ಮೊಬೈಲ್ ರೀಚಾರ್ಜ್ ಪ್ಲಾನ್ಸ್ 28 ದಿನ, 56 ದಿನ, 84 ದಿನ ಎಂದು ಯಾಕಿವೆ? ತಿಂಗಳುಗಳ ಲೆಕ್ಕದಲ್ಲಿ ಯಾಕಿಲ್ಲ?
Strategy of telecom companies that offer 28 days validity recharge: ಬಿಎಸ್ಸೆನ್ನೆಲ್ ಹೊರತುಪಡಿಸಿ ಉಳಿದ ಪ್ರಮುಖ ಟೆಲಿಕಾಂ ಕಂಪನಿಗಳ ರೀಚಾರ್ಜ್ ಪ್ಲಾನ್ ಗಮನಿಸಿ ನೋಡಿ. ಒಂದು ತಿಂಗಳ ಬದಲು 28 ದಿನಗಳ ವ್ಯಾಲಿಡಿಟಿಯ ರೀಚಾರ್ಜ್ ಪ್ಲಾನ್ ಕಾಣುತ್ತೀರಿ. ಹಾಗೆಯೇ, 56 ದಿನ, 84 ದಿನ ವ್ಯಾಲಿಡಿಟಿಯ ಪ್ಲಾನ್ಗಳು ಗಮನ ಸೆಳೆಯುತ್ತವೆ. ಪೂರ್ಣ ತಿಂಗಳ ಬದಲು ಯಾಕೆ ಸ್ವಲ್ಪ ದಿನ ತಗ್ಗಿಸಿದ ರೀಚಾರ್ಜ್ ಪ್ಲಾನ್ ಆಫರ್ ಮಾಡಲಾಗುತ್ತದೆ?

ಭಾರತದಲ್ಲಿ ಇಂಟರ್ನೆಟ್ ಬಳಸುವ ಗ್ರಾಹಕರ ಸಂಖ್ಯೆ ತುಂಬಾ ಹೆಚ್ಚಾಗಿದೆ. ಟೆಲಿಕಾಂ ಕಂಪನಿಗಳು (telecom companies) ವಿವಿಧ ರೀತಿಯ ಪ್ಲಾನ್ಗಳನ್ನು ಪ್ರಾರಂಭಿಸುವ ಮೂಲಕ ಜನರನ್ನು ಆಕರ್ಷಿಸಲು ಪೈಪೋಟಿ ನಡೆಸಿವೆ. ಏರ್‌ಟೆಲ್, ಜಿಯೋ, VI ನಂತಹ ಕಂಪನಿಗಳು ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್‌ನಲ್ಲಿ ಹಲವು ರೀತಿಯ ಪ್ಲಾನ್ಗಳನ್ನು ಆಫರ್ ಮಾಡುತ್ತವೆ. ಇದರಲ್ಲಿ ಕೆಲ ಪ್ಲಾನ್ಗಳ ವ್ಯಾಲಿಡಿಟಿ 28 ದಿನ, 84 ದಿನ, 56 ದಿನ ಇತ್ಯಾದಿ ಇರುವುದನ್ನು ಗಮನಿಸಿರಬಹುದು. 28 ದಿನದ ಬದಲು ಒಂದು ತಿಂಗಳ ವ್ಯಾಲಿಡಿಟಿಯೋ, ಅಥವಾ 30 ದಿನಗಳ ವ್ಯಾಲಿಡಿಟಿಯ ಪ್ಲಾನ್ಗಳು ಅಪರೂಪ. ಅಷ್ಟಕ್ಕೂ 28 ದಿನದ ವ್ಯಾಲಿಡಿಟಿಯ ಪ್ಲಾನ್ ಯಾಕೆ ಗೊತ್ತಾ?
