Bengaluru News: ಹಣಕೀಳಲು ವ್ಯಕ್ತಿಯೊಬ್ಬರ ಬ್ಯಾಗ್ನಲ್ಲಿ ಗಾಂಜಾ ಇಟ್ಟ ಇಬ್ಬರು ಕಾನ್ಸ್ಟೆಬಲ್ಗಳು ಅಮಾನತು
ಅವರು ತಾವೇ ನನ್ನ ಬ್ಯಾಗ್ನಲ್ಲಿ ಗಾಂಜಾ ಪೊಟ್ಟಣ ಇರಿಸಿ, ಅದನ್ನು ಬ್ಯಾಗ್ನಿಂದ ಹೊರಗೆ ತೆಗೆದಂತೆ ನಾಟಕವಾಡಿದರು. ಗಾಂಜಾ ಸೇದುವುದಾಗಿ ಒಪ್ಪಿಕೊಳ್ಳುವಂತೆ ಒತ್ತಾಯಿಸಿದರು ಎಂದು ಯುವಕ ದೂರಿದ್ದಾನೆ.
ಬೆಂಗಳೂರು: ಯುವಕನೊಬ್ಬನ ಬ್ಯಾಗ್ನಲ್ಲಿ ಗಾಂಜಾ (ಮಾರಿಯೋನಾ) ಇರಿಸಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ಇಬ್ಬರು ಪೊಲೀಸ್ ಕಾನ್ಸ್ಟೆಬಲ್ಗಳನ್ನು (Police Constables) ಸೋಮವಾರ ಮುಂಜಾನೆ ಅಮಾನತು ಮಾಡಲಾಗಿದೆ. ಇಬ್ಬರು ಕಾನ್ಸ್ಟೆಬಲ್ಗಳ ವಿರುದ್ಧ ಶಿಸ್ತುಕ್ರಮ ಜರುಗಿಸಿರುವುದನ್ನು ಡಿಸಿಪಿ ಸಿ.ಕೆ.ಬಾವಾ ದೃಢಪಡಿಸಿದ್ದಾರೆ. ‘ವಿಚಾರಣೆಯು ಮುಕ್ತಾಯಗೊಂಡಿದ್ದು, ವಿಚಾರಣಾಧಿಕಾರಿ ನೀಡಿದ ವರದಿ ಆಧರಿಸಿ ಶಿಸ್ತುಕ್ರಮ ಜರುಗಿಸಲಾಗಿದೆ. ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ’ ಎಂದು ಬಾವಾ ಹೇಳಿದ್ದಾರೆ.
ಕಳೆದ ವಾರ ಈ ಸಂಬಂಧ ಸರಣಿ ಟ್ವೀಟ್ ಮಾಡಿದ್ದ ವೈಭವ್ ಪಾಟೀಲ್ ಎನ್ನುವವರು ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಯಿಂದ ಕಿರುಕುಳಕ್ಕೆ ಒಳಗಾಗಿದ್ದ ಬಗ್ಗೆ ನೋವಿನಿಂದ ಬರೆದುಕೊಂಡಿದ್ದರು. ಅನಗತ್ಯವಾಗಿ ನನ್ನನ್ನು ಮಾದಕ ವಸ್ತು ಕಾಯ್ದೆ ಪ್ರಕರಣಕ್ಕೆ ಸಿಲುಕಿಸಲಾಗುತ್ತಿದೆ ಎಂದು ಅವರು ದೂರಿದ್ದರು.
ಈ ಕುರಿತು ನ್ಯೂಸ್9 ಜೊತೆಗೆ ಮಾತನಾಡಿದ ಸಂತ್ರಸ್ತ ಪಾಟೀಲ್, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ನನ್ನ ಹೇಳಿಕೆ ದಾಖಲಿಸಿದೆ. ಇಬ್ಬರು ಪೊಲೀಸ್ ಕಾನ್ಸ್ಟೆಬಲ್ಗಳನ್ನು ಗುರುತಿಸಿದೆ. ನನ್ನ ಲಿಖಿತ ಮತ್ತು ಮೌಖಿಕ ಹೇಳಿಕೆಯನ್ನು ನೀಡಿದ್ದೇನೆ. ಶನಿವಾರವೂ ಪೊಲೀಸ್ ಠಾಣೆಗೆ ಭೇಟಿ ನೀಡಿ ನನ್ನ ಕಾಯಂ ವಿಳಾಸ ಮತ್ತಿತರ ವಿವರಗಳನ್ನು ಕೊಟ್ಟೆ’ ಎಂದು ವಿವರಿಸಿದರು.
ನನ್ನ ದೂರು ನಿರಾಕರಿಸಿದ್ದ ಕಾನ್ಸ್ಟೆಬಲ್ಗಳು, ‘ನಾನು ತಪಾಸಣೆಗೆ ಒಳಪಡಲು ನಿರಾಕರಿಸಿದ್ದಾಗಿ ಹಾಗೂ ನನ್ನಿಂದ ಹಣ ಪಡೆಯಲಿಲ್ಲ’ ಎಂದು ಹೇಳಿದರು. ಇದನ್ನು ನಾನು ಇದನ್ನು ಒಪ್ಪಲಿಲ್ಲ. ಈಗಲೂ ನನ್ನನ್ನು ತಪಾಸಣೆಗೆ ಒಳಪಡಿಸಬಹುದು. ಒಂದು ವೇಳೆ ನನ್ನ ಬಳಿ ಮಾದಕವಸ್ತು ಇದ್ದಿದ್ದೇ ಆದರೆ ನನ್ನನ್ನು ಇವರು ಮುಂದೆ ಹೋಗಲು ಬಿಟ್ಟಿದ್ದಾದರೂ ಹೇಗೆ ಎಂದು ಪ್ರಶ್ನಿಸಿದೆ’ ಎಂದು ಹೇಳಿದರು.
