ದಸರಾ ಸಂಭ್ರಮದ ಮಧ್ಯೆ ರಕ್ತದೋಕುಳಿ: ಜಂಬೂಸವಾರಿ ನೋಡಲು ಹೋದವ ಹೆಣವಾದ

ದಸರಾ ಸಂಭ್ರಮದ ನಡುವೆ ಆನೇಕಲ್‌ನಲ್ಲಿ ಭೀಕರ ಕೊಲೆ ನಡೆದಿದೆ. ಜಂಬೂ ಸವಾರಿ ನೋಡಲು ಬಂದಿದ್ದ ವ್ಯಕ್ತಿಯನ್ನ ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿದೆ. ಆರೋಪಿಗಳು ಮೃತನ ಮೊಬೈಲ್‌ನಿಂದಲೇ 112ಗೆ ಕರೆ ಮಾಡಿ ಬಳಿಕ ಮೊಬೈಲ್​ನೊಂದಿಗೆ ಪರಾರಿಯಾಗಿದ್ದಾರೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಸರಾ ಸಂಭ್ರಮದ ಮಧ್ಯೆ ರಕ್ತದೋಕುಳಿ: ಜಂಬೂಸವಾರಿ ನೋಡಲು ಹೋದವ ಹೆಣವಾದ
ಕೊಲೆಯಾದ ವ್ಯಕ್ತಿ
Edited By:

Updated on: Oct 22, 2026 | 8:33 PM

ಆನೇಕಲ್, ಅಕ್ಟೋಬರ್​​ 22: ದಸರಾ ಜಂಬೂಸವಾರಿಯ ಸಂಭ್ರಮದ ನಡುವೆ ರಕ್ತದೋಕುಳಿ ಹರಿದಿದೆ. ಅಂಬಾರಿ ನೋಡಲು ಬಂದಿದ್ದ ವ್ಯಕ್ತಿಯನ್ನ ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿದೆ. ಯಲ್ಲಪ್ಪ (56) ಕೊಲೆಯಾದ ವ್ಯಕ್ತಿ. ಕೊಲೆ ಮಾಡಿದ್ದಲ್ಲದೆ ಮೃತನ ಮೊಬೈಲ್‌ನಿಂದಲೇ 112ಗೆ ಕರೆ ಮಾಡಲಾಗಿದೆ. ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಚಿಕ್ಕಕೆರೆ ಸ್ಟೇಡಿಯಂ ಬಳಿ ಘಟನೆ ನಡೆದಿದೆ.

ನಡೆದಿದ್ದೇನು? 

ಎಲ್ಲರೂ ದಸರಾ ಹಬ್ಬದ ಸಂಭ್ರಮದಲ್ಲಿದ್ದರು. ಜಂಬೂಸವಾರಿ ನೋಡಲು ಜನಸಾಗರವೇ ನೆರೆದಿತ್ತು. ಆದರೆ ಅದೇ ಸಂಭ್ರಮದ ನಡುವೆ ಆನೇಕಲ್‌ನಲ್ಲೊಂದು ಭೀಕರ ಕೊಲೆಯಾಗಿದೆ. ಆನೇಕಲ್ ಪಟ್ಟಣದ ಚಿಕ್ಕಕೆರೆ ಸ್ಟೇಡಿಯಂ ಬಳಿ ಯಲ್ಲಪ್ಪ ಎಂಬುವವರ ಹತ್ಯೆ ಮಾಡಲಾಗಿದೆ.

ಮದ್ಯಪಾನ ವೇಳೆ ಗಲಾಟೆ ಶಂಕೆ: ತಲೆಗೆ ಬಲವಾಗಿ ಹಲ್ಲೆ

ತಮಿಳುನಾಡಿನ ಸಾರಕ್ಕನಪಲ್ಲಿ ಗ್ರಾಮದ ಯಲ್ಲಪ್ಪ, ಕಳೆದ 18 ವರ್ಷಗಳಿಂದ ತಟ್ನಹಳ್ಳಿಯಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದರು. ಬ್ಯಾಗಡದೇನಹಳ್ಳಿ ಪಂಚಾಯಿತಿಯಲ್ಲಿ ಕೆಲ ವರ್ಷ ಕೆಲಸ ಮಾಡಿದ್ದರು. ಇತ್ತೀಚೆಗೆ ಕೆಲಸ ಬಿಟ್ಟು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಯಲ್ಲಪ್ಪ ಅವರಿಗೆ ಸರಿಯಾಗಿ ಮಾತು ಬರುತ್ತಿರಲಿಲ್ಲ, ತೊದಲು ಮಾತನಾಡುತ್ತಿದ್ದರು.