ಈ ಹಿಂದೆ 28 ದಿನಗಳ ವ್ಯಾಲಿಡಿಟಿಯ ಪ್ಲಾನ್ ಅಪರೂಪಕ್ಕೆ ಇರುತ್ತಿದ್ದುವು. ಈಗ ಎಲ್ಲಾ ಟೆಲಿಕಾಂ ಕಂಪನಿಗಳ ಪ್ಲಾನ್ ವ್ಯಾಲಿಡಿಟಿ ಬಹುತೇಕ ಒಂದೇ ರೀತಿ ಇರುತ್ತದೆ. ಬಿಎಸ್ಸೆನ್ನೆಲ್ ಮಾತ್ರವೇ ಸಾಂಪ್ರದಾಯಿಕ ಅವಧಿಯ ರೀಚಾರ್ಜ್ ಪ್ಲಾನ್ಗಳನ್ನು ಆಫರ್ ಮಾಡುತ್ತಿದೆ. 30 ದಿನ, 60 ದಿನ, 90 ದಿನ ಇತ್ಯಾದಿ ವ್ಯಾಲಿಡಿಟಿಯ ಪ್ಲಾನ್ ಸದ್ಯ ಬಿಎಸ್ಸೆನ್ನೆಲ್ನಲ್ಲಿ ಮಾತ್ರವೇ ಇರುವುದು. ಆದರೆ, ಪ್ರಧಾನ ಟೆಲಿಕಾಂ ಕಂಪನಿಗಳಾದ ಜಿಯೋ, ಏರ್ಟೆಲ್, ವಿಐನಲ್ಲಿ ಬೇರೆ ರೀತಿಯ ರೀಚಾರ್ಜ್ ಪ್ಲಾನ್ಗಳಿವೆ. ತಿಂಗಳಿಗೊಮ್ಮೆ ರೀಚಾರ್ಜ್ ಮಾಡುವ ಪ್ರವೃತ್ತಿಯ ಗ್ರಾಹಕರಿಗೆ 28 ದಿನಗಳ ವ್ಯಾಲಿಡಿಟಿಯ ಪ್ಲಾನ್ ಮಾತ್ರವೇ ಆಯ್ಕೆ ಎಂಬಂತಾಗಿದೆ.
ಇದನ್ನೂ ಓದಿ: ಇನ್ಕಮ್ ಟ್ಯಾಕ್ಸ್ ಅಲರ್ಟ್: ಐಟಿ ರಿಟರ್ನ್ಸ್ ಸಲ್ಲಿಸಿದ ಬಳಿಕ ನಿಮಗೆ ರೀಫಂಡ್ ಬರದೇ ಹೋದರೆ ಹೀಗೆ ಮಾಡಿ
28 ದಿನ ವ್ಯಾಲಿಡಿಟಿಯಿಂದ ಟೆಲಿಕಾಂ ಕಂಪನಿಗಳಿಗೆ ಏನು ಲಾಭ?
ಆಗಲೇ ಹೇಳಿದಂತೆ ಪ್ರತೀ ತಿಂಗಳು ಹೊಸದಾಗಿ ಪ್ಲಾನ್ ಖರೀದಿಸುವ ಪ್ರವೃತ್ತಿ ಹೊಂದಿರುವವರು 28 ದಿನ ವ್ಯಾಲಿಡಿಟಿಯ ಪ್ಲಾನ್ ಅನ್ನೇ ಸ್ವೀಕರಿಸುತ್ತಾರೆ. ಇಲ್ಲಿ ಒಂದು ತಿಂಗಳು ಪೂರ್ಣಗೊಳ್ಳಲು 2-3 ದಿನ ಉಳಿಯುತ್ತವೆ. ಹೀಗೆ ನೀವು ವರ್ಷಾದ್ಯಂತ 28 ದಿನ ವ್ಯಾಲಿಡಿಟಿಯ ಪ್ಲಾನ್ ಖರೀದಿಸುತ್ತಾ ಹೋದಲ್ಲಿ ಹೆಚ್ಚೂಕಡಿಮೆ 28 ಹೆಚ್ಚುವರಿ ದಿನ ಸಿಗುತ್ತದೆ. ಅಂದರೆ, ಒಂದು ವರ್ಷದಲ್ಲಿ 12 ಬದಲು 13 ಬಾರಿ ರೀಚಾರ್ಜ್ ಮಾಡಿಸಬೇಕಾಗುತ್ತದೆ.
