Gold Bond: ಕಡಿಮೆ ಬೆಲೆಗೆ ಸರ್ಕಾರದಿಂದ ಚಿನ್ನ; ಮಾರ್ಚ್ 10ರವರೆಗೆ ಹೂಡಿಕೆ ಅವಕಾಶ
Sovereign Gold Bond Scheme 2022-23 From March 6-10: ಸಾವರೀನ್ ಗೋಲ್ಡ್ ಬಾಂಡ್ (ಎಸ್ಜಿಬಿ) ಸ್ಕೀಮ್ ಮಾರ್ಚ್ 6, ಇಂದು ಆರಂಭಗೊಂಡಿದೆ. ಇದು ಸಾವರೀನ್ ಗೋಲ್ಡ್ ಬಾಂಡ್ 2022-23 ಯೋಜನೆಯ ನಾಲ್ಕನೇ ಸರಣಿಯಾಗಿದ್ದು ಮಾರ್ಚ್ 10ರವರೆಗೆ ಚಾಲನೆಯಲ್ಲಿ ಇರಲಿದೆ.
ನವದೆಹಲಿ: ಚಿನ್ನ ಬಹು ಆಯಾಮಗಳಲ್ಲಿ ಉಪಯೋಗಕ್ಕೆ ಬರುವ ಅಮೂಲ್ಯ ವಸ್ತು. ಆಭರಣದಿಂದ ಮೆರಗು ಪಡೆಯಬಹುದು, ಅಡವಿಟ್ಟು ಕಡಿಮೆ ಬಡ್ಡಿ ದರಕ್ಕೆ ಸಾಲ ಕೂಡ ಪಡೆಯಬಹುದು. ಹೀಗಾಗಿ ಭಾರತದಲ್ಲಿ ಚಿನ್ನಕ್ಕೆ ಯಾವತ್ತಿದ್ದರೂ ಬೇಡಿಕೆ ಇರುವಂಥದ್ದೇ. ಭೂಮಿಯಲ್ಲಿ ಸೀಮಿತ ಪ್ರಮಾಣದಲ್ಲಿ ಮಾತ್ರ ಲಭ್ಯ ಇರುವ ಚಿನ್ನ ಬೆಲೆ ಯಾವತ್ತಿಗೂ ಕಡಿಮೆ ಆಗುವುದಿಲ್ಲ. ಹೀಗಾಗಿ, ಹೂಡಿಕೆಗೂ ಚಿನ್ನ ಹೇಳಿ ಮಾಡಿಸಿರುವಂಥದ್ದು. ಇದೀಗ ಸರ್ಕಾರ ತುಸು ಕಡಿಮೆ ಬೆಲೆಗೆ ಚಿನ್ನವನ್ನು ಸಾರ್ವಜನಿಕರಿಗೆ ಮಾರುವ ಯೋಜನೆ ಹಾಕಿದೆ. ಸಾವರೀನ್ ಗೋಲ್ಡ್ ಬಾಂಡ್ (SGB- Sovereign Gold Bond Scheme 2022-23) ಸ್ಕೀಮ್ ಮಾರ್ಚ್ 6, ಇಂದು ಆರಂಭಗೊಂಡಿದೆ. ಇದು ಸಾವರೀನ್ ಗೋಲ್ಡ್ ಬಾಂಡ್ 2022-23 ಯೋಜನೆಯ ನಾಲ್ಕನೇ ಸರಣಿಯಾಗಿದ್ದು ಮಾರ್ಚ್ 10ರವರೆಗೆ ಚಾಲನೆಯಲ್ಲಿ ಇರಲಿದೆ. ಈ ಹಣಕಾಸು ವರ್ಷದಲ್ಲಿ, ಅಂದರೆ 2023 ಮಾರ್ಚ್ 31ಕ್ಕೆ ಅಂತ್ಯಗೊಳ್ಳುವ ಹಣಕಾಸು ವರ್ಷಕ್ಕೆ ಇದು ಕೊನೆ ಸರಣಿಯ ಗೋಲ್ಡ್ ಬಾಂಡ್ ಸ್ಕೀಮ್ ಆಗಿದೆ.
