ಪಾದಚಾರಿಗಳ ಮೇಲೆ ಹರಿದ ಕಾರು: ಓರ್ವ ದುರ್ಮರಣ, ನಾಲ್ವರ ಸ್ಥಿತಿ ಗಂಭೀರ, ರಾಜಧಾನಿಯಲ್ಲಿ ತಪ್ಪಿದ ಭಾರಿ ಅನಾಹುತ!

ಪಾದಾಚಾರಿಗಳ ಮೇಲೆ ಕಾರು ಹರಿದು ಹೋಗಿ ಓರ್ವ ದುರ್ಮರಣ ಹೊಂದಿದ ಘಟನೆ ನಗರದ ಕತ್ರಿಗುಪ್ಪೆಯಲ್ಲಿ ನಡೆದಿದೆ. ಘಟನೆ ಸಂಬಂಧ ಕಾರು ಚಾಲಕ ಸಹಾಯಕ ನಿರ್ದೇಶಕ ಮುಖೇಶ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಾದಚಾರಿಗಳ ಮೇಲೆ ಹರಿದ ಕಾರು: ಓರ್ವ ದುರ್ಮರಣ, ನಾಲ್ವರ ಸ್ಥಿತಿ ಗಂಭೀರ, ರಾಜಧಾನಿಯಲ್ಲಿ ತಪ್ಪಿದ ಭಾರಿ ಅನಾಹುತ!
ಅಪಘಾತದಲ್ಲಿ ಜಖಂಗೊಂಡ ಕಾರುಗಳು
Edited By:

Updated on: May 20, 2022 | 5:02 PM

ಬೆಂಗಳೂರು: ಪಾದಾಚಾರಿ (pedestrian)ಗಳ ಮೇಲೆ ಕಾರು ಹರಿದು ಹೋಗಿ ಓರ್ವ ದುರ್ಮರಣ ಹೊಂದಿದ ಘಟನೆ ನಗರದ ಕತ್ರಿಗುಪ್ಪೆಯಲ್ಲಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಪಾದಾಚಾರಿಗಳ ಮೇಲೆ ಹರಿದು ಹೋಗಿದ್ದಲ್ಲದೆ, ಮುಂದೆ ನಿಲ್ಲಿಸಿದ್ದ ಕಾರು ಹಾಗೂ ಬೈಕ್​ಗೆ ಡಿಕ್ಕಿ ಹೊಡೆದಿದೆ. ಕೂಡಲೇ ನಾಲ್ವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅಪಘಾತ (Accident)ದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸುರೇಶ್ (28) ಎಂಬ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಸಚಿನ್, ಶಿವರಾಜು, ಶೈಲೇಂದ್ರ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ.

ಗಾಯಾಳುಗಳಾದ ಶಿವರಾಜ್ ಮತ್ತು ಸಚಿನ್ ಮೃತ ಸುರೇಶ್​ನ ಸ್ನೇಹಿತರಾಗಿದ್ದು, ಮೂಲತಃ ಹೊಸನಗರ ತಾಲೂಕಿನವರಾಗಿದ್ದಾರೆ. ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದರು. ಅದರಂತೆ ಸುರೇಶ್, ಶಿವರಾಜ್, ಸಚಿನ್ ಕೆಲಸಕ್ಕೆ ಹೋಗಲೆಂದು ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡಿರುವ ಮತ್ತೋರ್ವ ಯುವಕ ಶೈಲೇಂದ್ರ, ಅಂತಿಮ ವರ್ಷದ ಬಿಎಸ್​ಸಿ ವಿದ್ಯಾರ್ಥಿಯಾಗಿದ್ದು, ವಾಕಿಂಗ್​ ಮಾಡಲು ಮನೆಯಿಂದ ಹೊರಬಂದಿದ್ದನು.

ಕಾರು ಚಾಲಕನ ನಿಯಂತ್ರಣ ತಪ್ಪಿ ಉದ್ಭವ್ ಆಸ್ಪತ್ರೆಯ ಎದುರು ಈ ದುರ್ಘಟನೆ ನಡೆದಿದ್ದು,  ಘಟನಾ ಸ್ಥಳಕ್ಕೆ ಬನಶಂಕರಿ ಸಂಚಾರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಘಟನೆ ಸಂಬಂಧ ಕಾರು ಸಹಿತ ಕಾರು ಚಾಲಕ ಮು​ಖೇಶ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳಿಗ್ಗೆ 7.20ಗಂಟೆ ಸಮಯದಲ್ಲಿ ನಂಬರ್ KA-51-MK5416 ನಂಬರ್​ನ ಕಾರನ್ನು ಕತ್ತರಗುಪ್ಪೆ ಜಂಕ್ಷನ್ ಕಡೆಯಿಂದ ಇಟ್ಟಮಡು ಜಂಕ್ಷನ್ ಕಡೆ ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಲಾಯಿಸಿಕೊಂಡು ಬರಲಾಗಿದೆ. ಉದ್ಭವ ಆಸ್ಪತ್ರೆ ಬಳಿ ಇರುವ ಚಂದನ್ ಮೋಟಾರ್ ದ್ವಿಚಕ್ರ ವಾಹನ ಶೋರೂಂ ಬಳಿ ನಿಯಂತ್ರಣ ತಪ್ಪಿ ಪಾದಾಚಾರಿಗಳ ಮೇಲೆ ಹರಿದುಹೋಗಿದೆ. ಘಟನೆಯಲ್ಲಿ ಒಂದು ಕಾರು ಹಾಗೂ ಎರಡು ದ್ವಿಚಕ್ರ ವಾಹನಗಳು ಜಖಂಗೊಂಡಿದೆ.

