ಬೆಂಗಳೂರು: ಅಕ್ಟೋಬರ್ 21 ರಂದು ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಚಂದ್ರಶೇಖರ್ ಕೊಲೆ ಪ್ರಕರಣ ಸಂಬಂಧ ಪೊಲೀಸರು ಚಂದ್ರಶೇಖರ್ ಪತ್ನಿ ಶ್ವೇತಾ ಹಾಗೂ ಆಕೆಯ ಪ್ರಿಯತಮ ಸುರೇಶ್ ನನ್ನ ಬಂಧಿಸಿದ್ದಾರೆ. ಮನೆಯ ನಾಲ್ಕನೇ ಮಹಡಿಯ ಟೆರೇಸ್ ಮೇಲೆ ಶ್ವೇತಾ ಹಾಗೂ ಸುರೇಶ್ ಸೇರಿ ಚಂದ್ರಶೇಖರ್ ತಲೆಗೆ ಮರದ ದೊಣ್ಣೆಗಳಿಂದ ಹಲ್ಲೆ ಮಾಡಿ, ಮರ್ಮಾಂಗಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಘಟನೆ ಸಂಬಂಧ ಐಪಿಸಿ ಸೆಕ್ಷನ್ 302 ಅಡಿ ಕೊಲೆ ಆರೋಪದಡಿ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಮೃತ ಚಂದ್ರಶೇಖರ್ ಪತ್ನಿ ಶ್ವೇತಾಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆಕೆಯ ಪ್ರಿಯಕರ ಸುರೇಶ್ ನನ್ನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸ್ತಿದ್ದಾರೆ. ಪತಿ-ಪತ್ನಿ ನಡುವೆ ಬರೋಬ್ಬರಿ 18 ವರ್ಷ ವಯಸ್ಸಿನ ವ್ಯತ್ಯಾಸವಿತ್ತು. ಮೃತ ಚಂದ್ರಶೇಖರ್ ನ ಅಕ್ಕ ಸರೋಜಾಳ ಮಗಳೇ ಶ್ವೇತಾ. ಶ್ವೇತಾ ಹಿಂದೂಪುರದಲ್ಲಿ ಮೊದಲ ವರ್ಷ ಬಿ.ಎಸ್.ಸಿ ಓದುವ ವೇಳೆ ಸೋದರಮಾವ ಚಂದ್ರಶೇಖರ್ ನ ಜೊತೆ ಪೋಷಕರು ಮದುವೆ ಮಾಡಿಸಿದ್ರು. 2018 ರಲ್ಲಿ ಹಿಂದೂಪುರದ ಪೈಡೇಟಿ ಗ್ರಾಮದಲ್ಲಿ ಮದುವೆಯಾಗಿದ್ದ ಶ್ವೇತಾಳಿಗೆ ಆಗಿನ್ನು 18 ವರ್ಷವಾದ್ರೆ ಮೃತ ಪತಿ ಚಂದ್ರಶೇಖರ್ ಗೆ 36 ವರ್ಷ ವಯಸ್ಸು. ದಂಪತಿ ಮಧ್ಯೆ 18 ವರ್ಷಗಳ ವಯಸ್ಸಿನ ವ್ಯತ್ಯಾಸವಿದ್ರು ಹಿರಿಯರ ಒತ್ತಾಯಕ್ಕೆ ಇಬ್ಬರು ಒಲ್ಲದ ಮನಸ್ಸಿನಿಂದಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ಮದುವೆಯಾದ ನಂತರ ಪತ್ನಿಯನ್ನ ಹುಟ್ಟೂರಲ್ಲೇ ವಿದ್ಯಾಭ್ಯಾಸ ಮುಂದುವರೆಸಲು ಬಿಟ್ಟಿದ್ದ ಮೃತ ಚಂದ್ರಶೇಖರ್. ತನ್ನ ಅಕ್ಕನ ಜೊತೆ ಯಲಹಂಕದಲ್ಲಿ ಬಂದು ನೇಯ್ಗೆ ಕೆಲಸ ಮಾಡ್ತಿದ್ದ.
ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪತಿ: ಅನುಮಾನದ ಭೂತಕ್ಕೆ ಎರಡು ಜೀವ ಬಲಿ
2018 ರಲ್ಲಿ ಸೋದರಮಾವ ಚಂದ್ರಶೇಖರ್ ನನ್ನ ವಿವಾಹವಾಗಿದ್ದ ಶ್ವೇತ, ಮದುವೆಯ ನಂತರವೂ ತನ್ನದೇ ಊರಿನ ಕಾಲೇಜಿನ ಸೀನಿಯರ್ ಸುರೇಶ್ ಜೊತೆ ಲವ್ವಿಡವ್ವಿ ಮುಂದುವರೆಸಿದ್ಲು. ಅದೇ ಗ್ರಾಮದ ಶ್ವೇತಾಳಿಗೆ ಹತ್ತಿರದ ಸಂಬಂಧಿಯಾದ ಲೋಕೇಶ್ ಕೂಡ ಶ್ವೇತಾಳನ್ನ ಇಷ್ಟಪಡ್ತಿದ್ದ. ಆದ್ರೆ ಶ್ವೇತಾ ಇಷ್ಟಪಡ್ತಿದಿದ್ದು ಬೇರೆ ಸಮುದಾಯದ ಸುರೇಶ್ ನನ್ನ. ಸಂಬಂಧದಲ್ಲಿ ಅಕ್ಕನ ಮಗಳಾದ ಶ್ವೇತಾ ದೊಡ್ಡಪ್ಪನ ಮಗ ಚಂದ್ರಶೇಖರ್ ನನ್ನ ವರಿಸಿದ ನಂತರ ಲೋಕೇಶ್ ಸುಮ್ಮನಾಗಿದ್ದ.
ಶ್ವೇತಾಗೆ ಬಿ.ಎಸ್.ಸಿ ಮುಗಿಯುತ್ತಿದ್ದಂತೆ ಪತಿ ಚಂದ್ರಶೇಖರ್ ಕಳೆದ ಆರು ತಿಂಗಳ ಹಿಂದೆ ಯಲಹಂಕಕ್ಕೆ ಪತ್ನಿಯನ್ನ ಕರೆತಂದಿದ್ದ. ಅಲ್ಲಿಗೆ ಇಷ್ಟು ದಿನಗಳ ಕಾಲ ಒಂದೇ ಊರಿನಲ್ಲಿದ್ದ ಶ್ವೇತಾ ಹಾಗೂ ಸುರೇಶ್ ಲವ್ವಿಡವ್ವಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿತ್ತು. ಶ್ವೇತಾ ಯಲಹಂಕಗೆ ಬಂದ ಮೇಲೂ ಸುರೇಶ್ ಬೇರೆ ಬೇರೆ ನಂಬರ್ ಗಳಿಂದ ಶ್ವೇತಾ ಬೆನ್ನು ಬೀಳಲು ಶುರು ಮಾಡಿದ್ದ. ನನ್ನ ಗಂಡನ ಮುಂದೆ ಮಾತಾಡಲು ಆಗ್ತಿಲ್ಲ. ಏನಾದ್ರು ಮಾಡು ಎಂದು ಪ್ರಿಯಕರ ಸುರೇಶನಿಗೆ ತಿಳಿಸಿದ್ಲು. ಕಳೆದ ಅಕ್ಟೋಬರ್ 21ರ ಬೆಳಗ್ಗೆ ಪತಿ ಚಂದ್ರಶೇಖರ್ ಹಾಗೂ ಪತ್ನಿ ಶ್ವೇತಾಳಿಗೆ ಸಿಮ್ ಬದಲಿಸುವ ವಿಚಾರಕ್ಕೆ ಜಗಳವಾಗಿದೆ.
ಗಂಡ ಜಗಳ ಮಾಡ್ತಿದ್ದಾನೆ ಆಗಲ್ಲ ಏನಾದ್ರು ಮಾಡು ಅಂತ ಪ್ರಿಯಕರ ಸುರೇಶ್ ಗೆ ತಿಳಿಸಿದ್ದಾಳೆ. ಅದರಂತೆ ಚಂದ್ರಶೇಖರ್ ನನ್ನ ಮುಗಿಸಲೇಬೆಕೆಂದು ಡಿಸೈಡ್ ಮಾಡಿದ ಸುರೇಶ್ ಅಕ್ಟೋಬರ್ 21 ರ ಮಧ್ಯಾಹ್ನದ ವೇಳೆಗೆ ಹಿಂದೂಪುರದಿಂದ ಯಲಹಂಕಗೆ ಬಂದಿದ್ದಾನೆ. ಗಂಡನ ಕೊಲೆ ಮಾಡಲು ಮೊದಲೇ ಟೆರೇಸ್ ಮೇಲೆ ಹೆಂಡತಿ ಮರದ ಕಟ್ಟಿಗೆ ರೆಡಿಮಾಡಿ ಇಟ್ಟಿದ್ದಳು. ಎಂದಿನಂತೆ ಚಂದ್ರಶೇಖರ್ ಕಳೆದ ಅಕ್ಟೋಬರ್ 21 ರ ಸಂಜೆ 7:30 ರ ವೇಳೆಗೆ ಮನೆಗೆ ಬಂದಿದ್ದ. ಚಂದ್ರಶೇಖರ್ ಸಮಯಕ್ಕೆ ಶ್ವೇತಾ ಲವ್ವರ್ ಸುರೇಶನಿಗೆ ವಾಟ್ಸಪ್ ಕಾಲ್ ಮಾಡಿ ತನ್ನ ಮನೆಯ ಲೊಕೇಶನ್ ಶೇರ್ ಮಾಡಿದ್ದಳು. ಸಂಜೆ ಮನೆಗೆ ಬಂದಿದ್ದ ಚಂದ್ರಶೇಖರ್ ಪತ್ನಿಯ ಮೊಬೈಲ್ ಪಡೆದು ಸಿಮ್ ಚೇಂಜ್ ಮಾಡು ಅಂತಿದ್ದಂತೆ ಪತಿ ಪತ್ನಿಗೆ ಜಗಳ ಶುರುವಾಗಿದೆ. ಅಪ್ಪ ಅಮ್ಮ ಮನೆಗೆ ಬರುವ ಸಮಯದಲ್ಲಿ ಮನೆ ಟೆರೇಸ್ ಮೇಲೆ ಮಾತಾಡೋಣ ಅಂತ ಚಂದ್ರಶೇಖರ್ ನನ್ನ ಶ್ವೇತಾ ಟೆರೇಸ್ ಗೆ ಕರೆದೊಯ್ದಿದ್ದಾಳೆ.
ಈ ವೇಳೆ ಚಂದ್ರಶೇಖರ್ ಗೆ ಗೊತ್ತಾಗದಂತೆ ವಾಟ್ಸಪ್ನಲ್ಲಿ ಮನೆಯ ಟೆರೇಸ್ ಗೆ ಬರುವಂತೆ ಸುರೇಶ್ ಗೆ ತಿಳಿಸಿದ್ದಾಳೆ. ಸಂಜೆಯಿಂದಲೇ ಚಂದ್ರಶೇಖರ್ ಮನೆ ಬಳಿ ಹೊಂಚುಹಾಕಿ ಕಾದಿದ್ದ ಸುರೇಶ್, ಚಂದ್ರಶೇಖರ್ ಮನೆಯ ಟೆರೇಸ್ ಗೆ ಎಂಟ್ರಿಕೊಟ್ಟು ಕಾದುಕುಳಿತಿದ್ದಾನೆ. ಚಂದ್ರಶೇಖರ್ ಟೆರೇಸ್ ಗೆ ಬರ್ತಿದ್ದಂತೆ ಏಕಾಏಕಿ ಡೆಡ್ಲಿ ಅಟ್ಯಾಕ್ ಮಾಡಿದ್ದಾನೆ. ಪತಿಯನ್ನ ಹೊಡೆಯಲಿಕ್ಕೆ ಶ್ವೇತಾ ಸುರೇಶನಿಗೆ ಮನೆಯಲ್ಲಿದ್ದ ದೊಣ್ಣೆಯನ್ನ ನೀಡಿದ್ದಲ್ಲದೇ, ಮನೆಯಿಂದ ಚಾಕು ತಂದು ಪ್ರಿಯಕರ ಸುರೇಶ್ ಗೆ ನೀಡಿ ಪತಿಯ ಮರ್ಮಾಂಗಕ್ಕೆ ಚಾಕುವಿನಿಂದ ಇರಿಯುವಂತೆ ಕುಮ್ಮಕ್ಕು ನೀಡಿ ಕೊಲ್ಲಿಸಿದ್ದಾಳೆ.
