ಲಂಡನ್: ವಿಶ್ವದ ಅತಿದೊಡ್ಡ ಮೆಸೇಜಿಂಗ್ ಪ್ಲಾಟ್ಫಾರ್ಮ್ ಎನಿಸಿರುವ ವಾಟ್ಸಾಪ್ (Whatsapp Messaging Platform) ಇದೀಗ ಬ್ರಿಟನ್ ದೇಶದಲ್ಲಿ ಆಗುತ್ತಿರುವ ವಿದ್ಯಮಾನಗಳಿಂದ ತಲೆಕೆಡಿಸಿಕೊಂಡಂತಿದೆ. ಅಲ್ಲಿನ ಸಂಸತ್ತಿನಲ್ಲಿ ಆನ್ಲೈನ್ ಸೇಫ್ಟಿಯ ಕರಡು ಮಸೂದೆಗೆ (Online Safety Draft Bill) ಅನುಮೋದನೆ ಸಿಕ್ಕಿರುವುದು ವಾಟ್ಸಾಪ್ಗೆ ಚಿಂತೆಗೀಡು ಮಾಡಿದೆ. ಯುಕೆಯಲ್ಲಿ ಈ ಕಾನೂನು ಜಾರಿಗೆ ಬಂದರೆ ವಾಟ್ಸಾಪ್ ಸೇವೆಯನ್ನೇ ನಿಲ್ಲಿಸಬೇಕಾದೀತು ಎಂದು ಮೆಟಾ ಸಂಸ್ಥೆ (Meta Platforms) ಹೇಳಿದೆ. ಮಾರ್ಚ್ 9ರಂದು ಲಂಡನ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಮೆಟಾ ಮಾಲಕತ್ವದ ವಾಟ್ಸಾಪ್ನ ಮುಖ್ಯಸ್ಥ ವಿಲ್ ಕ್ಯಾತ್ಕಾರ್ಟ್, ಈ ದೇಶದಲ್ಲಿ ಸೇಫ್ಟಿ ಬಿಲ್ ಜಾರಿಗೆ ಬಂದರೆ ವಾಟ್ಸಾಪ್ನ ಪ್ರೈವಸಿ ಫೀಚರ್ಗಳು ಅಕ್ರಮ ಎನಿಸುತ್ತವೆ ಎಂದು ವಿವರಿಸಿದ್ದಾರೆ.
ಏನಿದೆ ಬಿಲ್ನಲ್ಲಿ?
ಬೋರಿಸ್ ಜಾನ್ಸನ್ ಪ್ರಧಾನಿಯಾಗಿದ್ದಾಗ ಆನ್ಲೈನ್ ಸೇಫ್ಟಿ ಮಸೂದೆ ರೂಪಿಸಿದ್ದರು. ಮಕ್ಕಳ ಲೈಂಗಿಕ ದುರ್ಬಳಕೆ, ಭಯೋತ್ಪಾದನೆ, ಆತ್ಮಹತ್ಯೆ ಪ್ರಚೋದನೆ ಇತ್ಯಾದಿ ಅನೈತಿಕ ಮತ್ತು ಕಾನೂನುಬಾಹಿರವೆನಿಸುವ ಕಂಟೆಂಟ್ಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಆಗದಂತೆ ವ್ಯವಸ್ಥೆ ಮಾಡಬೇಕು. ಒಂದು ವೇಳೆ ಇವು ಪೋಸ್ಟ್ ಆದರೂ, ಗಮನಕ್ಕೆ ಬಂದ ತತ್ಕ್ಷಣದಲ್ಲಿ ತೆಗೆದುಹಾಕಬೇಕು ಎಂದು ಈ ಬಿಲ್ ತಾಕೀತುಪಡಿಸುತ್ತದೆ. ಒಂದು ವೇಳೆ ಸರ್ಕಾರದ ಫರ್ಮಾನು ಪಾಲಿಸದಿದ್ದರೆ ಕಂಪನಿ ತನ್ನ ಜಾಗತಿಕ ಆದಾಯದಲ್ಲಿ ಶೇ. 10ರಷ್ಟು ಮೊತ್ತವನ್ನು ದಂಡವಾಗಿ ಕಟ್ಟಬೇಕು ಎಂದು ಹೇಳುತ್ತದೆ ಆ ಕಾನೂನು. ಈಗ ಈ ಮಸೂದೆಗೆ ಮರುಜೀವ ಬಂದಿದ್ದು, ಸಂಸತ್ನಲ್ಲೂ ಅನುಮೋದನೆ ಪಡೆದಿದೆ. ಈಗ ಕಾನೂನು ಜಾರಿಯಷ್ಟೇ ಬಾಕಿ ಉಳಿದಿದೆ.
ವಾಟ್ಸಾಪ್ ಯಾಕೆ ಹಿಂದೇಟು?
