ಅಮೆರಿಕದ ಹಿಂಡನ್ಬರ್ಗ್ ರಿಸರ್ಚ್ (Hindenburg Research) ಮಾಡಿರುವ ಆರೋಪಗಳಿಂದಾಗಿ ಅದಾನಿ ಸಮೂಹದ (Adani Group) ಕಂಪನಿಗಳ ಷೇರು ಮೌಲ್ಯ ಭಾರೀ ಕುಸಿತ ಕಾಣುತ್ತಿದೆ. ಅದಾನಿ ಟೋಟಲ್ ಗ್ಯಾಸ್, ಅದಾನಿ ಟ್ರಾನ್ಸ್ಮಿಷನ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪೋರ್ಟ್ಸ್ ಆ್ಯಂಡ್ ಸ್ಪೆಷಲ್ ಎಕನಾಮಿಕ್ ಝೋನ್, ಅದಾನಿ ವಿಲ್ಮರ್, ಅದಾನಿ ಪವರ್, ಅದಾನಿ ಎಂಟರ್ಪ್ರೈಸಸ್ ಹಾಗೂ ಇತರ ಕಂಪನಿಗಳ ಷೇರು ಮೌಲ್ಯದಲ್ಲಿ ಗಣನೀಯ ಕುಸಿತವಾಗಿದೆ. ಪರಿಸ್ಥಿತಿ ಹೀಗಿರುವಾಗ, ಅದಾನಿ ಸಮೂಹದ ಕಂಪನಿಗಳ ಷೇರುಗಳನ್ನು ಈಗ ಖರೀದಿಸುವುದು ಉತ್ತಮವೇ ಅಥವಾ ಈಗ ಖರೀದಿಸುವುದು ಬೇಡವೇ ಎಂಬ ಪ್ರಶ್ನೆ ಹೂಡಿಕೆದಾರರಲ್ಲಿ ಉದ್ಭವಿಸುವುದು ಸಹಜ. ಹೂಡಿಕೆ ತಜ್ಞರೂ ಇದಕ್ಕೆ ವಿವಿಧ ರೀತಿಯ ಉತ್ತರಗಳನ್ನು ನೀಡುತ್ತಿದ್ದಾರೆ.
ಒಟ್ಟಾರೆಯಾಗಿ ಕಳೆದ ಎರಡು ದಿನಗಳಲ್ಲಿ ಅದಾನಿ ಸಮೂಹದ ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ 2.3 ಲಕ್ಷ ಕೋಟಿ ರೂ. ಕಳೆದುಕೊಂಡಿವೆ. ಇದು ಹೂಡಿಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಮಧ್ಯೆ, ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿರುವ ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್ಬಾಟ್ ತಂತ್ರಾಂಶ ಚಾಟ್ ಜಿಪಿಟಿ ಬಳಿ ಅದಾನಿ ಸಮೂಹದ ಕಂಪನಿಗಳ ಷೇರು ಖರೀದಿ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಅದಾನಿ ಸಮೂಹದ ಕಂಪನಿಗಳ ಷೇರುಗಳನ್ನು ಈಗ ಖರೀದಿಸುವುದು ಉತ್ತಮವೇ ಎಂದು ಪ್ರಶ್ನಿಸಲಾಗಿದೆ. ಅದಕ್ಕೆ ಚಾಟ್ ಜಿಪಿಟಿ ನೀಡಿರುವ ಉತ್ತರ ಇಲ್ಲಿದೆ.
ಇದನ್ನೂ ಓದಿ: ChatGPT: ಏನಿದು ಚಾಟ್ ಜಿಪಿಟಿ, ಹೇಗೆ ಕೆಲಸ ಮಾಡುತ್ತೆ? ಇತಿ, ಮಿತಿಗಳ ಬಗ್ಗೆ ಇಲ್ಲಿದೆ ವಿವರ
‘ಕ್ಷಮಿಸಿ. ಹಣಕಾಸು ಅಥವಾ ಹೂಡಿಕೆ ಸಲಹೆ ನೀಡಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಹೂಡಿಕೆಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ನೀವಾಗಿಯೇ ಅಧ್ಯಯನ ನಡೆಸುವುದು ಹಾಗೂ ಹಣಕಾಸು ಸಲಹೆಗಾರರ ಬಳಿ ಸಮಾಲೋಚನೆ ನಡೆಸುವುದು ಉತ್ತಮ’ ಎಂದು ಚಾಟ್ ಜಿಪಿಟಿ ಉತ್ತರಿಸಿದೆ.
ಓಪನ್ ಎಐ ಎಂಬ ಕೃತಕಬುದ್ಧಿಮತ್ತೆ ಕಂಪನಿ ಚಾಟ್ ಜಿಪಿಟಿಯನ್ನು ಅಭಿವೃದ್ಧಿಪಡಿಸಿದ್ದು, ಸಾರ್ವಜನಿಕರಿಗೆ ಲಭ್ಯವಾಗಿರುವಂತೆ ಮಾಡಿರುವುದಾಗಿ 2022ರ ಡಿಸೆಂಬರ್ ಆರಂಭದಲ್ಲಿ ತಿಳಿಸಿತ್ತು. ಕೃತಕ ಬುದ್ಧಿಮತ್ತೆ ಆಧಾರಿತ ಈ ಚಾಟಿಂಗ್ ತಾಣ ಬಳಕೆದಾರರು ಏನೇ ಕೇಳಿದರೂ ಬರಹ ರೂಪದಲ್ಲಿ ಉತ್ತರ ನೀಡುತ್ತದೆ. ಕಳೆದ ಕೆಲವು ದಿನಗಳಿಂದ ಟೆಕ್ ವಲಯದಲ್ಲಿ ಇದು ಭಾರೀ ಸುದ್ದಿಗೆ ಗ್ರಾಸವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