ನೀವು ಈ ವರೆಗೆ ಶ್ರೀಮಂತರ ಗಳಿಕೆ ಬಗ್ಗೆ ಓದಿರುತ್ತೀರಿ. ಆದರೆ ಈ ಲೇಖನ ಭಿನ್ನವಾಗಿದೆ. ಎಲಾನ್ ಮಸ್ಕ್ (Elon Musk) ಆಸ್ತಿ 6200 ಕೋಟಿ ಅಮೆರಿಕನ್ ಡಾಲರ್ ಕಡಿಮೆ ಆಗಿದೆ. ಇನ್ನು ಜೆಫ್ ಬೆಜೋಸ್ ಆಸ್ತಿ 6300 ಕೋಟಿ ಯುಎಸ್ಡಿ ಕರಗಿದೆ. ಮಾರ್ಕ್ ಝುಕರ್‌ಬರ್ಗ್ ನಿವ್ವಳ ಆಸ್ತಿ ಅರ್ಧದಷ್ಟು ನಷ್ಟವಾಗಿದೆ. ಎಲ್ಲರ ಲೆಕ್ಕವನ್ನು ನೋಡುವುದಾದರೆ, ವಿಶ್ವದ ಅತಿ ಶ್ರೀಮಂತ 500 ಮಂದಿ 2022ರ ಜನವರಿಯಿಂದ ಜೂನ್ ಕೊನೆ ಹೊತ್ತಿಗೆ 1.4 ಲಕ್ಷ ಕೋಟಿ ಅಮೆರಿಕನ್ ಡಾಲರ್ ಕಿಡಿಗೆ ತಾಕಿದ ಕರ್ಪೂರದಂತೆ ಆಗಿದೆ. 1.4 ಲಕ್ಷ ಕೋಟಿ ಅಮೆರಿಕನ್ ಡಾಲರ್ ಅಂದರೆ ಭಾರತದ ರೂಪಾಯಿ ಲೆಕ್ಕದಲ್ಲಿ ಎಷ್ಟು ಅಂತ ಉಲ್ಲೇಖಿಸುವುದು ಉತ್ತಮ. 110.53 ಲಕ್ಷ ಕೋಟಿ ರೂಪಾಯಿ ಆಗುತ್ತದೆ. 2022ರ ಕರ್ನಾಟಕ ಬಜೆಟ್ ವೆಚ್ಚವನ್ನು ಹೋಲಿಕೆ ಮಾಡಿ ಹೇಳುವುದಾದರೆ ಶ್ರೀಮಂತರು ಅನುಭವಿಸಿದ ನಷ್ಟ 40 ವರ್ಷಕ್ಕೆ ಸಮನಾಗುತ್ತದೆ.
ಕೊವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸರ್ಕಾರಗಳು ಮತ್ತು ಕೇಂದ್ರ ಬ್ಯಾಂಕ್‌ಗಳು ಭಾರೀ ಉತ್ತೇಜಕ ಕ್ರಮಗಳನ್ನು ಘೋಷಣೆ ಮಾಡಿದವು. ಟೆಕ್ ಕಂಪನಿಗಳಿಂದ ಕ್ರಿಪ್ಟೋಕರೆನ್ಸಿಗಳವರೆಗೆ ಹಿಂದಿನ ಎರಡು ವರ್ಷಗಳಿಂದ ಎಲ್ಲದರ ಮೌಲ್ಯವನ್ನು ಪುಷ್ಟಗೊಳಿಸಿದ್ದರಿಂದ ಇದೀಗ ತೀವ್ರ ಸ್ವರೂಪದಲ್ಲಿ ಕಡಿಮೆ ಆಗಿದೆ. ನೀತಿ ನಿರೂಪಕರು ಈಗ ಹೆಚ್ಚಿನ ಹಣದುಬ್ಬರವನ್ನು ಎದುರಿಸಲು ಬಡ್ಡಿದರಗಳನ್ನು ಹೆಚ್ಚಿಸುವುದರೊಂದಿಗೆ, ಕೆಲವು ಭಾರೀ ಏರಿಕೆಯ ಷೇರುಗಳು ಮತ್ತು ಅವುಗಳನ್ನು ಹೊಂದಿರುವ ಬಿಲಿಯನೇರ್‌ಗಳು ವೇಗವಾಗಿ ನಷ್ಟವನ್ನು ಕಾಣುತ್ತಿದ್ದಾರೆ. ಟೆಸ್ಲಾ ಕಂಪೆನಿಯು ಜೂನ್‌ವರೆಗಿನ ತ್ರೈಮಾಸಿಕದಲ್ಲಿ ಅತ್ಯಂತ ಕೆಟ್ಟ ಫಲಿತಾಂಶ ಹೊಂದಿದೆ. ಆದರೆ Amazon.com ಅತಿ ಹೆಚ್ಚು ಕುಸಿದಿದೆ.
