
ನವದೆಹಲಿ, ಡಿಸೆಂಬರ್ 23: ವಿಶ್ವದ ನಂಬರ್ ಒನ್ ಮೆಸೇಜಿಂಗ್ ಆ್ಯಪ್ ಎನಿಸಿರುವ ವಾಟ್ಸಾಪ್ (WhatsApp) ಭಾರತದಲ್ಲಿ ಈ ವರ್ಷ ಪ್ರತೀ ತಿಂಗಳು ಹತ್ತಿರಹತ್ತಿರ ಒಂದು ಕೋಟಿ ನಂಬರ್ಗಳನ್ನು ಬ್ಲಾಕ್ ಮಾಡಿದೆ ಅಥವಾ ನಿಷೇಧಿಸಿದೆ. ಇಷ್ಟು ಪ್ರಮಾಣದಲ್ಲಿ ನಂಬರ್ಗಳನ್ನು ನಿಷೇಧಿಸುತ್ತಿದ್ದೀರಲ್ಲ, ಯಾಕಾಗಿ ಬ್ಯಾನ್ ಮಾಡುತ್ತಿದ್ದೀರಿ ಎಂದು ಹೇಳಿದರೆ ಕಾನೂನು ಸುವ್ಯವಸ್ಥೆಗೂ ಸಹಾಯವಾಗುತ್ತದೆ ಎಂದು ಸರ್ಕಾರ ಬಾರಿ ಬಾರಿ ವಿನಂತಿಸುತ್ತಿದೆ. ಆದರೂ ಕೂಡ ವಾಟ್ಸಾಪ್ ತನ್ನ ಡಾಟಾ ಗುಟ್ಟು ಬಿಟ್ಟುಕೊಡುತ್ತಿಲ್ಲ. ಇದು ಸರ್ಕಾರಕ್ಕೆ ಇರಿಸು ಮುರುಸು ತರುತ್ತಿದೆ.
ದೇಶದಲ್ಲಿ ಜರುಗುತ್ತಿರುವ ಬಹಳಷ್ಟು ಸೈಬರ್ ಕ್ರೈಮ್ಗಳಲ್ಲಿ ಕ್ರಿಮಿನಲ್ಗಳು ವಾಟ್ಸಾಪ್ ಅನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ಎಂಡ್ ಟು ಎಂಡ್ ಎನ್ಕ್ರಿಪ್ಟ್ (End to End encryption) ಆಗಿರುವುದರಿಂದ ಕಳ್ಳಕಾಕರ ರಹಸ್ಯ ಆಟಕ್ಕೂ ಅನುಕೂಲವಾಗಿದೆ. ಹೊಸ ಸಿಮ್ ಪಡೆದು ವಾಟ್ಸಾಪ್, ಟೆಲಿಗ್ರಾಮ್, ಸಿಗ್ನಲ್ನಂತಹ ಮೆಸೇಜಿಂಗ್ ಆ್ಯಪ್ಗಳಲ್ಲಿ ನೀವು ಅಕೌಂಟ್ ತೆರೆದರೆ ಸಾಕು. ಸಿಮ್ ಇಲ್ಲದಿದ್ದರೂ ಈ ಆ್ಯಪ್ಗಳು ಕೆಲಸ ಮಾಡುತ್ತವೆ. ಸಿಮ್ ಇಲ್ಲದೆಯೂ ಮೆಸೇಜ್ ಸ್ವೀಕರಿಸಬಹುದು. ಹೀಗಾಗಿ, ಈ ಒಟಿಟಿ ಆ್ಯಪ್ಗಳನ್ನು ಕ್ರಿಮಿನಲ್ಗಳು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಹೆಚ್ಚಾಗಿದೆ.
ಇದನ್ನೂ ಓದಿ: ಒಂದು ಸಂಸ್ಥೆ ಹೇಗೆ ಕಾರ್ಯನಿರ್ವಹಿಸಬೇಕು? ಕಾರ್ಪೊರೇಟ್ ಲೋಕಕ್ಕೆ ಮಾದರಿಯಾದ ಡಿಆರ್ಡಿಒ
ವಾಟ್ಸಾಪ್ ಒಂದು ತಿಂಗಳಲ್ಲಿ ನೂರಲ್ಲ, ಸಾವಿರ ಅಲ್ಲ, ಲಕ್ಷವೂ ಅಲ್ಲ, ಬರೋಬ್ಬರಿ ಒಂದು ಕೋಟಿಯಷ್ಟು ನಂಬರ್ಗಳನ್ನು ಬ್ಯಾನ್ ಮಾಡುತ್ತಿದೆ. ಇದು ಸಾಧಾರಣ ಸಂಖ್ಯೆಯಲ್ಲ. ತನ್ನ ತಿಂಗಳ ವರದಿಯಲ್ಲಿ ವಾಟ್ಸಾಪ್ ಕೇವಲ ಸಂಖ್ಯೆಯನ್ನು ಮಾತ್ರ ಪ್ರಕಟಿಸುತ್ತದೆ. ಯಾಕಾಗಿ ನಿಷೇಧಿಸಲಾಗಿದೆ ಎನ್ನುವುದನ್ನು ತಿಳಿಸುವುದಿಲ್ಲ.
