PPI For Foreigners: ವಿದೇಶೀ ಪ್ರವಾಸಿಗರಿಗೆ ಭಾರತದಲ್ಲಿ ಪಿಪಿಐ ವ್ಯವಸ್ಥೆ: ಆರ್ಬಿಐ ಆಲೋಚನೆ
RBI May Bring PPI For Foreign Nationals: ಅನಿವಾಸಿ ಭಾರತೀಯರು ಮತ್ತು ಜಿ20 ದೇಶಗಳ ನಾಗರಿಕರು ಭಾರತಕ್ಕೆ ಬಂದಾಗ ಸ್ಥಳೀಯ ಹಣಕಾಸು ವಹಿವಾಟು ಸುಗಮಗೊಳ್ಳುವಂತಾಗಲು ಆರ್ಬಿಐ ಪ್ರೀಪೇಯ್ಡ್ ಪೇಮೆಂಟ್ ಇನ್ಸ್ಟ್ರುಮೆಂಟ್ಸ್ (ಪಿಪಿಐ) ವ್ಯವಸ್ಥೆ ಮಾಡಲು ಯೋಜಿಸಿದೆ. ಏನಿದು ಪಿಪಿಐ?
ನವದೆಹಲಿ: ಭಾರತಕ್ಕೆ ಬರುವ ವಿದೇಶೀ ಪ್ರಯಾಣಿಕರ ಅನುಕೂಲಕ್ಕೆಂದು ವಿಶೇಷ ಯುಪಿಐ ಪೇಮೆಂಟ್ ವ್ಯವಸ್ಥೆಯನ್ನು (UPI payment system) ತರಲು ಆರ್ಬಿಐ ಯೋಜಿಸಿದೆ. ಇದರಿಂದ ವಿದೇಶಿಗರು ಭಾರತದಲ್ಲಿ ನಗದು ವಹಿವಾಟು ಮಾಡುವ ಪ್ರಮೇಯ ಬಹುತೇಕ ತಪ್ಪುವ ನಿರೀಕ್ಷೆ ಇದೆ. ಭಾರತೀಯರು ತಮ್ಮ ಮೊಬೈಲ್ ಆ್ಯಪ್ಗಳಲ್ಲಿ ಯುಪಿಐ ವ್ಯವಸ್ಥೆಯಲ್ಲಿ ಪಾವತಿ ಮಾಡುವಂತೆ ವಿದೇಶಿಗರೂ ಯುಪಿಐ ಮೂಲಕ ಹಣ ಪಾವತಿ ಮಾಡಲು ಸಾಧ್ಯವಾಗುತ್ತದೆ. ಪ್ರೀಪೇಯ್ಡ್ ಪೇಮೆಂಟ್ ಇನ್ಸ್ಟ್ರೂಮೆಂಟ್ಸ್ (PPI – Prepaid Payment Instruments) ಮೂಲಕ ಇಂಥದ್ದೊಂದು ವ್ಯವಸ್ಥೆ ಮಾಡಲು ಮುಂದಾಗಲಾಗುತ್ತಿದೆ.