ಪ್ರಪಂಚದ ಅತ್ಯಂತ ಶ್ರೀಮಂತರಿಗೆ ನಷ್ಟಗಳು ಹೆಚ್ಚಾಗುತ್ತಿದ್ದರೂ ಸಂಪತ್ತಿನ ಅಸಮಾನತೆಯನ್ನು ಸಂಕುಚಿತಗೊಳಿಸುವ ಕಡೆಗೆ ಇದು ಸಾಧಾರಣ ಕ್ರಮವನ್ನು ಪ್ರತಿನಿಧಿಸುತ್ತದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಟೆಸ್ಲಾದ ಸಹ-ಸಂಸ್ಥಾಪಕರಾದ ಮಸ್ಕ್ ಈಗಲೂ 208.5 ಶತಕೋಟಿ ಯುಎಸ್ಡಿಯಷ್ಟು ದೊಡ್ಡ ಮೊತ್ತದ ಸಂಪತ್ತನ್ನು ಹೊಂದಿದ್ದಾರೆ. ಆದರೆ ಅಮೆಜಾನ್‌ನ ಬೆಜೋಸ್ ಯುಎಸ್ಡಿ 129.6 ಶತಕೋಟಿ ನಿವ್ವಳ ಮೌಲ್ಯದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಬ್ಲೂಮ್‌ಬರ್ಗ್ ಸೂಚ್ಯಂಕದ ಪ್ರಕಾರ, ಫ್ರಾನ್ಸ್‌ನ ಅತ್ಯಂತ ಶ್ರೀಮಂತ ವ್ಯಕ್ತಿ ಬರ್ನಾರ್ಡ್ ಅರ್ನಾಲ್ಟ್ ಯುಎಸ್ಡಿ 128.7 ಶತಕೋಟಿ ಸಂಪತ್ತಿನೊಂದಿಗೆ ಮೂರನೇ ಸ್ಥಾನದಲ್ಲಿದ್ದು, ಆ ನಂತರ ಬಿಲ್ ಗೇಟ್ಸ್ ಯುಎಸ್ಡಿ 114.8 ಶತಕೋಟಿ ಆಸ್ತಿ ಹೊಂದಿದ್ದಾರೆ.
ಈ ರೀತಿ ಯುಎಸ್ಡಿ 100 ಶತಕೋಟಿಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿರುವ ನಾಲ್ವರು ಸಿರಿವಂತರು ಇವರು – ವರ್ಷದ ಆರಂಭದಲ್ಲಿ 10 ಮಂದಿ ಬಳಿ 100 ಬಿಲಿಯನ್ ಯುಎಸ್ಡಿಗಿಂತ ಹೆಚ್ಚು ಆಸ್ತಿ ಇತ್ತು. ಯುಎಸ್ಡಿ 60 ಶತಕೋಟಿಯೊಂದಿಗೆ ಸಂಪತ್ತಿನ ಪಟ್ಟಿಯಲ್ಲಿ 17ನೇ ಸ್ಥಾನದಲ್ಲಿದ್ದಾರೆ ಝುಕರ್‌ಬರ್ಗ್.