ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಅರೆಸ್ಟ್: ತಂದೆ ಮೇಲೆ ಹಲ್ಲೆ ನಡೆಸಿ ಆತ್ಮಹತ್ಯೆ ಮಾಡಿಕೊಂಡ ಮಗ!

ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಅರೆಸ್ಟ್: ತಂದೆ ಮೇಲೆ ಹಲ್ಲೆ ನಡೆಸಿ ಆತ್ಮಹತ್ಯೆ ಮಾಡಿಕೊಂಡ ಮಗ!
ಸಾಂಕೇತಿಕ ಚಿತ್ರ

ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರು ವಿಭಾಗದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 2ಲಕ್ಷ ಮೌಲ್ಯದ ಮಾದಕವಸ್ತುವನ್ನು ವಶಕ್ಕೆ ಪಡೆಯಲಾಗಿದೆ.

TV9kannada Web Team

| Edited By: Rakesh Nayak

May 20, 2022 | 1:07 PM

ಬೆಂಗಳೂರು: ವಿದ್ಯಾರ್ಥಿಗಳಿಗೆ ಡ್ರಗ್ಸ್(Drugs) ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ(CCB) ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರದಲ್ಲಿ ಮಾದಕ ವ್ಯಸನಗಳನ್ನು ಮಾರಾಟ ಮಾಡುವ ಜಾಲ ಬೆಳೆಯುತ್ತಿದ್ದು, ಕಾಲೇಜು ವಿದ್ಯಾರ್ಥಿಗಳು, ನೌಕರರು, ಶ್ರೀಮಂತರನ್ನೇ ಟಾರ್ಗಟ್ ಮಾಡಿ ಡ್ರಗ್ಸ್ ಸಪ್ಲೈ ಮಾಡಲಾಗುತ್ತಿದೆ. ಅದರಂತೆ, ನಗರ ಪೊಲೀಸ್ ಇಲಾಖೆ ಡ್ರಗ್ ಜಾಲವನ್ನ ಮಟ್ಟಹಾಕಲು ಪಣತೊಟ್ಟಿದೆ. ನಗರದ ಜೀವನ್ ಭೀಮಾನಗರದ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಎಂಡಿಎಂಎ (MDMA) ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ತಿಳಿದ ಸಿಸಿಬಿ ಪೊಲೀಸರು, ಕಾರ್ಯಾಚರಣೆ ನಡೆಸಿ ಡ್ರಗ್ ಮಾರುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ, ಬಂಧಿತ ಆರೋಪಿಗಳಾದ ಸುಜಿತ್ ಕುಮಾರ್ ಹಾಗು ಪಿಯೂಷ್ ಕುಮಾರ್ ಎಂಬವರಿಂದ 2 ಲಕ್ಷ ರೂ. ಮೌಲ್ಯದ 1 ಕೆ.ಜಿ. 100 ಗ್ರಾಂ MDMA ಅನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಜೀವನ್ ಭಿಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತಂದೆಯನ್ನು ಹಲ್ಲೆಗೈದು ಆತ್ಮಹತ್ಯೆ ಮಾಡಿಕೊಂಡ ಪುತ್ರ

ತುಮಕೂರು: ತನ್ನನ್ನು ಹುಟ್ಟಿಸಿದ ತಂದೆ ಮೇಲೆಯೇ ಪುತ್ರನೊಬ್ಬ ಹಲ್ಲೆ ನಡೆಸಿ ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ತಾಲೂಕಿನ ಲಿಂಗನಹಳ್ಳಿಯಲ್ಲಿ ನಡೆದಿದೆ. ತಂದೆಯ ಜೊತೆ ಪುತ್ರ ಗೋವಿಂದ (28) ಜಗಳಕ್ಕೆ ನಿಂತು ಹಲ್ಲೆ ನಡೆಸುತ್ತಿದ್ದ. ಇದನ್ನು ನೋಡಿದ ಸ್ಥಳೀಯರು 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಕೋರಾ ಠಾನೆಯ ಇಬ್ಬರು ಇಬ್ಬಂದಿಗಳು (ಹೊಯ್ಸಳ ವಾಹನದ ಸಿಬ್ಬಂದಿ) ಹಲ್ಲೆಯನ್ನು ತಡೆಯಲು ಮುಂದಾಗಿದ್ದಾರೆ. ಈ ವೇಳೆ ಗೋವಿಂದ ಪೊಲೀಸರನ್ನು ಕಂಡ ಮನೆಯೊಳಗೆ ಓಡಿಹೋಗಿ ಸೀಮೆಎಣ್ಣೆ ಸುರಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ಪೋಷಕರು ನೀಡುತ್ತಿದ್ದ ಪಾಕೆಟ್​ ಮನಿಯಿಂದ ಡ್ರಗ್ಸ್ ದಂಧೆ: ಕೇರಳ ಮೂಲದ ಆರು ವಿದ್ಯಾರ್ಥಿಗಳ ಬಂಧನ

ಈ ವೇಳೆ ಕಿಟಕಿಯಿಂದ ನೋಡಿದ ಹೊಯ್ಸಳ ವಾಹನದ ಸಿಬ್ಬಂದಿಗಳಾದ ಗುಣಗಾನಪ್ಪ ಮತ್ತು ಗವಿರಂಗಯ್ಯ ಎಂಬವರ ಮುಖ ಹಾಗೂ ಕೈಗಳಿಗೆ ಗಾಯಗಳಾಗಿವೆ. ಘಟನೆಯಲ್ಲಿ ತಂದೆ ಮೇಲೆ ಹಲ್ಲೆ ನಡೆಸಿದ ಗೋವಿಂದ ಸಾವನ್ನಪ್ಪಿದ್ದು, ಗಾಯಗೊಂಡ ಹೊಯ್ಸಳ ವಾಹನದ ಸಿಬ್ಬಂದಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪ್ರಕರಣ ಸಂಬಂಧ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಖ್ಯಾತ ಖದೀಮ ಅನ್ಸರ್ ಅರೆಸ್ಟ್

ಬೆಂಗಳೂರು: ಮನೆಗಳಿಗೆ ಕಣ್ಣ ಹಾಕುತ್ತಿದ್ದ ಕುಖ್ಯಾತ ಮನೆಗಳ್ಳನನ್ನು ಬಂಧಿಸುವಲ್ಲಿ ನಗರದ ಬ್ಯಾಟರಾಯನಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅನ್ಸರ್ ಪಾಷಾ ಬಂಧಿತ ಆರೋಪಿಯಾಗಿದ್ದು, ಈತನಿಂದ 29 ಲಕ್ಷ ಮೌಲ್ಯದ 583 ಗ್ರಾಂ ಚಿನ್ನದ ಆಭರಣ ವಶಕ್ಕೆ ಪಡೆಯಲಾಗಿದೆ. ಹಲವರ ಮನೆಗಳಿಗೆ ನುಗ್ಗಿದ್ದ ಖದೀಮ ಅನ್ಸರ್ ಪಾಷಾ ವಸ್ತುಗಳನ್ನು ದೋಚಿ ಪರಾರಿಯಾಗಿದ್ದ. ಸದ್ಯ ಈತನ ಬಂಧನದಿಂದ ಹಲವು ಪ್ರಕರಣಗಳು ಬೆಳಕಿಗೆ ಬರಲಿದ್ದು, ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada