Wheat Price: ರಫ್ತು ನಿರ್ಬಂಧದ ಹೊರತಾಗಿಯೂ ಗೋಧಿ ದರ ಹೆಚ್ಚಳ; ಕೇಂದ್ರ

| Updated By: Ganapathi Sharma

Updated on: Dec 09, 2022 | 6:55 PM

ಏಪ್ರಿಲ್ - ಜೂನ್ ಅವಧಿಯಲ್ಲಿ ಗೋಧಿ ದಾಸ್ತಾನು ಕುಸಿತವಾಗಿದೆ. ಇದು 2021-22ರಲ್ಲಿ 433.44 ಲಕ್ಷ ಟನ್ ಇದ್ದರೆ 2022-23ರಲ್ಲಿ 187.92ಕ್ಕೆ ಕುಸಿದಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

Wheat Price: ರಫ್ತು ನಿರ್ಬಂಧದ ಹೊರತಾಗಿಯೂ ಗೋಧಿ ದರ ಹೆಚ್ಚಳ; ಕೇಂದ್ರ
ಸಾಂದರ್ಭಿಕ ಚಿತ್ರ
Image Credit source: The Indian Expres
Follow us on

ನವದೆಹಲಿ: ಸಗಟು (Wholesale) ಮಾರಾಟದ ಗೋಧಿ ದರ (Wheat Price) ಈ ವರ್ಷ ಇಲ್ಲಿಯವರೆಗೆ ಸರಾಸರಿ ಶೇಕಡಾ 22ರಷ್ಟು ಹೆಚ್ಚಾಗಿದ್ದು, ಕ್ವಿಂಟಲ್​ಗೆ 2,721 ರೂ. ಆಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ರಾಜ್ಯಸಭೆಗೆ (Rajya Sabha) ನೀಡಿದ ಲಿಖಿತ ಉತ್ತರದಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ (Narendra Singh Tomar) ಈ ಮಾಹಿತಿ ನೀಡಿದ್ದಾರೆ. ಗೋಧಿ ಸೇರಿದಂತೆ ಕೃಷಿ ಉತ್ಪನ್ನಗಳ ಬೆಲೆಗಳನ್ನು ಮಾರುಕಟ್ಟೆಯಲ್ಲಿನ ಬೇಡಿಕೆ, ಪೂರೈಕೆ ಪರಿಸ್ಥಿತಿಗಳು, ಅಂತರರಾಷ್ಟ್ರೀಯ ಬೆಲೆ ಇತ್ಯಾದಿಗಳ ಆಧಾರದಲ್ಲಿ ನಿಗದಿಪಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾತೆ.

ಗೋಧಿಯ ಸಗಟು ಮಾರಾಟದ ದರ ಜನವರಿಯಲ್ಲಿ ಪ್ರತಿ ಕ್ವಿಂಟಲ್​ಗೆ 2,228 ರೂ. ಇತ್ತು. ಇದು ಫೆಬ್ರವರಿಯಲ್ಲಿ 2,230, ಮಾರ್ಚ್​ನಲ್ಲಿ 2,339, ಏಪ್ರಿಲ್​ನಲ್ಲಿ 2,384, ಮೇನಲ್ಲಿ 2,352, ಜೂನ್​ನಲ್ಲಿ 2,316, ಜುಲೈನಲ್ಲಿ 2,409, ಆಗಸ್ಟ್​​ನಲ್ಲಿ 2,486, ಸೆಪ್ಟೆಂಬರ್​ನಲ್ಲಿ 2,516, ಅಕ್ಟೋಬರ್​ನಲ್ಲಿ 2,571 ಹಾಗೂ ನವೆಂಬರ್​ನಲ್ಲಿ 2,721 ರೂ. ಇತ್ತು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

‘ಗೋಧಿ ಉತ್ಪಾದನೆಯು 2020-21ರಲ್ಲಿ 109.59 ದಶಲಕ್ಷ ಟನ್ ಇದ್ದುದು 2021-22ರಲ್ಲಿ 106.84 ದಶಲಕ್ಷ ಟನ್​ಗೆ ಇಳಿಕೆಯಾಗಿದೆ. ಕಳೆದ ಮಾರ್ಚ್​ನಲ್ಲಿ ಬೀಸಿದ ಬಿಸಿಗಾಳಿಯು ಮಧ್ಯ ಪ್ರದೇಶ, ಬಿಹಾರ, ಉತ್ತರ ಪ್ರದೇಶ, ಹರಿಯಾಣ ಹಾಗೂ ರಾಜಸ್ಥಾನಗಳಲ್ಲಿ ಗೋಧಿ ಉತ್ಪಾದನೆ ಮೇಲೆ ಪರಿಣಾಮ ಬೀರಿತ್ತು’ ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: Wheat Exports: ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ಗೋಧಿ ರಫ್ತು ದ್ವಿಗುಣ

ಏಪ್ರಿಲ್ – ಜೂನ್ ಅವಧಿಯಲ್ಲಿ ಗೋಧಿ ದಾಸ್ತಾನು ಕುಸಿತವಾಗಿದೆ. ಇದು 2021-22ರಲ್ಲಿ 433.44 ಲಕ್ಷ ಟನ್ ಇದ್ದರೆ 2022-23ರಲ್ಲಿ 187.92ಕ್ಕೆ ಕುಸಿದಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ಗೋಧಿ ದರ ಹೆಚ್ಚಳ ನಿಯಂತ್ರಿಸುವುದಕ್ಕಾಗಿ ಮೇ ತಿಂಗಳಲ್ಲಿ ಸರ್ಕಾರ ಗೋಧಿ ರಫ್ತಿನ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಿತ್ತು. ಆದಾಗ್ಯೂ, ಪ್ರಸಕ್ತ ಹಣಕಾಸು ವರ್ಷದ ಮೊದಲ ಐದು ತಿಂಗಳುಗಳಲ್ಲಿ ದೇಶದ ಗೋಧಿ ರಫ್ತು ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ದ್ವಿಗುಣಗೊಂಡಿರುವುದು ಅಧಿಕೃತ ದತ್ತಾಂಶಗಳಿಂದ ಇತ್ತೀಚೆಗೆ ತಿಳಿದುಬಂದಿತ್ತು. ಮೇ ಮಧ್ಯದಲ್ಲಿ ಗೋಧಿ ರಫ್ತಿಗೆ ಸರ್ಕಾರವು ಹಠಾತ್ ನಿರ್ಬಂಧ ಹೇರಿತ್ತು. ಆದರೆ ಕೆಲವು ದೇಶಗಳಿಗೆ ಮಾತ್ರ ರಫ್ತು ಮಾಡಲು ಅನುಮತಿ ನೀಡಿತ್ತು. 2022-23ನೇ ಹಣಕಾಸು ವರ್ಷದ ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ದೇಶವು 43.50 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ರಫ್ತು ಮಾಡಿರುವುದು ವಾಣಿಜ್ಯ ಇಲಾಖೆಯ ಅಧಿಕೃತ ಅಂಕಿಅಂಶಗಳಿಂದ ಇತ್ತೀಚೆಗೆ ತಿಳಿದುಬಂದಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