ಪತಿ ಹತ್ಯೆ ಬಳಿಕ ಆಕ್ಸಿಡೆಂಟ್ ಕಥೆ ಕಟ್ಟಿದ್ದ ಪತ್ನಿ ಶ್ವೇತಾ
ಚಂದ್ರಶೇಖರ್ ಕೊಲೆಯಾದ ನಂತರ ಪ್ರಿಯಕರ ಸುರೇಶ್ ಕೂಡಲೇ ಎಸ್ಕೇಪ್ ಆದ್ರೆ ಪತ್ನಿ ಶ್ವೇತಾ ತನಗೇನು ತಿಳಿಯದಂತೆ ಮನೆಯಲ್ಲೇ ಇರ್ತಾಳೆ. ನಂತರ ಕುಟುಂಬಸ್ಥರು ಬಂದಾಗ ಚಂದ್ರಶೇಖರ್ ಮನೆಗೆ ಬಂದಿಲ್ಲವೆಂದು ಡ್ರಾಮಾ ಮಾಡಿದ್ದಾಳೆ.ಎಲ್ಲೆಡೆ ಹುಡುಕಾಟ ಮಾಡಿದಾಗ ಚಂದ್ರಶೇಖರ್ ಮನೆಯ ಟೆರೇಸ್ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿರ್ತಾನೆ. ಈ ವೇಳೆ ಕುಟುಂಬಸ್ಥರ ಜೊತೆ ಯಲಹಂಕ ಸರ್ಕಾರಿ ಆಸ್ಪತ್ರೆಗೆ ಪತಿಯನ್ನ ಹೊತ್ತೊಯ್ದಿದ್ದ ಶ್ವೇತಾ ರಸ್ತೆಯಲ್ಲಿ ಅಪಘಾತ ಆಗಿದೆ ಎಂದುದ್ಲು. ಆದ್ರೆ ಅಷ್ಟೋತ್ತಿಗಾಗಲೇ ಗಂಭೀರ ಗಾಯಗೊಂಡಿದ್ದ ಚಂದ್ರು ಮೃತಪಟ್ಟಿದ್ದ. ಚಂದ್ರು ಮೃತದೇಹವನ್ನ ಗಮನಿಸಿದ್ದ ಯಲಹಂಕ ಸರ್ಕಾರಿ ಆಸ್ಪತ್ರೆ ವೈದ್ಯರು ಪೊಲೀಸರಿಗೆ ವ್ಯಕ್ತಿಯೋರ್ವ ಮಾರಕಾಸ್ತ್ರಗಳಿಂದ ಗಂಭೀರ ಹಲ್ಲೆಯಾಗಿ ಮೃತಪಟ್ಟಿದ್ದಾನೆಂದು ಪೋನ್ ಮಾಡಿ ವಿಷಯ ತಿಳಿಸಿದ್ದಾರೆ.
ಚಂದ್ರಶೇಖರ್ ಹತ್ಯೆಯ ನಂತರ ತನಗೇನೂ ಗೊತ್ತಿಲ್ಲ. ನಾನು ಮನೆಯಲ್ಲೇ ಇದ್ದ ಯಾರು ಬಂದು ಚಂದ್ರುವನ್ನ ಕೊಲೆ ಮಾಡಿದ್ರು ಅನ್ನೊದೇ ನನಗೆ ಗೊತ್ತಿಲ್ಲವೆಂದು ಶ್ವೇತಾ ಪೊಲೀಸರು ಮುಂದೆ ಮೊದಲಿಗೆ ನಾಟಕ ಮಾಡಲು ಶುರು ಮಾಡಿದ್ಲು. ಇದೇ ವೇಳೆ ವೈದ್ಯರು ಸಹ ಇದು ಆಕ್ಸಿಡೆಂಟ್ ಅಲ್ಲ ಡೆಡ್ಲಿ ಮರ್ಡರ್ ಅಂತ ಕನ್ಫರ್ಮ್ ಮಾಡಿದ್ರು. ತಡಮಾಡದ ಪೊಲೀಸರು ಕೂಡಲೇ ಶ್ವೇತಾಳನ್ನ ಮೊಬೈಲ್ ಸಮೇತ ವಶಕ್ಕೆ ಪಡೆದಿದ್ರು. ಪೊಲೀಸರು ಕಸ್ಟಡಿಗೆ ಪಡಿತಿದ್ದಂತೆ ಶ್ವೇತಾ ಹಾಗೂ ಅವಳ ಬಾಯ್ ಫ್ರೆಂಡ್ ಸುರೇಶ್ ನನ್ನ ಬಚಾವ್ ಮಾಡಿಕೊಳ್ಳಲಿಕ್ಕೆ ಮತ್ತೊಮ್ಮೆ ತನ್ನೂರಿನ ಲೋಕೇಶ್ ಮೇಲೆ ಸುಳ್ಳು ಆರೋಪ ಮಾಡಿದ್ಲು.
