Xiaomi: ಅರಬ್ ದೇಶಗಳಿಗೆ ರಫ್ತಾಗಲಿವೆಯಾ ‘ಮೇಡ್ ಇನ್ ಇಂಡಿಯಾ’ ಶಿಯೋಮಿ ಫೋನ್​ಗಳು? ಡಿಕ್ಸಾನ್ ಜೊತೆಗೂ ಶಿಯೋಮಿ ಮಾತುಕತೆ

|

Updated on: Jul 14, 2023 | 12:32 PM

Export of Made In India Xiaomi Phone: ಬ್ಯುಸಿನೆಸ್ ಸ್ಟಾಂಡರ್ಡ್ ಪತ್ರಿಕೆಯ ವರದಿ ಪ್ರಕಾರ ಚೀನಾದ ಶಿಯೋಮಿ ಸಂಸ್ಥೆ ಭಾರತದಲ್ಲಿ ಅಸೆಂಬಲ್ ಮಾಡಿದ ತನ್ನ ಸ್ಮಾರ್ಟ್​ಫೋನ್​ಗಳನ್ನು ದುಬೈ ಮತ್ತಿತರ ಕಡೆ ರಫ್ತು ಮಾಡಲು ಪ್ರಯತ್ನಿಸುತ್ತಿದೆ.

Xiaomi: ಅರಬ್ ದೇಶಗಳಿಗೆ ರಫ್ತಾಗಲಿವೆಯಾ ‘ಮೇಡ್ ಇನ್ ಇಂಡಿಯಾ’ ಶಿಯೋಮಿ ಫೋನ್​ಗಳು? ಡಿಕ್ಸಾನ್ ಜೊತೆಗೂ ಶಿಯೋಮಿ ಮಾತುಕತೆ
ಶಿಯೋಮಿ ಫೋನ್
Follow us on

ನವದೆಹಲಿ, ಜುಲೈ 14: ಭಾರತೀಯ ಮಾರುಕಟ್ಟೆಯಲ್ಲಿರುವ ಮೂರನೇ ಅತಿದೊಡ್ಡ ಸ್ಮಾರ್ಟ್​ಫೋನ್ ಕಂಪನಿ ಶಿಯೋಮಿ (Xiaomi) ಇದೀಗ ಭಾರತದಲ್ಲಿ ತಯಾರಿಸಿದ ಮೊಬೈಲ್ ಫೋನ್​ಗಳನ್ನು ಪಶ್ಚಿಮ ಏಷ್ಯನ್ ದೇಶಗಳಿಗೆ ರಫ್ತು ಮಾಡಲು ಪ್ರಯತ್ನಿಸುತ್ತಿದೆ. ಇದೇನಾದರೂ ಸಾಕಾರವಾದರೆ ಅರಬ್ ಮೊದಲಾದ ಪ್ರದೇಶಗಳಲ್ಲಿ ಮೊದಲ ಬಾರಿಗೆ ಮೇಡ್ ಇನ್ ಇಂಡಿಯಾ ಶಿಯೋಮಿ ಫೋನ್​ಗಳು ಸಿಗಲಿವೆ. ಬ್ಯುಸಿನೆಸ್ ಸ್ಟಾಂಡರ್ಡ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ ಈ ವರ್ಷದ ಮೂರನೇ ಕ್ವಾರ್ಟರ್ ಮುಗಿಯುವುದರೊಳಗಾಗಿ ಶಿಯೋಮಿ ತನ್ನ ಮೇಡ್ ಇನ್ ಇಂಡಿಯಾ ಪೋನ್​ಗಳನ್ನು ಪಶ್ಚಿಮ ಏಷ್ಯನ್ ದೇಶಗಳಿಗೆ ರಫ್ತು ಮಾಡಬಹುದು ಎನ್ನಲಾಗಿದೆ.

ಚೀನಾ ಮೂಲದ ಶಿಯೋಮಿ ಸಂಸ್ಥೆಯ ಫೋನ್​ಗಳನ್ನು ಸದ್ಯ ಭಾರತದಲ್ಲಿ ಅಸೆಂಬಲ್ ಮಾಡಲಾಗುತ್ತಿದೆ. ತೈವಾನ್ ಮೂಲದ ಫಾಕ್ಸ್​ಕಾನ್ ಹಾಗೂ ಚೀನಾದ ಡಿಬಿಜಿ ಮತ್ತು ಬಿವೈಡಿ ಕಂಪನಿಗಳು ಭಾರತದಲ್ಲಿ ಶಿಯೋಮಿ ಸ್ಮಾರ್ಟ್​ಫೋನ್​ಗಳನ್ನು ಅಸೆಂಬಲ್ ಮಾಡುತ್ತಿವೆ. ಆ್ಯಪಲ್​ನ ಐಪೋನ್​ಗಳ ರೀತಿ ಶಿಯೋಮಿ ಸ್ಮಾರ್ಟ್​ಫೋನ್​ಗಳ ಬಿಡಿಭಾಗಗಳು ಬಹುತೇಕ ವಿದೇಶಗಳಲ್ಲೇ ತಯಾರಾಗುತ್ತವೆ. ಬಳಿಕ ಭಾರತದಲ್ಲಿ ಅವುಗಳನ್ನು ಅಸೆಂಬ್ಲಿಂಗ್ ಮಾಡಿ ಅಂತಿಮ ರೂಪು ಕೊಡಲಾಗುತ್ತದೆ.

