ಸೆನ್ಸೇಷನಲ್ ಕ್ರೈಮ್ ಕತೆಗಳು: ತನ್ನ ಇನಿಯನ ಮರ್ಯಾದಾ ಹತ್ಯೆಯ ಬಳಿಕ ಯಾದವ್ ಕುಟುಂಬದ ಯುವತಿ ಮತ್ತೊಬ್ಬನನ್ನು ಮದುವೆಯಾದಳು!
ಅದೇ ವರ್ಷ ನಿತಿಶ್ ತಾಯಿ ನೀಲಮ್ ಕತಾರಾ ವಿಕಾಸ್ ಮತ್ತು ವಿಶಾಲ್ ರನ್ನು ಗಲ್ಲಿಗೇರಿಸಬೇಕೆಂದು ಸುಪ್ರೀಮ್ ಕೋರ್ಟ್ ನಲ್ಲಿ ಮನವಿ ಸಲ್ಲಿಸಿದರು. ಮನವಿಯನ್ನು ತಿರಸ್ಕರಿಸಿದ ಅಪೆಕ್ಸ್ ಕೋರ್ಟ್ ಯಾದವ್ ಸಹೋದರರಿಗೆ ವಿಧಿಸಿದ ಶಿಕ್ಷೆ ಎತ್ತಿಹಿಡಿದು ಶಿಕ್ಷೆಯ ಪ್ರಮಾಣವನ್ನು 25 ವರ್ಷಕ್ಕಿಳಿಸಿತು.
ಸೆನ್ಸೇಷನಲ್ ಕ್ರೈಮ್ ಕತೆಗಳ ಸರಣಿಯ ಎರಡನೇ ಕತೆಯಾಗಿ ನಾವು ಫೆಬ್ರುವರಿ 16, 2002 ರಲ್ಲಿ ಕೊಲೆಯಾದ ನಿತಿಶ್ ಕಟಾರಾನ (Nitish Katara) ಮರ್ಯಾದಾ ಹತ್ಯೆಯ (Honour Killing) ಪ್ರಕರಣವನ್ನು ಹೇಳುತ್ತಿದ್ದೇವೆ. ನಿತಿಶ್ ಕೊಲೆ ಪ್ರಕರಣ ಇಡೀ ದೇಶವನ್ನು ಅಘಾತಕ್ಕೊಳಪಡಿಸಿದ್ದು ಸುಳ್ಳಲ್ಲ. ಅವತ್ತು ಗೆಳೆಯನ ಮದುವೆಗೆ ಅಂತ ಹೋದವನು ಯಾವತ್ತೂ ಮನೆಗೆ ಹಿಂತಿರುಗಲಾರೆ ಅಂತ ಅವನು ಅಂದುಕೊಂಡಿರಲಿಲ್ಲ. ಮಧ್ಯಪ್ರದೇಶದ ಪ್ರಭಾವಿ ರಾಜಕಾರಣಿಯಾಗಿದ್ದ ಡಿಪಿ ಯಾದವ್ ನ ಮಕ್ಕಳಾದ ವಿಕಾಸ್ ಯಾದವ್ (Vikas Yadav) ಮತ್ತು ವಿಶಾಲ್ ಯಾದವ್ (Vishal Yadav) ತಮ್ಮ ಗೆಳೆಯ ಸುಖದೇವ್ ಪಹೆಲ್ವಾನ್ (Sukhdev Pahelwan) ಜೊತೆ ಸೇರಿ ಟಾಟಾ ಸಫಾರಿಯೊಂದರಲ್ಲಿ ನಿತಿಶ್ ನನ್ನು ಅಪಹರಿಸಿ ಅದರಲ್ಲೇ ಅವನನ್ನು ಸಾಯುವವರೆಗೆ ಥಳಿಸಿದ್ದರು! ನಂತರ ಅವನ ದೇಹವನ್ನು ಬುಲಂದಶಹರ್ ನಲ್ಲಿರುವ ಖುರ್ಜಾ ಹೆಸರಿನ ಹಳ್ಳಿಯಲ್ಲಿ ಬಿಸಾಡಿದ್ದರು.
ನಿತಿಶ್ ನನ್ನು ಕೊಂದಿದ್ದು ಯಾಕೆ?
ಅಸಲು ಸಂಗತಿಯೇನೆಂದರೆ ಘಾಜಿಯಾಬಾದ್ ನ ಐಎಮ್ ಟಿ ಕಾಲೇಜಿನಿಂದ ಪದವಿ ಪಡೆದಿದ್ದ ನಿತಿಶ್ ಒಬ್ಬ ಉನ್ನತ ಅಧಿಕಾರಿಯ ಮಗನಾಗಿದ್ದ. ಕಾಲೇಜಿನಲ್ಲಿ ಓದುವಾಗಲೇ ಅವನ ಮತ್ತು ಡಿಪಿ ಯಾದವ್ ಮಗಳು ಭಾರತಿ ಯಾದವ್ ನಡುವೆ ಪ್ರೇಮ ಅಂಕುರಿಸಿತ್ತು. ಆದರೆ ಅವರ ಪ್ರೇಮ ಸಂಬಂಧವನ್ನು ಭಾರತಿಯ ಕುಟುಂಬಕ್ಕೆ ಸಹ್ಯವಾಗಿರಲಿಲ್ಲ. ಭಾರತಿಯಿಂದ ದೂರ ಇರು ಅಂತ ಯಾದವ್ ಕುಟುಂಬ ಹಲವಾರು ಬಾರಿ ಎಚ್ಚರಿಸಿದರೂ ನಿತಿಶ್ ಮತ್ತು ಭಾರತಿ ಕ್ಯಾರೆ ಅಂದಿರಲಿಲ್ಲ. ಅವರು ತಮ್ಮ ರಿಲೇಷನ್ ಶಿಪ್ ಮುಂದುವರಿಸಿದರು.
ಈ ಪ್ರಕರಣದ ಈಗಿನ ಸ್ಥಿತಿ ಏನು?
ಏಪ್ರಿಲ್ 23, 2002 ರಂದು ಮಧ್ಯಪ್ರದೇಶದ ಪೊಲೀಸರು ಯಾದವ್ ಸಹೋದರರನ್ನು ಬಂಧಿಸಿದರು. ಪ್ರಕರಣದ ಪ್ರಮುಖ ಸಾಕ್ಷಿಯಾಗಿ ಹಾಜರಾಗಿ ಹೇಳಿಕೆ ದಾಖಲಿಸಲು ಭಾರತಿಗೆ ಕೋರ್ಟ್ ಹತ್ತಾರು ಬಾರಿ ಸಮನ್ಸ್ ಜಾರಿಮಾಡಿದರೂ ಆಕೆ ಸ್ಪಂದಿಸಲಿಲ್ಲ. ಅಂತಿಮವಾಗಿ, ಮೂರು ವರ್ಷಗಳ ಬಳಿಕ ಕೋರ್ಟ್ ನಿಂದ ನೋಟಿಸ್ ಮತ್ತು ವಾರಂಟ್ ಜಾರಿಯಾದ ನಂತರವೇ ಆಕೆ ಅದಕ್ಕೆ ಪ್ರತಿಕ್ರಿಯಿಸಿದಳು. ಮೇ 30, 2008ರಂದು ಮರ್ಯಾದಾ ಹತ್ಯೆ ನೆಲೆಯಲ್ಲಿ ಕೋರ್ಟ್ ವಿಕಾಸ್ ಮತ್ತು ವಿಶಾಲ್ ಗೆ ಜೀವಾವಧಿ ಶಿಕ್ಷೆ ವಿಧಿಸಿತು. ಫೆಬ್ರುವರಿ 6, 2015 ರಂದಯ ಸದರಿ ಪ್ರಕರಣವನ್ನು ಮರು ಪರಿಶೀಲಿಸಿದ ದೆಹಲಿ ಹೈಕೋರ್ಟ್ ಯಾದವ್ ಸಹೋದರರಿಗೆ 30 ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಿತು.