ಗ್ರಾಂಗೆ 50 ರೂ ರಿಯಾಯಿತಿ
ಸರ್ಕಾರದಿಂದಲೇ ಬಿಡುಗಡೆಯಾಗಿರುವ ಗೋಲ್ಡ್ ಬಾಂಡ್ ಸ್ಕೀಮ್ ಇದು. ಈ ಹೊಸ ಸರಣಿಯ ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್ನಲ್ಲಿ ಪ್ರತೀ ಗ್ರಾಮ್ ಚಿನ್ನಕ್ಕೆ ಆರ್ಬಿಐ 5,611 ರುಪಾಯಿ ನಿಗದಿ ಮಾಡಿದೆ. ಹಿಂದಿನ ಸರಣಿಯಲ್ಲಿ 5,409 ರುಪಾಯಿ ಇಷ್ಯೂ ಪ್ರೈಸ್ ಹಾಕಲಾಗಿತ್ತು. ವಿಶೇಷ ಎಂದರೆ ಆನ್ಲೈನ್ನಲ್ಲಿ ಈ ಸ್ಕೀಮ್ ಖರೀದಿಸಿ ಡಿಜಿಟಲ್ ಆಗಿ ಹಣ ಪಾವತಿ ಮಾಡುವ ಹೂಡಿಕೆದಾರರಿಗೆ ಪ್ರತೀ ಗ್ರಾಮ್ಗೆ 50 ರೂ ಡಿಸ್ಕೌಂಟ್ ಆಫರ್ ಕೂಡ ಕೊಡಲಾಗಿದೆ. ಅಂದರೆ ಆನ್ಲೈನ್ ಹೂಡಿಕೆದಾರರು ಪ್ರತೀ ಗ್ರಾಮ್ ಚಿನ್ನವನ್ನು 5,561 ರುಪಾಯಿಗೆ ಖರೀದಿಸಬಹುದು.
ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್ ಬಗ್ಗೆ ಇನ್ನಷ್ಟು ಉಪಯುಕ್ತ ಮಾಹಿತಿ
ಬಾಂಡ್ ಎಲ್ಲಿ ಸಿಗುತ್ತದೆ?: ಕಿರು ಹಣಕಾಸು ಬ್ಯಾಂಕು, ಪೇಮೆಂಟ್ ಬ್ಯಾಂಕು ಮತ್ತು ಸ್ಥಳೀಯ ಗ್ರಾಮೀಣ ಬ್ಯಾಂಕುಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸ್ಕೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕುಗಳಲ್ಲಿ ಸಾವರೀನ್ ಗೋಲ್ಡ್ ಬಾಂಡ್ಗಳನ್ನು ಮಾರಲಾಗುತ್ತದೆ. ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಶನ್, ಕ್ಲಿಯರಿಂಗ್ ಕಾರ್ಪೊರೇಷನ್, ಅಂಚೆ ಕಚೇರಿಗಳು, ಎನ್ಎಸ್ಇ ಮತ್ತು ಬಿಎಸ್ಇ ಮೂಲಕವೂ ಈ ಸ್ಕೀಮ್ನಲ್ಲಿ ಹೂಡಿಕೆ ಮಾಡಬಹುದು.
ವೋಟರ್ ಐಡಿ, ಆಧಾರ್ ಕಾರ್ಡ್, ಪಾನ್ ಕಾರ್ಡ್ ಅಥವಾ ಪಾಸ್ಪೋರ್ಟ್/ಟಿಎಎನ್ ದಾಖಲೆಗಳು ಬೇಕಾಗುತ್ತವೆ.
ಇದನ್ನೂ ಓದಿ: EPF Rate: ಈ ವರ್ಷಕ್ಕೆ ಇಪಿಎಫ್ ಹಣಕ್ಕೆ ಶೇ. 8 ಬಡ್ಡಿ? ಪಿಎಫ್ ಬಡ್ಡಿ ದರ ನಿರ್ಧಾರ ಆಗೋದು ಹೇಗೆ?
ಭಾರತದ ನಾಗರಿಕರಾಗಿರುವ ಎಲ್ಲಾ ವ್ಯಕ್ತಿಗಳೂ ಈ ಯೋಜನೆಯಲ್ಲಿ ತೊಡಗಿಸಿಕೊಳ್ಳಬಹುದು. ಹಾಗೆಯೇ, ಹಿಂದೂ ಅವಿಭಜಿತ ಕುಟುಂಬ (ಎಚ್ಯುಎಫ್), ಟ್ರಸ್ಟ್, ಯೂನಿವರ್ಸಿಟಿ, ಚಾರಿಟಿ ಸಂಸ್ಥೆಗಳು ಈ ಸ್ಕೀಮ್ನಲ್ಲಿ ಹೂಡಿಕೆ ಮಾಡಬಹುದು. ಅನಿವಾಸಿ ಭಾರತೀಯರು (ಎನ್ಆರ್ಐ) ನೇರವಾಗಿ ಈ ಬಾಂಡ್ಗಳನ್ನು ಖರೀದಿಸಲು ಆಗುವುದಿಲ್ಲ. ಭಾರತದ ನಿವಾಸಿಯಾಗಿರುವ ಇನ್ನೊಬ್ಬ ಹೂಡಿಕೆದಾರರಿಗೆ ನಾಮಿನಿ ಆಗುವ ಮೂಲಕ ಈ ಸ್ಕೀಮ್ನಲ್ಲಿ ತೊಡಗಿಸಿಕೊಳ್ಳುವ ಅವಕಾಶ ನೀಡಲಾಗಿದೆ.
ಗರಿಷ್ಠ ಚಿನ್ನ: ಈ ಸ್ಕೀಮ್ನಲ್ಲಿ ಕನಿಷ್ಠ 1 ಗ್ರಾಮ್ನಲ್ಲಾದರೂ ಹೂಡಿಕೆ ಮಾಡಬೇಕು. ಒಂದು ಹಣಕಾಸು ವರ್ಷದಲ್ಲಿ ಈ ಸ್ಕೀಮ್ ಮೂಲಕ ಗರಿಷ್ಠ 20 ಕಿಲೋವರೆಗೂ ಚಿನ್ನವನ್ನು ಖರೀದಿಸಲು ಸಾಧ್ಯ. ಒಬ್ಬ ವ್ಯಕ್ತಿಗೆ ಗರಿಷ್ಠ ಮಿತಿ 4 ಕಿಲೋ ಇದೆ. ಹಿಂದೂ ಅವಿಭಜಿತ ಕುಟುಂಬಕ್ಕೂ 4 ಕಿಲೋ ಮಿತಿ ಇದೆ. ಟ್ರಸ್ಟ್ ಮತ್ತು ಚಾರಿಟಿ ಸಂಸ್ಥೆಗಳು 20 ಕಿಲೋವರೆಗೂ ಚಿನ್ನದ ಮೇಲೆ ಹೂಡಿಕೆ ಮಾಡಬಹುದು.
ಎಷ್ಟು ವರ್ಷದವರೆಗೆ ಈ ಸ್ಕೀಮ್?
ಗೋಲ್ಡ್ ಬಾಂಡ್ಗಳು ಎಂಟು ವರ್ಷಗಳ ಬಳಿಕ ಮೆಚ್ಯೂರ್ ಆಗುತ್ತವೆ. ಐದು ವರ್ಷದವರೆಗೆ ಲಾಕ್–ಇನ್ ಪೀರಿಯಡ್ ಇರುತ್ತದೆ. ಈ ಅವಧಿಗೆ ಮುನ್ನ ಹೂಡಿಕೆದಾರ ಬಯಸಿದರೆ ಈ ಬಾಂಡ್ಗಳನ್ನು ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಮಾರಬಹುದು. ಆಗಿನ ಮಾರುಕಟ್ಟೆಯಲ್ಲಿರುವ ಚಿನ್ನದ ಬೆಲೆ ಪ್ರಾಪ್ತವಾಗುತ್ತದೆ.
ಇದನ್ನೂ ಓದಿ: OPS: ಕೆಲ ಸರ್ಕಾರಿ ಉದ್ಯೋಗಿಗಳಿಗಿದೆ ಹಳೆ ಪಿಂಚಣಿ ವ್ಯವಸ್ಥೆಯ ಅವಕಾಶ; ಯಾರು ಅರ್ಹರು?; ಇಲ್ಲಿದೆ ವಿವರ
ಇತರ ಉಪಯೋಗಗಳು
ಹಣಕಾಸು ತಜ್ಞರ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಉಳಿತಾಯದಲ್ಲಿ ಶೇ. 10-15ರಷ್ಟು ಹಣವನ್ನು ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಇಂಥ ಹೂಡಿಕೆಯಲ್ಲಿ ಸಾವರೀನ್ ಗೋಲ್ಡ್ ಸ್ಕೀಮ್ ಪ್ರಮುಖವಾದುದು. 2015ರಲ್ಲಿ ಆರಂಭವಾದ ಈ ಗೋಲ್ಡ್ ಬಾಂಡ್ ಸ್ಕೀಮ್ ಬಹಳ ಸುರಕ್ಷಿತ ಹೂಡಿಕೆ ಯೋಜನೆ ಎಂದು ಪರಿಗಣಿತವಾಗಿದೆ. ನೀವು ಒಡವೆ ಅಂಗಡಿಗೆ ಹೋಗಿ ಚಿನ್ನ ಖರೀದಿಸಿದಾಗ ಹಾಕಲಾಗುವ ಶೇ. 3 ಜಿಎಸ್ಟಿ ದರವೇ ಎಸ್ಜಿಬಿಗೂ ನಿಗದಿಯಾಗಿದೆ. ಆದರೆ, ಮೇಕಿಂಗ್ ಚಾರ್ಜಸ್ ಇತ್ಯಾದಿ ಗೊಡವೆಗಳಿರುವುದಿಲ್ಲ.
ಈ ಬಾಂಡ್ಗಳನ್ನು ನೀವು ಬ್ಯಾಂಕುಗಳಲ್ಲಿ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಅಡವಾಗಿಯೂ ಇಟ್ಟು ಸಾಲ ಪಡೆಯಬಹುದು. ಗೋಲ್ಡ್ ಲೋನ್ ಲೆಕ್ಕಾಚಾರದ ಪ್ರಮಾಣದಲ್ಲೇ ನಿಮಗೆ ಸಾಲದ ಮೊತ್ತ ಸಿಗುತ್ತದೆ.