China Exposed Again: ವಿಶ್ವಬ್ಯಾಂಕ್​ಗೂ ಹಬ್ಬಿದ ಚೀನಾದ ಮೋಸ; ಜಗತ್ತಿನ ಮುಂದೆ ಕಳಚಿದ ಡ್ರ್ಯಾಗನ್ ಮುಖವಾಡ

| Updated By: Srinivas Mata

Updated on: Sep 20, 2021 | 1:47 PM

ಉದ್ಯಮಸ್ನೇಹಿ ವಾತಾವರಣದ ಸೂಚ್ಯಂಕ ವರದಿ ಬಿಡುಗಡೆ ಇನ್ನು ಮುಂದೆ ಮಾಡುವುದಿಲ್ಲ ಎಂದು ವಿಶ್ವಬ್ಯಾಂಕ್ ಹೇಳಿದೆ. ಇದರ ಪರಿಣಾಮ ಭಾರತದ ಮೇಲೆ ಏನು ಎಂಬುದು ಸೇರಿದಂತೆ ವಿವಿಧ ಆಯಾಮಗಳು ಇಲ್ಲಿವೆ.

China Exposed Again: ವಿಶ್ವಬ್ಯಾಂಕ್​ಗೂ ಹಬ್ಬಿದ ಚೀನಾದ ಮೋಸ; ಜಗತ್ತಿನ ಮುಂದೆ ಕಳಚಿದ ಡ್ರ್ಯಾಗನ್ ಮುಖವಾಡ
ಸಾಂದರ್ಭಿಕ ಚಿತ್ರ
Follow us on

ಅಮೆರಿಕದ ವಾಷಿಂಗ್ಟನ್ ಡಿ.ಸಿ.ಯಲ್ಲಿ ಕೇಂದ್ರ ಕಚೇರಿ ಇರುವಂಥ ವಿಶ್ವ ಬ್ಯಾಂಕ್ ಸಮೂಹವು ಸೆಪ್ಟೆಂಬರ್ 16ನೇ ತಾರೀಕು ಅಚ್ಚರಿಯ ಘೋಷಣೆಯೊಂದನ್ನು ಮಾಡಿತು. ಇಷ್ಟು ಕಾಲ ಸಂಸ್ಥೆಯಿಂದ ಬಿಡುಗಡೆ ಮಾಡುತ್ತಿದ್ದ ಉದ್ಯಮಸ್ನೇಹಿ ರಾಷ್ಟ್ರಗಳ ವರದಿಯನ್ನು ಇನ್ನು ಮುಂದೆ ಮಾಡಲ್ಲ ಎಂದು ಹೇಳಿತು. ಅದಕ್ಕೆ ವಿಶ್ವ ಬ್ಯಾಂಕ್​ ನೀಡಿದ ಕಾರಣ ಏನೆಂದರೆ, ಚೀನಾ ದೇಶದ ಪರವಾಗಿ ಉತ್ತಮ ಶ್ರೇಯಾಂಕ ಘೋಷಿಸಲಿ ಉನ್ನತ ಬ್ಯಾಂಕ್​ಗಳ ಅಧಿಕಾರಿಗಳು ಅನಗತ್ಯವಾದ ಒತ್ತಡ ಹೇರಿದ್ದಾರೆ ಎಂಬುದು ಆಂತರಿಕ ಲೆಕ್ಕಪರಿಶೋಧನೆಯಿಂದ ಗೊತ್ತಾಗಿದೆ ಎನ್ನಲಾಗಿದೆ. ಜಾಗತಿಕ ಮಟ್ಟದಲ್ಲಿ ಯಾವ ದೇಶದಲ್ಲಿ ಹೂಡಿಕೆಗೆ ಸೂಕ್ತವಾದ ವಾತಾವರಣ ಇದೆ ಎಂಬುದನ್ನು ಅಳೆಯುವುದಕ್ಕೆ ವಿಶ್ವಬ್ಯಾಂಕ್​ನ ಈ ವರದಿ ಅಳತೆಗೋಲು. ಇಂಥದ್ದೇ ವರದಿಯಲ್ಲಿ 2017ನೇ ಇಸವಿಯಲ್ಲಿ ಚೀನಾದ ಶ್ರೇಯಾಂಕವನ್ನು ಮುಂದಕ್ಕೆ ದಬ್ಬಲಾಗಿದೆ. ಆಗಿನ ವಿಶ್ವಬ್ಯಾಂಕ್​ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಮತ್ತು ಆಗಿನ ಮುಖ್ಯಾಧಿಕಾರಿ ಮತ್ತು ಈಗಿನ ಐಎಂಎಫ್​ ಕಾರ್ಯನಿರ್ವಾಹಕ ನಿರ್ದೇಶಕರಾದ ಕ್ರಿಸ್ಟಲಿನಾ ಜಾರ್ಜೀವಾ ಈ ವಿಚಾರವನ್ನು ಕಂಡುಕೊಂಡಿದ್ದಾರೆ.

