ಆರ್​ಬಿಐ ರೆಪೋ ದರವನ್ನು ಏಕೆ ಹೆಚ್ಚಿಸಿದೆ; ಇದರಿಂದ ಇಎಮ್​ಐ ಮೇಲೆ ಹೇಗೆ ಪರಿಣಾಮ ಬೀರುತ್ತದೆ

ಭಾರತದಲ್ಲಿ ಹಣದುಬ್ಬರ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ರಿಸರ್ವ್​ ಬ್ಯಾಂಕ್ ಶುಕ್ರವಾರ (ಸೆ 30) ರೆಪೋ ದರವನ್ನು 50 ಮೂಲಾಂಶಗಳಷ್ಟು (ಶೇ 0.5) ಹೆಚ್ಚಿಸಿದೆ.

ಆರ್​ಬಿಐ ರೆಪೋ ದರವನ್ನು ಏಕೆ ಹೆಚ್ಚಿಸಿದೆ; ಇದರಿಂದ ಇಎಮ್​ಐ ಮೇಲೆ ಹೇಗೆ ಪರಿಣಾಮ ಬೀರುತ್ತದೆ
ಭಾರತೀಯ ರಿಸರ್ವ್ ಬ್ಯಾಂಕ್ (ಸಂಗ್ರಹ ಚಿತ್ರ)
TV9kannada Web Team

| Edited By: Vivek Biradar

Sep 30, 2022 | 10:12 PM

ಭಾರತದಲ್ಲಿ ಹಣದುಬ್ಬರ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ರಿಸರ್ವ್​ ಬ್ಯಾಂಕ್ (Reserve Bank of India RBI) ಶುಕ್ರವಾರ (ಸೆ 30) ರೆಪೊ ದರವನ್ನು 50 ಮೂಲಾಂಶಗಳಷ್ಟು (ಶೇ 0.5) ಹೆಚ್ಚಿಸಿದೆ. ಪ್ರಸ್ತುತ ದೇಶದಲ್ಲಿ ರೆಪೋ ದರದ ಪ್ರಮಾಣವು ಶೇ 5.90ಕ್ಕೆ ಮುಟ್ಟಿದ್ದು, ಗೃಹ ಸಾಲ ಸೇರಿದಂತೆ ಬಹುತೇಕ ಎಲ್ಲ ಬಗೆಯ ಸಾಲದ ಮೇಲಿನ ಬಡ್ಡಿ ದುಬಾರಿಯಾಗಲಿದೆ. ಹಣಕಾಸು ನೀತಿ ನಿರೂಪಣಾ ಸಮಿತಿಯ (Monetary Policy Committee – MPC) ಪರಾಮರ್ಶನಾ ಸಭೆಯ ನಂತರ, ತಜ್ಞರ ಶಿಫಾರಸಿನಂತೆ ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್​ ಈ ನಿರ್ಧಾರ ಪ್ರಕಟಿಸಿದ್ದಾರೆ. ಹಣಕಾಸು ನೀತಿ ನಿರೂಪಣಾ ಸಮಿತಿಯಲ್ಲಿ ಆರ್​ಬಿಐನ ಮೂವರು ಹಾಗೂ ಮೂರು ಬಾಹ್ಯ ಹಣಕಾಸು ತಜ್ಞರು ಇರುತ್ತಾರೆ. ಆರು ಮಂದಿಯ ಸಮಿತಿಯಲ್ಲಿ ಐವರು ಬಡ್ಡಿದರ ಹೆಚ್ಚಿಸಬೇಕೆಂದು ಅಭಿಪ್ರಾಯಪಟ್ಟಿದ್ದರು.

ರೆಪೋ ದರ ಎಂದರೇನು?

ರೆಪೋ ದರವು ದೇಶದ ಕೇಂದ್ರ ಬ್ಯಾಂಕ್ (ಭಾರತೀಯ ರಿಸರ್ವ್ ಬ್ಯಾಂಕ್) ಯಾವುದೇ ಹಣದ ಕೊರತೆಯ ಸಂದರ್ಭದಲ್ಲಿ ವಾಣಿಜ್ಯ ಬ್ಯಾಂಕುಗಳಿಗೆ ಹಣವನ್ನು ಸಾಲವಾಗಿ ನೀಡುವ ದರವಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ವಿತ್ತೀಯ ಅಧಿಕಾರಿಗಳು ರೆಪೋ ದರವನ್ನು ಬಳಸುತ್ತಾರೆ.

RBI ರೆಪೋ ದರವನ್ನು ಏಕೆ ಹೆಚ್ಚಿಸಿತು?

