ಕೋಲಾರ, ಜ.20: ತಾಲೂಕಿನಲ್ಲಿ ಬಾಲ್ಯ ವಿವಾಹಕ್ಕೆ (Child Marriage) ಸಿದ್ಧತೆ ನಡೆಸಲಾಗುತ್ತಿದ್ದ ಮಾಹಿತಿ ತಿಳಿದ ಕೋಲಾರ (Kolar) ಜಿಲ್ಲಾಡಳಿತ ಬಾಲ್ಯ ವಿವಾಹವನ್ನು ತಡೆಯುವಲ್ಲಿ ಯಶಸ್ವಿಯಾಗಿದೆ. ಮಾಧವ ಗುರ್ಜೇನಹಳ್ಳಿಯಲ್ಲಿನ ಮನೆಗೆ ದಾಳಿ ನಡೆಸಿದ ಅಧಿಕಾರಿಗಳು ಮದುವೆ ನಿಲ್ಲಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ.
ಮಾಧವ ಗುರ್ಜೇನಹಳ್ಳಿಯ ಮನೆಯೊಂದರಲ್ಲಿ ಬಾಲ್ಯ ವಿವಾಹಕ್ಕೆ ಸಿದ್ಧತೆಗಳನ್ನು ನಡೆಸಲಾಗುತ್ತಿತ್ತು. ಗೋಪಾಲ್ ಎಂಬುವವರ ಜೊತೆ ನಾಳೆ 17 ವರ್ಷದ ಬಾಲಕಿಯ ವಿವಾಹ ನಿಗದಿಯಾಗಿತ್ತು. ಈ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳಿಗೆ ದೂರು ನೀಡಿದ್ದರು. ಇಂದು ಅರಿಶಿನ ಶಾಸ್ತ್ರ ನಡೆಯುತ್ತಿತ್ತು. ಈ ವೇಳೆ ಸಿಡಿಪಿಒ ಪವಿತ್ರಾ ಹಾಗೂ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಬಾಲಕಿಯ ಎಸ್ಎಸ್ಎಲ್ಸಿ ಮಾರ್ಕ್ಸ್ ಕಾರ್ಡ್ ಹಾಗೂ ಮದುವೆ ಆಮಂತ್ರನ ಪತ್ರಿಕೆ ಪರಿಶೀಲನೆ ನಡೆಸಿದಾಗ ವಧು ಅಪ್ರಾಪ್ತೆ ಎಂದು ತಿಳಿದು ಬಂದಿದೆ. ಹೀಗಾಗಿ ಬಾಲ್ಯ ವಿವಾಹವನ್ನು ತಡೆದಿದ್ದಾರೆ.
ರಾಜ್ಯದಲ್ಲಿ ಬಾಲ್ಯ ವಿವಾಹದ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ, ಕೆಲ ಹಳ್ಳಿಗಳಲ್ಲಿ ಅಲ್ಲೊಂದು, ಇಲ್ಲೊಂದು ಕೇಸ್ಗಳು ಕೇಳಿ ಬರುತ್ತಿತ್ತು. ಅದಾಗ್ಯೂ, ಇತ್ತೀಚೆಗೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಬಾಲ್ಯ ವಿವಾಹ ನಡೆದಿತ್ತು. ಆರ್.ಆರ್.ನಗರದ ದೇಗುಲದಲ್ಲಿ 16 ವರ್ಷದ ಬಾಲಕಿಗೆ 27 ವರ್ಷದ ಯುವಕನ ಜೊತೆ ಆಕೆಯ ತಾಯಿಯೇ ಒತ್ತಾಯ ಪೂರ್ವಕವಾಗಿ ಮದುವೆ ಮಾಡಿಸಿದ್ದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಲ್ಯ ವಿವಾಹ ಇನ್ನೂ ಜೀವಂತ; 16 ವರ್ಷದ ಬಾಲಕಿಗೆ ಒತ್ತಾಯವಾಗಿ ಮದುವೆ ಮಾಡಿಸಿರುವ ತಾಯಿ
ತಾಯಿಯೇ ಬಲವಂತವಾಗಿ ವಿವಾಹ ಮಾಡಿಸಿದ್ದು, ಬಳಿಕ ಬಲವಂತವಾಗಿ ದೈಹಿಕ ಸಂಪರ್ಕವಾಗಿದೆ ಎಂದು ಅಪ್ರಾಪ್ತ ಬಾಲಕಿ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ದೂರು ನೀಡಿದ್ದಳು. ಪ್ರಕರಣ ಸಂಬಂಧ ಆರ್.ಆರ್. ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಕಳೆದ ವರ್ಷದ ಅಂತ್ಯದ ವೇಳೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ್ದ ವರದಿಯಲ್ಲಿ ಮಹಿಳಾ-ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತವರು ಜಿಲ್ಲೆಯಲ್ಲಿ ಅತೀ ಹೆಚ್ಚು ಬಾಲ್ಯ ವಿವಾಹ ನಡೆದಿರುವ ವಿಚಾರ ಬಹಿರಂಗವಾಗಿತ್ತು. ಬೆಳಗಾವಿಯಲ್ಲಿ ಸದ್ದಿಲ್ಲದೇ ಬಾಲ್ಯ ವಿವಾಹಗಳು ನಡೆಯುತ್ತಿದ್ದು, 2022ರಲ್ಲಿ 81,817 ಜನ ಮಹಿಳೆಯರು ಗರ್ಭಿಣಿಯಾಗಿದ್ದು, ಈ ಪೈಕಿ 208 ಮಂದಿ 18 ವರ್ಷದೊಳಗಿನ ಬಾಲಕಿಯರಾಗಿದ್ದರು.
2023ರ ಏಪ್ರಿಲ್ ನಿಂದ ಅಕ್ಟೋಬರ್ ವರೆಗೆ 51,468ಜನ ಮಹಿಳೆಯರು ಗರ್ಭಿಣಿಯಾಗಿದ್ರೇ ಇದರಲ್ಲಿ 153 ಬಾಲಕಿಯರು ಗರ್ಭ ಧರಿಸಿದ್ದು ಕಂಡು ಬಂದಿತ್ತು. ಈ ವಿಚಾರ ಸಂತಾನೋತ್ಪತಿ ಮತ್ತು ಮಕ್ಕಳ ಆರೋಗ್ಯ ಪೋರ್ಟಲ್ ನಲ್ಲಿ ಗರ್ಭಿಣಿಯರ ನೋಂದಣಿ ಪ್ರಕ್ರಿಯೆ ವೇಳೆ ಅತೀ ಹೆಚ್ಚು ಬಾಲ್ಯ ವಿವಾಹ ನಡೆದು ಬಾಲೆಯರು ಗರ್ಭ ಧರಿಸಿರುವ ವಿಚಾರ ಬೆಳಕಿಗೆ ಬಂದಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