ಬೆಂಗಳೂರು ಗ್ರಾಮಾಂತರ, ಜು.20: ಮೃತ ಮಗನ ಹೆಸರು ಚಾಂದ್ ಪಾಷ, ಆರೋಪಿ ತಾಯಿ ಸೂಫಿಯಾಭೀ. ಇವರದ್ದು ಬೆಂಗಳೂರು ಉತ್ತರ ತಾಲೂಕು ಸೋಲದೇವನಹಳ್ಳಿ(Soladevanahalli) ಸಮೀಪದ ಚಿಕ್ಕಬಾಣವಾರ ಗ್ರಾಮ. 40 ವರ್ಷ ವಯಸ್ಸಿನ ಚಾಂದ್ ಪಾಷ ಕುಡಿತದ ದಾಸನಾಗಿದ್ದ ಕಾರಣ ಆತನನ್ನು ಹೆದರಿಸಲು ತಾಯಿ ಪ್ಲಾನ್ ಮಾಡಿದ್ದಳು. ಅದರಂತೆ ಸ್ಟವ್ ನಿಂದ ಸೀಮೆಎಣ್ಣೆಯನ್ನ ತಗೆದು ಮಗನ ಮೇಲೆ ಸುರಿದು ಸಾಯಿಸುವುದಾಗಿ ಹೆದರಿಸಿದ್ದಳು. ತಾಯಿಗೆ ಕೊಲ್ಲುವ ಉದ್ದೇಶವಿರಲಿಲ್ಲ. ಆದರೆ, ಮಗನನ್ನು ಹೆದರಿಸುವ ಬರದಲ್ಲಿ ಬೆಂಕಿ ಕಡ್ಡಿಯನ್ನು ಹಚ್ಚಿದ್ದಳು. ಅಷ್ಟೇ ಆ ಬೆಂಕಿ ಮಗ ಚಾಂದ್ ಪಾಷನಿಗೆ ತಗುಲಿ, ಕ್ಷಣಾರ್ಧದಲ್ಲಿ ಚಾಂದ್ ಪಾಷ ಸುಟ್ಟು ಕರಕಲಾಗಿದ್ದ.
ಹೌದು ಎಷ್ಟೇ ಆಗಲಿ ಹೆತ್ತವರಿಗೆ ಹೆಗ್ಗಣವೇ ಮುದ್ದು ಎನ್ನುವಂತೆ ಈ ಮೃತ ಮಗನ ಮೇಲೆ ತಾಯಿ ಸೂಫಿಯಾಭಿಗೆ ಎಲ್ಲಿಲ್ಲದ ಪ್ರೀತಿ. ಕುಡಿತದ ದಾಸನಾಗಿದ್ದ ಚಾಂದ್ ಪಾಷ ಕಳೆದ ಹತ್ತು ವರ್ಷಗಳ ಹಿಂದೆಯೇ ತನ್ನ ಹೆಂಡತಿಯನ್ನ ತೊರೆದು ಬಂದು ತಾಯಿ ಜೊತೆ ಸೇರಿಕೊಂಡಿದ್ದ. ನಿತ್ಯ ಕುಡಿಯುವುದನ್ನ ಅಭ್ಯಾಸ ಮಾಡಿಕೊಂಡಿದ್ದ ಈತ ಕುಡಿದು ಅಲ್ಲಿ ಇಲ್ಲಿ ಬೀಳುತ್ತಿದ್ದನಂತೆ. ಇದನ್ನ ಕಂಡ ಜನರು ಸೂಫಿಯಾಭೀಗೆ ವಿಚಾರ ತಿಳಿಸಿದ ಬಳಿಕ ಎಷ್ಟೆ ಆಗಲಿ ತಾಯಿ ಕರುಳು, ಹೋಗಿ ಅವನನ್ನ ಮನೆಗೆ ಕರೆ ತರುತಿದ್ದಳಂತೆ. ಅಷ್ಟೆ ಅಲ್ಲ ಅದೆಷ್ಟೋ ಭಾರಿ ಬೈದು ಬುದ್ದಿ ಹೇಳಿದ್ದಳಂತೆ. ಒಂದೊತ್ತಿನ ಊಟಕ್ಕೂ ಸಮಸ್ಯೆ ಇರುವಾಗ ಮಗನನ್ನೂ ಸಾಕಿಕೊಂಡು ಕಾಲ ಕಳೆಯುತ್ತಿದ್ದಾಗ ಮಗನ ಕುಡಿತ ಜಾಸ್ತಿಯಾಗಿತ್ತಂತೆ. ಹೇಗಾದರೂ ಮಾಡಿ ಕುಡಿತ ಬಿಡಿಸಬೇಕೆಂದು ಹೆದರಿಸಲು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚುವ ನಾಟಕವಾಡುವ ವೇಳೆ ಬೆಂಕಿ ಆಚಾನಕ್ ಹೊತ್ತಿಕೊಂಡು ಚಾಂದ್ ಪಾಷ್ ಧಗಧಗಿಸಿ ಹೋಗಿದ್ದಾನೆ.
ಇದನ್ನೂ ಓದಿ:ಮೊರಾರ್ಜಿ ದೇಸಾಯಿ ವಸತಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಸಾವು: ಅನುಮಾನ ವ್ಯಕ್ತಪಡಿಸಿ ದೂರು ನೀಡಿದ ಪೋಷಕರು
ಸದ್ಯ ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ವೃದ್ಧ ತಾಯಿ ಸೂಫಿಯಾಳನ್ನ ವಶಕ್ಕೆ ಪಡೆದು ತನಿಖೆಗೆ ನಡೆಸಿ, ಜೈಲಿಗಟ್ಟಿದ್ದಾರೆ. ಮಗನನ್ನು ಹೆದರಿಸಲು ಹೋಗಿ ಮಗನನ್ನು ಕಳೆದುಕೊಂಡು ತಾಯಿಯು ಜೈಲು ಪಾಲಾಗಿರೋದು ದುರಂತವೇ ಸರಿ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:29 am, Thu, 20 July 23