ಬಳ್ಳಾರಿ: ಬೆದರಿಕೆ ಹಾಕಿದ ಆರೋಪದಡಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ವಿರುದ್ಧ ವಿಜಯನಗರ ಜಿಲ್ಲೆ ಹೊಸಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಕಿ ಹಚ್ಚಿ ಮನೆಯನ್ನ ಸುಡುತ್ತೇನೆ ಎಂಬ ಬೆದರಿಕೆಯ ಆರೋಪದ ಬೆನ್ನಲ್ಲೆ ಭೀತಿಗೊಂಡ ಡಿ.ಪೋಲಪ್ಪ ಮತ್ತು ಕುಟುಂಬಸ್ಥರು ವಿಜಯನಗರ ಎಸ್ಪಿ ಕಚೇರಿ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದರು. ಹೀಗಾಗಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಹೊಸಪೇಟೆಯ 6ನೇ ವಾರ್ಡ್ನ ಸುಣ್ಣದಬಟ್ಟಿ ಪ್ರದೇಶದಲ್ಲಿ ವಾಸಿಸುತ್ತಿರುವ ಡಿ.ಪೋಲಪ್ಪ ಎಂಬವರಿಗೆ ಸಚಿವ ಆನಂದ್ ಸಿಂಗ್ ಅವರಿಂದ ನಿಮ್ಮ ಮನೆಗೆ ಬೆಂಕಿ ಹಾಕಿ ಮನೆ ಸುಟ್ಟು ಹಾಕುವ ಬೆದರಿಕೆ ಹಾಕಲಾಗಿದೆ. ಹಾಗಂತ ಪೋಲಪ್ಪ ಕುಟುಂಬಸ್ಥರು ಆರೋಪಿಸಿ ಎಸ್ ಪಿ ಕಚೇರಿ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪೋಲಪ್ಪಗೆ ಬೆದರಿಕೆ ಹಾಕಿದ ಹಿನ್ನಲೆಯಲ್ಲಿ ಸಚಿವ ಆನಂದಸಿಂಗ್ ವಿರುದ್ಧ ಅವ್ಯಾಚ್ಯ ಶಬ್ದಗಳಿಂದ ನಿಂದನೆ, ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾಗಿದ್ದು, ಮರಿಯಪ್ಪ, ಹನುಮಂತಪ್ಪ, ಹುಲಗಪ್ಪ ಎಂಬವರ ವಿರುದ್ಧವೂ ಹೊಸಪೇಟೆಯ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಆತ್ಮಹತ್ಯೆಗೆ ಯತ್ನಿಸಿದವರ ವಿರುದ್ಧ ದೂರು ದಾಖಲು
ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ವಿಜಯನಗರ ಎಸ್ಪಿ ಕಚೇರಿ ಮುಂದೆ ಆತ್ಮಹತ್ಯೆಗೆ ಯತ್ನ ಹಿನ್ನಲೆ ಆತ್ಮಹತ್ಯೆಗೆ ಯತ್ನಿಸಿದ ಕುಟುಂಬದವರ ವಿರುದ್ಧ ಪ್ರಕರಣ ದಾಖಲಾಗಿದೆ. ನಿನ್ನೆ ಮಧ್ಯಾಹ್ನ ಹೊಸಪೇಟೆಯ ಎಸ್ಪಿ ಕಚೇರಿ ಮುಂಭಾಗದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಪೋಲಪ್ಪ, ಟಿ ಸರೋಜಮ್ಮ, ವಿಜಯಕುಮಾರ್, ಮಹಾಲಕ್ಷ್ಮಿ, ಟಿ ಜ್ಞಾನೇಶ್ವರಿ, ಟಿ ಅಶ್ವಿನಿ ಎನ್ನುವವರು ಪೆಟ್ರೋಲ್ ಸುರಿದುಕೊಂಡು ಸರ್ಕಾರಿ ಕಚೇರಿ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಹಿನ್ನಲೆ ಡಿಎಆರ್ ಪೊಲೀಸ್ ಸಿಬ್ಬಂದಿ ಗವಿಸಿದ್ದಪ್ಪ ಅವರು ದೂರು ನೀಡಿದ್ದಾರೆ. ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಹೊಸಪೇಟೆಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಪ್ರಶ್ನಿಸಿದಕ್ಕೆ ಜೀವ ಬೆದರಿಕೆ
ಸಚಿವ ಆನಂದಸಿಂಗ್ ಅಕ್ರಮ ಪ್ರಶ್ನಿಸಿದಕ್ಕೆ ಜೀವ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ ಪೋಲಪ್ಪ ಅವರು ಹೇಳಿಕೆ ನೀಡಿದ್ದಾರೆ. ಆನಂದಸಿಂಗ್ ಅಕ್ರಮದ ಬಗ್ಗೆ ಹಲವು ದೂರುಗಳನ್ನ ನೀಡಿದ್ದೇವೆ. ಆನಂದಸಿಂಗ್ ಬೃಹತ್ ಬಂಗಲೆ ನಿರ್ಮಾಣದ ವೇಳೆ ಮಾಡಿದ ಅಕ್ರಮದ ಬಗ್ಗೆ ದೂರು ನೀಡಿದ್ದೇನೆ. ಬಂಗಲೆ ನಿರ್ಮಾಣಕ್ಕೆ ರಾಜಕಾಲುವೆ ಒತ್ತುವರಿ ಮಾಡಿದ್ದಾರೆ. ಆ ಬಗ್ಗೆ ದೂರು ದಾಖಲು ಮಾಡಿರುವೆ. ಅದಕ್ಕಾಗಿ ಸಚಿವ ಆನಂದಸಿಂಗ್ ನಮ್ಮ ಕುಟುಂಬಕ್ಕೆ ಧಮ್ಕಿ ಹಾಕಿದ್ದಾರೆ. ನೀನೂ ನನ್ನ ವಿರುದ್ದ ಆರೋಪ ಮಾಡುತೀಯಾ. ದೊಡ್ಡ ದೊಡ್ಡದಾಗಿ ಆಟ ಆಡಬೇಡ. ನನ್ನ ಎದುರು ಹಾಕಿಕೊಂಡು ಬದುಕುತ್ತೀಯಾ? ಪೆಟ್ರೋಲ್ ಹಾಕಿ ನಿನ್ನ ಸುಟ್ಟುಬಿಡತೇವಿ ಎಂದು ಬೆದರಿಕೆ ಹಾಕಿದ್ದಾಗಿ ಹೇಳಿದ್ದಾರೆ.
ನಾವೂ ವಾಸ ಮಾಡುತ್ತಾ ಇರುವ ಜಾಗ ಮಡಿವಾಳ ಸಮಾಜಕ್ಕೆ ಸೇರಿದಲ್ಲ, ವೀರಕ್ತಮಠದ ಶ್ರೀಗಳಿಂದ ನನ್ನ ಪತ್ನಿಯ ಕುಟುಂಬಕ್ಕೆ ಬಂದಿದೆ. ಈ ಜಾಗದಿಂದ ನಮ್ಮ ಕುಟುಂಬವನ್ನ ಒಕ್ಕಲೆಬ್ಬಿಸಲು ಸಚಿವರು ಸಂಚು ರೂಪಿಸಿದ್ದಾರೆ. ಸಚಿವರ ವಿರುದ್ಧ ಧ್ವನಿ ಎತ್ತಿದವರನ್ನ ಹಣಿಯುವ ಪ್ರಯತ್ನ ಮಾಡುತ್ತಿದ್ದಾರೆ. ನನ್ನಗೆ ಜೀವ ಬೆದರಿಕೆ ಇದೆ. ನನ್ನ ಯಾವಾಗ ಬೇಕಾದರೂ ಕೊಲೆ ಮಾಡಬಹುದು. ನನಗೆ ಗೃಹ ಸಚಿವರು ರಕ್ಷಣೆ ನೀಡಬೇಕು. ನನ್ನ ಪ್ರಾಣ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:52 am, Wed, 31 August 22