ಮದುವೆ ಮನೆಯಲ್ಲಿ ಒಂದು ಭೀಕರ ದುರಂತ ಸಂಭವಿಸಿದೆ. ಮದುವೆಗೆಂದು ಹೋಗಿದ್ದ 13 ಮಹಿಳೆಯರು ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಬುಧವಾರ (ಫೆ.16) ರಾತ್ರಿ 8.30ರ ಹೊತ್ತಿಗೆ ಉತ್ತರ ಪ್ರದೇಶದ ಕುಶಿನಗರದ ನೆಬುವಾ ನೌರಂಗಿಯಾದಲ್ಲಿ ಮದುವೆ ನಡೆಯುತ್ತಿದ್ದ ಮನೆಯೊಂದರಲ್ಲಿ ಈ ಅವಘಡ ನಡೆದಿದೆ ಎಂದು ಗೋರಖ್ಪುರ ವಲಯದ ಎಡಿಜಿ ಅಖಿಲ್ ಕುಮಾರ್ ತಿಳಿಸಿದ್ದಾರೆ. ಅಷ್ಟಕ್ಕೂ ಈ ಮಹಿಳೆಯರೆಲ್ಲ ಒಟ್ಟಿಗೆ ಬಾವಿಗೆ ಬೀಳಲು ಕಾರಣ ತುಂಬ ಭಯಾನಕ.
ಮದುವೆ ನಡೆಯುತ್ತಿದ್ದ ಈ ಸ್ಥಳದಲ್ಲಿ ಒಂದು ದೊಡ್ಡದಾದ ಬಾವಿಯಿದ್ದು, ಅದರ ಮೇಲಿಂದ ಸ್ಲ್ಯಾಬ್ ಹಾಕಿ, ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ವಿವಾಹ ಸಮಾರಂಭ ಇದ್ದುದರಿಂದ ಅನೇಕರು ಬಂದು ಅಲ್ಲಿಯೇ ಕುಳಿತಿದ್ದರು. ಬಾವಿಯ ಮೇಲಿನ ಸ್ಲ್ಯಾಬ್ಗೆ ಭಾರ ಹೆಚ್ಚಿ, ಅದು ಮುರಿದುಬಿದ್ದಿದೆ. ಆಗ ಅದರ ಮೇಲೆ ಕುಳಿತಿದ್ದ ಮಹಿಳೆಯರೆಲ್ಲ ಬಾವಿಗೆ ಬಿದ್ದಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಕುಶಿನಗರ ಜಿಲ್ಲಾಧಿಕಾರಿ ಎಸ್.ರಾಜಲಿಂಗಮ್ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಂತಾಪ:
ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಕುಶಿನಗರದಲ್ಲಿ ನಡೆದ ದುರ್ಘಟನೆ ನಿಜಕ್ಕೂ ಹೃದಯ ಕಲುಕುವಂತಿದೆ. ಮೃತರ ಕುಟುಂಬಗಳಿಗೆ ನನ್ನ ಸಾಂತ್ವನಗಳು. ಇದರಲ್ಲಿ ಗಾಯಗೊಂಡವರೂ ಇದ್ದು, ಅವರೆಲ್ಲ ಆದಷ್ಟು ಬೇಗ ಗುಣಮುಖರಾಗಲಿ. ಸಂತ್ರಸ್ತರಿಗೆ ಸ್ಥಳೀಯ ಆಡಳಿತ ಸಾಧ್ಯವಿರುವ ಎಲ್ಲ ಸಹಾಯಗಳನ್ನೂ ನೀಡಬೇಕು ಎಂದು ಹೇಳಿದ್ದಾರೆ. ಅಲ್ಲದೆ, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ.ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.
ಹಾಗೇ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾರ್ಯಾಲಯ ಟ್ವೀಟ್ ಮಾಡಿ, ಸಂತಾಪ ಸೂಚಿಸಿದೆ. ಮೃತದೇಹಗಳನ್ನು ಹೊರತೆಗೆಯುವ ಕೆಲಸ, ಗಾಯಗೊಂಡವರಿಗೆ ಚಿಕಿತ್ಸೆ ಕೊಡಿಸುವ ಕೆಲಸವನ್ನು ಸೂಕ್ತವಾಗಿ ಮಾಡಿ ಎಂದು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಘಟನೆ ಸಂಬಂಧ ತನಿಖೆಯನ್ನು ಪೊಲೀಸರು ಪ್ರಾರಂಭಿಸಿದ್ದಾರೆ.
उत्तर प्रदेश के कुशीनगर में हुआ हादसा हृदयविदारक है। इसमें जिन लोगों को अपनी जान गंवानी पड़ी है, उनके परिजनों के प्रति मैं अपनी गहरी संवेदनाएं व्यक्त करता हूं। इसके साथ ही घायलों के जल्द से जल्द स्वस्थ होने की कामना करता हूं। स्थानीय प्रशासन हर संभव मदद में जुटा है।
— Narendra Modi (@narendramodi) February 17, 2022
ಇದನ್ನೂ ಓದಿ: Mohammed Nalapad: ಈಶ್ವರಪ್ಪ ವಿರುದ್ಧ ರಾಷ್ಟ್ರಧ್ವಜ ಗಲಾಟೆ ಜೋರು, ನಲಪಾಡ್ ನೇತೃತ್ವದ ಯುವ ಕಾಂಗ್ರೆಸ್ ಪಡೆ ಫುಲ್ ಆಕ್ಟೀವ್!
Published On - 7:42 am, Thu, 17 February 22