Windfall Tax: ಕಚ್ಛಾ ತೈಲಕ್ಕೆ ವಿಂಡ್ಫಾಲ್ ಟ್ಯಾಕ್ಸ್ ಹೆಚ್ಚಳ; ಜೆಟ್ ಇಂಧನಕ್ಕೆ ಆಮದು ಸುಂಕ ಇಲ್ಲ
Government Rises Windfall Tax On Domestic Crude: ದೇಶೀಯವಾಗಿ ಉತ್ಪಾದಿಸಲಾದ ಕಚ್ಛಾ ತೈಲದ ಮೇಲಿನ ಆಕಸ್ಮಿಕ ಲಾಭ ತೆರಿಗೆಯನ್ನು ಹೆಚ್ಚಿಸಲಾಗಿದೆ. ಜೆಟ್ ಫುಯಲ್ ಮೇಲಿನ ವಿಶೇಷ ಆಮದು ಸುಂಕ ಮತ್ತು ಪೆಟ್ರೋಲ್ ಮೇಲಿನ ರಫ್ತು ಸುಂಕವನ್ನು ಸೊನ್ನೆಗೆ ತರಲಾಗಿದೆ.
ನವದೆಹಲಿ: ಸ್ಥಳೀಯವಾಗಿ ತಯಾರಿಸಲಾದ ಕಚ್ಛಾ ತೈಲದ ಮೇಲಿನ ವಿಂಡ್ಫಾಲ್ ಟ್ಯಾಕ್ಸ್ (Windfall Tax- ಆಕಸ್ಮಿಕ ಲಾಭ ತೆರಿಗೆ) ಅನ್ನು ಸರ್ಕಾರ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿಸಿದೆ. ಟನ್ಗೆ 50 ರೂನಷ್ಟು ಈ ತೆರಿಗೆ ಹೆಚ್ಚಳವಾಗಿದೆ. ಒಂದು ಟನ್ಗೆ 4,350 ರೂ ಇದ್ದ ವಿಂಡ್ಫಾಲ್ ಟ್ಯಾಕ್ಸ್ ಇದೀಗ 4,400 ರೂಗೆ ಏರಿಕೆ ಆಗಿದೆ. ಇದರ ಜೊತೆಗೆ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು (Special Additional Excise Duty) ಕಡಿಮೆಗೊಳಿಸಿದೆ. ಜೆಟ್ ಇಂಧನದ ಮೇಲಿನ ವಿಶೇಷ ಸುಂಕವನ್ನು ಶೂನ್ಯಕ್ಕೆ ತರಲಾಗಿದೆ.
ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು (SAED- ಎಸ್ಎಇಡಿ) ಪ್ರತೀ 15 ದಿನಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. ಅಂತಾರಾಷ್ಟ್ರೀಯ ಕಚ್ಛಾ ತೈಲ ದರಗಳ ಆಧಾರದ ಮೇಲೆ ಈ ಸುಂಕವನ್ನು ನಿಗದಿ ಮಾಡಲಾಗುತ್ತದೆ. ಪೆಟ್ರೋಲ್ನ ರಫ್ತಿಗೆ ಯಾವುದೇ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಇರುವುದಿಲ್ಲ. ಹಾಗೆಯೇ, ವಿಮಾನಗಳಿಗೆ ಇಂಧನವಾಗಿ ಬಳಸುವ ಏವಿಯೇಷನ್ ಟರ್ಬೈನ್ ಫುಯಲ್ (ಎಟಿಎಫ್– ATF- Aviation Turbine Fuel) ಮೇಲಿನ ಈ ವಿಶೇಷ ಸುಂಕವನ್ನು ಸೊನ್ನೆಗೆ ತರಲಾಗಿದೆ.