ಏನಿದು ಉದ್ಯಮ ಸ್ನೇಹಿ ವರದಿ?
190 ಆರ್ಥಿಕತೆಗಳಲ್ಲಿ ಉದ್ಯಮಗಳ ನಿಯಮಾವಳಿಗಳನ್ನು ಉದ್ಯಮಸ್ನೇಹಿ ವರದಿಯಲ್ಲಿ ತಿಳಿಸಲಾಗುತ್ತದೆ. 12 ವಿವಿಧ ಮಾನದಂಡಗಳನ್ನು ಇದಕ್ಕಾಗಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. 2020ರಲ್ಲಿ ಬಂದ ಇಂಥದ್ದೇ ವರದಿ ಈ ವಾರ್ಷಿಕ ಅಧ್ಯಯನ ಸರಣಿಯ 17ನೆಯದ್ದಾಗಿತ್ತು. ನಿರ್ಮಾಣಕ್ಕೆ ಸಂಬಂಧಿಸಿದ ಅನುಮತಿ, ವಿದ್ಯುತ್ ಸಂಪರ್ಕ ಪಡೆಯುವುದು, ಸಾಲ ಪಡೆಯುವುದು, ಅಲ್ಪಸಂಖ್ಯಾತ ಹೂಡಿಕೆದಾರರ ರಕ್ಷಣೆ, ತೆರಿಗೆ ಪಾವತಿ, ಗಡಿಗಳಲ್ಲಿ ವ್ಯವಹಾರ ಈ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅಫ್ಘಾನಿಸ್ತಾನದಿಂದ ಜಿಂಬಾಬ್ವೆ ತನಕ ಎಲ್ಲ ಆರ್ಥಿಕತೆಗಳನ್ನು ಈ ಅಳತೆಗಾಗಿ ಪರಿಗಣಿಸಲಾಗಿದೆ. ಈ ಅಧ್ಯಯನದ ಮೂಲಕ ವೆಚ್ಚದ ಸಂಪೂರ್ಣ ವಿಶ್ಲೇಷಣೆ, ನಿರ್ದಿಷ್ಟ ಖಾಸಗಿ ಕಂಪೆನಿಗಳು ಆಯಾ ದೇಶಗಳಲ್ಲಿ ಪೂರೈಸಬೇಕಾದ ಅಗತ್ಯಗಳು ಹಾಗೂ ನಿಯಮಾವಳಿಗಳು, ಪ್ರಮುಖ ಕಾನೂನು ಸುಧಾರಣೆಗಳು ಯಾವಾಗ ಆಗಬೇಕು ಇತ್ಯಾದಿಗಳನ್ನು ಈ ವರದಿ ಸಿದ್ಧಪಡಿಸುವ ವೇಳೆ ಅಳೆಯಲಾಗುತ್ತದೆ.

