ನವದೆಹಲಿ: ಬೆಂಗಳೂರು ಮೂಲದ ಐಟಿ ಕಂಪನಿ ವಿಪ್ರೋ (IT company Wipro) ತನ್ನ ಹೊಸ ಉದ್ಯೋಗಿಗಳಿಗೆ ಅರ್ಧ ಸಂಬಳ ಕೊಡುವ ಆಫರ್ (Half salary offer) ಮುಂದಿಟ್ಟಿದೆ. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಐಟಿ ಉದ್ಯೋಗಿಗಳ ಸಂಘಟನೆಯಾದ ಎನ್ಐಟಿಇಎಸ್ (NITES) ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ವಿಪ್ರೋ ತನ್ನ ನಿಲುವನ್ನು ಬದಲಿಸಿ, ಹೊಸ ಉದ್ಯೋಗಿಗಳಿಗೆ ಭರವಸೆ ನೀಡಿದಷ್ಟು ಸಂಬಳ ಕೊಡಬೇಕು ಎಂದು ಆಗ್ರಹಿಸಿದೆ. ವಿಪ್ರೋ ಸಂಸ್ಥೆ ತನ್ನ ಹೊಸ ಉದ್ಯೋಗಿಗಳಿಗೆ ಮೊದಲಿಗೆ ವರ್ಷಕ್ಕೆ 6.5 ಲಕ್ಷ ರೂ ಸಂಬಳ ಕೊಡುವುದಾಗಿ ಹೇಳಿತ್ತು. ಈಗ ತರಬೇತಿ ಎಲ್ಲಾ ಮುಗಿದ ಬಳಿಕ ಜಾಗತಿಕ ವಿದ್ಯಮಾನಗಳ ಕಾರಣವೊಡ್ಡಿ ಕಡಿಮೆ ಸಂಬಳದ ಅಫರ್ ಮುಂದಿಟ್ಟಿದೆ. 6.5 ಲಕ್ಷ ರೂ ಬದಲು ವರ್ಷಕ್ಕೆ 3.5 ಲಕ್ಷ ರೂ ಸಂಬಳ ಕೊಡುವುದಾಗಿ ಹೇಳಿದೆ.
ಎನ್ಐಟಿಇಎಸ್ ಒಕ್ಕೂಟ ವಿಪ್ರೋದ ನಡೆ ನ್ಯಾಯಯುತವಾಗಿಲ್ಲ ಎಂದು ಖಂಡಿಸಿದ್ದು, ತಮ್ಮ ಜೊತೆ ಮಾತುಕತೆ ನಡೆಸಿ ಅಂತಿಮ ತೀರ್ಮಾನ ಮಾಡುವಂತೆ ಒತ್ತಾಯಿಸಿದೆ. ಎನ್ಐಟಿಇಎಸ್ ಎಂದರೆ ನೇಸೆಂಟ್ ಇನ್ಫಾರ್ಮೇಶನ್ ಟೆಕ್ನಾಲಜಿ ಎಂಪ್ಲಾಯೀಸ್ ಸೆನೇಟ್ (Nascent Information Technology Employees Senate). ಇದು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಕ್ಷೇಮಾಭಿವೃದ್ಧಿಗಾಗಿ ಕೆಲಸ ಮಾಡುವ ಸಂಘಟನೆ.
ಇನ್ನು, ಅಜೀಂ ಪ್ರೇಮ್ಜಿ ಮಾಲಿಕತ್ವದ ವಿಪ್ರೋ ಕಂಪನಿಯಲ್ಲಿ ನವೋದ್ಯೋಗಿಗಳು ಆರಂಭಿಕ ವೆಲಾಸಿಟಿ ತರಬೇತಿ ಕಾರ್ಯಾಗಾರವನ್ನು ಯಶಸ್ವಿಯಾಗಿಯೂ ಮುಗಿಸಿ 6.5 ಲಕ್ಷ ರೂ ಸಂಬಳದ ನೇಮಕಾತಿ ಪತ್ರದ ನಿರೀಕ್ಷೆಯಲ್ಲಿದ್ದರು. ಆದರೆ, ವಿಪ್ರೋ ಆಡಳಿತ ಮಂಡಳಿಯ ಆಲೋಚನೆಯೇ ಬೇರೆ ಇತ್ತು.
