ಕೆಲವು ಸಲ ಅಪರಾಧವೊಂದು ಹೀಗೂ ನಡೆಯುತ್ತದೆ. ವ್ಯಕ್ತಿಯೊಬ್ಬ ತನ್ನ ತಾಯಿ ವಾಸಿಸುತ್ತಿದ್ದ ಮನೆಗೆ ಬಂದಾಗ ಅವನ ಅಮ್ಮ ಲಿವಿಂಗ್ ರೂಮಿನಲ್ಲಿದ್ದ (living room) ಸೋಫಾದ ಮೇಲೆ ರಕ್ತಸಿಕ್ತವಾಗಿ ಸಾಯುವ ಸ್ಥಿತಿಯಲ್ಲಿ ಕಂಡು ದಂಗಾಗುತ್ತಾನೆ, ಆಘಾತಕ್ಕೊಳಗಾಗುತ್ತಾನೆ. ಆದರೆ ಅವನು ಕೂಡಲೇ ಮನವರಿಕೆ ಮಾಡಿಕೊಳ್ಳುವ ಮತ್ತೊಂದು ಅಂಶವೇನೆಂದರೆ, ಹಂತಕ ಇನ್ನೂ ಮನೆಯಲ್ಲಿದ್ದಾನೆ ಅನ್ನೋದು. ಡೇವ್ ಬ್ರಾಡ್ಲೀ (Dave Bradley) ಅವರಮ್ಮ ಕರೆನ್ ವ್ಹೀಲರ್ (Karen Wheeler) ವಾಸಿಸುತ್ತಿದ್ದ ನಗರದ ಮತ್ತೊಂದು ಭಾಗದಲ್ಲಿ ವಾಸವಾಗಿದ್ದ. ಆಕೆಗೆ ಹಲವಾರು ಬಾರಿ ಫೋನ್ ಮಾಡಿದರೂ ಪ್ರತಿಕ್ರಿಯಿಸದೆ ಹೋದಾಗ ಏನಾದರೂ ಹೆಚ್ಚು ಕಡಿಮೆಯಾಯಿತೆ ಅಂತ ಪರೀಕ್ಷಿಸಲು ಬಂದವನು ಆಕೆಯನ್ನು ಆ ಭಯಾನಕ ಸ್ಥಿತಿಯಲ್ಲಿ ನೋಡುತ್ತಾನೆ.
ಕರೆನ್ಳನ್ನು ಕೊಂದ ಆಕೆಯ ಗಂಡ (ಅವನು ಡೇವ್ ನ ತಂದೆಯಲ್ಲ, ಕರೆನ್ ಎರಡನೇ ಗಂಡ) ಮಾರ್ಕ್ ವ್ಹೀಲರ್ ಮೈ ತುಂಬಾ ರಕ್ತದ ಕಲೆಗಳೊಂದಿಗೆ ಬಾತ್ ರೂಮಿನಲ್ಲಿ ಅಡಗಿ ಕೂತಿರುವುದನ್ನು ನೋಡುತ್ತಾನೆ. ಪೊಲೀಸರು ಬರೋವರೆಗೆ ಅವನು ಮನೆಯಿಂದ ತಪ್ಪಿಸಿಕೊಳ್ಳದಂತೆ, ಓಡಿಹೋಗದಂತೆ ನೋಡಿಕೊಳ್ಳುವಲ್ಲಿ ಡೇವ್ ಸಫಲನಾಗುತ್ತಾನೆ. ಸುಮಾರು 20 ನಿಮಿಷಗಳ ನಂತರ ಬರುವ ಪೊಲೀಸರು ಮಾರ್ಕ್ ವ್ಹೀಲರ್ ನನ್ನು ಬಂಧಿಸಿ ಕರೆದೊಯ್ಯುತ್ತಾರೆ. ಇದು ನಡೆದಿದ್ದು 4 ದಿನಗಳ ಹಿಂದೆ ಮಂಗಳವಾರದಂದು.