ಮಕ್ಕಳ ಲೈಂಗಿಕ ಶೋಷಣೆಯಂತಹ ಅಪರಾಧ ವಿಡಿಯೋ ಮತ್ತು ಪೋಸ್ಟ್ಗಳನ್ನು ಪ್ಲಾಟ್ಫಾರ್ಮ್ನಿಂದ ತೆಗೆದುಹಾಕಲು ವಾಟ್ಸಾಪ್ ಯಾಕೆ ಹಿಂದೇಟು ಹಾಕುತ್ತಿದೆ ಎಂದು ಅನಿಸಬಹುದು. ಆದರೆ, ವಾಟ್ಸಾಪ್ನ ಮುಖ್ಯ ಫೀಚರ್ಗಳಲ್ಲಿ ಅದರ ಪ್ರೈವಸಿ ಅಂಶ ಒಂದು. ಮೇಲಾಗಿ ವಾಟ್ಸಾಪ್ ಒಂದು ಜಾಗತಿಕ ಉತ್ಪನ್ನವಾಗಿದ್ದು ಬ್ರಿಟನ್ ದೇಶಕ್ಕೆ ಮಾತ್ರ ಫೀಚರ್ ಬದಲಿಸಲು ಆಗಲ್ಲ. ಈ ದೇಶದಿಂದ ನಿರ್ಗಮಿಸುವುದು ಬಿಟ್ಟರೆ ಬೇರೆ ದಾರಿ ಇಲ್ಲ ಎಂದು ವಾಟ್ಸಾಪ್ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಇರಾನ್ನಲ್ಲಿ ನಮ್ಮ ಸೇವೆಯನ್ನು ಬ್ಲಾಕ್ ಮಾಡಲಾಗಿದೆ. ಆದರೆ, ಉದಾರಿ ಪ್ರಜಾಪ್ರಭುತ್ವ ದೇಶದಿಂದ ಈ ರೀತಿ ಆಗುತ್ತದೆ ಎಂದು ನಾವು ಎಣಿಸಿಲ್ಲ. ನಾವು ಬ್ರಿಟನ್ನಲ್ಲಿ ವಾಪ್ಸಪ್ ಸೇವೆಯನ್ನೇ ನಿಲ್ಲಿಸಬೇಕಾದೀತು ಎಂದು ವಿಲ್ ಕ್ಯಾತ್ಕಾರ್ಟ್ ಹೇಳಿದ್ದಾರೆ.
ವಾಟ್ಸಾಪ್ ಮಾತ್ರವಲ್ಲ, ಅಂಥದ್ದೇ ರೀತಿಯ ಮತ್ತೊಂದು ಮೆಸೇಜಿಂಗ್ ಕಂಪನಿ ಸಿಗ್ನಲ್ ಫೌಂಡೇಶನ್ ಕೂಡ ಬ್ರಿಟನ್ನಲ್ಲಿ ಸೇವೆ ನಿಲ್ಲಿಸುವ ಆಲೋಚನೆ ಮಾಡುತ್ತಿದೆ.
ಈ ಮೆಸೇಜಿಂಗ್ ಪ್ಲಾಟ್ಫಾರ್ಮ್ಗಳು ಎನ್ಕ್ರಿಪ್ಟೆಡ್ ಮೆಸೇಜಿಂಗ್ ಫೀಚರ್ ಹೊಂದಿವೆ. ಅಂದರೆ, ಒಬ್ಬರು ಇನ್ನೊಬ್ಬರಿಗೆ ಕಳುಹಿಸಿದ ಸಂದೇಶವನ್ನು ಇತರರು ಕದ್ದುನೋಡಲು ಸಾಧ್ಯವಾಗುವುದಿಲ್ಲ. ಇದು ಗ್ರಾಹಕರ ಖಾಸಗಿತನ ರಕ್ಷಣೆಗೆಂದು ಮಾಡಲಾದ ಫೀಚರ್. ವಾಟ್ಸಾಪ್ ಮುಖ್ಯಸ್ಥರು ಹೇಳುವ ಪ್ರಕಾರ, ಈ ಪ್ರೇವಸಿ ಫೀಚರ್ ಇರುವವರೆಗೂ ಜನರ ಸಂದೇಶಗಳ ಮೇಲೆ ಕಂಪನಿಯಿಂದಲೇ ಕಣ್ಣಿಡಲು ಸಾಧ್ಯವಿಲ್ಲವಂತೆ. ಈ ಪ್ರೈವಸಿ ಫೀಚರ್ ಅನ್ನು ತೆಗೆದುಹಾಕಿದರೆ ವ್ಯಕ್ತಿಗತ ಗೌಪ್ಯತೆಗೆ ಧಕ್ಕೆ ತಂದಂತಾಗುತ್ತದೆ ಎಂಬುದು ಇವರ ವಾದ.
ಬ್ರಿಟನ್ ಮಾತ್ರವಲ್ಲ ಬಹುತೇಕ ಎಲ್ಲಾ ದೇಶಗಳು ಸೋಷಿಯಲ್ ಮೀಡಿಯಾ ಕಂಪನಿಗಳಿಗೆ ವಿವಿಧ ಮಟ್ಟಗಳಲ್ಲಿ ನಿರ್ಬಂಧಗಳನ್ನು ಹಾಕುತ್ತವೆ. ಸರ್ಕಾರದ ವಿರುದ್ಧ ಬರುವ ಪೋಸ್ಟ್ಗಳು, ಲೈಂಗಿಕ ಶೋಷಣೆಯ ಪೋಸ್ಟ್ಗಳು, ದೇಶವಿರೋಧಿ ಪೋಸ್ಟ್ಗಳನ್ನು ತೆಗೆದುಹಾಕುವಂತೆ ಸೋಷಿಯಲ್ ಮೀಡಿಯಾ ಕಂಪನಿಗಳಿಗೆ ವಿವಿಧ ಸರ್ಕಾರಗಳು ಪಟ್ಟಿ ಕೊಡುತ್ತಿರುತ್ತವೆ. ಆದರೆ, ಈ ಬಗ್ಗೆ ಕಠಿಣ ಕಾನೂನು ರೂಪಿಸುತ್ತಿರುವುದು ಬ್ರಿಟನ್ ಮೊದಲ ದೇಶ.
Published On - 1:11 pm, Fri, 10 March 23