ಇದು ಯಾವ ಕಾರಣಕ್ಕೆ ಮುಖ್ಯ?
ತಮ್ಮ ಮುಂದಿನ ವರ್ಷದ ಉದ್ಯಮ ಸ್ನೇಹಿ ಸೂಚ್ಯಂಕದ ಗುರಿಯನ್ನು ಇರಿಸಿಕೊಳ್ಳುವ ಸಲುವಾಗಿ ಈ ವಾರ್ಷಿಕ ವರದಿಯನ್ನು ವಿಶ್ವದಾದ್ಯಂತ ಇರುವ ದೇಶಗಳು ಎದುರು ನೋಡುತ್ತವೆ. ವಿಶ್ವಬ್ಯಾಂಕ್​ನ ಈ ವರದಿಯು ಅಧಿಕೃತ ಶ್ರೇಯಾಂಕದ ಪಟ್ಟಿಯಾಗಿರುತ್ತದೆ. ಉದ್ಯಮಸ್ನೇಹಿ ದೇಶಗಳಲ್ಲಿ ಅಗ್ರ ಪಟ್ಟಿಯಲ್ಲಿ ಇರುವುದಕ್ಕೆ ಉತ್ತಮ ಶ್ರೇಯಾಂಕ ಹಾಗೂ ಅಂಥ ವಾತಾವರಣ ಇಲ್ಲದ್ದಕ್ಕೆ ಕಡಿಮೆ ಶ್ರೇಯಾಂಕ ಬರುತ್ತದೆ. ಇದು ಸ್ಪರ್ಧಾತ್ಮಕವಾಗಿದ್ದು, ಶೀಘ್ರವಾಗಿ ಬದಲಾವಣೆ ಕಾಣುತ್ತದೆ. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ಗಮನ ಸೆಳೆದಿದೆ. ಕನಿಷ್ಠ ಸರಾಸರಿ ಉದ್ಯಮಕ್ಕೆ ಅಗತ್ಯ ಇರುವ ಉದಾರವಾದ ಆರ್ಥಿಕ ವಾತಾವರಣ ಸೃಷ್ಟಿಸಲು ದೇಶಗಳಿಗೆ ಸಹಾಯ ಆಗುತ್ತದೆ.

ವಿದೇಶೀ ನೇರ ಬಂಡವಾಳಕ್ಕಾಗಿ ಪ್ರಯತ್ನಿಸುತ್ತಿರುವ ಭಾರತ, ದಕ್ಷಿಣ ಆಫ್ರಿಕಾ, ಇಂಡೋನೇಷ್ಯಾ, ನೈಜೀರಿಯಾ, ಬ್ರೆಜಿಲ್ ಮತ್ತು ಚೀನಾದಂಥ ಮುಂದುವರಿಯುತ್ತಿರುವ ದೇಶಗಳು ವಿಶ್ವಬ್ಯಾಂಕ್​ನ ಈ ವರದಿಯ ವಿಚಾರವಾಗಿ ಗಂಭೀರವಾಗಿ ಇರುವುದರಿಂದ ಪ್ರಾಮುಖ್ಯವೂ ಹೆಚ್ಚಾಗಿದೆ.

ಏನಾಗಿದೆ?
ಜಿಮ್ ಯಾಂಗ್ ಕಿಮ್ ಮತ್ತು ಕ್ರಿಸ್ಟಲಿಬಾ ಜಾರ್ಜೀವಾ ಅವರ ಸೂಚನೆ ಮೇರೆಗೆ ಉದ್ಯಮಸ್ನೇಹಿ ಪಟ್ಟಿ ತಯಾರಿಸುವ ತಂಡವು ಚೀನಾದ ಡೇಟಾವನ್ನು ಇಟ್ಟುಕೊಂಡು, ಅದಕ್ಕೆ ನೀಡಿದ್ದ 78ನೇ ಶ್ರೇಯಾಂಕವನ್ನು ಮರುಮೌಲ್ಯಮಾಪನಕ್ಕೆ ತಿಳಿಸಲಾಗಿದೆ. ಯಾವಾಗ ಡೇಟಾವನ್ನು ತಿರುಚಲಾಗಿದೆ ಎಂದು ಪದೇಪದೇ ಆರೋಪ ಬಂತೋ 2020ರ ಜೂನ್​ನಲ್ಲಿ ಆಂತರಿಕ ಲೆಕ್ಕ ಪರಿಶೋಧನೆಗೆ ಸೂಚಿಸಲಾಗಿದೆ. ವಿಶ್ವಬ್ಯಾಂಕ್​ನ ನೀತಿ ಸಮಿತಿಯ ಮನವಿಯ ಮೇರೆಗೆ ಕಾನೂನು ಸಂಸ್ಥೆ ವಿಲ್ಮರ್​ಹೇಲ್​ ಸ್ವತಂತ್ರ ವರದಿಯೊಂದನ್ನು ಸಿದ್ಧಪಡಿಸಲಾಗಿದೆ. ಎರಡೂ ವಿಶ್ವಬ್ಯಾಂಕ್​ನ ಮೇಲೆ ಚೀನಾದ ಪ್ರಭಾವ ಕುರಿತು ಆತಂಕ ವ್ಯಕ್ತಪಡಿಸಿವೆ.