ಇದನ್ನೂ ಓದಿFoxconn: ಸೆಮಿಕಂಡಕ್ಟರ್ ಯೋಜನೆ: ವೇದಾಂತ ಬಿಟ್ಟ ಫಾಕ್ಸ್​ಕಾನ್ ಈಗ ಹೊಸ ಜೊತೆಗಾರಿಕೆಗೆ ಟಿಎಸ್​ಎಂಸಿ, ಟಿಎಂಎಚ್ ಜೊತೆ ಮಾತುಕತೆ

ಭಾರತದಲ್ಲಿ ತಯಾರಿಕೆಗೆ ಹೆಚ್ಚು ಒತ್ತು; ಡಿಕ್ಸಾನ್ ಮೊದಲಾದ ಕಂಪನಿ ಜೊತೆ ಶಿಯೋಮಿ ಮಾತುಕತೆ

ಭಾರತದ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಚೀನೀ ಕಂಪನಿಗಳು ಸಾಕಷ್ಟು ಪ್ರಾಬಲ್ಯ ಸಾಧಿಸಿವೆ. ಈ ಫೋನ್​ಗಳನ್ನು ಭಾರತದಲ್ಲೇ ತಯಾರಿಸಿದರೆ ಇಲ್ಲಿನ ಆರ್ಥಿಕತೆಗೆ ಅನುಕೂಲವಾಗುತ್ತದೆ. ಹೀಗಾಗಿ, ಸರ್ಕಾರ ಮೇಡ್ ಇನ್ ಇಂಡಿಯಾ ಯೋಜನೆಗೆ ಒತ್ತುಕೊಡುತ್ತಿದೆ. ಇದೇ ಕಾರಣಕ್ಕೆ ಚೀನೀ ಮೊಬೈಲ್ ಕಂಪನಿಗಳಿಗೆ ಭಾರತದಲ್ಲೇ ಫೋನ್​ಗಳ ತಯಾರಿಕೆ ಆಗಬೇಕು ಹಾಗೂ ಇಲ್ಲಿ ತಯಾರಿಸಿದ ಫೋನ್​ಗಳನ್ನು ಬೇರೆಡೆಗೆ ರಫ್ತು ಮಾಡಬೇಕು ಎಂದು ಸೂಚಿಸಿದೆ.

ಜೊತೆಗೆ ಬಿಡಿಭಾಗಗಳ ತಯಾರಿಕೆಗೆ ಸ್ಥಳೀಯ ಕಂಪನಿಗಳನ್ನು ಬಳಸಿಕೊಳ್ಳಬೇಕೆಂದೂ ಸರ್ಕಾರ ಚೀನೀ ಕಂಪನಿಗಳಿಗೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಶಿಯೋಮಿ ಸಂಸ್ಥೆ ಭಾರತದ ಡಿಕ್ಸಾನ್ ಟೆಕ್ನಾಲಜೀಸ್ ಹಾಗೂ ಇತರ ಕೆಲ ಎಲೆಕ್ಟ್ರಾನಿಕ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಗಳ ಜೊತೆ ಮಾತುಕತೆ ನಡೆಸುತ್ತಿರುವುದು ತಿಳಿದುಬಂದಿದೆ.

ಇದನ್ನೂ ಓದಿUPI in France: ಫ್ರಾನ್ಸ್​ನಲ್ಲಿ ಯುಪಿಐ ಅಳವಡಿಕೆಗೆ ಒಪ್ಪಂದ; ಭಾರತದ ಪಾವತಿ ವ್ಯವಸ್ಥೆ ವಿದೇಶದಲ್ಲಿ ಹೇಗೆ ಕೆಲಸ ಮಾಡುತ್ತೆ?

ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಮುಂದಿನ ಎರಡು ವರ್ಷದಲ್ಲಿ ಶಿಯೋಮಿ ಸಂಸ್ಥೆ ತನ್ನ ಸ್ಮಾರ್ಟ್​ಫೋನ್​ನ ಶೇ. 70ರಷ್ಟು ಬಿಡಿಭಾಗಗಳನ್ನು ಭಾರತೀಯ ಕಂಪನಿಗಳಿಂದಲೇ ಪಡೆಯಲು ನಿರ್ಧರಿಸಿದೆ. ಬ್ಲೂಟೂಥ್ ನೆಕ್​ಬ್ಯಾಂಡ್ ಇಯರ್​ಫೋನ್​ಗಳನ್ನು ತಯಾರಿಸಲು ನೋಯ್ಡಾದಲ್ಲಿರುವ ಆಪ್ಟೀಮಸ್ ಎಲೆಕ್ಟ್ರಾನಿಕ್ಸ್ ಎಂಬ ಕಂಪನಿಯ ಜೊತೆ ಶಿಯೋಮಿ ಒಪ್ಪಂದ ಮಾಡಿಕೊಂಡಿತ್ತು. ಅದೇ ರೀತಿ ಹಲವು ಹೊಸ ಕಂಪನಿಗಳನ್ನು ತನ್ನ ಫೋನ್ ತಯಾರಿಕೆಗೆ ಶಿಯೋಮಿ ಬಳಸಿಕೊಳ್ಳಲು ಮುಂದಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