AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ವಿಟ್ಟರ್ ಅಥವಾ ಎಕ್ಸ್​ನಲ್ಲಿ ನೀವು ಲೈಕ್, ರಿಪ್ಲೈ ಮಾಡಿದರೂ ಬೀಳುತ್ತೆ ಕಾಸು; ಮಸ್ಕ್ ಕೊಟ್ಟಿದ್ದಾರೆ ಬಿಕ್ ಶಾಕ್

Elon Musk confirms of annual fee for X usage: ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ ಹೊಸದಾಗಿ ಖಾತೆ ಆರಂಭಿಸುವವರು ವಾರ್ಷಿಕ ಶುಲ್ಕ ತೆರಬೇಕಾಗಬಹುದು. ವಾರ್ಷಿಕ ಶುಲ್ಕ ನೀಡುವುದು ಅನಿವಾರ್ಯವಲ್ಲವಾದರೂ, ಪೋಸ್ಟ್ ಮಾಡಲು, ಲೈಕ್ ಮಾಡಲು ಶುಲ್ಕ ಪಾವತಿ ಕಡ್ಡಾಯವಾಗಿದೆ. ಶುಲ್ಕ ಪಾವತಿಸದಿದ್ದರೆ ಬೇರೆ ಪೋಸ್ಟ್​ಗಳನ್ನು ಮತ್ತು ಅಕೌಂಟ್​​ಗಳನ್ನು ಬ್ರೌಸ್ ಮಾಡಲು ಮಾತ್ರ ಸಾಧ್ಯವಾಗುತ್ತದೆ. ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ ಉಪದ್ರವ ಸೃಷ್ಟಿಸುತ್ತಿರುವ ಎಐ ಶಕ್ತ ಬೋಟ್ ಮತ್ತು ಸ್ಪ್ಯಾಮ್​ಗಳಿಗೆ ಕಡಿವಾಣ ಹಾಕಲು ಇಲಾನ್ ಮಸ್ಕ್ ಈ ಮಾರ್ಗ ಅವಲೋಕಿಸುತ್ತಿದ್ದಾರೆ.

ಟ್ವಿಟ್ಟರ್ ಅಥವಾ ಎಕ್ಸ್​ನಲ್ಲಿ ನೀವು ಲೈಕ್, ರಿಪ್ಲೈ ಮಾಡಿದರೂ ಬೀಳುತ್ತೆ ಕಾಸು; ಮಸ್ಕ್ ಕೊಟ್ಟಿದ್ದಾರೆ ಬಿಕ್ ಶಾಕ್
ಎಕ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 16, 2024 | 11:28 AM

ನವದೆಹಲಿ, ಏಪ್ರಿಲ್ 16: ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ ನೀವು ಪೋಸ್ಟ್ ಮಾಡಿದರೆ, ಅಥವಾ ರಿಪ್ಲೈ ಮಾಡಿದರೆ, ಅಥವಾ ಬೇರೆ ಪೋಸ್ಟ್​ಗೆ ಲೈಕ್ ಮಾಡಿದರೂ ಹಣ ತೆರಬೇಕಾಗುತ್ತದೆ. ಹಾಗಂತ ಹೊಸ ಕಟ್ಟುಪಾಡು ತರಲು ಮಾಲೀಕ ಇಲಾನ್ ಮಸ್ಕ್ (Elon Musk) ಹೊರಟಿದ್ದಾರೆ. ಅಂದಹಾಗೆ, ಈ ಶುಲ್ಕ ಕ್ರಮ ಹೊಸ ಬಳಕೆದಾರರಿಗೆ ಮಾತ್ರ ಎಂದೂ ಸ್ಪಷ್ಟಪಡಿಸಿದ್ದಾರೆ. ಅಂದರೆ, ಈಗಾಗಲೇ ಎಕ್ಸ್​ನಲ್ಲಿ ಖಾತೆ ಹೊಂದಿರುವವರಿಗೆ ಇದು ಅನ್ವಯ ಆಗುವುದಿಲ್ಲ. ಹೊಸದಾಗಿ ಖಾತೆ ಮಾಡಿಸಿದವರಿಗೆ ಶುಲ್ಕ ಇರುತ್ತದೆ. ಇಲಾನ್ ಮಸ್ಕ್ ಈ ಬಗ್ಗೆ ಹೆಚ್ಚಿನ ವಿವರ ಸದ್ಯಕ್ಕೆ ನೀಡಿಲ್ಲ.