ಇದನ್ನೂ ಓದಿ: Googlies: ಗೂಗಲ್ನಲ್ಲಿ ಕೆಲಸ ಕಳೆದುಕೊಂಡ ಏಳು ಮಂದಿ ಸೇರಿ ಹೊಸ ಕಂಪನಿ ಶುರು
ನಮ್ಮ ಉದ್ಯಮದಲ್ಲಿ ಇತರ ಕಂಪನಿಗಳ ಹಾಗೆ ನಾವೂ ಕೂಡ ಜಾಗತಿಕ ಆರ್ಥಿಕತೆಯ ಸ್ಥಿತಿಗತಿ ಮತ್ತು ಗ್ರಾಹಕರ ಅಗತ್ಯಗಳನ್ನು ಅವಲೋಕಿಸಿ ನೇಮಕಾತಿ ಯೋಜನೆಗಳನ್ನು ರೂಪಿಸುತ್ತೇವೆ. ನಿಮ್ಮ ಬದ್ಧತೆ ಮತ್ತು ಸಂಯಮವನ್ನು ನಾವು ಶ್ಲಾಘಿಸುತ್ತೇವೆ. ಆದರೆ ಸದ್ಯಕ್ಕೆ ನಮ್ಮಲ್ಲಿ ನೇಮಕಾತಿಗೆ ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳು ಇದ್ದು ವಾರ್ಷಿಕ ಸಂಬಳ 3.5 ಲಕ್ಷ ರೂ ಇರುತ್ತದೆ. ವೆಲಾಸಿಟಿ ತರಬೇತಿ ಮುಗಿಸಿ 2022-23ರ ಬ್ಯಾಚ್ನ ಎಲ್ಲಾ ಅಭ್ಯರ್ತಿಗಳಿಗೂ ಈ ಹುದ್ದೆಗಳನ್ನು ಆಫರ್ ಮಾಡಲು ಬಯಸುತ್ತೇವೆ ಎಂದು ವಿಪ್ರೋ ಸಂಸ್ಥೆ ಇತ್ತೀಚೆಗೆ ನೀಡಿದ ಇಮೇಲ್ ಕಮ್ಯೂನಿಕೇಶನ್ನಲ್ಲಿ ಅಭ್ಯರ್ಥಿಗಳಿಗೆ ತಿಳಿಸಿದೆ.
ಸಂಸ್ಥೆ ಹಣಕಾಸು ತೊಂದರೆಯಲ್ಲಿ ಇದೆ ಎಂದರೆ ಅದರ ಹೊರೆಯನ್ನು ಉದ್ಯೋಗಿಗಳ ಮೇಲೆ ಮಾತ್ರ ಹಾಕುವುದು ಸರಿಯಲ್ಲ ಎಂಬುದು ಎನ್ಐಟಿಇಎಸ್ ಸಂಘಟನೆಯ ಅಧ್ಯಕ್ಷ ಹರ್ಪ್ರೀತ್ ಸಿಂಗ್ ಸಲೂಜಾ ವಾದ. ನಮ್ಮ ಸದಸ್ಯರ ಹಕ್ಕು ಮತ್ತು ಗೌರವಕ್ಕೆ ಚ್ಯುತಿ ಆಗುವುದನ್ನು ನಾವು ಸಹಿಸುವುದಿಲ್ಲ ಎಂದೂ ಅವರು ಹೇಳಿದ್ದಾರೆ.
ಜಾಗತಿಕವಾಗಿ ಐಟಿ ಕ್ಷೇತ್ರದ ಹಲವು ದಿಗ್ಗಜ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕುತ್ತಿವೆ. ವಿಪ್ರೋ ಅರ್ಧ ಸಂಬಳ ಕಟ್ ಮಾಡಿರುವುದು ಹಲವರಿಗೆ ಅಚ್ಚರಿ ತಂದಿಲ್ಲ. ಭಾರತದ ಅತಿದೊಡ್ಡ ಐಟಿ ಕಂಪನಿಗಳಲ್ಲೊಂದಾದ ವಿಪ್ರೋ ಕಳೆದ ತಿಂಗಳು 452 ಫ್ರೆಶರ್ಗಳನ್ನು ಕೆಲಸದಿಂದ ಕಿತ್ತುಹಾಕಿತ್ತು. ಬೇರೆ ಐಟಿ ಕಂಪನಿಗಳಿಗೆ ಹೋಲಿಸಿದರೆ ವಿಪ್ರೋದಲ್ಲಿ ಉದ್ಯೋಗಿ ಕಡಿತ ತೀವ್ರ ಮಟ್ಟದಲ್ಲಿಲ್ಲ. ಇನ್ಫೋಸಿಸ್ ಸಂಸ್ಥೆ ಕಳೆದ ತಿಂಗಳು 5 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಲೇ ಆಫ್ ಮಾಡಿತ್ತು. ಗೂಗಲ್, ಅಮೇಜಾನ್, ಮೈಕ್ರೋಸಾಫ್ಟ್, ಇಂಟೆಲ್ ಇತ್ಯಾದಿ ಹಲವು ಕಂಪನಿಗಳು ಲಕ್ಷಗಟ್ಟಲೆ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿವೆ.