ನವದೆಹಲಿ: ಚೀನಾ ಮೂಲದ ಸ್ಮಾರ್ಟ್ಫೋನ್ ತಯಾರಕ ಶಿಯೋಮಿ ಸಂಸ್ಥೆ (Xiaomi India) ಭಾರತದಲ್ಲಿ ಉದ್ಯೋಗಕಡಿತಕ್ಕೆ (Layoffs) ಕೈಹಾಕಲು ನಿರ್ಧರಿಸಿದೆ. ಶಿಯೋಮಿ ಇಂಡಿಯಾ ವಿಭಾಗದಲ್ಲಿ ಉದ್ಯೋಗಿಗಳ ಸಂಖ್ಯೆ 1,000 ಕ್ಕಿಂತ ಕಡಿಮೆಗೆ ಸೀಮಿತಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಎಕನಾಮಿಕ್ ಟೈಮ್ಸ್ನಲ್ಲಿ ಪ್ರಕಟವಾದ ವರದಿ ಪ್ರಕಾರ, ಶಿಯೋಮಿ ಇಂಡಿಯಾ ಕಳೆದ ಒಂದು ವಾರದಲ್ಲಿ 30ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ. ಮುಂದಿನ ಕೆಲ ತಿಂಗಳಲ್ಲಿ ಇನ್ನಷ್ಟು ಮಂದಿಗೆ ಕೆಲಸ ಹೋಗುವ ಸಾಧ್ಯತೆ ಇದೆ.
ಆದರೆ, ಶಿಯೋಮಿಯಲ್ಲಿ ಮುಂದಿನ ದಿನಗಳಲ್ಲಿ ಎಷ್ಟು ಮಂದಿಯನ್ನು ತೆಗೆಯಲಾಗುವುದು, ಯಾವಾಗ ಲೇ ಆಫ್ ಆಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ವರದಿ ಪ್ರಕಾರ, ಶಿಯೋಮಿ ಇಂಡಿಯಾದ ಮ್ಯಾನೇಜರುಗಳು ಲೇ ಆಫ್ಗಾಗಿ ಉದ್ಯೋಗಿಗಳ ಪಟ್ಟಿ ಇನ್ನೂ ಮಾಡಿಲ್ಲ. ಉದ್ಯೋಗಿಯ ಕಾರ್ಯಸಾಧನೆ ಆಧಾರದ ಮೇಲೆ ಲೇ ಆಫ್ ನಡೆಯುತ್ತದೆ ಎಂಬ ಮಾಹಿತಿ ಸದ್ಯಕ್ಕೆ ತಿಳಿದುಬಂದಿದೆ.
ಇದನ್ನೂ ಓದಿ: Layoffs: ನ್ಯಾಷನಲ್ ಜಿಯೋಗ್ರಾಫಿಕ್ನ ಎಲ್ಲಾ ಸಿಬ್ಬಂದಿಯೂ ಲೇ ಆಫ್; ಬಂದ್ ಆಗುತ್ತಾ ಪ್ರತಿಷ್ಠಿತ ಪತ್ರಿಕೆ?
2022ರ ಡಿಸೆಂಬರ್ನಲ್ಲಿ ಶಿಯೋಮಿ ಶೇ. 10ರಷ್ಟು ಉದ್ಯೋಗಕಡಿತಗೊಳಿಸಿತ್ತು. 2023ರ ಜನವರಿ ತಿಂಗಳಲ್ಲಿ ಶಿಯೋಮಿಯ ಗ್ಲೋಬಲ್ ವೈಸ್ ಪ್ರೆಸಿಡೆಂಟ್ ಮನುಕುಮಾರ್ ಜೈನ್ ರಾಜೀನಾಮೆ ಕೊಟ್ಟು ನಿರ್ಗಮಿಸಿದ್ದರು.
ಚೀನಾದ ಶಿಯೋಮಿ ಕಂಪನಿಯ ಮೊಬೈಲ್ಗಳು ಕಡಿಮೆ ಬೆಲೆ ಮತ್ತು ಉತ್ತಮ ಗುಣಮಟ್ಟದ ಕಾರಣಕ್ಕೆ ಬಹಳ ಬೇಗ ಭಾರತೀಯ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡು ನಂಬರ್ ಒನ್ ಎನಿಸಿತ್ತು. ಆದರೆ, ಇತ್ತೀಚೆಗೆ ಸ್ಯಾಮ್ಸುಂಗ್ ಕಂಪನಿ ಮರಳಿ ಅಗ್ರಸ್ಥಾನ ಪಡೆದಿದೆ. ಚೀನಾದ್ದೇ ಇನ್ನೊಂದು ಕಂಪನಿ ವಿವೋ ಮಿಂಚಿನ ಗತಿಯಲ್ಲಿ ಬೆಳೆದು ಎರಡನೆ ಸ್ಥಾನ ಅಲಂಕರಿಸಿದೆ. ಶಿಯೋಮಿ ಮೂರನೇ ಸ್ಥಾನಕ್ಕೆ ಕುಸಿದಿದೆ.
ಸ್ಮಾರ್ಟ್ಫೋನ್ ಮಾರುಕಟ್ಟೆಯ ಮಾಹಿತಿ ಪ್ರಕಾರ, ಸ್ಯಾಮ್ಸುಂಗ್ ಕಂಪನಿ ಶೇ. 20ರಷ್ಟು ಮಾರುಕಟ್ಟೆ ಪಾರಮ್ಯ ಹೊಂದಿದೆ. ವಿವೋ ಶೇ. 17 ಮತ್ತು ಶಿಯೋಮಿ ಶೇ. 16ರಷ್ಟು ಮಾರುಕಟ್ಟೆ ಪಾಲು ಹೊಂದಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