ಸ್ಪ್ಯಾಮ್, ಬೋಟ್​ಗಳನ್ನು ನಿಗ್ರಹಿಸಲು ಈ ಕ್ರಮವಾ?

ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ ಸಾಕಷ್ಟು ಕೃತಕ ಯೂಸರ್​ಗಳ ಸೃಷ್ಟಿಯಾಗಿದೆ. ಇದು ಸಾಕಷ್ಟು ಮಂದಿಗೆ ಉಪದ್ರವ ತರುತ್ತಿದೆ. ಈ ಸ್ಪ್ಯಾಮ್ ಮತ್ತು ಬೋಟ್​​ಗಳನ್ನು ನಿಗ್ರಹಿಸುವ ಸಲುವಾಗಿ ಹೊಸ ಬಳಕೆದಾರರಿಗೆ ಶುಲ್ಕ ಕ್ರಮ ಜಾರಿಗೊಳಿಸುವ ಪ್ರಸ್ತಾಪವನ್ನು ಇಲಾನ್ ಮಸ್ಕ್ ಮಾಡಿದ್ದಾರೆ.

ಇದನ್ನೂ ಓದಿ: ಹ್ಯಾಂಗ್ ಆಗುತ್ತಿರುವ ಸ್ಮಾರ್ಟ್​ಫೋನನ್ನು ಸೂಪರ್ ಸ್ಪೀಡ್ ಮಾಡುವುದು ಹೇಗೆ? ಇದನ್ನು ಡಿಲೀಟ್ ಮಾಡಿ

‘ಹೊಸ ಖಾತೆಗಳು ವಾರ್ಷಿಕವಾಗಿ ಶುಲ್ಕ ನೀಡಬೇಕಾಗುತ್ತದೆ. ಆಗ ಮಾತ್ರ ಎಕ್ಸ್​ನಲ್ಲಿ ಪೋಸ್ಟ್ ಮಾಡಲು, ಲೈಕ್ ಮಾಡಲು, ಬುಕ್​ಮಾರ್ಕ್ ಮಾಡಲು ಮತ್ತು ರಿಪ್ಲೈ ಮಾಡಲು ಸಾಧ್ಯವಾಗುತ್ತದೆ. ಸ್ಪ್ಯಾಮ್ ಖಾತೆಗಳನ್ನು ಕಡಿಮೆ ಮಾಡಲು ಮತ್ತು ಪ್ರತಿಯೊಬ್ಬ ಬಳಕೆದಾರರಿಗೂ ಉತ್ತಮ ವಾತಾವರಣ ಸೃಷ್ಟಿಸಲು ಇದನ್ನು ಮಾಡಲಾಗುತ್ತದೆ,’ ಎಂದು ಟೆಸ್ಲಾದ ಮುಖ್ಯಸ್ಥರೂ ಆಗಿರುವ ಮಸ್ಕ್ ಹೇಳಿದ್ದಾರೆ.

ಎಕ್ಸ್​ನ ಹೊಸ ಖಾತೆದಾರರಿಗೆ ವಾರ್ಷಿಕ ಶುಲ್ಕ ಹೆಚ್ಚಿರುವುದಿಲ್ಲ. ಬಹಳ ಅಲ್ಪಮೊತ್ತದ ಶುಲ್ಕ ಇರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ ಇಲಾನ್ ಮಸ್ಕ್. ಹಾಗೆಯೇ ಹೊಸ ಖಾತೆ ರಚನೆಗೆ ಶುಲ್ಕ ಇರುವುದಿಲ್ಲ. ವಾರ್ಷಿಕ ಶುಲ್ಕ ನೀಡದಿದ್ದರೆ ಪ್ಲಾಟ್​ಫಾರ್ಮ್​ನಲ್ಲಿ ಬೇರೆಯವರ ಪೋಸ್ಟ್​​ಗಳನ್ನು ನೋಡಲು ಅಡ್ಡಿ ಇಲ್ಲ. ಲೈಕ್ ಮಾಡಲು, ಪೋಸ್ಟ್ ಮಾಡಲು ಇತ್ಯಾದಿ ಚಟುವಟಿಕೆಗಳಿಗೆ ಆಸ್ಪದ ಇರುವುದಿಲ್ಲ ಅಷ್ಟೇ ಎಂಬುದು ಸದ್ಯಕ್ಕೆ ಗೊತ್ತಾಗಿರುವ ವಿವರ.

