ತುಮಕೂರು, ಆ.1: ಮೊಬೈಲ್ ಚಾರ್ಜರ್ ಕೊಡಲಿಲ್ಲವೆಂದು ಯುವಕನೊಬ್ಬ ನೇಣಿಗೆ ಶರಣಾದ ಘಟನೆ ತುಮಕೂರು(Tumakuru)ಜಿಲ್ಲೆಯ ಪಾವಗಡ (Pavagada) ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಸಿಂಗರೆಡ್ಡಿಹಳ್ಳಿಯಲ್ಲಿ ನಡೆದಿದೆ. ನಿಖಿಲ್ ಗೌಡ (18) ನೇಣಿಗೆ ಶರಣಾಗಿರುವ ಯುವಕ. ಇತ ಪಾವಗಡ ಪಟ್ಟಣದ ಶಾಂತಿ ಎಸ್ಎಸ್ಕೆ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ. ಭಾನುವಾರ ರಜೆ ಇದ್ದ ಕಾರಣ ಮನೆಯಲ್ಲಿಯೇ ಇದ್ದ ನಿಖಿಲ್. ಈ ವೇಳೆ ತಾಯಿಯೊಂದಿಗೆ ನನಗೆ ಅದು ಕೊಡಿಸಿಲ್ಲ, ಇದು ಕೊಡಿಸಿಲ್ಲವೆಂದು ಗಲಾಟೆ ಮಾಡುತ್ತಿದ್ದನಂತೆ.
ಗಲಾಟೆ ಬಳಿಕ ತಾಯಿಯ ಬಳಿ ನನಗೆ ಮೊಬೈಲ್ ಚಾರ್ಜರ್ ಕೊಡು ಎಂದಿದ್ದಾನೆ. ಆಗ ತಾಯಿ ನನ್ನ ಹತ್ತಿರ ಮೊಬೈಲ್ ಚಾರ್ಜರ್ ಇಲ್ಲವೆಂದು ಹೇಳಿ, ತಾಯಿ ಲಕ್ಷ್ಮಮ್ಮ ಅಲ್ಲೇ ಹತ್ತಿರದ ಮನೆಯೊಂದರಲ್ಲಿ ಹೂ ಕಟ್ಟಲು ಹೋಗಿದ್ದಾರೆ. ವಾಪಾಸ್ ಮನೆಗೆ ಬಂದು ಬಾಗಿಲು ಬಡಿದಾಗ ಒಳಗಿದ್ದ ನಿಖಿಲ್ ಗೌಡ ಬಾಗಿಲು ತೆಗೆದಿಲ್ಲ. ಅನುಮಾನಗೊಂಡು ಸ್ಥಳೀಯರ ಸಹಾಯದಿಂದ ಬಾಗಿಲು ಒಡೆದು ನೋಡಿದಾಗ ಘಟನೆ ಬಯಲಿಗೆ ಬಂದಿದೆ.
ಇನ್ನು ಕಳೆದ ಎಂಟು ವರ್ಷದ ಹಿಂದೆ ಮೃತ ನಿಖಿಲ್ ಗೌಡನ ತಂದೆಯವರು ಸಾವನ್ನಪ್ಪಿದ್ದರು. ಸದ್ಯ ತಾಯಿ ವರಲಕ್ಷ್ಮಮ್ಮ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಾ, ತನ್ನ ಮಗನ ವಿದ್ಯಾಭ್ಯಾಸದ ಜೊತೆಗೆ ಕುಟುಂಬ ನಿರ್ವಹಿಸುತ್ತಿದ್ದರು. ಇನ್ನು ಇವರಿಗೆ ಮತ್ತೋರ್ವ ಪುತ್ರಿಯಿದ್ದು, ತುಮಕೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದೀಗ ಸ್ಥಳಕ್ಕೆ ವೈ.ಎನ್.ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗ: ಮದುವೆಯಾಗಿ ಎರಡು ವರ್ಷವಾದರೂ ಮಗುವಿಲ್ಲವೆಂಬ ನೋವು; ನವವಿವಾಹಿತೆ ನೇಣಿಗೆ ಶರಣು
ಬೆಂಗಳೂರು ನಗರ: ಜಿಲ್ಲೆಯ ಆನೇಕಲ್ ತಾಲೂಕಿನ ಮೆಣಸಿಗನಹಳ್ಳಿ ಸಮೀಪ ಯುವಕನೊರ್ವನಿಗೆ ಅಡ್ಡಗಟ್ಟಿ ಚಾಕು ಇರಿದ ಘಟನೆ ನಡೆದಿದೆ. ಹೇಮಂತ್(24) ಮೃತ ರ್ದುದೈವಿ. ಅತ್ತಿಬೆಲೆಯ ಹಾರ್ಡ್‌ವೇರ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ಹೇಮಂತ್ ಬೈಕ್ನಲ್ಲಿ ಹೋಗುವಾಗ ಈ ದುರ್ಘಟನೆ ನಡೆದಿದೆ. ಇನ್ನು ಚಾಕು ಇರಿತಕ್ಕೊಳಗಾದ ಯುವಕ ರಕ್ತದ ಮಡುವಿನಲ್ಲಿದ್ದ. ಕೂಡಲೇ ಆತನನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಹೇಮಂತ್ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಕಳೆದ ರಾತ್ರಿ 9 ಗಂಟೆಯ ಸುಮಾರಿಗೆ ಕನಮನಹಳ್ಳಿಯಿಂದ ಮೆಣಸಿಗನಹಳ್ಳಿ ಮಾರ್ಗವಾಗಿ ಬರುವಾಗ ದುಷ್ಕರ್ಮಿಗಳು ಸ್ವಿಫ್ಟ್ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಅಟ್ಯಾಕ್ ಮಾಡಿದ್ದರು. ಆತನ ದೇಹದ ಹತ್ತಕ್ಕೂ ಹೆಚ್ಚು ಕಡೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಜೊತೆಗೆ ಯುವಕನ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಬಳಿ ಮಾಹಿತಿ ಕಲೆಹಾಕುತ್ತಿದ್ದು, ಸಿಸಿಟಿವಿ ಕ್ಯಾಮರಾಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:32 am, Tue, 1 August 23