ಫಿನೋಲೆಕ್ಸ್ ಕೇಬಲ್ಸ್ ಷೇರುಬೆಲೆ ಹೊಸ ದಾಖಲೆ ಮಟ್ಟಕ್ಕೆ ಏರಿಕೆ; ಆದಾಯ ಹೆಚ್ಚಳದ ಫಲಶೃತಿ
Finolex Cables share price: ಫಿನೋಲೆಕ್ಸ್ ಕೇಬಲ್ಸ್ ಸಂಸ್ಥೆ 2024ರ ಜನವರಿಯಿಂದ ಮಾರ್ಚ್ವರೆಗಿನ ಕ್ವಾರ್ಟರ್ನಲ್ಲಿ ಉತ್ತಮ ಆದಾಯ ಮತ್ತು ಲಾಭ ತೋರಿಸಿದೆ. ಇದರ ಪರಿಣಾಮವಾಗಿ ಮೇ 24, ಶುಕ್ರವಾದ ಅದರ ಷೇರುಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಹೋಯಿತು. ದಿನಾಂತ್ಯದಲ್ಲಿ ಷೇರುಬೆಲೆ 1,283 ರೂನಲ್ಲಿದೆ. ವರ್ಷದ ಕೊನೆಯ ಕ್ವಾರ್ಟರ್ನಲ್ಲಿ ಅದರ ಆದಾಯ 1,400 ಕೋಟಿ ರೂಗಿಂತ ಹೆಚ್ಚಾಗಿದೆ. ಡಿವಿಡೆಂಡ್ ಅನ್ನು ಶೇ. 400ರಷ್ಟು ಘೋಷಿಸಲಾಗಿದೆ. ಇದರ ಪರಿಣಾಮವಾಗಿ ಷೇರುಬೆಲೆ ಗಣನೀಯವಾಗಿ ಹೆಚ್ಚಾಗಿದೆ.
ಮುಂಬೈ, ಮೇ 24: ದೇಶದ ಪ್ರಮುಖ ಎಲೆಕ್ಟ್ರಿಕ್ ವೈರ್, ಕೇಬಲ್ಗಳ ತಯಾರಕ ಸಂಸ್ಥೆ ಫಿನೋಲೆಕ್ಸ್ ಕೇಬಲ್ಸ್ (Finolex cables) ಷೇರುಬೆಲೆ ಇಂದು ಶುಕ್ರವಾರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದೆ. ದಿನಾಂತ್ಯದಲ್ಲಿ ಫಿನೋಲೆಕ್ಸ್ ಕೇಬಲ್ಸ್ನ ಷೇರುಬೆಲೆ 1,283.75 ರೂಗೆ ಏರಿದೆ. ಶುಕ್ರವಾರದ ಒಂದು ಸಮಯದಲ್ಲಿ ಅದು 1,363.30 ರೂವರೆಗೆ ಏರಿತ್ತು. ನಿನ್ನೆ ಬಿಡುಗಡೆ ಆದ ಕಂಪನಿಯ ತ್ರೈಮಾಸಿಕ ವರದಿಯ ಪರಿಣಾಮ ಇದು. ಜನವರಿಯಿಂದ ಮಾರ್ಚ್ವರೆಗಿನ ಕ್ವಾರ್ಟರ್ನಲ್ಲಿ ಕಂಪನಿ ಉತ್ತಮ ಲಾಭ ಮಾಡಿದೆ. ಜೊತೆಗೆ, ಶೇ. 400 ರಷ್ಟು ಲಾಭಾಂಶ ಘೋಷಣೆ ಮಾಡಿದೆ. ಎರಡು ರೂ ಫೇಸ್ವ್ಯಾಲ್ಯೂನಂತೆ ಒಂದು ಷೇರಿಗೆ ಎಂಟು ರೂನಷ್ಟು ಡಿವಿಡೆಂಡ್ ಘೋಷಿಸಲಾಗಿದೆ.
ಪುಣೆ ಮೂಲದ ಫಿನೋಲೆಕ್ಸ್ ಕೇಬಲ್ಸ್ ಎಲೆಕ್ಟ್ರಿಕ್ ವೈರ್ ಮತ್ತು ಕೇಬಲ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕಂಪನಿ. ಕಳೆದ ಎರಡು ವರ್ಷದಿಂದ ಷೇರು ಮಾರುಕಟ್ಟೆಯಲ್ಲಿ ಫಿನೋಲೆಕ್ಸ್ ಷೇರಿಗೆ ಸಖತ್ ಬೇಡಿಕೆ ಇದೆ. ಎರಡು ವರ್ಷದ ಹಿಂದೆ ಕೇವಲ 370 ರೂ ಇದ್ದ ಇದರ ಷೇರುಬೆಲೆ ಇವತ್ತು 1,283 ರೂಗೆ ಏರಿರುವುದು ಗಮನಾರ್ಹ.