ಸರ್ಕಾರ ಕೇಳಿಕೊಳ್ಳುತ್ತಿರುವುದು ಇಷ್ಟೇ, ನೀವು ಯಾಕಾಗಿ ಅಷ್ಟು ನಂಬರ್ಗಳನ್ನು ನಿಷೇಧಿಸುತ್ತಿದ್ದೀರಿ ಎಂದು. ಸ್ಕ್ಯಾಮ್ ಮಾಡಿದ ಕಾರಣಕ್ಕೆ ನಿಷೇಧಿಸಿದ್ದರೆ, ಅಂಥ ಮೊಬೈಲ್ ನಂಬರ್ಗಳನ್ನು ತಮಗೆ ಕೊಟ್ಟರೆ, ಕ್ರಿಮಿನಲ್ಗಳ ಮುಂದಿನ ಆಟಗಳನ್ನು ತಡೆಯಲು ಸಾಧ್ಯ ಎಂಬುದು ಸರ್ಕಾರದ ಮನವಿ. ತಮಗೆ ನಿಷೇಧಿತವಾದ ಆ ನಂಬರ್ ಕೊಟ್ಟರೆ ಸಾಕು, ಅವರ ಹೆಸರು ಇತ್ಯಾದಿ ಯಾವುದೂ ಬೇಡ. ಮುಂದಿನದು ತಾವು ನೋಡಿಕೊಳ್ಳುತ್ತೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ವಾಟ್ಸಾಪ್ ಮಾತ್ರ ತನ್ನ ಡಾಟಾ ಸೆಕ್ಯೂರಿಟಿ ನೀತಿಯ ಕಾರಣವೊಡ್ಡಿ ಈ ಮಾಹಿತಿ ಬಹಿರಂಗಪಡಿಸದಿರಲು ನಿರ್ಧರಿಸಿದೆ.
ವಾಟ್ಸಾಪ್ನ ಈ ನೀತಿಯಲ್ಲೂ ಒಂದು ಅರ್ಥ ಇದೆ. ಬೇರೆ ಬೇರೆ ದೇಶಗಳಲ್ಲಿ ವೈಯಕ್ತಿಕ ಡಾಟಾ ಸೆಕ್ಯೂರಿಟಿ ಬಗ್ಗೆ ಕಠಿಣ ನಿಯಮಾವಳಿಗಳಿವೆ. ವೈಯಕ್ತಿಕ ಡಾಟಾವನ್ನು ಹಂಚಿಕೊಂಡಿದ್ದು ಗೊತ್ತಾದರೆ ಒಂದು ದೇಶದಲ್ಲಿ ವಾಟ್ಸಾಪ್ ಮೇಲೆ ಕಾನೂನು ಮೊಕದ್ದಮೆ ಹಾಕಲಾಗಬಹುದು.
ಇದನ್ನೂ ಓದಿ: ನ್ಯೂಜಿಲೆಂಡ್ ಜೊತೆಗೂ ಟ್ರೇಡ್ ಡೀಲ್ ಮುಗಿಸಿದ ಭಾರತ; ಈ ವರ್ಷದಲ್ಲೇ ಭಾರತಕ್ಕಿದು 3ನೇ ಎಫ್ಟಿಎ
ಸ್ಕ್ಯಾಮರ್ ಶಂಕೆಯಲ್ಲಿ ನಿಷೇಧಿತವಾದ ನಂಬರ್ ಸಿಕ್ಕರೆ ಸರ್ಕಾರವು ಆ ನಂಬರ್ನ ಸಿಮ್ ಅನ್ನು ಎಲ್ಲಿ ಖರೀದಿಸಲಾಗಿತ್ತು, ಯಾವ ದಾಖಲೆಗಳನ್ನು ನೀಡಿ ಪಡೆಯಲಾಗಿತ್ತು, ಆ ದಾಖಲೆಗಳು ನಕಲಿಯಾ ಅಸಲಿಯಾ ಎಂಬಿತ್ಯಾದಿ ಮಾಹಿತಿಯನ್ನು ಹೆಕ್ಕಿ ತೆಗೆಯಲು ಸಾಧ್ಯವಾಗಬಹುದು. ದಾಖಲೆಗಳು ನಕಲಿ ಎಂದಾದರೆ ಆ ನಂಬರ್ ಅನ್ನು ಅಪರಾಧ ಎಸಗಲೆಂದೇ ಪಡೆದಿರುವುದು ಬಹುತೇಕ ಖಚಿತ ಎಂಬಂತಾಗುತ್ತದೆ. ಸರ್ಕಾರ ಕೂಡ ಅಂಥ ನಂಬರ್ಗಳ ಮೇಲೆ ನಿಗಾ ಇಡಲು ಸಾಧ್ಯವಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