Ease Of Business Doing: ಉದ್ಯಮಿಸ್ನೇಹಿ ದೇಶಗಳ ಪಟ್ಟಿ ಇನ್ನು ಬಿಡುಗಡೆ ಇಲ್ಲ ಎಂದ ವಿಶ್ವಬ್ಯಾಂಕ್, ಮೇಡ್ ಇನ್ ಚೈನಾ ಎಫೆಕ್ಟ್!
ಉದ್ಯಮಸ್ನೇಹಿ ದೇಶಗಳು ಎಂದು ಬಿಡುಗಡೆ ಮಾಡುವ ಪಟ್ಟಿಯಲ್ಲೇ ಅವ್ಯವಹಾರ ಆರೋಪ ಬಂದಿರುವುದರಿಂದ ಅದನ್ನು ನಿಲ್ಲಿಸಲು ವಿಶ್ವಬ್ಯಾಂಕ್ ನಿರ್ಧರಿಸಿದೆ.
ಉದ್ಯಮಕ್ಕೆ ಅನುಕೂಲಕರವಾದ (Doing Business- DB) ವಾತಾವರಣ ಇರುವ ದೇಶಗಳ ಪಟ್ಟಿಯ ಬಗ್ಗೆ ವರದಿಯನ್ನು ವಿಶ್ವಬ್ಯಾಂಕ್ನಿಂದ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಈಗ ಅದನ್ನು ನಿಲ್ಲಿಸುವುದಕ್ಕೆ ನಿರ್ಧರಿಸಲಾಗಿದೆ. ಆ ಪಟ್ಟಿಯನ್ನು ಸಿದ್ಧಪಡಿಸುವುದರಲ್ಲೂ ಅವ್ಯವಹಾರ ನಡೆಸಿರುವ ಬಗ್ಗೆ ಆರೋಪ ಬಂದಿದೆ. 2017ರಲ್ಲಿ ಕೆಲವು ಟಾಪ್ ಬ್ಯಾಂಕ್ ಅಧಿಕಾರಿಗಳು ಚೀನಾದ ಶ್ರೇಯಾಂಕಕ್ಕೆ ಉತ್ತೇಜನ ನೀಡುವುದಕ್ಕೆ ಒತ್ತಡ ತಂದಿದ್ದು, ಆಗ ದತ್ತಾಂಶದಲ್ಲಿ ಅ್ಯವವಹಾರ ನಡೆದಿದೆ ಎಂಬುದು ಈಗ ಕೇಳಿ ಬಂದಿರುವ ಆರೋಪ. ಆ ಹಿನ್ನೆಲೆಯಲ್ಲಿ ಈಗಿನ ನಿರ್ಧಾರವನ್ನು ಕೈಗೊಳ್ಳಲಾಗಿದೆ. “ಉದ್ಯಮಸ್ನೇಹಿ” ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿಯ ತನಕ ಲಭ್ಯ ಇರುವ ಮಾಹಿತಿಗಳನ್ನು ಪರಿಶೀಲಿಸಲಾಗಿದೆ. ಈ ಹಿಂದಿನ ವಿಶ್ಲೇಷಣೆ, ಲೆಕ್ಕ ಪರಿಶೀಲನೆಯಿಂದ ಕಂಡುಬಂದಿದ್ದನ್ನು ಕಾರ್ಯನಿರ್ವಾಹಕ ನಿರ್ದೇಶಕರ ಮಂಡಳಿ ಪರವಾಗಿ ವರದಿ ರೂಪದಲ್ಲಿ ಬಿಡುಗಡೆ ಮಾಡಲಾಗಿದೆ. ಉದ್ಯಮಿಸ್ನೇಹಿ ವಾತಾವರಣ ಇರುವ ದೇಶಗಳ ಪಟ್ಟಿಯನ್ನು ಇನ್ನು ಮುಂದೆ ಬಿಡುಗಡೆ ಮಾಡದಿರುವುದಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ವಿಶ್ವಬ್ಯಾಂಕ್ ಸಮೂಹ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.