ಇನ್ನು, ಡೀಸೆಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಬಹಳಷ್ಟು ಕಡಿಮೆ ಮಾಡಲಾಗಿದೆ. ಪ್ರತೀ ಲೀಟರ್ ಡೀಸೆಲ್ಗೆ ಇದ್ದ 2.5 ರೂ ಸುಂಕವನ್ನು 50 ಪೈಸೆಗೆ ಇಳಿಸಲಾಗಿದೆ. ಈ ಎಲ್ಲಾ ಹೊಸ ದರಗಳು ನಿನ್ನೆ ಮಾರ್ಚ್ 4ರಿಂದಲೇ ಜಾರಿಗೆ ಬಂದಿವೆ.
ಇದನ್ನೂ ಓದಿ: CARO- ತೆಲಂಗಾಣಕ್ಕೆ ಮೋದಿ ಕೊಟ್ಟ ಗಿಫ್ಟ್ ಎಂದ ಕಿಶನ್ ರೆಡ್ಡಿ; ಸಂಶೋಧನಾ ಕೇಂದ್ರದ ವಿಶೇಷತೆಗಳೇನು?
ಕಳೆದ ವರ್ಷ 2022, ಜುಲೈ 1ರಂದು ಸರ್ಕಾರ ದೇಶೀಯವಾಗಿ ಕಚ್ಛಾ ತೈಲ ಉತ್ಪಾದನೆಯಲ್ಲಿ ಪ್ರತೀ ಟನ್ಗೆ 23,250 ರೂ ಆಕಸ್ಮಿಕ ಲಾಭ ತೆರಿಗೆ ವಿಧಿಸಿತ್ತು. ಪೆಟ್ರೋಲ್ ಮತ್ತು ಎಟಿಎಫ್ ಮೇಲೆ ಪ್ರತೀ ಲೀಟರ್ಗೆ 6 ರೂ ರಫ್ತು ಸುಂಕ, ಹಾಗು ಪ್ರತೀ ಲೀಟರ್ ಡೀಸೆಲ್ ಮೇಲೆ 13 ರೂ ರಫ್ತು ಸುಂಕ ಹಾಕಿತ್ತು.
ಆಕಸ್ಮಿಕ ಲಾಭ ತೆರಿಗೆ ಎಂದರೇನು?
ವಿಂಡ್ಫಾಲ್ ಟ್ಯಾಕ್ಸ್ ಅಥವಾ ಆಕಸ್ಮಿಕ ಲಾಭ ತೆರಿಗೆ ಎಂದರೆ, ಅನಿರೀಕ್ಷಿತವಾಗಿ ಸಿಗುವ ಬಹಳ ದೊಡ್ಡ ಲಾಭಕ್ಕೆ ವಿಧಿಸಲಾಗುವ ತೆರಿಗೆಯಾಗಿದೆ. ಅದರಲ್ಲೂ ನ್ಯಾಯಯುತ ಎನಿಸದ ರೀತಿಯಲ್ಲಿ ಅನಿರೀಕ್ಷಿತ ಒದಗಿ ಬರುವ ದೊಡ್ಡ ಲಾಭಕ್ಕೆ ಈ ತೆರಿಗೆ ಹಾಕಲಾಗುತ್ತದೆ. ಉದಾಹರಣೆಗೆ, ಅಂತಾರಾಷ್ಟ್ರೀಯ ಕಚ್ಛಾ ತೈಲ ಬೆಲೆ ದಿಢೀರನೇ ಭಾರೀ ಮಟ್ಟದಲ್ಲಿ ಏರಿಕೆ ಆದಾಗ, ಸ್ಥಳೀಯ ತೈಲ ಉತ್ಪಾದಕರೂ ಬೆಲೆ ಏರಿಸಿ ಭಾರೀ ಲಾಭ ಮಾಡಿಕೊಳ್ಳುತ್ತಾರೆ. ಇಂಥ ಲಾಭಕ್ಕೆ ಸರ್ಕಾರ ವಿಂಡ್ಫಾಲ್ ಟ್ಯಾಕ್ಸ್ ವಿಧಿಸುತ್ತದೆ.