OPS: ಕೆಲ ಸರ್ಕಾರಿ ಉದ್ಯೋಗಿಗಳಿಗಿದೆ ಹಳೆ ಪಿಂಚಣಿ ವ್ಯವಸ್ಥೆಯ ಅವಕಾಶ; ಯಾರು ಅರ್ಹರು?; ಇಲ್ಲಿದೆ ವಿವರ
Option of Old Pension Scheme: 2003, ಡಿಸೆಂಬರ್ 22ರಂದು ಕೇಂದ್ರ ಸರ್ಕಾರ ಹೊಸ ಪಿಂಚಣಿ ವ್ಯವಸ್ಥೆಯನ್ನು (ಎನ್ಪಿಎಸ್) ಜಾರಿಗೆ ತಂದಿತ್ತು. ಈ ದಿನಾಂಕಕ್ಕೆ ಮುನ್ನ ಕೇಂದ್ರ ಸರ್ಕಾರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಅಥವಾ ಜಾಹೀರಾತು ಬಂದು, ಆ ಹುದ್ದೆಗಳಿಗೆ ನೇಮಕಾತಿ ಆದ ಉದ್ಯೋಗಿಗಳು ಹಳೆಯ ಪೆನ್ಷನ್ ಸಿಸ್ಟಂ ಅನ್ನು ಆಯ್ದುಕೊಳ್ಳುವ ಅವಕಾಶ ಹೊಂದಿದ್ದಾರೆ.
ನವದೆಹಲಿ: ಹಳೆಯ ಪಿಂಚಣಿ ವ್ಯವಸ್ಥೆ (OPS- Old Pension Scheme) ಬೇಕೆಂದು ದೇಶದ ವಿವಿಧೆಡೆ ಸರ್ಕಾರಿ ನೌಕರರು ಒತ್ತಾಯ ಮಾಡುತ್ತಿರುವ ಸುದ್ದಿ ಗೊತ್ತೇ ಇದೆ. ಆದರೆ, ಒಂದು ನಿರ್ದಿಷ್ಟ ಗುಂಪಿನ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಹಳೆಯ ಪೆನ್ಷನ್ ಸ್ಕೀಮ್ ಆಯ್ದುಕೊಳ್ಳುವ ಅವಕಾಶ ಸಿಕ್ಕಿದೆ. ಕೇಂದ್ರ ಸಿಬ್ಬಂದಿ ಸಚಿವಾಲಯದ ಇತ್ತೀಚಿನ ಆದೇಶದಲ್ಲಿ ಇಂಥದ್ದೊಂದು ಆಯ್ಕೆಯನ್ನು ನೌಕರರಿಗೆ ಕೊಟ್ಟಿದೆ.
2003, ಡಿಸೆಂಬರ್ 22ರಂದು ಕೇಂದ್ರ ಸರ್ಕಾರ ಹೊಸ ಪಿಂಚಣಿ ವ್ಯವಸ್ಥೆಯನ್ನು (NPS- National Pension Scheme) ಜಾರಿಗೆ ತಂದಿತ್ತು. ಈ ದಿನಾಂಕಕ್ಕೆ ಮುನ್ನ ಕೇಂದ್ರ ಸರ್ಕಾರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಅಥವಾ ಜಾಹೀರಾತು ಬಂದು, ಆ ಹುದ್ದೆಗಳಿಗೆ ನೇಮಕಾತಿ ಆದ ಉದ್ಯೋಗಿಗಳು ಹಳೆಯ ಪೆನ್ಷನ್ ಸಿಸ್ಟಂ ಅನ್ನು ಆಯ್ದುಕೊಳ್ಳುವ ಅವಕಾಶ ಹೊಂದಿದ್ದಾರೆ. ವಿವಿಧ ಮನವಿಗಳು, ವಿವಿಧ ಕೋರ್ಟ್ಗಳ ಅಭಿಪ್ರಾಯಗಳನ್ನು ಪರಿಗಣಿಸಿ ಕೇಂದ್ರ ಹಣಕಾಸು ಸೇವೆ, ಸಿಬ್ಬಂದಿ ಮತ್ತು ತರಬೇತಿ, ವೆಚ್ಚ ಇಲಾಖೆ, ಕಾನೂನು ವ್ಯವಹಾರಗಳ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಿ ಈಗ ನಿರ್ದಿಷ್ಟ ಗುಂಪಿನ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ವ್ಯವಸ್ಥೆಯ ಅವಕಾಶವನ್ನು ಕಲ್ಪಿಸಲಾಗಿದೆ ಎಂಬುದು ತಿಳಿದುಬಂದಿದೆ. ಇದು ಒಮ್ಮೆಗೆ ಕೊಡಲಾಗಿರುವ ಅವಕಾಶ. ನಿಗದಿತ ದಿನಾಂಕದೊಳಗೆ ಆಯ್ಕೆ ಮಾಡಿಕೊಳ್ಳದಿದ್ದರೆ ಹೊಸ ಪಿಂಚಣಿ ವ್ಯವಸ್ಥೆಯೇ ಮುಂದುವರಿಯುತ್ತದೆ.
