ನವದೆಹಲಿ: ಒಂದು ವರ್ಷ ಕಾಲ ಯಾವುದೇ ಪಬ್ಲಿಕ್ ಲಿಸ್ಟೆಡ್ ಕಂಪನಿಗಳಲ್ಲಿ ಮಂಡಳಿ ಅಧಿಕಾರ ಹೊಂದುವಂತಿಲ್ಲ ಎಂದು ಝೀ ಗ್ರೂಪ್ ಛೇರ್ಮನ್ ಸುಭಾಷ್ ಚಂದ್ರ ಹಾಗು ಝೀ ಎಂಟರ್ಟೈನ್ಮೆಂಟ್ ಸಿಇಒ ಪುನೀತ್ ಗೋಯೆಂಕಾ ಅವರಿಗೆ ಸೆಬಿ ಹೊರಡಿಸಿದ್ದ ನಿಷೇಧ ಕ್ರಮಕ್ಕೆ ತಡೆ ನೀಡಲು ಎಸ್ಎಟಿ ನಿರಾಕರಿಸಿದೆ. ಅಪ್ಪ ಮತ್ತು ಮಗ ಜೋಡಿಯಾದ ಸುಭಾಷ್ ಚಂದ್ರ ಮತ್ತು ಪುನೀತ್ ಗೋಯೆಂಕಾ ಅವರು ಸೆಬಿ ಆದೇಶವನ್ನು ಪ್ರಶ್ನಿಸಿ ಎಸ್ಎಟಿ (SAT- Securities Appellate Tribunal) ನ್ಯಾಯಮಂಡಳಿಯ ಮೆಟ್ಟಿಲೇರಿದ್ದರು. ಸೆಬಿ (SEBI) ಆದೇಶದಲ್ಲಿ ತಾನು ಮಧ್ಯಪ್ರವೇಶಿಸುವಂತಹ ಅಗತ್ಯತೆ ಕಾಣುತ್ತಿಲ್ಲ ಎಂದು ತನ್ನ ತೀರ್ಪಿನಲ್ಲಿ ತಿಳಿಸಿದ ಎಸ್ಎಟಿ, ಎರಡು ವಾರದೊಳಗೆ ಸೆಬಿ ಬಳಿ ಹೋಗಿ ತಮ್ಮ ವಾದ ಮುಂದಿಡುವಂತೆ ಅವರಿಬ್ಬರಿಗೂ ಸೂಚಿಸಿದೆ. ನ್ಯಾ| ತರುಣ್ ಅಗರ್ವಾಲ ನೇತೃತ್ವದ ಎಸ್ಎಟಿ ನ್ಯಾಯಪೀಠವು ಈ ತೀರ್ಮಾನ ಮಾಡಿದ್ದು, ಗೋಯಂಕ ಮತ್ತು ಸುಭಾಷ್ ಚಂದ್ರ ಅವರ ಆಕ್ಷೇಪಣೆಗಳನ್ನು ಆಲಿಸಿ ನಂತರ ಆದೇಶ ಹೊರಡಿಸುವಂತೆ ಸೆಬಿಗೆ ಸೂಚಿಸಿದೆ.
ಝೀ ಗ್ರೂಪ್ ಛೇರ್ಮನ್ ಸುಭಾಷ್ ಚಂದ್ರ ಮತ್ತು ಝೀ ಎಂಟರ್ಟೈನ್ಮೆಂಟ್ ಸಿಇಒ ಪುನೀತ ಗೋಯಂಕಾ ಅವರು ಲಿಸ್ಟ್ ಕಂಪನಿಗಳಲ್ಲಿದ್ದ ಸಾರ್ವಜನಿಕ ಹಣವನ್ನು ವಿವಿಧ ಸ್ಕೀಮ್ಗಳು ಹಾಗು ವಹಿವಾಟುಗಳ ಮೂಲಕ ತಮ್ಮ ಖಾಸಗಿ ಒಡೆತನದ ಕಂಪನಿಗಳಿಗೆ ಅಕ್ರಮವಾಗಿ ವರ್ಗಾಯಿಸಿದ್ದರು ಎಂಬುದು ಸೆಬಿ ವಾದ. ಇದೇ ಕಾರಣ ಮುಂದಿಟ್ಟುಕೊಂಡು ಜೂನ್ 12ರಂದು ನೀಡಿದ ಆದೇಶದಲ್ಲಿ ಸೆಬಿ 1 ವರ್ಷ ಕಾಲ ಇವರಿಬ್ಬರು ಯಾವುದೇ ಲಿಸ್ಟೆಡ್ ಕಂಪನಿಗಳಲ್ಲಿ ಬೋರ್ಡ್ ಸ್ಥಾನ ಪಡೆಯದಂತೆ ನಿರ್ಬಂಧಿಸಿತ್ತು.
ಇದನ್ನೂ ಓದಿ: Twitter: ಟ್ವಿಟ್ಟರ್ ಖರೀದಿಸುವಂತೆ ಮಾಡಿದ್ದ ಲಾ ಏಜೆನ್ಸಿ ವಿರುದ್ಧ ಇಲಾನ್ ಮಸ್ಕ್ ಕೇಸ್ ದಾಖಲು
ಆದರೆ, ಸೆಬಿಯ ಈ ಆದೇಶದ ಬಗ್ಗೆ ಸುಭಾಷ್ ಚಂದ್ರ ಮತ್ತು ಗೋಯಂಕಾಗೆ ಎತ್ತಿದ ಪ್ರಮುಖ ಚಕಾರವೆಂದರೆ ತರಾತುರಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂಬುದು. ಸೆಬಿ ಈ ಆದೇಶ ಹೊರಡಿಸಿದಾಗ ತಾನು ಯಾವುದೇ ಲಿಸ್ಟೆಡ್ ಕಂಪನಿಯಲ್ಲಿ ಪ್ರಮುಖ ಸ್ಥಾನ ಹೊಂದಿರಲಿಲ್ಲ. ಝೀ ಛೇರ್ಮನ್ ಸ್ಥಾನವನ್ನು 2020 ಆಗಸ್ಟ್ 20ರಂದೇ ಬಿಟ್ಟಿದ್ದೆ. ಈಗ ಝೀ ಛೇರ್ಮನ್ ಎಮಿರಿಟಸ್ ಎಂಬ ನಾಮಕಾವಸ್ತೆ ಸ್ಥಾನ ಮಾತ್ರ ಇರುವುದು. ಹೀಗಾಗಿ, ಸೆಬಿ ಆದೇಶದಲ್ಲಿ ಔಚಿತ್ಯ ಇಲ್ಲ ಎಂದು ಸುಭಾಷ್ ಚಂದ್ರ ವಾದಿಸಿದ್ದರು. ಆದರೂ ಸೆಬಿ ಆದೇಶಕ್ಕೆ ತಡೆಕೊಡಲು ಎಸ್ಎಟಿ ನಿರಾಕರಿಸಿದೆ.
ಈಗ ಎರಡು ವಾರದೊಳಗೆ ಸುಭಾಷ್ ಚಂದ್ರ ಮತ್ತು ಪುನೀತ್ ಗೋಯಂಕಾ ಅವರು ಸೆಬಿ ಬಳಿ ಹೋಗಿ ಮತ್ತೊಮ್ಮೆ ತಮ್ಮ ವಾದವನ್ನು ಪ್ರಸ್ತುತಪಡಿಸಬೇಕಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