ಸರ್ಕಾರಗಳು ನಿಯಂತ್ರಕ ವಾತಾವರಣ ಸೃಷ್ಟಿಸುವಾಗ ಭಾಗವಹಿಸುವ ಖಾಸಗಿ ವಲಯಗಳು ಅಭಿವೃದ್ಧಿ ಪಡಿಸಲು ಮತ್ತು ಬೆಂಬಲಿಸುವುದನ್ನು ವಿಶ್ವಬ್ಯಾಂಕ್ ಬೆಂಬಲಿಸುವ ವಿಚಾರದಲ್ಲಿ ಈಗಲೂ ಬದ್ಧವಾಗಿದೆ. ಇನ್ನು ಮುಂದೆ ಹೂಡಿಕೆ ಹಾಗೂ ಉದ್ಯಮ ವಾತಾವರಣವನ್ನು ಅಳೆಯಲು ಬೇರೆಯದೇ ವಿಧಾನವನ್ನು ಬಳಸುತ್ತೇವೆ. ಉದ್ಯಮ ವಾತಾವರಣ ಕಾರ್ಯಸೂಚಿಯನ್ನು ಮುಂದಕ್ಕೆ ಒಯ್ಯಲು ಶ್ರಮಿಸಿದ ಎಲ್ಲ ಸಿಬ್ಬಂದಿ ಸದಸ್ಯರಿಗೆ ಆಭಾರಿಯಾಗಿದ್ದೇವೆ. ಅವರ ಶ್ರಮ ಹಾಗೂ ಸಾಮರ್ಥ್ಯವನ್ನು ಹೊಸ ಮಾರ್ಗದಲ್ಲಿ ನೋಡಲು ಬಯಸುತ್ತೇವೆ ಎಂದು ಹೇಳಲಾಗಿದೆ. ವಿಶ್ವ ಬ್ಯಾಂಕ್ನ ಸಮೂಹದ ಸಂಶೋಧನೆಯಲ್ಲಿ ನಂಬಿಕೆ ಬಹಳ ಮುಖ್ಯವಾದದ್ದು. ನೀತಿ ನಿರೂಪಕರ ಕಾರ್ಯ ತುಂಬ ಪ್ರಾಮುಖ್ಯ ಪಡೆಯುತ್ತದೆ. ದೇಶವು ಉತ್ತಮ ನಿರ್ಧಾರ ಕೈಗೊಳ್ಳಲು ಅನುಕೂಲ ಆಗುತ್ತದೆ. ಸಂಬಂಧಪಟ್ಟವರಿಗೆ ದೇಶದ ಸಾಮಾಜಿಕ, ಆರ್ಥಿಕ ಚೇತರಿಕೆಯನ್ನು ಹೆಚ್ಚು ನಿಖರವಾಗಿ ಅಳೆಯುವುದಕ್ಕೆ ಅವಕಾಶ ಆಗುತ್ತದೆ.
ಉದ್ಯಮ ಸ್ನೇಹಿ 2020ರ ವರದಿಯ ಪ್ರಕಾರ, ಭಾರತವು 14 ಸ್ಥಾನಗಳು ಮೇಲೇರಿ, 63ನೇ ಸ್ಥಾನದಲ್ಲಿ ಇತ್ತು. 2014-19ರಲ್ಲಿ ಭಾರತವು 79ನೇ ಸ್ಥಾನದಲ್ಲಿತ್ತು. ಉದ್ಯಮವನ್ನು ನಡೆಸುವುದಕ್ಕೆ ಇಂಥ ದೇಶ ಬಹಳ ಅನುಕೂಕರ ವಾತಾವರಣವನ್ನು ಹೊಂದಿದೆ ಎಂಬ ಪಟ್ಟಿಯನ್ನು ವಿಶ್ವ ಬ್ಯಾಂಕ್ನಿಂದ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಆ ಶ್ರೇಯಾಂಕವನ್ನೇ ತಿರುಚಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. “ಇದು ಆಘಾತಕಾರಿ” ಎಂದಿದ್ದಾರೆ ಈ ಹಿಂದೆ ವಿಶ್ವಬ್ಯಾಂಕ್ನಲ್ಲಿ ಮುಖ್ಯ ಅರ್ಥಶಾಸ್ತ್ರಜ್ಞ ಆಗಿದ್ದ ಕೌಶಿಕ್ ಬಸು. ಶನಿವಾರ ಈ ಬಗ್ಗೆ ಅವರು ಮಾತನಾಡಿ, ನನ್ನ ಅಧಿಕಾರಾವಧಿಯಲ್ಲೂ ಸರ್ಕಾರಗಳಿಂದ ಒತ್ತಡ ಇರುತ್ತಿತ್ತು. ಬಹುವ್ಯವಸ್ಥೆ ಇರುವ ಸಂಸ್ಥೆಯಲ್ಲಿ ಅದಕ್ಕೆ ಅವಕಾಶ ನೀಡಿರಲಿಲ್ಲ ಎಂದಿದ್ದಾರೆ. 2012ರಿಂದ 2016ರ ಮಧ್ಯೆ ಬಸು ಅವರು ವಿಶ್ವಬ್ಯಾಂಕ್ನ ಮುಖ್ಯ ಅರ್ಥಶಾಸ್ತ್ರಜ್ಞರಾಗಿದ್ದರು.
ಇದನ್ನೂ ಓದಿ: World Bank: ಕೊರೊನಾ ಸಂಕಷ್ಟದಲ್ಲಿರುವ ಭಾರತದ ಎಂಎಸ್ಎಂಇಗಳಿಗೆ ವಿಶ್ವಬ್ಯಾಂಕ್ನಿಂದ 50 ಕೋಟಿ ಅಮೆರಿಕನ್ ಡಾಲರ್
(World Bank Decided To Discontinue Ease Of Business Doing Report Here Is The Reason)