ನವದೆಹಲಿ, ಜೂನ್ 12: ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಷೇರು ಮಾರುಕಟ್ಟೆ (stock market) ಬಹಳ ಮಂದಿಯನ್ನು ಸೆಳೆಯುತ್ತಿದೆ. ಕಳೆದ ನಾಲ್ಕೈದು ವರ್ಷದಲ್ಲಿ ಬಹಳ ಹೆಚ್ಚಿನ ಪ್ರಮಾಣದಲ್ಲಿ ಜನರು ಷೇರು ಮತ್ತು ಮ್ಯೂಚುವಲ್ ಫಂಡ್ ಹೂಡಿಕೆಗಳತ್ತ ವಾಲುತ್ತಿದ್ದಾರೆ. ಉತ್ತಮ ಲಾಭ ಸಿಗುವ ನಿರೀಕ್ಷೆಯಲ್ಲಿ ಹೂಡಿಕೆದಾರರ ಒಲವು ಈಕ್ವಿಟಿ ಮಾರುಕಟ್ಟೆಯತ್ತ ಇದೆ. ಇತ್ತೀಚಿನ ವರ್ಷಗಳಲ್ಲಿ ಈ ನಿರೀಕ್ಷೆ ಹುಸಿಯಾಗಿದ್ದು ಕಡಿಮೆ. ನಷ್ಟ ಮಾಡಿಕೊಂಡ ಹೂಡಿಕೆದಾರರ ಸಂಖ್ಯೆ ವಿರಳ. ಇದೇ ವೇಳೆ ಷೇರುಮಾರುಕಟ್ಟೆ ಬ್ರೋಕರ್ ಸಂಸ್ಥೆಗಳಲ್ಲಿ ಒಂದಾದ ಝೀರೋಧದ ಮುಖ್ಯಸ್ಥ ನಿತಿನ್ ಕಾಮತ್ ಕುತೂಹಲದ ದತ್ತಾಂಶವೊಂದನ್ನು ಬಹಿರಂಗಪಡಿಸಿದ್ದಾರೆ. ಅವರ ಪ್ಲಾಟ್ಫಾರ್ಮ್ನಲ್ಲಿ ಹೂಡಿಕೆದಾರರು ಕಳೆದ ನಾಲ್ಕು ವರ್ಷದಲ್ಲಿ ನಡೆಸಿದ ವಹಿವಾಟುಗಳಲ್ಲಿ 50,000 ಕೋಟಿ ರೂ ಲಾಭ (realized profit) ಪಡೆದಿದ್ದಾರೆ.
‘ಝೀರೋಧದ ಈಕ್ವಿಟಿ ಹೂಡಿಕೆದಾರರು ಕಳೆದ 4ಕ್ಕೂ ಹೆಚ್ಚು ವರ್ಷಗಳಿಂದ 50,000 ಕೋಟಿ ರೂ ರಿಯಲೈಸ್ಡ್ ಪ್ರಾಫಿಟ್ ಪಡೆದಿದ್ದಾರೆ. 4.5 ಲಕ್ಷ ಕೋಟಿ ರೂ ಷೇರು ಸಂಪತ್ತಿನ ನಿರ್ವಹಣೆ ಆಗುತ್ತಿದ್ದು ಹೂಡಿಕೆದಾರರಿಗೆ ಒಂದು ಲಕ್ಷ ಕೋಟಿ ರೂ ಅನ್ರಿಯಲೈಸ್ಡ್ ಪ್ರಾಫಿಟ್ ಇದೆ,’ ಎಂದು ನಿತಿನ್ ಕಾಮತ್ ತಮ್ಮ ಎಕ್ಸ್ ಪೋಸ್ಟ್ವೊಂದರಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಶೀಘ್ರದಲ್ಲೇ ಷೇರು ಮಾರುಕಟ್ಟೆ ಕುಸಿಯುತ್ತೆ ನೋಡ್ತಿರಿ… 2008ಕ್ಕಿಂತಲೂ ಭೀಕರವಾಗಿರುತ್ತೆ: ಅಮೆರಿಕದ ಆರ್ಥಿಕ ತಜ್ಞರ ಎಚ್ಚರಿಕೆ
ಇಲ್ಲಿ ರಿಯಲೈಸ್ಡ್ ಪ್ರಾಫಿಟ್ ಎಂದರೆ ಹೆಚ್ಚಿನ ಬೆಲೆಗೆ ಷೇರು ಮಾರಿ ಗಳಿಸಿದ ಲಾಭ. ಅನ್ರಿಯಲೈಸ್ಡ್ ಪ್ರಾಫಿಟ್ ಎಂದರೆ ಜನರು ತಮ್ಮ ಹೂಡಿಕೆಗಳಿಗೆ ಬಂದಿರುವ ಲಾಭವನ್ನು ಇನ್ನೂ ಹಿಂಪಡೆದಿಲ್ಲದಿರುವುದು. ಷೇರು ಮಾರಾಟದಲ್ಲಿ ನಷ್ಟವೂ ಆಗುವುದುಂಟು. ಆದರೆ, ಝೀರೋಧದಲ್ಲಿ ಹೂಡಿಕೆದಾರರಿಗೆ ನಷ್ಟ ಕಳೆದು ಬರೀ ಲಾಭವೇ 50,000 ಕೋಟಿ ರೂ ಆಗಿದೆಯಂತೆ.
Net of realized profits and realized losses across all customers = ~Rs 50,000 crores.
— Nithin Kamath (@Nithin0dha) June 12, 2024
ಹದಿನಾಲ್ಕು ವರ್ಷ ಹಿಂದೆ ಆರಂಭವಾದ ಝೀರೋಧ ಬ್ರೋಕರ್ ಸಂಸ್ಥೆ ಬಳಿ ಇರುವ ಹೂಡಿಕೆದಾರರ ಡೀಮ್ಯಾಟ್ ಅಕೌಂಟ್ಗಳಲ್ಲಿ ಒಟ್ಟು 4.5 ಲಕ್ಷ ಕೋಟಿ ರೂ ಮೌಲ್ಯದ ಷೇರುಗಳಿವೆ. ಇವುಗಳಲ್ಲಿ ಹೆಚ್ಚಿನ ಷೇರುಗಳು ಕಳೆದ ನಾಲ್ಕು ವರ್ಷಗಳಲ್ಲಿ ಖರೀದಿಸಿಲಾಗಿದೆ ಎಂಬ ಮಾಹಿತಿಯನ್ನು ನಿತಿನ್ ಕಾಮತ್ ನೀಡಿದ್ದಾರೆ.
2024ರ ಮೇ ತಿಂಗಳಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್ಗಳಿಗೆ ಅತಿಹೆಚ್ಚು ಹೂಡಿಕೆ ಪ್ರಾಪ್ತವಾಗಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್ ಸಂಘಟನೆಯಾದ ಎಎಂಎಫ್ಐ ಹೇಳಿದೆ. ಅದು ನಿನ್ನೆ ಮಂಗಳವಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಮೇ ತಿಂಗಳಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್ಗಳಿಗೆ 34,670.9 ಕೋಟಿ ರೂ ಹರಿದುಬಂದಿದೆ.
ಇದನ್ನೂ ಓದಿ: ಆ ಪ್ಯಾಕೇಜ್ಗೆ ನೀವು ಒಪ್ಪದಿದ್ರೆ ಇಲಾನ್ ಮಸ್ಕ್ ಬಿಟ್ಟುಹೋಗ್ತಾರೆ: ಷೇರುದಾರರನ್ನು ಎಚ್ಚರಿಸಿದ ಟೆಸ್ಲಾ ಅಧ್ಯಕ್ಷೆ
ಈ ಹೂಡಿಕೆಯಲ್ಲಿ ಹೆಚ್ಚಿನವರು ಥೀಮ್ಯಾಟಿಕ್ ಫಂಡ್ ಮತ್ತು ಎನ್ಎಫ್ಒಗಳಿಗೆ ಬಂದಿವೆ. ಥೀಮ್ಯಾಟಿಕ್ ಫಂಡ್ಗಳಲ್ಲಿ ಮೇ ತಿಂಗಳಲ್ಲಿ 19,213 ಕೋಟಿ ರೂನಷ್ಟು ಹೂಡಿಕೆ ಆಗಿದೆ. ಎನ್ಎಫ್ಒ, ಅಥವಾ ನ್ಯೂ ಫಂಡ್ ಆಫರ್ನಲ್ಲಿ 10,140 ಕೋಟಿ ರೂ ಹೂಡಿಕೆ ಸೇರ್ಪಡೆಯಾಗಿದೆಯಂತೆ.
ಲಾರ್ಜ್ ಕ್ಯಾಪ್ ಫಂಡ್ಗಳಿಗಿಂತ ಮಿಡ್ ಕ್ಯಾಪ್ ಫಂಡ್ ಮತ್ತು ಸ್ಮಾಲ್ಕ್ಯಾಪ್ ಫಂಡ್ಗಳಿಗೆ ಹೆಚ್ಚು ಹೂಡಿಕೆ ಆಗಿರುವುದು ಗಮನಾರ್ಹ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