ಆರು ತಿಂಗಳ ಹಿಂದೆ ಹಿಮಾಚಲ ಪ್ರದೇಶದಿಂದ ಬೆಂಗಳೂರಿಗೆ ಪಾಟೀಲ್ ಬಂದಿದ್ದಾರೆ. ಎಚ್ಎಸ್ಆರ್ ಲೇಔಟ್ನ ಕಂಪನಿಯೊಂದರಲ್ಲಿ ಕೆಲಸ ಮಾಡುವ ಅವರು ತಿಂಗಳಿಗೆ ಸುಮಾರು ₹ 22,000 ಸ್ಟೇಫಂಡ್ ಪಡೆಯುತ್ತಿದ್ದಾರೆ. ‘ಈ ಘಟನೆಯಿಂದ ನನ್ನ ಪೋಷಕರು ಚಿಂತಿತರಾದರು. ವಾಪಸ್ ಬಂದುಬಿಡು ಎಂದು ಹೇಳಿದರು’ ಎಂದು ಅವರು ನೋವು ತೋಡಿಕೊಂಡರು.
ಎಚ್ಎಸ್ಆರ್ ಲೇಔಟ್ನಲ್ಲಿ ರಾಪಿಡೊ ಬೈಕ್ ಟ್ಯಾಕ್ಸಿಯಲ್ಲಿ ಹೋಗುತ್ತಿದ್ದಾಗ ಪೊಲೀಸರು ನನ್ನನ್ನು ತಡೆದರು. ಅವರ ಪ್ರಶ್ನೆಗಳಿಗೆ ನಾನು ಉತ್ತರಿಸಿದೆ. ಓರ್ವ ಕಾನ್ಸ್ಟೆಬಲ್ ನನ್ನ ಬ್ಯಾಗ್ ತಪಾಸಣೆ ಮಾಡಬೇಕೆಂದರು. ನಾನು ಕೊಟ್ಟೆ. ಮತ್ತೊಬ್ಬರು ನನ್ನ ಬಳಿಗೆ ಬಂದು ಎಲ್ಲಿ ಕೆಲಸ ಮಾಡುತ್ತೀ ಎಂದು ಪ್ರಶ್ನೆಗಳನ್ನು ಕೇಳಿದರು. ‘ನೀನು ಗಾಂಜಾ ಸೇದ್ತೀ ಅಲ್ವಾ’ ಎಂದು ಕೇಳಿದಾಗ ನಾನು ನಿರಾಕರಿಸಿದೆ. ಅವರು ತಾವೇ ನನ್ನ ಬ್ಯಾಗ್ನಲ್ಲಿ ಗಾಂಜಾ ಪೊಟ್ಟಣ ಇರಿಸಿ, ಅದನ್ನು ಬ್ಯಾಗ್ನಿಂದ ಹೊರಗೆ ತೆಗೆದಂತೆ ನಾಟಕವಾಡಿದರು. ಗಾಂಜಾ ಸೇದುವುದಾಗಿ ಒಪ್ಪಿಕೊಳ್ಳುವಂತೆ ಒತ್ತಾಯಿಸಿದರು.
ನನ್ನನ್ನು ಬಂಧಿಸುವ ನಾಟಕವಾಡಿ ನನ್ನ ಬಳಿಯಿದ್ದ ₹ 2,500 ಕಿತ್ತುಕೊಂಡರು. ಮನೆ ತಲುಪಲು ಕನಿಷ್ಠ ₹ 100 ಕೊಡಿ ಎಂದರೂ ಕೇಳಲಿಲ್ಲ. ನಾನು ಕೊನೆಗೆ ಊಬರ್ ಬುಕ್ ಮಾಡಿ ಮನೆ ಸೇರಿಕೊಂಡೆ. ನಂತರ ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದೆ. ಪೊಲೀಸ್ ಅಧಿಕಾರಿ ನನ್ನನ್ನು ಗುರುತಿಸಿ, ನೆರವಾದರು. ನನ್ನ ಅಧಿಕೃತ ಹೇಳಿಕೆ ದಾಖಲಿಸಿದ ನಂತರ ಈ ಟ್ವೀಟ್ಗಳನ್ನು ಡಿಲೀಟ್ ಮಾಡಿದೆ ಎಂದು ಪಾಟೀಲ್ ವಿವರಿಸಿದರು.
ವರದಿ: ಪ್ರಜ್ವಲ್ ಡಿ ಸೋಜ, ನ್ಯೂಸ್ 9
ಈ ಸುದ್ದಿಯಲ್ಲಿ ಇಂಗ್ಲಿಷ್ನಲ್ಲಿ ಓದಲು ಲಿಂಕ್: 2 Bengaluru police constables suspended for ‘planting ganja’ in man’s bag, extorting money
ಇದನ್ನೂ ಓದಿ: Crime News: ದೆಹಲಿಯ ಬುರಾರಿ ರೀತಿಯಲ್ಲೇ ಪುಣೆಯಲ್ಲಿ ನಿಗೂಢ ಸಾವು; ಮನೆಯೊಳಗೆ ನಾಲ್ವರು ಶವವಾಗಿ ಪತ್ತೆ
Published On - 9:17 am, Mon, 16 January 23