ಭಾರತದಲ್ಲಿ ಹಣದುಬ್ಬರ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಿರುವುದರಿಂದ ರೆಪೋ ದರವನ್ನು ಏರಿಸಲಾಗಿದೆ. ಚಿಲ್ಲರೆ ಹಣದುಬ್ಬರವನ್ನು ಆಧರಿಸಿದ ಗ್ರಾಹಕ ಬೆಲೆ ಸೂಚ್ಯಂಕವು (ಸಿಪಿಐ) ಜುಲೈನಲ್ಲಿ 6.71 ಇದ್ದು ಆಗಸ್ಟ್‌ನಲ್ಲಿ ಶೇ 7 ರಷ್ಟು ಏರಿಕೆಯಾಗಿದೆ. ಇದರಿಂದ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ.

ಜಾಗತಿಕ ಅಂಶಗಳು ರೆಪೊ ದರ ಏರಿಕೆಗೆ ಕಾರಣವಾದವು

‘ಉಕ್ರೇನ್- ರಷ್ಯಾ ಸಂಘರ್ಷವು ಜಗತ್ತಿನ ಎಲ್ಲ ದೇಶಗಳಿಗೆ ಆರ್ಥಿಕವಾಗಿ ಸಾಕಷ್ಟು ಹೊಡೆತ ನೀಡಿದೆ. ಇದರಿಂದ ಹಣದುಬ್ಬರ ಉಂಟಾಗಿದ್ದು ಅನಿವಾರ್ಯವಾಗಿ ಆರ್​ಬಿಐ ರೆಪೋ ದರ ಹೆಚ್ಚಿಸಲು ಕಾರಣವಾಗಿದೆ. ಸರಕು ಮತ್ತು ಸೇವೆಗಳ ಬೇಡಿಕೆ ಹೆಚ್ಚಳ ಮತ್ತು ಕೊರೊನಾ ಸಾಂಕ್ರಾಮಿಕ ರೋಗದಿಂದ ಉಂಟಾದ ನಷ್ಟ ಹಣದುಬ್ಬರಕ್ಕೆ ಕಾರಣವಾಗಿದೆ.

ಜಗತ್ತಿನ ಬೇರೆ ಬೇರೆ ದೇಶಗಳು ಈ ಎರಡು ಅತಿದೊಡ್ಡ ಹೊಡೆತಗಳಿಂದ ಆರ್ಥಿಕವಾಗಿ ಜರ್ಜರಿತವಾಗಿದ್ದು, ಇದರಿಂದ ಹೊರಬರಲು ಹೆಣಗಾಡುತ್ತಿವೆ. ಆದರೆ ಭಾರತ ಆರ್ಥಿಕತೆಯು ಚೇತರಿಸಿಕೊಳ್ಳುತ್ತಿದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಹೆಚ್ಚಿದ ಯುಎಸ್ ಡಾಲರ್ ಬೆಲೆ, ಆಹಾರ ಮತ್ತು ಇಂಧನ ಬೆಲೆಗಳು, ಸುಧಾರಿತ ಆರ್ಥಿಕ ನೀತಿಗಳಿಂದ ಸ್ಪಿಲ್‌ ಓವರ್‌ಗಳು, ಸಾಲದ ತೊಂದರೆ ಮತ್ತು ತೀಕ್ಷ್ಣವಾದ ಕರೆನ್ಸಿ ಸವಕಳಿಯ ಸವಾಲುಗಳು ಹಣದುಬ್ಬರಕ್ಕೆ ಕಾರಣವಾಗಿವೆ. ಹಣದುಬ್ಬರವನ್ನು ತಡೆಯುವ ಸಲುವಾಗಿ, ರೆಪೊ ದರವನ್ನು ಏರಿಸಲಾಗಿದೆ.

ರೆಪೋ ದರವು ಬ್ಯಾಂಕ್‌ಗಳು ಆರ್‌ಬಿಐನಿಂದ ಹಣವನ್ನು ಎರವಲು ಪಡೆದಾಗ ಪಾವತಿಸಬೇಕಾದ ಬಡ್ಡಿ ದರವಾಗಿದೆ. ರೆಪೋ ದರದಲ್ಲಿ ಈ ಹೆಚ್ಚಳದಿಂದಾಗಿ ಬ್ಯಾಂಕ್‌ಗಳು ಬಡ್ಡಿದರವನ್ನು ಹೆಚ್ಚಿಸುತ್ತವೆ. ಅಂತಿಮವಾಗಿ, ಗ್ರಾಹಕರ ಮೇಲಿನ ಸಾಲದ ಹೊರೆ ಹೆಚ್ಚಾಗುತ್ತದೆ. ಅಂದರೆ ಪಾವತಿಸಬೇಕಾದ ಬಡ್ಡಿ ಹೆಚ್ಚಾಗುತ್ತದೆ. ಬಡ್ಡಿದರ ಏರಿದರೆ ಜನರ ಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಲಿದೆ. ಹೆಚ್ಚಿನ ಬೆಲೆಗಳು ಕಡಿಮೆಯಾಗುತ್ತವೆ ಮತ್ತು ಹಣದುಬ್ಬರ ದರವು ಕಡಿಮೆಯಾಗುತ್ತದೆ.