ಕೊನೆಯ ದಿನಾಂಕ ಯಾವಾಗ?
ಮೇಲೆ ತಿಳಿಸಿದ ವರ್ಗದ ಕೇಂದ್ರ ಸರ್ಕಾರಿ ಉದ್ಯೋಗಿಗಳು ಹಳೆಯ ಪಿಂಚಣಿ ವ್ಯವಸ್ಥೆ ಬೇಕೆಂದರೆ 2023 ಆಗಸ್ಟ್ 31ರೊಳಗೆ ಅದನ್ನು ಆಯ್ದುಕೊಳ್ಳಬೇಕು. ಅದಾದ ಬಳಿಕ ಮತ್ತೆ ಆ ಅವಕಾಶ ಇರುವುದಿಲ್ಲ. ಒಮ್ಮೆ ಹಳೆಯ ಪೆನ್ಷನ್ ಸ್ಕೀಮ್ ಬೇಕೆಂದು ಅಯ್ಕೆಮಾಡಿಕೊಂಡರೆ ಮತ್ತೆ ಹೊಸ ಪೆನ್ಷನ್ ಸ್ಕೀಮ್ಗೆ ಮರಳಲು ಆಗುವುದಿಲ್ಲ.
ಇದನ್ನೂ ಓದಿ: Forex Decrease- ಭಾರತದ ಫಾರೆಕ್ಸ್ ಹಣ ಮತ್ತೆ ಕುಸಿತ; ಈಗೆಷ್ಟಿದೆ ವಿದೇಶಿ ವಿನಿಮಯ ಮೀಸಲು ನಿಧಿ?
ಇದೇ ವೇಳೆ, ಹಳೆಯ ಪಿಂಚಣಿ ಯೋಜನೆಯ ರಾಷ್ಟ್ರೀಯ ಆಂದೋಲನ ಸಂಸ್ಥೆಯು ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿವೆ.
ಹೊಸ ಮತ್ತು ಹಳೆಯ ಪಿಂಚಣಿ ವ್ಯವಸ್ಥೆಯಲ್ಲಿ ಏನು ವ್ಯತ್ಯಾಸ?
ಹಳೆಯ ಪೆನ್ಷನ್ ಸಿಸ್ಟಮ್ನಲ್ಲಿ (ಒಪಿಎಸ್) ನಿವೃತ್ತಿ ಹೊಂದಿದ ಉದ್ಯೋಗಿಯೊಬ್ಬರು ತಮ್ಮ ಕೊನೆಯ ಸಂಬಳದ ಶೇ. 50ರಷ್ಟು ಹಣವನ್ನು ಮಾಸಿಕ ಪಿಂಚಣಿಯಾಗಿ ಪಡೆಯುತ್ತಾರೆ. ಉದಾಹರಣೆಗೆ, 1 ಲಕ್ಷ ರೂ ಸಂಬಳ ಇರುವ ಒಬ್ಬ ನೌಕರ ನಿವೃತ್ತನಾದ ಬಳಿಕ ತಿಂಗಳಿಗೆ 50 ಸಾವಿರ ರೂನಷ್ಟು ಪಿಂಚಣಿ ಪಡೆಯುತ್ತಾರೆ. ಇದು ಹಳೆಯ ಪಿಂಚಣಿ ವ್ಯವಸ್ಥೆಯಲ್ಲಿ ಕಲ್ಪಿಸಲಾಗಿದ್ದ ಸೌಲಭ್ಯ. ಆದರೆ, ಹೊಸ ಪಿಂಚಣಿ ವ್ಯವಸ್ಥೆಯಾದ ನ್ಯಾಷನಲ್ ಪೆನ್ಷನ್ ಸ್ಕೀಮ್ ಪ್ರಕಾರ ಒಬ್ಬ ಉದ್ಯೋಗಿ ಮತ್ತು ಆತ ಕೆಲಸ ಮಾಡುವ ಸಂಸ್ಥೆ ಪಿಂಚಣಿ ಖಾತೆಗೆ ಎಷ್ಟು ಹಣ ತುಂಬಿಸುತ್ತಾರೆ ಎಂಬುದರ ಮೇಲೆ ಪಿಂಚಣಿ ಮೊತ್ತ ನಿರ್ಧಾರಿತವಾಗುತ್ತದೆ. ಹೊಸ ಪಿಂಚಣಿ ವ್ಯವಸ್ಥೆಯು ಸರ್ಕಾರಿ ನೌಕರರು ಮಾತ್ರವಲ್ಲ, ಖಾಸಗಿ ವಲಯಕ್ಕೂ ಅನ್ವಯ ಆಗುತ್ತದೆ.
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:30 pm, Sun, 5 March 23