ಬೇರೆ ದಾರಿ ಇಲ್ಲ ಎನ್ನುವ ಮಸ್ಕ್

‘ಇದು ದುರದೃಷ್ಟ ಎನಿಸಿದರೂ ಬೇರೆ ದಾರಿ ಇಲ್ಲ. ಬೋಟ್​ಗಳ ನಿರಂತರ ದಾಳಿಯನ್ನು ನಿಗ್ರಹಿಸಲು ಹೊಸ ಬಳಕೆದಾರರಿಗೆ ಸಣ್ಣ ಪ್ರಮಾಣದ ಶುಲ್ಕ ವಿಧಿಸುವುದು ಏಕೈಕ ದಾರಿ ಎನಿಸುತ್ತದೆ. ಈಗಿರುವ ಎಐ ಮೂಲಕ ಸುಲಭವಾಗಿ ಬೋಟ್ ಟೆಸ್ಟ್ ಅನ್ನು ದಾಟಿ ಹೋಗಬಹುದು,’ ಎಂದು ಇತ್ತೀಚೆಗೆ ಇಲಾನ್ ಮಸ್ಕ್ ತಿಳಿಸಿದ್ದರು.

ಇದನ್ನೂ ಓದಿ: ಇಪಿಎಫ್ ಖಾತೆ ವಿಲೀನಗೊಳಿಸಬಹುದು, ಆದರೆ ಎರಡು ಯುಎಎನ್ ಸಂಖ್ಯೆ ಸೇರಿಸಲು ಸಾಧ್ಯವಾ? ಇಲ್ಲಿದೆ ಕ್ರಮ

ದುಬಾರಿ ಮೊತ್ತಕ್ಕೆ ಟ್ವಿಟ್ಟರ್ ಅನ್ನು ಖರೀದಿಸಿದಾಗಿನಿಂದ ಇಲಾನ್ ಮಸ್ಕ್ ಅವರು ಕಿರು ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ನಲ್ಲಿ ಅಮೂಲಾಗ್ರ ಬದಲಾವಣೆ ತರುವ ಪ್ರಯತ್ನ ಮಾಡಿದ್ದಾರೆ. ನಷ್ಟದಲ್ಲಿದ್ದ ಟ್ವಿಟ್ಟರ್ ಅನ್ನು ಲಾಭದ ಹಳಿಗೆ ತರಲು ಯತ್ನಿಸಿದ್ದಾರೆ. ಟ್ವಿಟ್ಟರ್ ಹೆಸರು ಹೋಗಿ ಎಕ್ಸ್ ಆಗಿದೆ. ಬ್ಲ್ಯೂ ಟಿಕ್ ಪಡೆಯಲು ಸಬ್​ಸ್ಕ್ರಿಪ್ಷನ್ ಆಯ್ಕೆ ಇಟ್ಟಿದ್ದಾರೆ.

ವಿವಿಧ ಸೇವೆಗಳಿಗೆ ಏಕೀಕೃತ ಪ್ಲಾಟ್​ಫಾರ್ಮ್ ಆಗಿ ಎಕ್ಸ್ ಅನ್ನು ಮಾರ್ಪಡಿಸುವ ಕನಸು ಅವರದ್ದು. ಇಕಾಮರ್ಸ್​ನಿಂದ ಹಿಡಿದು ಪೇಮೆಂಟ್, ಸೋಷಿಯಲ್ ಮೀಡಿಯಾವರೆಗೆ ಎಲ್ಲವನ್ನೂ ಒಳಗೊಳ್ಳುವ ಮದರ್ ಆ್ಯಪ್ ರೀತಿ ಎಕ್ಸ್ ಅನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದ್ದಾರೆ ಎಂದು ಕಳೆದ ಒಂದು ವರ್ಷದಿಂದಲೂ ಕೇಳಿಬರುತ್ತಿರುವ ಮಾತಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