ಲೋಕೇಶ್ ಚಂದ್ರುಗೆ ಪದೇ ಪದೇ ಪೊನ್ ಮಾಡ್ತಿದ್ದ. ನಿನ್ನ ಹೆಂಡತಿ ಕೈಯ್ಯಲ್ಲಿ ಚಪ್ಪಲಿಯಲ್ಲಿ ಹೊಡೆಸಿದ್ಯಾ. ನಿಮ್ಮಿಬ್ಬರನ್ನ ಬಿಡಲ್ಲ ಅಂತಿದ್ದ ಲೋಕೇಶನೇ ಕೊಲೆ ಮಾಡಿದ್ದಾನೆಂದು ಪೊಲೀಸರ ತನಿಖೆಯ ಹಾದಿ ತಪ್ಪಿಸಿದ್ಲು. ಆದ್ರೆ ಕಳೆದೊಂದು ವರ್ಷದಿಂದ ಲೋಕೇಶ್ ಮೃತ ಚಂದ್ರುಗಾಗಲಿ ಶ್ವೇತಾಗಾಗಲಿ ಯಾವುದೇ ಪೊನ್ ಕರೆ ಮಾಡೇ ಇರಲಿಲ್ಲ.ತನಿಖೆ ವೇಳೆ ಪತಿಯನ್ನ ಕೊಲೆಮಾಡಿದ ದಿನ ಪ್ರಿಯಕರನಿಗೆ ಮಾಡಿದ್ಲು. 20ಕ್ಕೂ ಹೆಚ್ಚು ಬಾರಿ ವಾಟ್ಸಾಪ್ ಕಾಲ್ ಮಾಡಿದ್ದು ರಿವೀಲ್ ಆಗಿದೆ.
ಚಂದ್ರಶೇಖರ್ ಕೊಲೆಯಾದ ಅಕ್ಟೋಬರ್ 21 ರಂದು ಶ್ವೇತಾ ತನ್ನ ಪ್ರಿಯಕರ ಸುರೇಶ್ ಜೊತೆ 20 ಕ್ಕೂ ಹೆಚ್ಚು ಬಾರಿ ವಾಟ್ಸಪ್ ಕಾಲ್ ಮಾಡಿದ್ದು. ಪೊಲೀಸರು ಮೊಬೈಲ್ ವಶಕ್ಕೆ ಪಡೆಯುವ ವೇಳೆಗೆ ಶ್ವೇತಾ ಮೊಬೈಲ್ ನಲ್ಲಿದ್ದ ಎಲ್ಲಾ ಡಿಟೇಲ್ಸ್ ಡಿಲೀಟ್ ಮಾಡಿಬಿಟ್ಟಿದ್ಲು. ಶ್ವೇತಾ ಮೊಬೈಲ್ ಸಿಡಿಆರ್ ಹಾಕಿದ್ದ ಪೊಲೀಸರಿಗೆ ಸುರೇಶನ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದ್ರೆ ಮೊಬೈಲ್ ಡೇಟಾ ರಿಟ್ರಿವ್ ಮಾಡಿದಾಗ ಅಸಲಿಯತ್ತು ಹೊರಬಿದ್ದಿದ್ದು, ಸುರೇಶನ ಜೊತೆ 20 ಕ್ಕೂ ಹೆಚ್ಚು ಬಾರಿ ವಾಟ್ಸಪ್ ಕಾಲ್ ಮಾಡಿರೋದು ಗೊತ್ತಾಗಿತ್ತು. ವಾಟ್ಸಪ್ ನಲ್ಲೇ ಮನೆಯ ಲೊಕೇಶನ್ ಸುರೇಶನಿಗೆ ಶೇರ್ ಮಾಡಿದ್ಲು.
