
ಬೆಂಗಳೂರು, ಅಕ್ಟೋಬರ್ 08: ಪರಪ್ಪನ ಅಗ್ರಹಾರದಲ್ಲಿ (Parappana Agrahara) ರೌಡಿಶೀಟರ್ ಬರ್ತಡೇ ಸೆಲೆಬ್ರೇಷನ್ ಪ್ರಕರಣ ಸಂಬಂಧ ಇಬ್ಬರು ಜೈಲು ಅಧಿಕಾರಿಗಳ ಅಮಾನತು ಮಾಡಿ ಕಾರಾಗೃಹ ಎಡಿಜಿಪಿ ಬಿ.ದಯಾನಂದ್ ಆದೇಶಿಸಿದ್ದಾರೆ. ಜೈಲಿನಲ್ಲಿರುವ ಕೊಲೆ ಆರೋಪಿ ತನ್ನ ಸಹಚರರ ಜೊತೆ ಸೆ.9ರಂದು ಬರ್ತ್ ಡೇ ಆಚರಿಸಿಕೊಂಡಿದ್ದ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು. ಆ ಬೆನ್ನಲ್ಲೇ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವ ಆರೋಪವೂ ಕೇಳಿಬಂದಿತ್ತು. ಘಟನೆ ಸಂಬಂಧ ಅಂತಿಮವಾಗಿ ಈಗ ಅಧಿಕಾರಿಗಳ ತಲೆದಂಡವಾಗಿದೆ.
ಪರಪ್ಪನ ಅಗ್ರಹಾರ ಕಾರಾಗೃಹದ ಟವರ್ 1ರ 6ನೇ ಬ್ಯಾರಕ್ ನ 7ನೇ ಕೊಠಡಿಯಲ್ಲಿ ರೌಡಿ ಶೀಟರ್ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬವನ್ನ ಅದ್ಧೂರಿಯಾಗಿ ಆಚರಿಸಲಾಗಿತ್ತು. ಜೈಲಿನ ಬೇಕರಿಯಿಂದ ಕೇಕ್ ತರಿಸಿಕೊಳ್ಳಲಾಗಿತ್ತು ಎನ್ನಲಾಗಿದ್ದು, ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ಹಣ ಪಡೆದು ಕೈದಿಗಳಿಗೆ ಸಹಕರಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ಧವು. ಹೀಗಾಗಿ ಘಟನೆ ಬಗ್ಗೆ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ADGP ದಯಾನಂದ್ ಇಲಾಖಾ ವರದಿ ಕೇಳಿದ್ದರು. ಮೆಲ್ನೋಟಕ್ಕೆ ಜೈಲು ಅಧಿಕಾರಿಗಳ ಕರ್ತವ್ಯ ಲೋಪ ಕಂಡುಬಂದ ಹಿನ್ನಲೆ ಶಿಸ್ತುಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ರೌಡಿ ಶೀಟರ್ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬ: NCR ದಾಖಲು
ಪರಪ್ಪನ ಅಗ್ರಹಾರ ಜೈಲಿಗೆ ಜಾಮರ್ ಹಾಕಿರೋ ಸರ್ವೀಸ್ ಪ್ರೊವೈಡರ್ಗಳಿಗೆ ಎಡಿಜಿಪಿ ಬಿ.ದಯಾನಂದ ಕ್ಲಾಸ್ ತೆಗೆದುಕೊಂಡ ಪ್ರಸಂಗವೂ ನಡೆದಿದೆ. ಜೈಲಿನ ಒಳಗೆ ಯಾವುದೇ ಮೊಬೈಲ್ ಅಥವಾ ಎಲೆಕ್ಟ್ರಾನಿಕ್ ವಸ್ತುಗಳು ವರ್ಕ್ ಆಗಬಾರದು ಎಂದು ಜಾಮರ್ ಹಾಕಿಸಲಾಗಿದೆ. ಹೀಗಿದ್ದರೂ ಜೈಲಿನ ಒಳ ಭಾಗದಲ್ಲಿ ಇವು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಬದಲಾಗಿ ಜಾಮರ್ಗಳಿಂದ ಜೈಲಿನ ಹೊರಗೆ ಇರುವ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ನಮ್ಮ ಮೊಬೈಲ್ ಗೆ ಸರಿಯಾಗಿ ಸಿಗ್ನಲ್ ಸಿಗುತ್ತಿಲ್ಲ ಎಂದು ಅವರು ಪ್ರತಿಭಟನೆ ಮಾಡುತ್ತಿದ್ದಾರೆ. ಟೆಂಡರ್ ಪಡೆದುಕೊಕೊಳ್ಳುವ ಸಂದರ್ಭ ನಮ್ಮ ಸರ್ವೀಸ್ ಸೂಪರ್ , 5G ಅಂತೆಲ್ಲಾ ಹೇಳಿ ಗುತ್ತಿಗೆ ಪಡೆದುಕೊಳ್ಳುತ್ತೀರಿ. ಹೀಗಿದ್ದರೂ ಅವು ಯಾಕೆ ಸರಿಯಾಗಿ ಕೆಲಸ ಮಾಡಲ್ಲ. ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಬುಕ್ ಮಾಡಿ, ಕಾಂಟ್ರ್ಯಾಕ್ಟ್ನ್ನೂ ಬ್ಲಾಕ್ಲಿಸ್ಟ್ ಮಾಡಬೇಕಾಗುತ್ತದೆ ಎಂದು ದಯಾನಂದ್ ಎಚ್ಚರಿಸಿದ್ದಾರೆ. ಈಗಾಗಲೇ ಒಮ್ಮೆ ಸರ್ವೀಸ್ ಪ್ರೊವೈಡರ್ಗಳ ಜೊತೆ ಸಭೆ ನಡೆಸಿರುವ ಎಡಿಜಿಪಿ, ಈ ಬಗ್ಗೆ ಅಕ್ಟೋಬರ್ 10ರಂದು ಮತ್ತೆ ಸಭೆ ಕರೆದಿದ್ದಾರೆ.
ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.