ಈ ರೀತಿಯಾಗಿ ಟೆಲಿಕಾಂ ಕಂಪನಿಗಳು ಪ್ರತಿ ವರ್ಷ ಒಂದು ಹೆಚ್ಚುವರಿ ರೀಚಾರ್ಜ್ ಪ್ರಯೋಜನ ಪಡೆಯುತ್ತವೆ. ಗರಿಷ್ಠ ಒಂದು ತಿಂಗಳ ರೀಚಾರ್ಜ್‌ನ ಪ್ರಯೋಜನವನ್ನು ಪಡೆಯುತ್ತವೆ.
28 ದಿನದಂತೆ 56 ದಿನ ಹಾಗೂ 84 ದಿನದ ರೀಚಾರ್ಜ್ ಪ್ಲಾನ್ಗಳೂ ಇವೆ. 56 ದಿನದ ವ್ಯಾಲಿಡಿಟಿಯನ್ನು ಎರಡು ತಿಂಗಳೆಂದು ಪರಿಗಣಿಸಬಹುದು. ಹಾಗೆಯೇ, ಮೂರು ತಿಂಗಳಿಗೆ ರೀಚಾರ್ಜ್ ಮಾಡಿಸಬೇಕೆಂದವರು 84 ದಿನದ ವ್ಯಾಲಿಟಿಡಿ ಇರುವ ಪ್ಲಾನ್ ಆಯ್ಕೆ ಮಾಡಿಕೊಳ್ಳುತ್ತಾರೆ. ಇಲ್ಲೂ ಕೂಡ ಟೆಲಿಕಾಂ ಕಂಪನಿಗಳಿಗೆ ವರ್ಷದಲ್ಲಿ 26-28 ಹೆಚ್ಚುವರಿ ದಿನ ಸಿಕ್ಕಿಹೋಗುತ್ತದೆ.
ಇದನ್ನೂ ಓದಿ: ವಿದ್ಯುತ್ ಉತ್ಪಾದನೆ ಹೆಚ್ಚಳ: ಚೀನಾ, ಅಮೆರಿಕ ನಂತರ ಭಾರತವೇ ಮುಂದು
28 ದಿನಗಳ ಪ್ಲಾನ್ ಬಗ್ಗೆ TRAI ನಿಲುವು ಏನು?
ದೂರವಾಣಿ ನಿಯಂತ್ರಕ ಪ್ರಾಧಿಕಾರವಾದ TRAI ಕೆಲವು ಸಮಯದ ಹಿಂದೆ ಟೆಲಿಕಾಂ ಕಂಪನಿಗಳಿಗೆ 28 ದಿನಗಳ ಬದಲು 30 ದಿನಗಳ ಪ್ಲಾನ್ಗಳನ್ನು ಒದಗಿಸಲು ಮಾರ್ಗಸೂಚಿಗಳನ್ನು ಹೊರಡಿಸಲಿದೆ ಎಂದು ಬಹಿರಂಗಪಡಿಸಲಾಗಿತ್ತು. ಆದರೆ ಇಲ್ಲಿಯವರೆಗೆ TRAI ಅಂತಹ ಯಾವುದೇ ಗೈಡ್ಲೈನ್ಸ್ ಹೊರಡಿಸಿಲ್ಲ. ಎಲ್ಲಾ ಟೆಲಕಾಂ ಕಂಪನಿಗಳ ರೀಚಾರ್ಜ್ ಪ್ಲಾನ್ಗಳು ಮೊದಲಿನಂತೆಯೇ ಕಾರ್ಯನಿರ್ವಹಿಸುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