Zomato: ‘ರಾಷ್ಟ್ರ ಭಾಷೆ’ ಹಿಂದಿ ಬರಲೇಬೇಕೆಂದ ಝೊಮ್ಯಾಟೊ ಎಕ್ಸ್​ಕ್ಯೂಟಿವ್; ಕಂಪೆನಿಗೆ ತಗುಲಿಕೊಂಡ ನೆಟ್ಟಿಗರು

| Updated By: Srinivas Mata

Updated on: Oct 19, 2021 | 1:51 PM

ಝೊಮ್ಯಾಟೊದ ಚಾಟ್ ಎಕ್ಸ್​ಕ್ಯೂಟಿವ್​ ತಮಿಳುನಾಡಿನ ಗ್ರಾಹಕರಿಗೆ "ರಾಷ್ಷ್ರ ಭಾಷೆ" ಹಿಂದಿ ಕಲಿಯುವಂತೆ ಹೇಳಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಏನಿದು ವಿವಾದ ಹಾಗೂ ಏನಾಯಿತು ಎಂಬುದರ ವಿವರ ಈ ಲೇಖನದಲ್ಲಿದೆ.

Zomato: ರಾಷ್ಟ್ರ ಭಾಷೆ ಹಿಂದಿ ಬರಲೇಬೇಕೆಂದ ಝೊಮ್ಯಾಟೊ ಎಕ್ಸ್​ಕ್ಯೂಟಿವ್; ಕಂಪೆನಿಗೆ ತಗುಲಿಕೊಂಡ ನೆಟ್ಟಿಗರು
ಪ್ರಾತಿನಿಧಿಕ ಚಿತ್ರ
Follow us on

ಚೆನ್ನೈ: ಹಿಂದಿ ಭಾಷೆ ಗೊತ್ತಿಲ್ಲ ಎಂಬ ಕಾರಣಕ್ಕೆ ಆಹಾರ ವಿತರಣೆ (ಫುಡ್​ ಡೆಲಿವರಿ) ದಿಗ್ಗಜ ಝೊಮ್ಯಾಟೊ ತನ್ನನ್ನು “ಸುಳ್ಳುಗಾರ” ಎಂದು ಕರೆದಿದೆ ಎಂಬುದಾಗಿ ಗ್ರಾಹರೊಬ್ಬರು ಆರೋಪಿಸಿದ್ದಾರೆ. ಕಂಪೆನಿಯಲ್ಲಿ ಕೆಲಸ ಮಾಡುವ ಆಹಾರ ಡೆಲಿವರಿ ಎಕ್ಸ್​ಕ್ಯೂಟಿವ್, “ರಾಷ್ಟ್ರೀಯ ಭಾಷೆ”ಯಾದ್ದರಿಂದ ಹಿಂದಿ ಕಲಿಯುವಂತೆ ತನಗೆ ಹೇಳಿದ್ದಾಗಿ ಗ್ರಾಹಕರು ಆರೋಪಿಸಿದ್ದಾರೆ. ಅಂದಹಾಗೆ ವಿಕಾಶ್ ಎಂದು ನೊಂದ ಗ್ರಾಹಕರು. ಅವರು ತಮ್ಮ ಟ್ವಿಟರ್ ಹ್ಯಾಂಡಲ್​ನಲ್ಲಿ ಡೆಲಿವರಿ ಎಕ್ಸ್​ಕ್ಯೂಟಿವ್ ಜತೆಗೆ ನಡೆಸಿದ ಸಂಭಾಷಣೆಯ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ.

ಹಿಂದಿ ನಮ್ಮ ರಾಷ್ಟ್ರೀಯ ಭಾಷೆ
ಸ್ಕ್ರೀನ್‌ಶಾಟ್‌ಗಳ ಮೂಲಕವಾಗಿ ಗೊತ್ತಾಗುವುದೇನೆಂದರೆ, ವಿಕಾಶ್ ಮಾಡಿದ ಆರ್ಡರ್​ನಲ್ಲಿ ಸಮಸ್ಯೆಗಳು ಕಂಡುಬರುತ್ತವೆ. ಝೊಮ್ಯಾಟೊ ಚಾಟ್ ಸಪೋರ್ಟ್ ಎಕ್ಸ್​ಕ್ಯೂಟಿವ್ ಅವರು ಗ್ರಾಹಕರಿಗೆ ತಿಳಿಸಿರುವಂತೆ, ಐದು ಬಾರಿ ರೆಸ್ಟೋರೆಂಟ್ ಜೊತೆ ಮಾತನಾಡಿದ್ದಾರೆ. ಆದರೆ “ಭಾಷೆ ತೊಡಕು” ಇದೆ ಎಂದು ಹೇಳುತ್ತಾರೆ. ಇದಕ್ಕೆ ಗ್ರಾಹಕರು, “ಅದು ನನ್ನ ಚಿಂತೆಯ ವಿಷಯವಲ್ಲ” ಎಂದು ಉತ್ತರಿಸುತ್ತಾರೆ. ಝೊಮ್ಯಾಟೊದಿಂದ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದ ನಂತರ, ವಿಕಾಶ್ ಮರುಪಾವತಿಯನ್ನು ಕೇಳುತ್ತಾರೆ ಮತ್ತು “ತಮಿಳುನಾಡಿನಲ್ಲಿ ಝೊಮ್ಯಾಟೊ ಲಭ್ಯವಿದ್ದರೆ ಅವರು ಭಾಷೆಯನ್ನು ಅರ್ಥ ಮಾಡಿಕೊಳ್ಳುವ ಜನರನ್ನು ನೇಮಿಸಿಕೊಳ್ಳಬೇಕು,” ಎಂದು ಹೇಳಿದ್ದಾರೆ. ಆಗ ಎಕ್ಸ್​ಕ್ಯೂಟಿವ್ ಮಾತನಾಡಿ, ಹಿಂದಿ ನಮ್ಮ ರಾಷ್ಟ್ರಭಾಷೆ. ಹಾಗಾಗಿ ಎಲ್ಲರೂ ಹಿಂದಿಯನ್ನು ಸ್ವಲ್ಪವಾದರೂ ತಿಳಿದುಕೊಳ್ಳುವುದು ಸಾಮಾನ್ಯ ಎಂದಿದ್ದಾರೆ.

ಈ ಘಟನೆಯನ್ನು ‘ಒಪ್ಪಲಾಗದು’ ಎಂದ ಝೊಮ್ಯಾಟೊ
ವಿಕಾಶ್ ಅವರ ಸಂಭಾಷಣೆಯ ಸ್ಕ್ರೀನ್ ಪೋಸ್ಟ್ ಮಾಡಿದ ತಕ್ಷಣ ವೈರಲ್ ಆಗಿತ್ತು. ಮತ್ತು ಜನರು ಝೊಮ್ಯಾಟೊ ಡೆಲಿವರಿ ಎಕ್ಸ್​ಕ್ಯೂಟಿವ್​ ಸಂವೇದನಾರಹಿತ ನಡವಳಿಕೆಗಾಗಿ ಟೀಕಿಸಿದ್ದಾರೆ ಮತ್ತು ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಕಂಪೆನಿಯ ಕಸ್ಟಮರ್ ಸಪೋರ್ಟ್ ಪುಟವಾಗಿರುವ ಝೊಮ್ಯಾಟೊ ಕೇರ್, ಟ್ವೀಟ್‌ಗೆ ಪ್ರತಿಕ್ರಿಯಿಸಿದೆ. ಮತ್ತು ಈ ಘಟನೆಯನ್ನು “ಸ್ವೀಕಾರಾರ್ಹವಲ್ಲ” ಎಂದು ಬಣ್ಣಿಸಿದೆ. ಆ ನಂತರ, ಸಾರ್ವಜನಿಕ ಕ್ಷಮೆಯಾಚನೆಗಾಗಿ ವಿಕಾಶ್‌ನ ಬೇಡಿಕೆಗೆ ಉತ್ತರಿಸಿದ್ದು, “ವಿಕಾಶ್, ನಮ್ಮ ದೂರವಾಣಿ ಸಂಭಾಷಣೆಯ ಪ್ರಕಾರ ನಿಮ್ಮ ಸಮಸ್ಯೆಯನ್ನು ಪರಿಹರಿಸಲಾಗಿದೆ. ಯಾವುದೇ ಹೆಚ್ಚಿನ ಸಹಾಯಕ್ಕಾಗಿ ನಮ್ಮನ್ನು ಸಂಪರ್ಕಿಸಿ,” ಎಂದು ಪ್ರತಿಕ್ರಿಯಿಸಲಾಗಿದೆ.

ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಂಸದ ಸೆಂಥಿಲ್ ಕುಮಾರ್ ತಮ್ಮ ಹ್ಯಾಂಡಲ್‌ನಲ್ಲಿ ವಿಕಾಶ್ ಅವರ ಟ್ವೀಟ್ ಅನ್ನು ಹಂಚಿಕೊಂಡಿದ್ದು, ಝೊಮ್ಯಾಟೊ ಉತ್ತರದಾಯಿತ್ವವನ್ನು ಪ್ರಶ್ನಿಸಿದ್ದಾರೆ. “ತಮಿಳುನಾಡಿನಲ್ಲಿರುವ ಗ್ರಾಹಕರು ಹಿಂದಿಯನ್ನು ಏಕೆ ತಿಳಿದುಕೊಳ್ಳಬೇಕು ಮತ್ತು ಅವರು ಸ್ವಲ್ಪ ಹಿಂದಿಯನ್ನು ತಿಳಿದಿರಬೇಕು ಎಂದು ನಿಮ್ಮ ಗ್ರಾಹಕರಿಗೆ ಯಾವ ಆಧಾರದ ಮೇಲೆ ಸಲಹೆ ನೀಡಿದ್ದೀರಿ?” ಎಂದು ಕೇಳಲಾಗಿದೆ. ಝೊಮ್ಯಾಟೊದ ಪ್ರಕಾರ ಸಮಸ್ಯೆಯನ್ನು ಪರಿಹರಿಸಲಾಗಿದೆ.

ಇದನ್ನೂ ಓದಿ: ಎಲ್ಲಾ ಭಾಷೆಯನ್ನು ಗೌರವಿಸುತ್ತೇವೆ ಆದರೆ ಯಾವುದೇ ಹೇರಿಕೆ ಸಲ್ಲದು: ಹಿಂದಿ ಹೇರಿಕೆಯ ವಿರುದ್ಧ ನಟ ಧನಂಜಯ ಕಿಡಿ

Published On - 1:50 pm, Tue, 19 October 21