹಾಯವಾಗಿ ಆಧಾರ್ ಮಿತ್ರಾ ಎಂಬ ಚಾಟ್ ಬಾಟ್ ಬಿಡುಗಡೆ ಮಾಡಿದೆ. ಆಧಾರ್ ಸಂಬಂಧಿತ ಯಾವುದೇ ಪ್ರಶ್ನೆ ಇದ್ದರೂ ಇದು ಸ್ವಯಂಚಾಲಿತವಾಗಿ ಉತ್ತರ ನೀಡಬಲ್ಲುದು.
ಆಧಾರ್ ಸಂಬಂಧಿತ ಅನುಮಾನಗಳಿಗೆ ಪರಿಹಾರ ಮತ್ತು ಸಲಹೆಗಳು ಇತ್ಯಾದಿಗಾಗಿ ಯುಐಡಿಎಐ ಸಂಸ್ಥೆ (UIDAI) ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್ಬಾಟ್ (Chatbot) ಬಿಡುಗಡೆ ಮಾಡಿದೆ. ಆಧಾರ್ನ ಪಿವಿಸಿ ಸ್ಟೇಟಸ್ ಪರಿಶೀಲಿಸಲು, ಆಧಾರ್ ದೂರು ದಾಖಲಿಸಲು ಈ ಚಾಟ್ಬೋಟ್ ಸಹಾಯವಾಗಲಿದೆ. ಸದ್ಯ ಇದು ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಲ್ಲಿ ಇದ್ದು, ಮುಂದಿನ ದಿನಗಳಲ್ಲಿ ಕನ್ನಡವೂ ಸೇರಿದಂತೆ ಇತರ ಭಾಷೆಗಳಲ್ಲೂ ಲಭ್ಯವಾಗುವ ಸಾಧ್ಯತೆ ಇದೆ.
ಯುಐಡಿಎಐನ ಅಧಿಕೃತ ವೆಬ್ಸೈಟ್ನಲ್ಲಿ ಆಧಾರ್ ಮಿತ್ರಾ ಚಾಟ್ಬೋಟ್ ಲಭ್ಯ ಇದೆ. ಆಧಾರ್ ವ್ಯವಸ್ಥೆಯ ಸಮಗ್ರ ಸೌಲಭ್ಯಗಳ ಮಾಹಿತಿ ಹೊಂದಿರುವ ಚಾಟ್ಬೋಟ್, ಜನರ ಯಾವುದೇ ಗೊಂದಲಗಳಿಗೆ ಸರಿಯಾದ ಪರಿಹಾರ ಒದಗಿಸಲು ಅಥವಾ ಸಲಹೆ ನೀಡಲು ಸಮರ್ಥವಾಗಿದೆ ಎಂದು ಯುಐಡಿಎಐ ಹೇಳಿದೆ.
ಚಾಟ್ಬೋಟ್ ಬಳಕೆ ಹೇಗೆ?
ಯುಐಡಿಎಐ ವೆಬ್ಸೈಟ್ನಲ್ಲಿ ಆಧಾರ್ ಮಿತ್ರಾ ಚಾಟ್ಬೋಟ್ನ ಲಿಂಕ್ ಇದೆ. ಕ್ಯೂಆರ್ ಕೋಡ್ ಅನ್ನೂ ಒದಗಿಸಲಾಗಿದೆ. ಆ ಮೂಲಕ ಜನರು ಆಧಾರ್ ಮಿತ್ರಾ ಸೇವೆ ಪಡೆಯಬಹುದು.
ಇದನ್ನೂ ಓದಿ: PPI For Foreigners: ವಿದೇಶೀ ಪ್ರವಾಸಿಗರಿಗೆ ಭಾರತದಲ್ಲಿ ಪಿಪಿಐ ವ್ಯವಸ್ಥೆ: ಆರ್ಬಿಐ ಆಲೋಚನೆ
ಆಧಾರ್ ಕಾರ್ಡ್ನ ಎನ್ರೋಲ್ಮೆಂಟ್ ಸ್ಟೇಟಸ್ ಸಂಬಂಧ ಮಾಹಿತಿ ಪಡೆಯಲು ಗ್ರಾಹಕರು ತಮ್ಮ ನೊಂದಾಯಿತ ಮೊಬೈಲ್ ನಂಬರ್ನಿಂದ 1947ಗೆ ಎಸ್ಸೆಮ್ಮೆಸ್ ಕಳುಹಿಸಬಹುದು. ಪಿವಿಸಿ ಕಾರ್ಡ್ ಸ್ಟೇಟಸ್ ಇತ್ಯಾದಿ ತಿಳಿಯಲು ನೊಂದಾಯಿತ ಸಂಖ್ಯೆಯಿಂದ 1947 ನಂಬರ್ಗೆ ಕರೆ ಕೂಡ ಮಾಡಬಹುದು. ಎಸ್ಸೆಮ್ಮೆಸ್ ಮೂಲಕ ಮಾಹಿತಿ ಸಿಗುತ್ತದೆ. ಈ ವಿಚಾರವನ್ನು ಯುಐಡಿಎಐ ಸಂಸ್ಥೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಇದು ದಿನದ 24 ಗಂಟೆಯೂ ಲಭ್ಯ ಇರುವ ಐವಿಆರ್ಎಸ್ ಸೇವೆ ಎನಿಸಿದೆ. 1947, ಇದು ಟಾಲ್ಫ್ರೀ ನಂಬರ್ ಕೂಡ ಹೌದು.
ಆಧಾರ್ ಮಿತ್ರಾ ಬಳಸುವುದು ಹೇಗೆ?
ಯುಐಡಿಎಐ ವೆಬ್ಸೈಟ್ಗೆ ಹೋಗಿ ಅಲ್ಲಿ ಮುಖ್ಯಪುಟದ ಬಲಭಾಗದ ಕೆಳಗೆ ಆಧಾರ್ ಮಿತ್ರಾ ಬಾಕ್ಸ್ ಕಾಣಬಹುದು. ಅದರ ಮೇಲೆ ಕ್ಲಿಕ್ ಮಾಡಿದರೆ ಎಐ ಆಧಾರಿತ ಚಾಟ್ಬಾಟ್ ತೆರೆದುಕೊಳ್ಳುತ್ತದೆ.
ಗೆಟ್ ಸ್ಟಾರ್ಟೆಡ್ ಮೇಲೆ ಕ್ಲಿಕ್ ಮಾಡಿದಾಗ ಸರ್ಚ್ ಬಾಕ್ಸ್ ಕಾಣುತ್ತದೆ. ಅಲ್ಲಿ ನೀವು ಆಧಾರ್ ಸಂಬಂಧಿತ ಯಾವುದೇ ಮಾಹಿತಿಯನ್ನು ಕೇಳಬಹುದು.
ಅಥವಾ ಪೂರ್ವದಲ್ಲೇ ಸಿದ್ಧಪಡಿಸಲಾದ ಕೆಲ ಸಾಮಾನ್ಯ ಪ್ರಶ್ನೆಗಳ ಪಟ್ಟಿಯೂ ಇರುತ್ತದೆ. ನಿಮಗೆ ಬೇಕಾದ್ದನ್ನು ಆಯ್ದುಕೊಂಡು ಉತ್ತರ ಪಡೆಯಬಹುದು.
ಹೆಚ್ಚಿನ ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:07 pm, Fri, 17 February 23