ಕಿಮ್ ಈ ವರದಿ ಬಗ್ಗೆ ಚರ್ಚೆ ಮಾಡಿರುವುದು ಮತ್ತು ಚೀನಾದ ಪರ್ಫಾರ್ಮೆನ್ಸ್ ಬಗ್ಗೆ ಚೀನಿ ಸರ್ಕಾರದ ಅಧಿಕಾರಿಗಳ ಜತೆಗೆ 2017ರ ಸೆಪ್ಟೆಂಬರ್​ನಲ್ಲಿ ಚರ್ಚೆ ನಡೆಸಿರುವುದು ಕಂಡುಬಂದಿದೆ. ಜಾಗತಿಕ ಮಟ್ಟದಲ್ಲಿ ವರದಿ ಬಹಿರಂಗ ಮಾಡುವ ಮುನ್ನ ಆ ಬಗ್ಗೆ ವಿವರಗಳನ್ನು ಬಹಿರಂಗಗೊಳಿಸುವುದು ಪದ್ಧತಿ ಹಾಗೂ ನೈತಿಕತೆಯ ಗಂಭೀರ ಉಲ್ಲಂಘನೆ ಆಗುತ್ತದೆ. ಇನ್ನು ಆಗ ಚೀನಾಗೆ ಕಾರ್ಯನಿರ್ವಾಹಕ ಸದಸ್ಯರಾಗಿದ್ದವರು ವಿಶ್ವಬ್ಯಾಂಕ್​ ಪೂರ್ವ ಏಷ್ಯಾ ಹಾಗೂ ಪೆಸಿಫಿಕ್ ಪ್ರಾದೇಶಿಕ ಕಚೇರಿ ಸದಸ್ಯರನ್ನು ಸೆಪ್ಟೆಂಬರ್ 14ರಂದು ಮಾಹಿತಿ ನೀಡಿ, ಒಂದು ವೇಳೆ ಚೀನಾದ ಶ್ರೇಯಾಂಕ ಉತ್ತಮಗೊಂಡಲ್ಲಿ ಎಲ್ಲರೂ “ಸಮಾಧಾನ” ಆಗುತ್ತಾರೆ ಎಂದಿದ್ದಾರೆ.

ಅಂದಹಾಗೆ ವಿಶ್ವಬ್ಯಾಂಕ್​ ಹೀಗೆ ಹಗರಣದಲ್ಲಿ ಸಿಲುಕಿಕೊಂಡಿರುವುದು ಇದೇ ಮೊದಲೇನಲ್ಲ. 2018ರ ಜನವರಿಯಲ್ಲಿ ವಿಶ್ವಬ್ಯಾಂಕ್​ ಮುಖ್ಯ ಅರ್ಥಶಾಸ್ತ್ರಜ್ಞ ಪಾಲ್ ರೋಮರ್, ಈ ಹಿಂದಿನ ಸೂಚ್ಯಂಕದ ಫಲಿತಾಂಶಗಳನ್ನು ತಿದ್ದುಪಡಿ ಹಾಗೂ ಮರುಲೆಕ್ಕಾಚಾರ- ಹೀಗೆ ಕನಿಷ್ಠ 4 ವರ್ಷದ ಹಿಂದಿನ ತನಕ ಮಾಡಬಹುದು. ರೋಮರ್ ಅವರು ಚಿಲಿಯನ್ನು ಕ್ಷಮೆ ಕೇಳಿದ್ದಾರೆ. ಕಾರ್ಯ ವಿಧಾನದಲ್ಲಿ ಪದೇಪದೇ ತಿರುಚಲು ಸಮೂಹದ ಮಾಜಿ ನಿರ್ದೇಶಕರು ಜವಾಬ್ದಾರಿ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಎಡಪಂಥೀಯ ಅಧ್ಯಕ್ಷರಾದ ಮಿಷೆಲ್ ಬಚೆಲೆಟ್​ ಆಡಳಿತಾವಧಿಯಲ್ಲಿ ನ್ಯಾಯಸಮ್ಮತವಲ್ಲದ ಬಗೆಯಲ್ಲಿ ದಂಡನೆಗೆ ಗುರಿಪಡಿಸಲಾಗಿದೆ ಎಂದಿದ್ದಾರೆ.

