ವಿಲೀನದಿಂದ ಹಿಂದೆ ಸರಿದ ಸೋನಿಯಿಂದ 748 ಕೋಟಿ ರೂ ಪರಿಹಾರ ಕೇಳಿದ ಝೀ

|

Updated on: May 24, 2024 | 6:48 PM

Zee vs Sony termination war: ಸೋನಿ ಗ್ರೂಪ್​ಗೆ ಸೇರಿದ ಕಲ್ವರ್ ಮ್ಯಾಕ್ಸ್ ಮತ್ತು ಬಾಂಗ್ಲಾ ಎಂಟರ್ಟೈನ್ಮೆಂಟ್ ಕಂಪನಿಗಳನ್ನು ಝೀ ಎಂಟರ್ಟೈನ್ಮೆಂಟ್ ಲಿ ಸಂಸ್ಥೆ ಜೊತೆ ವಿಲೀನಗೊಳಿಸುವ ಪ್ರಯತ್ನ ಬೇರೆ ಬೇರೆ ಕಾರಣಗಳಿಗೆ ಮುರಿದುಬಿದ್ದಿದೆ. ಈ ವಿಚಾರ ಅಂತಾರಾಷ್ಟ್ರೀಯ ಕೋರ್ಟ್ ಕಟಕಟೆಯಲ್ಲಿದೆ. ಇದೇ ವೇಳೆ, ಒಪ್ಪಂದದಿಂದ ಹಿಂದಕ್ಕೆ ಸರಿದ ಸೋನಿ ಸಂಸ್ಥೆಯಿಂದ 90 ಕೋಟಿ ರೂ ಪರಿಹಾರವನ್ನು ಝೀ ಕೇಳಿದೆ.

ವಿಲೀನದಿಂದ ಹಿಂದೆ ಸರಿದ ಸೋನಿಯಿಂದ 748 ಕೋಟಿ ರೂ ಪರಿಹಾರ ಕೇಳಿದ ಝೀ
ಝೀ ಎಂಟರ್ಟೈನೆಂಟ್, ಸೋನಿ ಗ್ರೂಪ್
Follow us on

ನವದೆಹಲಿ, ಮೇ 24: ಸೋನಿ ಗ್ರೂಪ್​ನ ಎರಡು ಭಾರತೀಯ ಕಂಪನಿಗಳನ್ನು ಝೀ ಎಂಟರ್ಟೈನ್ಮೆಂಟ್ ಸಂಸ್ಥೆಯೊಂದಿಗೆ (Zee entertainment Ltd) ವಿಲೀನಗೊಳಿಸುವ ಪ್ರಯತ್ನ ಮುರಿದುಬಿದ್ದ ಬೆನ್ನಲ್ಲೇ ಈಗ ಝೀ ಸಂಸ್ಥೆ ಪರಿಹಾರಕ್ಕೆ ಪ್ರಯತ್ನ ತೀವ್ರಗೊಳಿಸಿದೆ. ಟರ್ಮಿನೇಶನ್ ಫೀ ಆಗಿ 90 ಮಿಲಿಯನ್ ಡಾಲರ್ (ಸುಮಾರು 748 ಕೋಟಿ ರೂ) ಹಣವನ್ನು ಪರಿಹಾರವಾಗಿ ಕೊಡಬೇಕು ಎಂದು ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಸಂಸ್ಥೆ ಆಗ್ರಹಿಸಿದೆ. ಸೋನಿ ಗ್ರೂಪ್​ಗೆ ಸೇರಿದ ಕಲ್ವರ್ ಮ್ಯಾಕ್ಸ್ ಎಂಟರ್ಟೈನ್ಮೆಂಟ್ (ಸೋನಿ ಇಂಡಿಯಾ) ಮತ್ತು ಬಾಂಗ್ಲಾ ಎಂಟರ್ಟೈನ್ಮೆಂಟ್ ಕಂಪನಿಗಳನ್ನು ಝೀ ಜೊತೆ ವಿಲೀನಗೊಳಿಸಲು 10 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, ಇದೇ ಜನವರಿಯಲ್ಲಿ ಸೋನಿ ಸಂಸ್ಥೆ ಈ ಒಪ್ಪಂದದಿಂದ ಹಿಂದಕ್ಕೆ ಸರಿದಿದೆ. ವಿಲೀನಕ್ಕೆ ಹಾಕಲಾಗಿದ್ದ ಕೆಲ ಷರತ್ತುಗಳಿಗೆ ಝೀ ಬದ್ಧವಾಗಿಲ್ಲ ಎಂಬುದು ಸೋನಿ ನಡೆಗೆ ಕಾರಣವಾಗಿದೆ.