ಸದ್ಯಕ್ಕೆ ಜಿ20 ದೇಶಗಳಿಂದ ಬರುವ ಪ್ರವಾಸಿಗರಿಗೆ ಮತ್ತು ಎನ್ಆರ್ಐಗಳಿಗೆ ಪಿಪಿಐ ವ್ಯವಸ್ಥೆ ಮಾಡುವ ಆಲೋಚನೆ ಆರ್ಬಿಐನದ್ದು. ಭಾರತದ ಕೆಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಈ ಪ್ರವಾಸಿಗರಿಗಾಗಿ ಪಿಪಿಐ ಸೌಲಭ್ಯ ಇಡಲಾಗುತ್ತದೆ. ಅಲ್ಲಿ ವಿದೇಶಿಗರು ತಮ್ಮ ಕರೆನ್ಸಿಯ ಪೂರ್ವನಿಗದಿತ ಮೊತ್ತವನ್ನು ಭಾರತೀಯ ರೂಪಾಯಿಗೆ ವಿನಿಮಯ ಮಾಡಿಕೊಂಡು, ಯುಪಿಐ ಪೇಮೆಂಟ್ಗೆ ಆ ಹಣವನ್ನು ಬಳಸಬಹುದಾಗಿದೆ. ಒಂದು ವೇಳೆ ವಾಪಸ್ ಹೋಗುವಾಗ ಅವರ ರೂಪಾಯಿ ಮೊತ್ತ ಉಳಿದುಕೊಂಡಿದ್ದರೆ ಅದನ್ನು ವಿನಿಮಯ ದರದಲ್ಲಿ ತಮ್ಮ ದೇಶದ ಕರೆನ್ಸಿಗೆ ಎಕ್ಸ್ಜೇಂಜ್ ಮಾಡಿಕೊಳ್ಳಬಹುದು. ಇದು ವಿದೇಶಿಗರು ಭಾರತದಲ್ಲಿ ಸುಲಭವಾಗಿ ಹಣಕಾಸು ವಹಿವಾಟು ನಡೆಸುವಂತಾಗಲು ಮಾಡಲಾಗುತ್ತಿರುವ ವಿಶೇಷ ವ್ಯವಸ್ಥೆಯಾಗಿದೆ.
ಇದನ್ನೂ ಓದಿ: Google India: ಭಾರತದ 453 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ ಗೂಗಲ್
ಪಿಪಿಐ ವ್ಯವಸ್ಥೆ ಹೇಗೆ?
ಭಾರತಕ್ಕೆ ಬರುವ ವಿದೇಶೀ ನಾಗರಿಕರು ಮತ್ತು ಅನಿವಾಸಿ ಭಾರತೀಯರಿಗೆ ಪೂರ್ಣ ಕೆವೈಸಿಯೊಂದಿಗೆ ಪ್ರೀಪೇಯ್ಡ್ ಪೇಮೆಂಟ್ ಇನ್ಸ್ಟ್ರೂಮೆಂಟ್ಸ್ ಅನ್ನು ನೀಡಲಾಗುತ್ತದೆ. ಕೆಲ ನಿರ್ದಿಷ್ಟ ಬ್ಯಾಂಕು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ ಮಾತ್ರ ಪಿಪಿಐ ಪಡೆಯಬಹುದಾಗಿದೆ.
ಪಿಪಿಐ ನೀಡುವ ಮುನ್ನ ಪಾಸ್ಪೋರ್ಟ್ ಮತ್ತು ವೀಸಾವನ್ನು ಪರಿಶೀಲಿಸಲಾಗುತ್ತದೆ.
ಯುಪಿಐಗೆ ಜೋಡಿತವಾಗಿರುವ ವ್ಯಾಲಟ್ಗಳ ರೂಪದಲ್ಲಿ ಪಿಪಿಐ ನೀಡಬಹುದು. ವರ್ತಕರಿಗೆ ಹಣ ಪಾವತಿಸಲು ಇದನ್ನು ಬಳಸಬಹುದು. ವ್ಯಕ್ತಿಯಿಂದ ವ್ಯಕ್ತಿಗೆ ಹಣ ಪಾವತಿ ಸೌಲಭ್ಯ ಇರುವುದಿಲ್ಲ.
ಇದು ಜಿ20 ದೇಶಗಳ ನಾಗರಿಕರಿಗೆ ಭಾರತ ಕಲ್ಪಿಸಲಿರುವ ಸೌಲಭ್ಯ. ಅಮೆರಿಕ, ಯೂರೋಪಿಯನ್ ಯೂನಿಯನ್, ಬ್ರಿಟನ್, ಆಸ್ಟ್ರೇಲಿಯಾ, ಚೀನಾ ಮೊದಲಾದ ಹಲವು ದೇಶಗಳು ಈ ಗ್ರೂಪ್ 20ಯಲ್ಲಿ ಇವೆ. ಭಾರತದ ಯುಪಿಐ ಪೇಮೆಂಟ್ ವ್ಯವಸ್ಥೆ ಬಗ್ಗೆ ಜಗತ್ತಿನ ಹಲವು ದೇಶಗಳು ಆಸಕ್ತಿ ತೋರುತ್ತಿವೆ.