ಚಂದ್ರಶೇಖರ್ ಹತ್ಯೆಯ ನಂತರ ಶ್ವೇತಾಳ ಮೊಬೈಲ್ ವಶಕ್ಕೆ ಪಡೆದಿದ್ದ ಪೊಲೀಸರು ಮೊಬೈಲ್ ಸಿಡಿಆರ್ ಹಾಗೂ ಡೇಟಾ ರಿಟ್ರಿವ್ ಮಾಡಲಿಕ್ಕೆ ಮುಂದಾಗಿದ್ರು. ಚಂದ್ರು ಮೃತದೇಹದ ಅಂತ್ಯಕ್ರಿಯೆ ವೇಳೆ ಶ್ವೇತಾಳ ಸಿಮ್ ನ್ನ ವಾಟ್ಸಪ್ ಯೂಸ್ ಮಾಡಲಿಕ್ಕಾಗಿ ಬೇಸಿಕ್ ಸೆಟ್ ಗೆ ಸಿಮ್ ಹಾಕಿ ಕೊಟ್ಟಿದ್ರು. ಅದರಂತೆ ಕೊಲೆಯಾದ ಮಾರನೇ ದಿನ ಶ್ವೇತಾ ಪೊಲೀಸ್ ಕಸ್ಟಡಿಯಲ್ಲಿರೋದು ತಿಳಿಯದ ಕೊಲೆಗಾರ ಶ್ವೇತಾಳಿಗೆ ಕಡೆಗೂ ಫೊನ್ ಮಾಡಿದ್ದ. ಇಷ್ಟು ದಿನ ಯಾರಿಗೂ ಗೊತ್ತಾಗಬಾರದು ಕಾಲ್ ಲಿಸ್ಟ್ ಸಿಗಬಾರದೆಂದು ವಾಟ್ಸಪ್ ನಲ್ಲೇ ಫೋನ್ ಕಾಲ್ ಮಾಡ್ತಿದ್ದ ಆರೋಪಿ ನಾರ್ಮಲ್ ಕಾಲ್ ಮಾಡ್ಬಿಟ್ಟಿದ್ದ. ಪೊಲೀಸರ ವಶದಲ್ಲಿದ್ದ ಶ್ವೇತಾಗೆ ಸುರೇಶ್ ಫೋನ್ ಬರ್ತಿದ್ದಂತೆ ಅವನಿದ್ದ ಲೊಕೇಶನ್ ಪೆನುಗೊಂಡು ಅನ್ನೊದು ಕನ್ಫರ್ಮ್ ಆಗಿತ್ತು.
ಕೂಡಲೇ ಅಲರ್ಟ್ ಆದ ಪೊಲೀಸ್ರು ಸುರೇಶನನ್ನ ಪೆನುಗೊಂಡದಿಂದ ಲಾಕ್ ಮಾಡಿ ಯಲಹಂಕ ಠಾಣೆಗೆ ಕರೆತಂದಿದ್ರು. ಪೊಲೀಸರು ತಮ್ಮ ಅಸಲಿ ಟ್ರೀಟ್ಮೆಂಟ್ ಶುರು ಮಾಡ್ತಿದ್ದಂತೆ ನಮ್ಮಿಬ್ಬರ ಸಂಬಂಧಕ್ಕೆ ಚಂದ್ರಶೇಖರ್ ಅಡ್ಡಿಯಾಗ್ತಿದ್ದ. ಮನೆಯವರು ಹಾಗೂ ಚಂದ್ರು ಕಣ್ತಪ್ಪಿಸಿ ನಾವಿಬ್ಬರೂ ಭೇಟಿಯಾಗೋದು ಕಷ್ಟವಾಗ್ತಿತ್ತು. ಅಲ್ಲದೇ ಚಂದ್ರು ಯಾವಗಲೂ ಸಿಮ್ ಚೇಂಜ್ ಮಾಡು ಅಂತ ಶ್ವೇತಾಳಿಗೆ ಬೈತಿದ್ದ. ಹೀಗಾಗಿ ಚಂದ್ರಶೇಖರ್ ನಿಗೆ ಒಂದು ಗತಿ ಕಾಣಿಸಲು ನಿರ್ಧಾರ ಮಾಡಿದ್ವಿ ಅಂತ ಸುರೇಶ್ ಬಾಯ್ಬಿಟ್ಟಿದ್ದಾನೆ. ಆಗ ಶ್ವೇತಾ ಕೂಡ ನಾನೇ ನನ್ನ ಗಂಡನನ್ನ ಕೊಲೆ ಮಾಡಿಸಿದ್ದು ಎಂದು ತಪ್ಪೊಪ್ಪಿಕೊಂಡಿದ್ದಾಳೆ. ಸದ್ಯ ಪರಸಂಗದಿಂದ ತನ್ನ ಅಮಾಯಕ ಪತಿಯನ್ನ ಕೊಂದ ತಪ್ಪಿಗೆ ಪಾಪಿ ಪತ್ನಿ ತನ್ನ ಪ್ರಿಯಕರನ ಜೊತೆ ಜೈಲುಸೇರಿದ್ದಾಳೆ.
ವರದಿ: ಶಿವಪ್ರಸಾದ್ ಟಿ9
Published On - 9:53 pm, Thu, 27 October 22