ಬ್ರಿಟನ್ನಿನ ಮರ್ಸಿಸೈಡ್ ಬರ್ಕೆನ್ಹೆಡ್ ನಿವಾಸಿ ಯಾಗಿರುವ 38-ವರ್ಷ-ವಯಸ್ಸಿನ ಡೇವ್ ನಂತರ ಮಾಧ್ಯಮದವರೊಂದಿಗೆ ಮಾತಾಡಿ, ‘ನನ್ನಮ್ಮನ ರಕ್ತಸಿಕ್ತ ದೇಹ ನೋಡಿ ವ್ಹೀಲರ್ ನನ್ನು ಕೊಲ್ಲಬೇಕೆಂದು ಅವನೆಡೆ ಹೋದಾಗ ಅಮ್ಮನ ಕ್ಷೀಣ ಧ್ವನಿ ನನ್ನನ್ನು ತಡೆಯಿತು. ಅವನನ್ನು ಕೊಂದು ನಿನ್ನ ಬದುಕು ಹಾಳು ಮಾಡಿಕೊಳ್ಳಬೇಡ ಅಂತ ಅಮ್ಮ ಹೇಳಿದಳು’ ಎಂದು ಹೇಳಿದ್ದಾನೆ.
‘ಆಗಲೇ ನಾನು ಅವನು ತಪ್ಪಿಸಿಕೊಂಡು ಹೋಗದ ಹಾಗೆ ಬಾತ್ ರೂಮನ್ನು ಹೊರಗಿನಿಂದ ಬೋಲ್ಟ್ ಮಾಡಿದೆ ಮತ್ತು ಪೊಲೀಸ್ ಎಮರ್ಜೆನ್ಸಿ ನಂಬರ್ ಗೆ ಫೋನ್ ಮಾಡಿದೆ. ಮೈಯೆಲ್ಲ ರಕ್ತಸಿಕ್ತವಾಗಿದ್ದ ಅಮ್ಮನನ್ನು ನೋಡಿ ಭಯಭೀತನಾಗಿದ್ದೆ. ಅಲ್ಲಿಂದ ಓಡಿಹೋಗುವಷ್ಟು ಭಯವಾಗಿತ್ತು. ಆದರೆ, ಕೊಲೆಗಡುಕನೊಂದಿಗೆ ಅಮ್ಮನನ್ನು ಆ ಸ್ಥಿತಿಯಲ್ಲಿ ಬಿಟ್ಟು ಹೋಗುವುದು ಸಾಧ್ಯವಿರಲಿಲ್ಲ,’ ಅಂತ ಡೇವ್ ಹೇಳಿದ್ದಾರೆ.
ಡೇವ್ ತಂದೆಯಿಂದ ಡಿವೋರ್ಸ್ ತೆಗೆದುಕೊಂಡ ನಂತರ ವ್ಹೀಲರ್ ನನ್ನು ಮದುವೆಯಾಗಿದ್ದ ಕರೆನ್ ಎರಡನೇ ಗಂಡನೊಂದಿಗೆ ಸಂತೋಷವಾಗೇ ಇದ್ದರು. ಸಂಸ್ಥೆಯೊಂದರಲ್ಲಿ ಒಂದರಲ್ಲಿ ಕೇರರ್ ಆಗಿ ಕೆಲಸ ಮಾಡುತ್ತಿದ್ದ ಆಕೆ ಬಹಳ ಶ್ರಮಜೀವಿಯಾಗಿದ್ದರು. ಗಂಡನೊಂದಿಗೆ ಒರ್ಲ್ಯಾಂಡೋ ಪ್ರವಾಸಕ್ಕೆ ತೆರಳಲು ಹಣ ಕೂಡಿಡುತ್ತಿದ್ದರು.
