ಲಕ್ನೋ: ಮಕ್ಕಳ ಜೀವನದಲ್ಲಿ ತಾಯಿ ಮತ್ತು ಶಿಕ್ಷಕ (Teacher) ಇಬ್ಬರದ್ದೂ ಬಹಳ ಮಹತ್ದದ ಪ್ರಾತ್ರವಿದೆ. ತಾಯಿ ಬದುಕು ಕೊಡುವಳು ಆಗಿದ್ದರೆ, ಶಿಕ್ಷಕ ಬದುಕನ್ನು ಕಲಿಸುವನು. ಬರೀ ಜೀವ ಇದ್ದರೆ ಸಾಕೆ? ಜೀವಕ್ಕೆ ಒಂದು ಅರ್ಥ ಬೇಡವೇ? ಆ ಜೀವಕ್ಕೆ ಅರ್ಥ ಕಲ್ಪಿಸಿಕೊಡುವವನೇ ಶಿಕ್ಷಕ. ಆದ್ರೆ, ಇಲ್ಲೋರ್ವ ಶಿಕ್ಷಕ ತನ್ನ ಮಗಳ ಸಮಾನದ 8ನೇ ವಿದ್ಯಾರ್ಥಿನಿಗೆ (Student) ಪ್ರೇಮ ಪತ್ರ (Love Letter)ಬರೆದಿದ್ದಾನೆ. ಅಲ್ಲದೇ ಆಕೆಯನ್ನು ಮದ್ವೆಯಾಗುವ ಆಸೆ ವ್ಯಕ್ತಪಡಿಸಿದ್ದಾನೆ.
ಹೌದು..ಈ ಸುದ್ದಿ ಅಚ್ಚರಿ ಅನ್ನಿಸಿದರೂ ಸತ್ಯ. ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯ ಜಿಲ್ಲೆಯ ಸದರ್ ಕೊತ್ವಾಲಿ ಗ್ರಾಮದ 47 ವರ್ಷದ ಶಾಲಾ ಶಿಕ್ಷಕನೊಬ್ಬ, 8ನೇ ತರಗತಿಯಲ್ಲಿ ಓದುತ್ತಿರುವ ಅಪ್ರಾಪ್ತ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದುಕೊಟ್ಟಿದ್ದಾನೆ. ಅದರಲ್ಲಿ ಆಕೆಯ ಮೇಲಿನ ಪ್ರೀತಿಯನ್ನು ಬಣ್ಣಿಸಿದ್ದು, ಈ ಪತ್ರ ಓದಿದ ಮೇಲೆ ಹರಿದುಹಾಕುವಂತೆ ಬರೆದಿದ್ದಾನೆ. ಅಲ್ಲದೇ ಈ ಪತ್ರದ ಬಗ್ಗೆ ಯಾರಿಗೂ ಹೇಳದಂತೆ ಮನವಿ ಮಾಡಿಕೊಂಡಿದ್ದಾನೆ. ಬಳಿಕ ವಿದ್ಯಾರ್ಥಿನಿ ಶಿಕ್ಷಕನ ಪ್ರೇಮ ಪತ್ರದ ಬಗ್ಗೆ ತನ್ನ ಪೋಷಕರಿಗೆ ತಿಳಿಸಿದ ನಂತರ ಪ್ರಕಣ ಬೆಳಕಿಗೆ ಬಂದಿದೆ.
ಡಿಸೆಂಬರ್ 30, 2022 ರಂದು ಶಾಲೆಯ ಚಳಿಗಾಲದ ರಜೆಯ ಮೊದಲು ಪತ್ರವನ್ನು ನೀಡಿದ್ದು, ಇದೀಗ ಆ ಪ್ರೇಮ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಶಿಕ್ಷಕನು ತಾನು ವಿದ್ಯಾರ್ಥಿಯನ್ನು ಮದುವೆಯಾಗಲು ಬಯಸುತ್ತೇನೆ ಎಂದು ಹೇಳಿದ್ದು, ಅವಳನ್ನು ತುಂಬಾ ಪ್ರೀತಿಸುತ್ತಿದ್ದೇನೆ, ರಜೆಯ ಸಮಯದಲ್ಲಿ ಆಕೆಯನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಬರೆದಿದ್ದಾನೆ. ಅದಲ್ಲದೇ, ಆ ಬಾಲಕಿಯ ಬಳಿ ಈ ಶಿಕ್ಷಕ ಯಾವಾಗೆಲ್ಲ ಸಾಧ್ಯವೋ ಆಗೆಲ್ಲ ಕರೆ ಮಾಡುವಂತೆ ಬೇಡಿಕೊಂಡಿದ್ದಾನೆ.
ಇನ್ನು ವಿದ್ಯಾರ್ಥಿನಿಯ ಪೋಷಕರು ಸದರ್ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಶಿಕ್ಷಕನ ವಿರುದ್ಧ ಕಿರುಕುಳ ಮತ್ತು ಬೆದರಿಕೆ ದೂರು ದಾಖಲಿಸಿದ್ದಾರೆ. ಈ ವಿಷಯದ ಬಗ್ಗೆ ಕನೌಜ್ ಎಸ್ಪಿ ಕುನ್ವರ್ ಅನುಪಮ್ ಸಿಂಗ್ ಪ್ರತಿಕ್ರಿಯಿಸಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಮತ್ತು ರಾಜ್ಯ ಶಿಕ್ಷಣ ಇಲಾಖೆಯು ವಿಚಾರಣೆ ನಡೆಸಿ ವರದಿಯನ್ನು ಪೊಲೀಸರೊಂದಿಗೆ ಹಂಚಿಕೊಳ್ಳಲು ಕೇಳಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಪ್ರೇಮ ಪತ್ರದ ಬಗ್ಗೆ ಶಿಕ್ಷಣಾಧಿಕಾರಿ ಅಧಿಕಾರಿ ಕೌಸ್ತುಭ್ ಸಿಂಗ್ ಮಾತನಾಡಿದ್ದು, ಪತ್ರದಲ್ಲಿನ ಕೈಬರಹ ಹಾಗೂ ಆ ಶಿಕ್ಷಕರ ಕೈಬರಹವನ್ನು ಪರಿಶೀಲಿಸಲು ಪೊಲೀಸರಿಗೆ ವಿನಂತಿಸಿದ್ದೇವೆ. ತಪ್ಪಿತಸ್ಥರೆಂದು ಕಂಡುಬಂದಲ್ಲಿ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