ಭಾರತದಲ್ಲಿ ಇನ್ನೈದು ವರ್ಷದಲ್ಲಿ 10 ಪಟ್ಟು ಹೆಚ್ಚಲಿದೆ ಎಲೆಕ್ಟ್ರಿಕ್ ಕಾರ್ ನಿರ್ಮಾಣ ಸಾಮರ್ಥ್ಯ: ವರದಿ
Electric car manufacturing in India: ಮುಂದಿನ ಐದು ವರ್ಷದಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ತಯಾರಿಕೆ ಸಾಮರ್ಥ್ಯ 25 ಲಕ್ಷ ಮುಟ್ಟಲಿದೆ ಎಂದು ವರದಿಯೊಂದು ಹೇಳಿದೆ. 2024ರಲ್ಲಿ 2 ಲಕ್ಷ ಕಾರುಗಳ ತಯಾರಿಕಾ ಸಾಮರ್ಥ್ಯ ಇದೆ. ಇನ್ನೈದು ವರ್ಷದಲ್ಲಿ ಈ ಸಾಮರ್ಥ್ಯ ಐದು ಪಟ್ಟು ಹೆಚ್ಚುವ ನಿರೀಕ್ಷೆ ಇದೆ. ಚೀನಾ, ಯೂರೋಪ್ ಮತ್ತು ಅಮೆರಿಕ ನಂತರ ಭಾರತವೇ ಅತಿಹೆಚ್ಚು ಸಾಮರ್ಥ್ಯ ಹೊಂದಿರಲಿದೆ.

ನವದೆಹಲಿ, ಜೂನ್ 20: ಇವಿ ಕ್ಷೇತ್ರದಲ್ಲಿ ಇನ್ನೂ ಅಂಬೆಗಾಲು ಇಡುತ್ತಿರುವ ಭಾರತ ಮುಂದಿನ ದಿನಗಳಲ್ಲಿ ದೈತ್ಯ ಹೆಜ್ಜೆಗಳನ್ನು ಹಾಕಲಿದೆ. ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ತಯಾರಿಕೆ (Electric Car Manufacturing) ಪ್ರಚಂಡ ವೇಗದಲ್ಲಿ ಏರಿಕೆ ಆಗಲಿದೆ ಎಂದು ವರದಿಯೊಂದು ಹೇಳಿದೆ. ರೋಡಿಯಂ ಗ್ರೂಪ್ನ (Rhodium Group) ಹೊಸ ರಿಸರ್ಚ್ ಪ್ರಕಾರ, 2030ರಲ್ಲಿ ಭಾರತದಲ್ಲಿ 25 ಲಕ್ಷ ಎಲೆಕ್ಟ್ರಿಕ್ ಕಾರುಗಳ ತಯಾರಿಕೆಯ ಸಾಮರ್ಥ್ಯ ಸ್ಥಾಪನೆ ಆಗಿರಲಿದೆ.
ಸದ್ಯ ಭಾರತದಲ್ಲಿ ವರ್ಷಕ್ಕೆ ಎರಡು ಲಕ್ಷ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಲಾಗುತ್ತಿದೆ. ಅಂದರೆ, ಇನ್ನೈದು ವರ್ಷದಲ್ಲಿ ಈ ತಯಾರಿಕೆ ಸಾಮರ್ಥ್ಯ ಕನಿಷ್ಠ 10 ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ. ಚೀನಾ, ಅಮೆರಿಕ ಮತ್ತು ಯೂರೋಪ್ ಬಿಟ್ಟರೆ ಭಾರತವೇ ಅತಿಹೆಚ್ಚು ಎಲೆಕ್ಟ್ರಿಕ್ ಕಾರು ತಯಾರಿಸಬಲ್ಲ ದೇಶವೆನಿಸಲಿದೆ.