ಆದರೆ ವ್ಹೀಲರ್ ಬದುಕು ನಿಗೂಢವಾಗಿತ್ತು. ಅವನು ಕೆಲಸಕ್ಕೆ ಸರಿಯಾಗಿ ಹೋಗುತ್ತಿರಲಿಲ್ಲ ಮತ್ತು ಮೈ ತುಂಬಾ ಸಾಲ ಮಾಡಿಕೊಂಡಿದ್ದ. ಸುಮಾರು 15ಲಕ್ಷ ರೂ.ಗಳಷ್ಟು ಸಾಲ ಅವನು ತೀರಿಸಬೇಕಿತ್ತು. ಸಾಲಗಾರರು ಒಂದೇ ಸಮ ಕಾಟ ಕೊಡುತ್ತಿದ್ದರು ಮತ್ತು ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದರು. ಕರೆನ್ ಬಳಿ ಹಣವಿದ್ದ ಸಂಗತಿ ಅವನಿಗೆ ಗೊತ್ತಿತ್ತು. ಹಾಗಾಗೇ ಅವರನ್ನು ಕೊಂದು ಹಣವನ್ನೆಲ್ಲ ಬಾಚಿಕೊಂಡು ಸಾಲ ಮುಕ್ತನಾಗುವ ಯೋಚನೆ ಮಾಡಿಕೊಂಡಿದ್ದ.
ಆಗಷ್ಟೇ ನೈಟ್ ಶಿಫ್ಟ್ ಮುಗಿಸಿ ದಣಿದು ಮನೆಗೆ ಬಂದು ಸೋಫಾದ ಮೇಲೆ ನಿದ್ರಿಸುತ್ತಿದ್ದ ಕರೆನ್ ಮೇಲೆ ವ್ಹೀಲರ್ ದೊಣ್ಣೆಯಿಂದ ಹಲ್ಲೆ ಮಾಡಿ, ನಂತರ ಚಾಕುವೊಂದರಿಂದ ಹೊಟ್ಟೆಗೆ, ಬೆನ್ನಿಗೆ ಮತ್ತು ಕತ್ತಿಗೆ ತಿವಿದ.
‘ಅವನು ಅದ್ಹೇಗೆ ತನ್ನಲ್ಲಿದ್ದ ಹಣವನ್ನು ಖರ್ಚು ಮಾಡಿಕೊಂಡು ಸಾಲ ನೀಡುವ ಹಣಕಾಸು ಸಂಸ್ಥೆಗಳಲ್ಲಿ ಸಾಲ ಮಾಡಿಕೊಂಡಿದ್ದ ಅನ್ನೋದನ್ನು ಪೊಲೀಸರಿಗೆ ಅರ್ಥಮಾಡಿಕೊಳ್ಳುವುದು ಕಷ್ಟವಾಗಿತ್ತು. ಆದರೆ ಅಮ್ಮನ ಮರಣದ ನಂತರ ಆಕೆಯ ಫ್ಲ್ಯಾಟ್ ನಲ್ಲಿ ಹೆಂಗಸರ ಒಳ ಉಡುಪುಗಳು ನನಗೆ ಸಿಕ್ಕವು, ಅವು ಖಂಡಿತ ನನ್ನಮ್ಮನವಾಗಿರಲಿಲ್ಲ. ಅದರರ್ಥ ಅವನು ಬೇರೆ ಹೆಂಗಸರ ಮೇಲೆ ಹಣ ಖರ್ಚು ಮಾಡುತ್ತಿದ್ದ,’ ಎಂದು ಡೇವ್ ಹೇಳಿದ್ದಾರೆ.
‘ಅವನ ಬುಕ್ ಶೆಲ್ಫ್ ನಲ್ಲಿ ಕಾನೂನು, ಅಪರಾಧ ಮತ್ತು ಹತ್ಯೆಗೆ ಸಂಬಂಧಿಸಿದ ಹಲವಾರು ಪುಸ್ತಕಗಳಿದ್ದವು,’ ಎಂದು ಡೇವ್ ಹೇಳಿದ್ದಾರೆ.
ಹಂತಕ ಮಾರ್ಕ್ ವ್ಹೀಲರ್ ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.