ಇದನ್ನೂ ಓದಿ: ಅಪರಿಚಿತ ವಾಹನ ಡಿಕ್ಕಿ, ಜೈಲ್ ವಾರ್ಡರ್ ಆಗಿದ್ದ ನಿವೃತ್ತ ಯೋಧ ಸಾವು: ಕಾರು ಅಪಘಾತದಲ್ಲಿ ಗಾಯಾಳು ಸಾವು, ಅಂಗಾಂಗ ದಾನ

ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ

ಘಟನೆ ಸಂಬಂಧ ಮಾಹಿತಿ ನೀಡಿದ ಪಶ್ಚಿಮ ಸಂಚಾರಿ ವಿಭಾಗದ ಡಿಸಿಪಿ ಕುಲದೀಪ್ ಜೈನ್, ಬೆಳಗ್ಗೆ ನಾಲ್ವರು ಪಾದಚಾರಿಗಳಿಗೆ ಕತ್ರಿಗುಪ್ಪೆ ಜಂಕ್ಷನ್ ಬಳಿ ಕಾರು ಡಿಕ್ಕಿ ಹೊಡೆದಿದೆ. ಸುರೇಶ್ ಎಂಬಾತ ಮೃತಪಟ್ಟಿದ್ದು, ಮೂವರಿಗೆ ಗಾಯಗಳಾಗಿವೆ. ಅಲ್ಲದೆ ಒಂದು ಬೈಕ್, ಕಾರಿಗೂ ಡಿಕ್ಕಿ ಹೊಡೆದಿದೆ. ಕಾರು ಚಾಲಕ ಮುಖೇಶ್​ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆಯಲಾಗಿದೆ. ಕಿರುತೆರೆಯ ಸಹಾಯಕ‌ ನಿರ್ದೇಶಕನಾಗಿ ಕೆಲಸ ಮಾಡುತ್ತಿರುವ ಮುಖೇಶ್​​​​, ನಿರ್ಲಕ್ಷ್ಯದಿಂದ ಹಾಗೂ ವೇಗವಾಗಿ ಚಾಲನೆ ನಡೆಸಿರುವುದು ಅಪಘಾತಕ್ಕೆ ಕಾರಣ ಎಂದು ಹೇಳಿದರು.

ಅಪಘಾತವಾದ ಕಾರು ಟಿ.ನಾರಾಯಣ ಎಂಬುವವರ ಹೆಸರಿನಲ್ಲಿ ಇದ್ದು, ಇನ್ಶುರೆನ್ಸ್, ಡಿಎಲ್​ ಎಲ್ಲವೂ ಸರಿಯಾಗಿ ಇದೆ. ಸಹಾಯಕ ನಿರ್ದೇಶಕರಾಗಿರುವ ಮುಖೇಶ್, ಮೂಲತಃ ಶಿವಮೊಗ್ಗದವರಾಗಿದ್ದಾರೆ. ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ಅವರ ಜೊತೆಗೆ ಕೆಲಸ ಮಾಡುತ್ತಿದ್ದಾರೆ. ಬೆಳಗ್ಗೆ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ಹಾಗೂ ಮುಖೇಶ್ ಒಟ್ಟಿಗೆ ಬರುತ್ತಿದ್ದಾಗ ಈ ಘಟನೆ ನಡೆದಿದೆ.

ರಾಜಧಾನಿಯಲ್ಲಿ ತಪ್ಪಿದ ಭಾರೀ ಅನಾಹುತ

ಬಿಎಂಟಿಸಿ ಬಸ್​ವೊಂದು ಆಕ್ಸೆಲ್ ರಾಡ್ ಕಟ್ ಆಗಿ ಅಡ್ಡಾದಿಡ್ಡಿಯಾಗಿ ಸಂಚರಿಸಿದ ಘಟನೆಯೊಂದು ನಡೆದಿದೆ. ಮೆಜೆಸ್ಟಿಕ್​ನಿಂದ ಪೀಣ್ಯ ಕಡೆಗೆ ಹೊರಟಿದ್ದ KA 01 F 4659 ನಂಬರ್​ನ BMTC ಬಸ್​ ನಗರದ ಓಕಳಿಪುರಂ ಅಂಡರ್ ಪಾಸ್ ಕೆಳಗಡೆ ತಲುಪುತ್ತಿದ್ದಂತೆ ಆಕ್ಸೆಲ್ ರಾಡ್ ಕಟ್ ಆಗಿದೆ. ಪರಿಣಾಮವಾಗಿ, ಪ್ರಯಾಣಿಕರಿಂದ ಸೀಟುಗಳು ಫುಲ್ ಆಗಿದ್ದ ಬಸ್ ಅಡ್ಡಾದಿಡ್ಡಿಯಾಗಿ ಹೋಗಿ ಡಿವೈಡರ್ ಮೇಲೆ ಹತ್ತಿ ನಿಂತಿತು. ಆ ಮೂಲಕ ಸಂಭವಿಸಬಹುದಾದ ಭಾರಿ ಅನಾಹುತವೊಂದು ತಪ್ಪಿದಂತಾಯಿತು. ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ. ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಹಾಗೂ ಬಿಎಂಟಿಸಿ ಇಂಜಿನಿಯರ್​ಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ

Published On - 3:43 pm, Fri, 20 May 22