ಈ ಪ್ರಕರಣ ವಿವಿಧ ಕೋರ್ಟ್​ಗಳ ಮೆಟ್ಟಿಲೇರಿದ್ದಿದೆ. ಸೋನಿ ಸಂಸ್ಥೆ ಸಿಂಗಾಪುರದ ಅಂತಾರಾಷ್ಟ್ರೀಯ ವ್ಯಾಜ್ಯ ವಿಚಾರಣಾ ಕೇಂದ್ರವಾದ ಎಸ್​ಐಎಸಿ ಕೋರ್ಟ್ ಮೆಟ್ಟಿಲೇರಿದ್ದು, ಒಪ್ಪಂದ ಸಾಕಾರಗೊಳ್ಳಲು ಸಹಕಾರ ತೋರಿಲ್ಲವೆಂದು ಝೀಯಿಂದ 90 ಮಿಲಿಯನ್ ಡಾಲರ್ ಟರ್ಮಿನೇಶ್ ಫೀ ಕೊಡಿಸಬೇಕು ಎಂದು ಕೋರಿದೆ. ಇದಿನ್ನೂ ವಿಚಾರಣೆಯ ಹಂತದಲ್ಲಿದೆ.

ಇದನ್ನೂ ಓದಿ: ಫಿನೋಲೆಕ್ಸ್ ಕೇಬಲ್ಸ್ ಷೇರುಬೆಲೆ ಹೊಸ ದಾಖಲೆ ಮಟ್ಟಕ್ಕೆ ಏರಿಕೆ; ಆದಾಯ ಹೆಚ್ಚಳದ ಫಲಶೃತಿ

ಸಿಂಗಾಪುರ ಕೋರ್ಟ್​ಗೆ ಸೋನಿ ಹೋದ ಬೆನ್ನಲ್ಲೇ ಝೀ ಕೂಡ ಭಾರತದ ನ್ಯಾಷಲನ್ ಕಂಪನಿ ಲಾ ಟ್ರಿಬ್ಯುನಲ್ (ಎನ್​ಸಿಎಲ್​ಟಿ) ಮೆಟ್ಟಿಲೇರಿ ಒಪ್ಪಂದವನ್ನು ಅನುಷ್ಠಾನಗೊಳಿಸಲು ನಿರ್ದೇಶನ ನೀಡಬೇಕೆಂದು ಕೋರಿತ್ತು. ಬಳಿಕ ಆ ಅರ್ಜಿಯನ್ನು ಹಿಂಪಡೆದಿದೆ.

ವಿಲೀನ ಸಹಕಾರ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎನ್ನುವ ಅಂಶವನ್ನು ತೋರಿಸಿ ಸೋನಿ ಗ್ರೂಪ್​ನ ಕಲ್ವರ್ ಮ್ಯಾಕ್ಸ್ ಎಂಟರ್ಟೈನ್ಮೆಂಟ್ ಮತ್ತು ಬಾಂಗ್ಲಾ ಎಂಟರ್ಟೈನ್ಮೆಂಟ್ ಸಂಸ್ಥೆಗಳಿಗೆ ಟರ್ಮಿನೇಶನ್ ಫೀಗೆ ಝೀ ಆಗ್ರಹಿಸಿದೆ. ಈ ವಿಚಾರವನ್ನು ಝೀ ತನ್ನ ರೆಗ್ಯುಲೇಟರಿ ಫೈಲಿಂಗ್​ನಲ್ಲಿ ತಿಳಿಸಿದೆ.

ಇದನ್ನೂ ಓದಿ: ಕಂಪನಿ ಮಾರುವಂತೆ ಮಾಡಿದ್ರು… 2014ರ ಹಿಂದಿನ ದಿನಗಳನ್ನು ಸ್ಮರಿಸಿ ಮರುಗಿದ ಉದ್ಯಮಿ ಶಿವಶಂಕರನ್

‘ಕಲ್ವರ್ ಮ್ಯಾಕ್ಸ್ ಮತ್ತು ಬಾಂಗ್ಲಾ ಎಂಟರ್ಟೈನ್ಮೆಂಟ್ (ಬಿಇಪಿಎಲ್) ಸಂಸ್ಥೆಗಳು ಮರ್ಜರ್ ಕೋ ಆಪರೇಶನ್ ಅಗ್ರೀಮೆಂಟ್ ಅಥವಾ ವಿಲೀನ ಸಹಕಾರ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಸಂಸ್ಥೆಯು 2024ರ ಮೇ 23ರಂದು ಪತ್ರದ ಮೂಲಕ ಒಪ್ಪಂದವನ್ನು ಮುಕ್ತಾಯಗೊಳಿಸಿದೆ. ಎಂಸಿಎ ನಿಯಮಗಳ ಪ್ರಕಾರ ಕಲ್ವರ್ ಮ್ಯಾಕ್ಸ್ ಮತ್ತು ಬಿಇಪಿಎಲ್​ನಿಂದ ಟರ್ಮಿನೇಶನ್ ಫೀ ಕೇಳಲಾಗಿದೆ,’ ಎಂದು ಝೀ ಮಾಹಿತಿ ನೀಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