ಇಂದಂತೂ ಫಿನೋಲೆಕ್ಸ್ ಷೇರಿಗೆ ಭಾರೀ ಬೇಡಿಕೆ ಇತ್ತು. ಎನ್ಎಸ್ಇ ಮತ್ತು ಬಿಎಸ್ಇ ಎರಡೂ ಪ್ಲಾಟ್ಫಾರ್ಮ್ಗಳಲ್ಲಿ ಫೀನೋಲೆಕ್ಸ್ ಕೇಬಲ್ಸ್ನ 47 ಲಕ್ಷ ಈಕ್ವಿಟಿ ಷೇರುಗಳ ಮಾರಾಟವಾಗಿವೆ. ಕಂಪನಿಯ ಒಟ್ಟಾರೆ ಷೇರಿನಲ್ಲಿ ಶೇ. 3.1ರಷ್ಟು ಷೇರುಗಳ ವಹಿವಾಟು ನಡೆದಿರುವುದು ಫಿನೋಲೆಕ್ಸ್ ಷೇರಿಗೆ ಇರುವ ಬೇಡಿಕೆಯನ್ನು ಗಮನಿಸಬಹುದು.
ಇದನ್ನೂ ಓದಿ: ಕಂಪನಿ ಮಾರುವಂತೆ ಮಾಡಿದ್ರು… 2014ರ ಹಿಂದಿನ ದಿನಗಳನ್ನು ಸ್ಮರಿಸಿ ಮರುಗಿದ ಉದ್ಯಮಿ ಶಿವಶಂಕರನ್
ಇವತ್ತು ಶುಕ್ರವಾರ ಬೆಳಗ್ಗಿನ ವಹಿವಾಟಿನ ಒಂದು ಹಂತದಲ್ಲಿ ಫಿನೋಲೆಕ್ಸ್ ಷೇರು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 1,363 ರೂ ಮುಟ್ಟಿತು. ದಿನಾಂತ್ಯದಲ್ಲಿ ಅದರ ಷೇರುಬೆಲೆ 1,283.75 ರೂಗೆ ನಿಂತಿದೆ.
ಫಿನೋಲೆಕ್ಸ್ ಕೇಬಲ್ಸ್ ಕಂಪನಿಯ ಉತ್ತಮ ಆದಾಯ
2024ರ ಹಣಕಾಸು ವರ್ಷದ ಕೊನೆಯ ಕ್ವಾರ್ಟರ್ನಲ್ಲಿ ಪುಣೆ ಮೂಲದ ಫಿನೋಲೆಕ್ಸ್ ಕೇಬಲ್ಸ್ನ ವಿವಿಧ ಉತ್ಪನ್ನಗಳ ಮಾರಾಟ ಗಮನಾರ್ಹವಾಗಿ ಹೆಚ್ಚಳವಾಗಿದೆ. ವರ್ಷದ ಹಿಂದೆ 1,224 ಕೋಟಿ ರು ಇದ್ದ ಅದರ ಆದಾಯ 2023-24ರಲ್ಲಿ 1,401 ಕೋಟಿ ರೂಗೆ ಏರಿದೆ. ಆದಾಯದಲ್ಲಿ ಶೇ. 15ರಷ್ಟು ಹೆಚ್ಚಾಗಿದೆ. ತೆರಿಗೆಗೆ ಪೂರ್ವದ ಆದಾಯ ಪ್ರಮಾಣ 196.1 ಕೋಟಿ ರೂ ಇತ್ತು. ತೆರಿಗೆ ಕಳೆದು ಉಳಿದ ನಿವ್ವಳ ಆದಾಯ ಶೇ. 9ರಷ್ಟು ಏರಿ 146 ಕೋಟಿ ರೂ ಆಗಿದೆ. ಈ ಕಾರಣಕ್ಕೆ ಫೀನೋಲೆಕ್ಸ್ ಷೇರಿಗೆ ಬೇಡಿಕೆ ಬಂದಿದೆ.
ಇದನ್ನೂ ಓದಿ: ಸೆನ್ಸೆಕ್ಸ್ನಲ್ಲಿ ವಿಪ್ರೋ ಸ್ಥಾನಕ್ಕೆ ಏರಲಿರುವ ಅದಾನಿ ಎಂಟರ್ಪ್ರೈಸಸ್; ಏನಿದರ ಪರಿಣಾಮ?
ಕಳೆದ ಎರಡು ವರ್ಷದಿಂದ ಮಲ್ಟಿಬ್ಯಾಗರ್
ಫಿನೋಲೆಕ್ಸ್ ಕೇಬಲ್ಸ್ ಎರಡು ವರ್ಷದ ಹಿಂದೆ ಪ್ರತೀ ಷೇರಿಗೆ ಕೇವಲ 370 ರೂ ಹೊಂದಿತ್ತು. ಎರಡು ವರ್ಷದಲ್ಲಿ ಅದರ ಷೇರುಬೆಲೆ ಹೆಚ್ಚೂಕಡಿಮೆ ನಾಲ್ಕು ಪಟ್ಟು ಹೆಚ್ಚಾಗಿದೆ. ಇದರೊಂದಿಗೆ ಫಿನೋಲೆಕ್ಸ್ ಕೇಬಲ್ಸ್ ದೇಶದ ಮಲ್ಟಿಬ್ಯಾಗರ್ ಸ್ಟಾಕ್ಗಳಲ್ಲಿ ಒಂದೆನಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