ಅದೇ ವರ್ಷ ನಿತಿಶ್ ತಾಯಿ ನೀಲಮ್ ಕತಾರಾ ವಿಕಾಸ್ ಮತ್ತು ವಿಶಾಲ್ ರನ್ನು ಗಲ್ಲಿಗೇರಿಸಬೇಕೆಂದು ಸುಪ್ರೀಮ್ ಕೋರ್ಟ್ ನಲ್ಲಿ ಮನವಿ ಸಲ್ಲಿಸಿದರು. ಮನವಿಯನ್ನು ತಿರಸ್ಕರಿಸಿದ ಅಪೆಕ್ಸ್ ಕೋರ್ಟ್ ಯಾದವ್ ಸಹೋದರರಿಗೆ ವಿಧಿಸಿದ ಶಿಕ್ಷೆ ಎತ್ತಿಹಿಡಿದು ಶಿಕ್ಷೆಯ ಪ್ರಮಾಣವನ್ನು 25 ವರ್ಷಕ್ಕಿಳಿಸಿತು.
ಭಾರತಿಯ ನಿಲುವು ಆಶ್ಚರ್ಯ ಹುಟ್ಟಿಸುತ್ತದೆ!
ಪ್ರಕರಣದ ಮೂರನೇ ಅರೋಪಿಯಾಗಿದ್ದ ಸುಖದೇವ್ ಪಹೆಲ್ವಾನ್ ನನ್ನು 2005ರಲ್ಲಿ ಬಂಧಿಸಲಾಯಿತು ಮತ್ತು ಕೋರ್ಟ್ ಅವನಿಗೆ 20-ವರ್ಷ ಸೆರೆವಾಸದ ಶಿಕ್ಷೆ ಪ್ರಕಟಿಸಿತು. ಈ ಪ್ರಕರಣದಲ್ಲಿ ಭಾರತಿ ಯಾದವ್ ನಿಲುವು ಕುತೂಹಲಕಾರಿಯಾಗಿದೆ ಮತ್ತು ಸೋಜಿಗ ಹುಟ್ಟಿಸುತ್ತದೆ. ನಿತಿಶ್ ಅಪಹರಣವಾದ ರಾತ್ರಿಯಲ್ಲೇ ಜನ ಅವಳನ್ನು ಕೊನೆಯ ಬಾರಿಗೆ ಭಾರತದಲ್ಲಿ ನೋಡಿದ್ದು. ಕೋರ್ಟ್ ಕಳಿಸುತಿದ್ದ ಸಮನ್ಸ್ ಗಳನ್ನು ನಿರಂತರವಾಗಿ ಕಡೆಗಣಿಸುತ್ತಿದ್ದ ಅವಳು, ಕೋರ್ಟ್ ತನ್ನನ್ನು ಘೋಷಿತ ಅಪರಾಧಿಯೆಂದು ಪರಿಗಣಿಸುವ ಅಪಾಯ ಮನವರಿಕೆಯಾಗಿ ಅಂತಿಮವಾಗಿ ಮೂರು ವರ್ಷಗಳ ನಂತರ ನೋಟಿಸ್ ಗೆ ಉತ್ತರಿಸಿದ್ದಳು.
ಕೊಲೆಗಾರ ಮದುವೆಯಲ್ಲಿ ಹಾಜರಿದ್ದ !