ಇದನ್ನೂ ಓದಿ: ಫ್ರಾನ್ಸ್ನ ಏರೋಸ್ಪೇಸ್ ಕಂಪನಿ ಲಾವುಕ್ ಗ್ರೂಪ್ ಅನ್ನು ಖರೀದಿಸಲಿರುವ ವಿಪ್ರೋ
ರಫ್ತು ಮಾಡುವ ಮಟ್ಟಕ್ಕೆ ಭಾರತದಲ್ಲಿ ಇವಿ ಕಾರುಗಳ ತಯಾರಿಕೆ
ಭಾರತದಲ್ಲಿ ಸದ್ಯ ಒಂದು ಲಕ್ಷಕ್ಕೂ ಅಧಿಕ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಇದೆ. 2030ರೊಳಗೆ ಈ ಬೇಡಿಕೆಯು 4ರಿಂದ 14 ಲಕ್ಷ ಇ-ಕಾರುಗಳಿಗೆ ಏರಿಕೆ ಆಗಬಹುದು. ಅಂದರೆ, ಕನಿಷ್ಠ 10 ಲಕ್ಷದಷ್ಟು ಹೆಚ್ಚುವರಿ ಎಲೆಕ್ಟ್ರಿಕ್ ಕಾರುಗಳು ಭಾರತದಲ್ಲಿ ತಯಾರಿಕೆ ಆಗಬಹುದು. ಇವುಗಳನ್ನು ರಫ್ತು ಮಾಡುವ ಅವಕಾಶ ಸಿಗುತ್ತದೆ.
ಚೀನಾದಂತಹ ದೇಶಗಳ ಇವಿ ತಯಾರಿಕೆಯ ವೆಚ್ಚಕ್ಕೆ ಸಾಟಿಯಾಗುವ ರೀತಿಯಲ್ಲಿ ಭಾರತವು ತಂತ್ರಜ್ಞಾನವನ್ನು ಸುಧಾರಿಸುವ ಅವಶ್ಯಕತೆ ಬರಬಹುದು. ಇಲ್ಲದಿದ್ದರೆ ಜಾಗತಿಕ ಇವಿ ಮಾರುಕಟ್ಟೆಯಲ್ಲಿ ಚೀನೀ ಕಾರುಗಳ ಪೈಪೋಟಿಯನ್ನು ದಾಟಿ ಮುಂದಕ್ಕೆ ಹೋಗುವುದು ಕಷ್ಟವಾಗಬಹುದು.
2030ರಲ್ಲಿ ವಿವಿಧ ದೇಶಗಳ ಎಲೆಕ್ಟ್ರಿಕ್ ಕಾರು ತಯಾರಿಕೆ ಸಾಮರ್ಥ್ಯ ಎಷ್ಟಿರಬಹುದು?
- ಚೀನಾ 2.9 ಕೋಟಿ ಕಾರು
- ಯೂರೋಪ್ ಯೂನಿಯನ್: 90 ಲಕ್ಷ ಕಾರು
- ಅಮೆರಿಕ: 60 ಲಕ್ಷ ಕಾರು
- ಭಾರತ: 25 ಲಕ್ಷ ಕಾರು
- ಸೌತ್ ಕೊರಿಯಾ: 19 ಲಕ್ಷ ಕಾರು
- ಜಪಾನ್: 14 ಲಕ್ಷ ಕಾರು
ಇದನ್ನೂ ಓದಿ: ವಿದ್ಯುತ್ ಉತ್ಪಾದನೆ ಹೆಚ್ಚಳ: ಚೀನಾ, ಅಮೆರಿಕ ನಂತರ ಭಾರತವೇ ಮುಂದು
ಸದ್ಯ ಭಾರತದಲ್ಲಿ ವರ್ಷಕ್ಕೆ ಸುಮಾರು 2 ಲಕ್ಷ ಎಲೆಕ್ಟ್ರಿಕ್ ಕಾರು ತಯಾರಿಸುವ ಸಾಮರ್ಥ್ಯ ಇದೆ. ಮಹೀಂದ್ರ, ಟಾಟಾ ಮತ್ತು ಎಂಜಿಎಂ ಕಂಪನಿಗಳು ಎವಿ ಕಾರು ಮಾರುಕಟ್ಟೆಯಲ್ಲಿ ಪಾರಮ್ಯ ಹೊಂದಿವೆ.
ಜಪಾನ್ ಬಳಿ ಸದ್ಯ ವರ್ಷಕ್ಕೆ 11 ಲಕ್ಷ ಎಲೆಕ್ಟ್ರಿಕ್ ಕಾರು ತಯಾರಿಸುವ ಸಾಮರ್ಥ್ಯ ಇದ್ದರೂ ಬೇರೆ ಬೇರೆ ಕಾರಣಕ್ಕೆ ಇದರ ಹೆಚ್ಚಳ ತೀವ್ರ ಮಟ್ಟದಲ್ಲಿ ಇರುವುದಿಲ್ಲ ಎಂದೆನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