ಉದ್ಯಮ ಸ್ನೇಹಿ ಸೂಚ್ಯಂಕಕ್ಕೆ ಸಂಬಂಧಿಸಿದಂತೆ ಇಲ್ಲಿಯ ತನಕ ಇರುವ ಈ ಹಿಂದಿನ ಪರಿಶೀಲನೆಗಳು, ಆಡಿಟ್​ಗಳು ಮತ್ತು ವಿಶ್ವಬ್ಯಾಂಕ್​ ಬಿಡುಗಡೆ ಮಾಡಿದ ಅಂತಿಮ ವರದಿ ಇವೆಲ್ಲವನ್ನೂ ಪರಿಶೀಲನೆ ಮಾಡಿದ ಮೇಲೆ ಉದ್ಯಮಸ್ನೇಹಿ ವರದಿಯನ್ನು ಇನ್ನು ಮುಂದೆ ಬಿಡುಗಡೆ ಮಾಡದಿರುವುದಕ್ಕೆ ವಿಶ್ವಬ್ಯಾಂಕ್​ನ ಆಡಳಿತ ನಿರ್ಧರಿಸಿದೆ.

ಈ ವಿಚಾರವು ಭಾರತಕ್ಕೆ ಏಕೆ ಮುಖ್ಯ?
2014ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭಾರತದ ಶ್ರೇಯಾಂಕ ಉತ್ತಮಗೊಳಿಸುವ ಕಡೆಗೆ ಗಮನ ನೀಡಿತು. ಎಷ್ಟು ಸಾಧ್ಯವೋ ಅಷ್ಟು ಬೇಗ ಟಾಪ್ 50ರೊಳಗೆ ಬರುವುದಾಗಿ ವಿವಿಧ ವೇದಿಕೆಗಳಲ್ಲಿ ಕೂಡ ಹೇಳಿತ್ತು. ಸ್ಥಳೀಯವಾಗಿ, ರಾಜ್ಮ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಉದ್ಯಮಸ್ನೇಹಿ ವಾತಾವರಣ ನಿರ್ಮಾಣಕ್ಕೆ ಹಾಗೂ ಸುಧಾರಣೆಗಳ ಮೂಲಕ ಸನ್ನಿವೇಶವನ್ನು ಉತ್ತಮಗೊಳಿಸುವುದಕ್ಕೆ ಪ್ರಯತ್ನ ನಡೆಸಿತು.

ಅದರ ಫಲಿತವಾಗಿ ಭಾರತದ ಶ್ರೇಯಾಂಕವು ಭಾರೀ ಪ್ರಮಾಣದಲ್ಲಿ ಚೇತರಿಕೆ ಕಂಡಿತು. 2018ರಲ್ಲಿ 74ನೇ ಸ್ಥಾನದಲ್ಲಿ ಇದ್ದದ್ದು ನಂತರದ, 2019ರಲ್ಲಿ 14 ಸ್ಥಾನ ಮೇಲೇರಿ 63ಕ್ಕೆ ತಲುಪಿತು. ಇದರ ಜತೆಗೆ, “ಗಮನಾರ್ಹವಾದ ಚೇತರಿಕೆ ಕಂಡ ಆರ್ಥಿಕತೆ” ಪಟ್ಟಿಯಲ್ಲಿ ಸತತ ಮೂರು ವರ್ಷ ಭಾರತ ಸ್ಥಾನ ಪಡೆಯಿತು. ಒಟ್ಟಾರೆಯಾಗಿ ಭಾರತವು 2014ರಲ್ಲಿ 142ನೇ ಸ್ಥಾನದಲ್ಲಿ ಇದ್ದ್ದದ್ದು, ಭಾರೀ ನೆಗೆತ ದಾಖಲಿಸಿತು. ಈ ಸಾಧನೆಯನ್ನು ಸರ್ಕಾರವೂ ದೇಶೀಯವಾಗಿ ಮತ್ತು ವಿದೇಶಗಳಲ್ಲಿ ವ್ಯಾಪಕವಾಗಿ ಮಾರ್ಕೆಟ್ ಮಾಡಿತು. ಉದ್ಯಮಸ್ನೇಹಿ ವಾತಾವರಣ ಎಂಬುದು ಎಲ್ಲ ರಾಜಕೀಯ ಚರ್ಚೆಗಳಲ್ಲಿ ಮುನ್ನೆಲೆಗೆ ಬಂತು.