US ಡಾಲರ್‌ ಬೇಡಿಕೆಯು ಹೆಚ್ಚಳವಾಗಿದ್ದು, ಇತರ ಕರೆನ್ಸಿಗಳನ್ನು ದುರ್ಬಲಗೊಳ್ಳುತ್ತಿವೆ. ಇದರಿಂದ ಯುಸ್​ ಡಾಲರ್ ಸೂಚ್ಯಂಕವು ಕಳೆದ ಎರಡು ವರ್ಷಗಳಿಗಂತ ಅಧಿಕಾವಗಿದೆ. ಇದರಿಂದ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಮೇಲೆ ಪರಿಣಾಮ ಬೀರುತ್ತದೆ.

‘ಈ ವರ್ಷ ಭಾರತೀಯ ರೂಪಾಯಿ ಡಾಲರ್​ ಮುಂದೆ 10 ಪ್ರತಿಶತದಷ್ಟು ಕುಸಿದಿದೆ. ವಾರದ ಆರಂಭದಲ್ಲಿ ಪ್ರತಿ ಡಾಲರ್​ಗೆ ರೂಪಾಯಿ ಮೌಲ್ಯವು 81.95 ರೂ ಆಗಿದೆ. ಇದರಿಂದ ಭಾರತಕ್ಕೆ ಸಾಕಷ್ಟು ಹೊಡೆತ ಬೀಳಲಿದೆ. ಭಾರತವು ಕಚ್ಚಾ ತೈಲವನ್ನು ಶೇಕಡಾ 80 ಪ್ರತಿಷತಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತದೆ. ಈಗ ಡಾಲರ್​ ಮುಂದೆ ರೂಪಾಯಿ ಮೌಲ್ಯ ಕುಸಿತಗೊಂಡಿದ್ದರಿಂದ ಹೆಚ್ಚಿನ ಹಣ ನೀಡಿ ತೈಲವನ್ನು ಖರೀದಿಸುವ ಅನಿವಾರ್ಯತೆ ಉಂಟಾಗಿದೆ. ಇದರಿಂದ ದೇಶದ ಆರ್ಥಿಕತೆಗೆ ಸಾಕಷ್ಟು ಪರಿಣಾಮ ಬೀರಬಹುದು. ಈ ಎಲ್ಲಾ ಅಂಶಗಳನ್ನು ಇಟ್ಟುಕೊಂಡು, ಆರ್​ಬಿಐ ರೆಪೋ ದರವನ್ನು ಹೆಚ್ಚಳ ಮಾಡಿದೆ.

ರೆಪೋ ದರ ಹೆಚ್ಚಳವು EMI ಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

RBI ರೆಪೊ ದರ ಹೆಚ್ಚಳದಿಂದ ಹೋಮ್‌ ಲೋನ್‌ ಮತ್ತು ಕಾರ್ ಲೋನ್‌ನಂತಹ ಸಾಲಗಳ EMI ಹೆಚ್ಚಳವಾಗುತ್ತದೆ. ರೆಪೋ ದರ ಹೆಚ್ಚಳ ನಿಮ್ಮ ಉಳಿತಾಯ ಬ್ಯಾಂಕ್ ಖಾತೆ ಮತ್ತು ನಿಶ್ಚಿತ ಠೇವಣಿ (FD) ಮೇಲೂ ಪರಿಣಾಮ ಬೀರುತ್ತದೆ.

ರೆಪೊ ದರ ಹೆಚ್ಚಳದಿಂದ ಸಾಲದ ಅವಧಿಯನ್ನು ವಿಸ್ತರಿಸಬಹುದು. ನೀವು ಈ ಹಿಂದೆ 160 ತಿಂಗಳ ಅವಧಿಗೆ ತೆಗೆದುಕೊಂಡ ಸಾಲವನ್ನು 162 ಅಥವಾ 165 ತಿಂಗಳಿಗೆ ವಿಸ್ತರಿಸಬಹುದು. ರೆಪೋ ದರ ಹೆಚ್ಚಳವು ಹಣದುಬ್ಬರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರೆಪೋ ದರ ಹೆಚ್ಚಳವು ಕೈಗಾರಿಕಾ ಅಭಿವೃದ್ಧಿಯ ಮೇಲೂ ಪರಿಣಾಮ ಬೀರಬಹುದು. ಏಕೆಂದರೆ ಕೈಗಾರಿಕೆಗಳಿಗೂ ಬಡ್ಡಿ ದರ ದುಬಾರಿಯಾಗಲಿದೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada