ನವದೆಹಲಿ, ಏಪ್ರಿಲ್ 22: ಆನ್ಲೈನ್ ಫೂಡ್ ಡೆಲಿವರಿ ಸಂಸ್ಥೆ ಜೊಮಾಟೊ ತನ್ನ ಪ್ಲಾಟ್ಫಾರ್ಮ್ ಶುಲ್ಕವನ್ನು (Zomato platform fee) ಶೇ. 25ರಷ್ಟು ಹೆಚ್ಚಿಸಿದೆ. ಇದರೊಂದಿಗೆ 4 ರೂ ಇದ್ದ ಪ್ಲಾಟ್ಫಾರ್ಮ್ ಫೀ ಈಗ ಐದು ರುಪಾಯಿಗೆ ಏರಿದೆ. ಕಳೆದ ಒಂದು ವರ್ಷದಿಂದ ಜೊಮಾಟೋ ಸತತವಾಗಿ ಪ್ಲಾಟ್ಫಾರ್ಮ್ ಫೀ ಹೆಚ್ಚಿಸುತ್ತಾ ಬಂದಿದೆ. 2023ರ ಆಗಸ್ಟ್ ತಿಂಗಳಲ್ಲಿ ಮೊದಲ ಬಾರಿ ಎರಡು ರೂ ಪ್ಲಾಟ್ಫಾರ್ಮ್ ಫೀ ಜಾರಿ ತಂದಿತ್ತು. ನಷ್ಟ ದೂರಗೊಳಿಸಿ ಸಂಸ್ಥೆಯನ್ನು ಲಾಭದ ಹಳಿಗೆ ತರಲು ಈ ಕ್ರಮ ಕೈಗೊಳ್ಳಲಾಗಿತ್ತು. ಕೆಲ ತಿಂಗಳ ಬಳಿಕ ಶುಲ್ಕ 3 ರುಪಾಯಿಗೆ ಹೆಚ್ಚಾಗಿತ್ತು. ನಂತರ ಹೊಸ ವರ್ಷದಿಂದ (ಜ.1) ನಾಲ್ಕು ರೂ ಶುಲ್ಕ ವಿಧಿಸತೊಡಗಿತ್ತು. ಪ್ಲಾಟ್ಫಾರ್ಮ್ ಶುಲ್ಕ ಎಂಬುದು ಪ್ರತೀ ಆರ್ಡರ್ಗೆ ವಿಧಿಸಲಾಗುವ ನಿರ್ದಿಷ್ಟ ಶುಲ್ಕವಾಗಿರುತ್ತದೆ. ಎಷ್ಟೇ ಮೊತ್ತದ ಆರ್ಡರ್ ಇದ್ದರೂ ಈ ಜೊಮಾಟೊ 5 ರೂ ಪ್ಲಾಟ್ಫಾರ್ಮ್ ಫೀ ವಿಧಿಸುತ್ತದೆ.
ಜೊಮಾಟೊ ಒಂದು ವರ್ಷದಲ್ಲಿ 85-90 ಕೋಟಿ ಆರ್ಡರ್ಗಳನ್ನು ಪಡೆಯುತ್ತದೆ. ಈಗ ಒಂದು ರೂ ಪ್ಲಾಟ್ಫಾರ್ಮ್ ಫೀ ಹೆಚ್ಚಿಸಿದ್ದರಿಂದ ವರ್ಷಕ್ಕೆ 85ರಿಂದ 90 ಕೋಟಿ ರೂ ಹೆಚ್ಚುವರಿ ಆದಾಯ ಜೊಮಾಟೊಗೆ ಸಿಕ್ಕಂತಾಗುತ್ತದೆ. ಸದ್ಯ ಈ ಶುಲ್ಕ ಹೆಚ್ಚಳ ಆಯ್ದ ನಗರಗಳಲ್ಲಿ ಜಾರಿಯಾಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲಾ ನಗರಗಳಲ್ಲೂ ಅನ್ವಯ ಆಗಬಹುದು.
ಇದನ್ನೂ ಓದಿ: ದಾಖಲೆ ಪ್ರಮಾಣದಲ್ಲಿ ನೇರ ತೆರಿಗೆ ಸಂಗ್ರಹ; 2023-24ರಲ್ಲಿ 19.58 ಲಕ್ಷ ಕೋಟಿ ರೂ ಕಲೆಕ್ಷನ್
ಜನವರಿಯಲ್ಲಿ ಜೊಮಾಟೊ ಪ್ಲಾಟ್ಫಾರ್ಮ್ ಫೀ ಅನ್ನು 3 ರುಪಾಯಿಗೆ ಹೆಚ್ಚಿಸಿದಾಗ ಅದರ ಷೇರುಬೆಲೆ ಹೆಚ್ಚತೊಡಗಿತು. ಇವತ್ತೂ ಕೂಡ ಷೇರುಬೆಲೆ ಶೇ. 2ರಿಂದ 3ರಷ್ಟು ಹೆಚ್ಚಿದೆ. ಸೋಮವಾರ ಬೆಳಗ್ಗೆ 10:30ರಲ್ಲಿ ಜೊಮಾಟೊ ಷೇರುಬೆಲೆ 193-194 ರೂ ಇತ್ತು.
ಜೊಮಾಟೊದ ಪ್ರತಿಸ್ಪರ್ಧಿ ಸ್ವಿಗ್ಗಿ ಕೂಡ 5 ರೂ ಪ್ಲಾಟ್ಫಾರ್ಮ್ ಫೀ ವಿಧಿಸುತ್ತಿದೆ. ಸ್ವಿಗ್ಗಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 10 ರೂಗೆ ಶುಲ್ಕ ಹೆಚ್ಚಿಸುವ ಪ್ರಸ್ತಾಪದಲ್ಲಿದೆ. ಜೊಮಾಟೊ ಡಿಸೆಂಬರ್ ಅಂತ್ಯದಲ್ಲಿ ಪ್ಲಾಟ್ಫಾರ್ಮ್ ಫೀ ಅನ್ನು 9 ರೂಗೆ ತಾತ್ಕಾಲಿಕವಾಗಿ ಹೆಚ್ಚಿಸುವ ಪ್ರಯೋಗ ಮಾಡಿತ್ತು.
ಇದನ್ನೂ ಓದಿ: ಉಚಿತ ಸ್ಕೀಮ್ಗಳ ಮೇಲೆ ಶ್ವೇತಪತ್ರ; ಸರ್ಕಾರ ಜವಾಬ್ದಾರಿ ತೆಗೆದುಕೊಂಡು ಸಹಮತ ಮೂಡಿಸಲಿ: ಮಾಜಿ ಆರ್ಬಿಐ ಗವರ್ನರ್ ಸುಬ್ಬಾರಾವ್
ಜೊಮಾಟೊ ಸಂಸ್ಥೆ ಇತ್ತೀಚೆಗೆ 11.81 ಕೋಟಿ ರೂ ಜಿಎಸ್ಟಿ ತೆರಿಗೆ ಬಾಕಿ ಮತ್ತು ದಂಡದ ಮೊತ್ತ ಕೇಳಿ ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್ ಪಡೆದಿದೆ. 2017ರ ಜುಲೈನಿಂದ 221ರ ಮಾರ್ಚ್ವರೆಗಿನ ಅವಧಿಗೆ ಈ ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್ ನೀಡಲಾಗಿದೆ. 11.81 ಕೋಟಿ ರೂ ತೆರಿಗೆ ಬಾಕಿಯಲ್ಲಿ 5.9 ಕೋಟಿ ರೂಗಳ ಜಿಎಸ್ಟಿ ಮತ್ತು 5.9 ಕೋಟಿ ರೂಗಳ ದಂಡದ ಹಣ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:43 am, Mon, 22 April 24