ಸರ್ಕಾರದ ನಡೆ ಏನು?
2012ರಿಂದ 2016ರ ತನಕ ವಿಶ್ವಬ್ಯಾಂಕ್​ನಲ್ಲಿ ಮುಖ್ಯ ಅರ್ಥಶಾಸ್ತ್ರಜ್ಞರಾಗಿದ್ದ ಕೌಶಿಕ್ ಬಸು ಈ ವಿವಾದ ಬಗ್ಗೆ ಮಾತನಾಡಿದ್ದಾರೆ. ಸರ್ಕಾರಗಳಿಂದ ಒತ್ತಡ ಇರುತ್ತಿದ್ದುದು ಹೌದು. ಆದರೆ ಅದಕ್ಕೆ ಅವಕಾಶ ನೀಡಿರಲಿಲ್ಲ. ಭಾರತವು ಈಗಾಗಲೀ ಅಥವಾ ಇದಕ್ಕೂ ಮುಂಚೆಯಾಗಲೀ ತನ್ನ ಪರವಾಗಿ ವರದಿ ನೀಡುವಂತೆ ಯಾವತ್ತಿಗೆ ಒತ್ತಡ ಹಾಕಿಲ್ಲ ಎಂದು ಹೇಳಿದ್ದಾರೆ.

ದಿಢೀರನೆ ಶ್ರೇಯಾಂಕ ನೀಡುವುದನ್ನು ನಿಲ್ಲಿಸಿರುವುದು ಈ ವರದಿಯ ಚೌಕಟ್ಟನ್ನು, ಉದ್ದೇಶ ಮತ್ತು ಸಂಪೂರ್ಣ ಪ್ರಕ್ರಿಯೆಯನ್ನು ಪ್ರಶ್ನಿಸುವಂತೆ ಮಾಡಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಆದರೆ ಕೆಲವು ಅಧಿಕಾರಿಗಳಿಗೆ ಈ ಬಗ್ಗೆ ಭಯ ಇದೆಯಂತೆ. ಉದ್ಯಮಸ್ನೇಹಿ ವಾತಾವರಣ ಸೃಷ್ಟಿಸಿರುವ ಶ್ರೇಯವನ್ನು ಭಾರತ ಎಲ್ಲಿ ಕಳೆದುಕೊಳ್ಳಬೇಕಾಗುತ್ತದೋ ಎಂಬ ಆತಂಕ ಅವರದು. ಆದರೆ ಬಹುತೇಕ ಅಧಿಕಾರಿಗಳು ಹೇಳುವಂತೆ, ವಿವಿಧ ಸಂಸ್ಥೆಗಳನ್ನು ಬೆದರಿಸಿ, ಚೀನಾ ಹೇಗೆ ತನಗೆ ಅನುಕೂಲ ಆಗುವಂತೆ ಬೇಡಿಕೆ ಸೃಷ್ಟಿ ಆಗುವಂತೆ ಮಾಡಿದೆ ಎಂಬುದು ಇದರಿಂದ ಬಹಿರಂಗ ಆಗಿದೆ. ಜಾಗತಿಕವಾಗಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲ ಸ್ಪಷ್ಟವಾಗಿದೆ. ಆ ಕಾರಣಕ್ಕೆ ಉದ್ಯಮಗಳು ಚೀನಾದಿಂದ ಭಾರತಕ್ಕೆ ಬರಬಹುದು. ಹಲವು ಬಗೆಯ ಪ್ರೋತ್ಸಾಹ ನೀಡುವ ಮೂಲಕ ಚೀನಾದಿಂದ ಭಾರತಕ್ಕೆ ಪೂರೈಕೆ ಜಾಲಗಳನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದೆ.

ಇದನ್ನೂ ಓದಿ: Ease Of Business Doing: ಉದ್ಯಮಿಸ್ನೇಹಿ ದೇಶಗಳ ಪಟ್ಟಿ ಇನ್ನು ಬಿಡುಗಡೆ ಇಲ್ಲ ಎಂದ ವಿಶ್ವಬ್ಯಾಂಕ್, ಮೇಡ್​ ಇನ್ ಚೈನಾ ಎಫೆಕ್ಟ್!

(Why Ease Of Doing Business Report Of World Bank Discontinued And What Is The Impact On India)