ಬೆಂಗಳೂರು: ಯಲಹಂಕದ ಕಟ್ಟಿಗೇನಹಳ್ಳಿಯಲ್ಲಿ ಚಿನ್ನದ ಸರಕ್ಕಾಗಿ ಮಹಿಳೆಯೋರ್ವರನ್ನು ಹತ್ಯೆ ಮಾಡಿರುವ ಪ್ರಕರಣ ನಡೆದಿದೆ. ಸಿದ್ದಮ್ಮ (55) ಅವರನ್ನು ಹತ್ಯೆಗೈದು, ಸರ ಕಸಿದು ಸಲೀಂ (50) ಎಂಬಾತ ಪರಾರಿಯಾಗಿದ್ದಾನೆ. ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಿದ್ದಮ್ಮ ಆರೋಪಿ ಸಲೀಂ ಬಳಿ ನಾಟಿ ಔಷಧಿ ತೆಗೆದುಕೊಳ್ಳುತ್ತಿದ್ದರು. ಅದೇ ರೀತಿ ನಿನ್ನೆ ಕೂಡ ಆರೋಪಿ ಮನೆಗೆ ಹೋಗಿದ್ದಾರೆ. ಈ ವೇಳೆ ಸಲೀಂ ಕೊಲೆ ಮಾಡಿ ಚಿನ್ನದ ಸರ ಕದ್ದು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಹಿನ್ನೆಲೆ:
ಬಿಹಾರ ಮೂಲದ ಸಲೀಂ 20 ವರ್ಷದಿಂದ ಯಲಹಂಕದ ಕಟ್ಟಿಗೇನಹಳ್ಳಿಯಲ್ಲಿ ವಾಸವಿದ್ದ. ಊರಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಆರೋಪಿ, ಐದಾರು ವರ್ಷದಿಂದ ಶುಗರ್ ಖಾಯಿಲೆಗೆ ನಾಟಿ ಔಷಧಿ ಕೊಡುತ್ತಿದ್ದ. ಆದರೆ ಊರಲ್ಲಿದ್ದವರ ಜೊತೆಗೆ ಹೆಚ್ಚು ಒಡನಾಟ ಇರಲಿಲ್ಲ. ಮೃತ ಸಿದ್ದಮ್ಮ ಕೂಡ ಸಲೀಂ ಬಳಿ ನಾಟಿ ಔಷಧಿ ಪಡೆಯುತ್ತಿದ್ದರು. ಹಾಗೆಯೇ ನಿನ್ನೆ ಕೂಡ ಸಲೀಂ ಇದ್ದ ಮನೆಗೆ ನಾಟಿ ಔಷಧಿ ಪಡೆಯಲು ಬಂದಿದ್ದರು.
ಸಲೀಂ ಪತ್ನಿ ಜೊತೆಗೆ ಕಟ್ಟಿಗೇನಹಳ್ಳಿಯಲ್ಲಿ ವಾಸವಿದ್ದ. ನಿನ್ನೆ ಸಿದ್ದಮ್ಮ ಬರುವ ವೇಳೆಗೆ ಸಲೀಂ ಪತ್ನಿ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮಹಿಳೆ ಕತ್ತಲ್ಲಿದ್ದ ಚಿನ್ನದ ಸರ, ಓಲೆ, ಕಾಲು ಚೈನು ಕಳ್ಳತನ ಮಾಡಲಾಗಿದೆ. ಪ್ರಕರಣದ ಕುರಿತು ಮತ್ತಷ್ಟು ಅನುಮಾನಗಳಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ರಾಯಚೂರು: ಕುಡಿತದ ಚಟಕ್ಕಾಗಿ ಮನೆ ಮಾರಲು ಯತ್ನಿಸುತ್ತಿದ್ದ ಮಗನನ್ನು ಹತ್ಯೆಗೈದ ತಾಯಿ
ರಾಯಚೂರು: ಸಿರವಾರ ಪಟ್ಟಣದಲ್ಲಿ ಇಸ್ಪೀಟ್, ಕುಡಿತದ ಚಟಕ್ಕಾಗಿ ಮನೆ ಮಾರಲು ಯತ್ನಿಸುತ್ತಿದ್ದ ಹಿನ್ನೆಲೆಯಲ್ಲಿ ಮಗಳು, ಸೋದರಳಿಯನ ಜೊತೆ ಸೇರಿ ತಾಯಿಯೋರ್ವರು ಮಗನನ್ನು ಹತ್ಯೆಗೈದಿದ್ದಾರೆ. ಕೊಡಲಿಯಿಂದ ಹೊಡೆದು ಹಗ್ಗದಿಂದ ಕುತ್ತಿಗೆಗೆ ಬಿಗಿದು ಅಮರೀಶ್(43)ನನ್ನ ಕುಟುಂಬಸ್ಥರು ಹತ್ಯೆಗೈದಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿದ್ದರ ಬಗ್ಗೆ ಅನುಮಾನ ಬಾರದಂತೆ ಆರೋಪಿಗಳು ವರ್ತಿಸಿದ್ದರು. ಸ್ಥಳೀಯರ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ. ಈ ಬಗ್ಗೆ ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
ಮಂಗಳಮುಖಿ ಕೊಲೆ ಪ್ರಕರಣ; 3 ವರ್ಷ ಕಳೆದರೂ ಪತ್ತೆಯಾಗದ ಮತ್ತೋರ್ವ ಮಂಗಳಮುಖಿ, ಮರ್ಯಾದಾ ಹತ್ಯೆ ನಡೆದಿರುವ ಶಂಕೆ