ನಿತಿಶ್ ಕಟಾರಾ ಜೊತೆ ತನಗೆ ಯಾವುದೇ ಸಂಬಂಧವಿರಲಿಲ್ಲ ಎಂದು ಹೇಳಿದ್ದ ಭಾರತಿ 2009ರ ಕೊನೆಭಾಗದಲ್ಲಿ ದೆಹಲಿಯಲ್ಲಿ ಮದುವೆಯಾದಳು. ಈ ಮದುವೆ ಸಮಾರಂಭದಲ್ಲಿ ಉನ್ನತಮಟ್ಟದ ರಾಜಕಾರಣಿಗಳು, ಗಣ್ಯರು, ಪ್ರತಿಷ್ಠಿತರು ಸೇರಿದಂತೆ 4,000 ಕ್ಕೂ ಹೆಚ್ಚು ಆಹ್ವಾನಿತರು ಭಾಗವಹಿಸಿದ್ದರು.
ಈ ಮದುವೆಯಲ್ಲಿ ಎಲ್ಲರ ಗಮನ ಸೆಳೆದ ಸಂಗತಿಯೆಂದರೆ ಜೈಲಿನಲ್ಲಿದ್ದ ಅವಳ ಅಣ್ಣ ನಿರ್ಭಿತಿಯಿಂದ ಓಡಾಡಿದ್ದು. ಸಾದಾ ಉಡುಪಿನಲ್ಲಿದ್ದ ಇಬ್ಬರು ಸಶಸ್ತ್ರಧಾರಿ ವ್ಯಕ್ತಿಗಳು ಅವನ ಜೊತೆಗಿದ್ದರು. ತಂಗಿಯ ಮದುವೆಗೆಂದು ಅವನು 10 ದಿನಗಳ ಪರೋಲ್ ಮೇಲೆ ಹೊರಬಂದಿದ್ದ.
ನೀಲಮ್ ಕಟಾರಾ ಒಂಟಿ ಹೋರಾಟ!
ನಿತಿಶ್ ತಾಯಿ ನೀಲಮ್ ಕಟಾರಾ ಯಾದವ್ ಗಳ ವಿರುದ್ಧ ಒಂಟಿ ಹೋರಾಟ ನಡೆಸಿದರು. ಹಂತಕರನ್ನು ಗಲ್ಲಿಗೇರಿಸಬೇಕೆಂದು ಅವರು ಕೋರ್ಟ್ ಗಳಿಗೆ ದಣಿವರಿಯದೆ ಅಲೆದಾಡಿದರು. ವಯಸ್ಸಾಗಿದ್ದ ಅವರಿಗೆ ಕೊನೆಯಲ್ಲಿ ಹೋರಾಡಲು ತ್ರಾಣವಿಲ್ಲದಂತಾಯಿತು. ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೀಗೆ ಹೇಳಿದ್ದರು: ‘ನ್ಯಾಯಕ್ಕಾಗಿ ಹೋರಾಡುವುದರಲ್ಲಿ ಮತ್ತು ಸತ್ಯಕ್ಕಾಗಿ ಯಾವುದೇ ರಾಜಿ ಮಾಡಿಕೊಳ್ಳದ ನನ್ನ ಮಗ ಅವನ ಸಾವಿನ ನಂತರ ಅವನನ್ನು ವಂಚಿಸಿದ ಒಬ್ಬ ದುರ್ಬಲ ಹೆಣ್ಣಿನ ಪ್ರೇಮಪಾಶಕ್ಕೆ ಸಿಲುಕಿದ್ದ,’ ಎಂದು ಹೇಳಿದ್ದರು.
ಸದರಿ ಪ್ರಕರಣವು ಸೋನಿ ಎಂಟರ್ಟೇನ್ಮೆಂಟ್ ಟೆಲಿವಿಷನ್ ನಲ್ಲಿ ಪ್ರಸಾರವಾಗುವ ‘ಕ್ರೈಮ್ ಪೆಟ್ರೋಲ್’ ನಲ್ಲಿ ಬಿತ್ತರವಾಗಿತ್ತು.