ಬೆಳಗಾವಿ: ಗಲಾಟೆ ಬಿಡಿಸಲು ಹೋದ ಯುವಕನನ್ನು ಬರ್ಬರವಾಗಿ ಕೊಲೆ (Murder) ಮಾಡಿರುವ ಘಟನೆ ಬೆಳಗಾವಿ (Belagavi) ಹೊರವಲಯದ ಮಚ್ಚೆ ಬಳಿಯ ಯಳ್ಳೂರು ರಸ್ತೆಯಲ್ಲಿ ನಡೆದಿದೆ. ಪ್ರತೀಕ್ ಲೋಹಾರ್(21) ಮೃತ ದುರ್ದೈವಿ. ಪ್ರತೀಕ್ ಲೋಹಾರ್ ಮಜಗಾಂವ್ ಗ್ರಾಮದ ನಿವಾಸಿಯಾಗಿದ್ದಾನೆ. ಈತನ ಸ್ನೇಹಿತನೊಂದಿಗೆ ಕಲೆ ಯುವಕರು ಜಗಳವಾಡುತ್ತಿದ್ದರು. ಈ ವೇಳೆ ಪ್ರತೀಕ ಜಗಳ ಬಿಡಿಸಲು ಹೋದಾಗ, ದುಷ್ಕರ್ಮಿಗಳು ಬೈಕ್ನಲ್ಲಿದ್ದ ಸ್ಕ್ರೂಡ್ರೈವರ್ ತೆಗೆದು ಎದೆಗೆ ಚುಚ್ಚಿ ಕೊಲೆ ಮಾಡಿದ್ದಾರೆ. ಇನ್ನು ಇದೇ ಗ್ಯಾಂಗ್ ಈ ಹಿಂದೆಯೂ ಪ್ರತೀಕ್ ಜತೆ ಜಗಳ ಮಾಡಿತ್ತು. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ದೇವನಹಳ್ಳಿ: ಕ್ಷುಲ್ಲಕ ಕಾರಣಕ್ಕೆ ಮಚ್ಚಿನಿಂದ ಪತ್ನಿಯ ಕೈಗಳನ್ನು ಕತ್ತರಿಸಿ ಪತಿ ಪೈಶಾಚಿಕ ಕೃತ್ಯ ಮೆರೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಗೊಬ್ಬರಗುಂಟೆ ಗ್ರಾಮದಲ್ಲಿ ನಡೆದಿದೆ. ಪತ್ನಿ ಚಂದ್ರಕಲಾ(45) ಕೈಗಳನ್ನು ಕತ್ತರಿಸಿ ಪತಿ ಮುನಿಕೃಷ್ಣಪ್ಪ ಪೈಶಾಚಿಕ ಕೃತ್ಯ ಎಸಗಿದ್ದಾನೆ.
ಚಂದ್ರಕಲಾ ಮತ್ತು ಮುನಿಕೃಷ್ಣಪ್ಪ ಕಳೆದ 20 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಮೂವರು ಮಕ್ಕಳಿದ್ದರೂ ಮನೆಯಲ್ಲಿ ಪ್ರತಿನಿತ್ಯವೂ ಜಗಳ ನಡೆಯುತ್ತಿತ್ತು. ಜಗಳದಿಂದ ಬೇಸತ್ತು ಮೂರು ತಿಂಗಳ ಹಿಂದೆ ಗಂಡನನ್ನು ಬಿಟ್ಟು ಮಕ್ಕಳ ಜೊತೆ ಚಂದ್ರಕಲಾ ಬಾಡಿಗೆ ಮನೆಯಲ್ಲಿದ್ದರು. ತನ್ನ ಮಗಳು ಹಾಗೂ ಚಂದ್ರಕಲಾ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಿ ಜೀವನ ಸಾಗಿಸುತ್ತಿದ್ದರು. ನಿನ್ನೆ ಸಂಜೆ(ಮಾರ್ಚ್ 06) ಕೆಲಸಕ್ಕೆ ಹೋಗಿ ವಾಪಸ್ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಗಂಡ ಅಟ್ಟಹಾಸ ಮೆರೆದಿದ್ದಾನೆ. ಮಚ್ಚಿನಿಂದ ಚಂದ್ರಕಲಾಳ ಎರಡು ಕೈಗಳನ್ನು ಕತ್ತರಿಸಿದ್ದಾನೆ. ಹಲ್ಲೆಗೊಳಗಾದ ಚಂದ್ರಕಲಾಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ತುಮಕೂರು ತಾಲೂಕಿನ ಜನಪನಹಳ್ಳಿ ತಾಂಡಾದಲ್ಲಿ ಆಸ್ತಿ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿಯಾಗಿದೆ. 1.24 ಎಕರೆ ಜಮೀನು ಹಂಚಿಕೆ ವಿಚಾರವಾಗಿ ಕುಟುಂಬಸ್ಥರು ಗಲಾಟೆ ಮಾಡಿದ್ದು ಹನುಮಂತರಾಯಪ್ಪ, ಲೋಕೇಶ್, ಭಾಗ್ಯ, ಸುಷ್ಮಾ ಎಂಬುವರಿಂದ ರತ್ನಮ್ಮ, ಪುಟ್ಟಮ್ಮ ಎಂಬುವರ ಮೇಲೆ ಬಿಯರ್ ಬಾಟಲ್ನಿಂದ ಹಲ್ಲೆ ಮಾಡಲಾಗಿದೆ. ಪುಟ್ಟಮ್ಮ ಸ್ಥಿತಿ ಗಂಭೀರವಾಗಿದ್ದು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:06 am, Wed, 8 March 23