ಇದನ್ನೂ ಓದಿ: ಬಾಗಲಕೋಟೆ ಅಜ್ಜಿ ಸಾವಿಗೆ ಬಿಗ್ ಟ್ವಿಸ್ಟ್: 7 ತಿಂಗಳ ಬಳಿಕ ಮಗ, ಸೊಸೆಯ ಕೃತ್ಯ ಬಯಲು

ನಿನ್ನೆ ದಸರಾ ಅಂಬಾರಿ ನೋಡಲು ಆನೇಕಲ್​ಗೆ ಬಂದಿದ್ದ ಯಲ್ಲಪ್ಪ, ಪತ್ನಿ ಕಾಂತಮ್ಮಗೆ ಸಂಜೆ 6.30 ಸುಮಾರಿಗೆ ಫೋನ್ ಮಾಡಿ ತಾನು ಜಂಬೂಸವಾರಿ ನೋಡಲು ಬಂದಿರುವುದಾಗಿ ಹೇಳಿದ್ದಾರೆ. ಆದರೆ ಸಂಭ್ರಮದಿಂದ ಮನೆಗೆ ಮರಳಬೇಕಿದ್ದ ವ್ಯಕ್ತಿ, ಕೊನೆಗೆ ಹೆಣವಾಗಿದ್ದಾರೆ. ರಾತ್ರಿ ಚಿಕ್ಕಕೆರೆ ಸ್ಟೇಡಿಯಂನಲ್ಲಿ ಮದ್ಯಪಾನ ಮಾಡುವ ವೇಳೆ ಗಲಾಟೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ವೇಳೆ ಯಲ್ಲಪ್ಪನ ತಲೆಗೆ ರಿಪೀಸ್‌ನಿಂದ ಬಲವಾಗಿ ಹಲ್ಲೆ ಮಾಡಲಾಗಿದ್ದು, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.

ಕೊಲೆಯಾದವನ ಮೊಬೈಲ್​ನಿಂದಲೇ ಪೊಲೀಸರಿಗೆ ಫೋನ್​​

ಇನ್ನು ಯಲ್ಲಪ್ಪನಿಗೆ ಹಲ್ಲೆ ನಡೆಸಿದ ಬಳಿಕ ಆತನ ಮೊಬೈಲ್‌ನಿಂದಲೇ 112ಗೆ ಕರೆ ಮಾಡಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸಿಬ್ಬಂದಿ ಯಲ್ಲಪ್ಪನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ತೀವ್ರ ರಕ್ತಸ್ರಾವ ಹಿನ್ನೆಲೆ  ಯಲ್ಲಪ್ಪ ಸಾವನ್ನಪ್ಪಿದ್ದಾರೆ. ಇತ್ತ ಯಲ್ಲಪ್ಪನ ಮೊಬೈಲ್ ತೆಗೆದುಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ.

ಅಷ್ಟೇ ಅಲ್ಲದೆ ಕೊಲೆಯಾದ ಯಲ್ಲಪ್ಪನ ಎಟಿಎಂ ಕಾರ್ಡ್​ನಲ್ಲಿ ಹಣ ಕೂಡ ಡ್ರಾ ಮಾಡಿಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ಸ್‌ಪೆಕ್ಟರ್ ಪ್ರಕಾಶ್ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಮೊಬೈಲ್ ಸಿಡಿಆರ್, ಲೊಕೇಶನ್ ಹಾಗೂ ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಿದ್ದಾರೆ. ಕೊನೆಯದಾಗಿ ಹಾರಗದ್ದೆ ಬಳಿ ಮೊಬೈಲ್ ಸ್ವಿಚ್ ಆಫ್ ಆಗಿರುವ ಮಾಹಿತಿ ಲಭ್ಯವಾಗಿದೆ. ‘ಕೂಡಲೇ ಆರೋಪಿಗಳನ್ನ ಬಂಧಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್’ ತಿಳಿಸಿದ್ದಾರೆ.

ಇದನ್ನೂ ಓದಿ: ಹಣದ ವಿಚಾರಕ್ಕೆ ಕುಚಿಕು ಗೆಳೆಯನನ್ನೇ ಕೊಂದ ಕಿರಾತಕ: ಕೊಲೆ ಬಳಿಕ ಆತನ ಮನೆಗೇ ತೆರಳಿ ಉಪ್ಪಿಟ್ಟು ಸವಿದಿದ್ದ ಆರೋಪಿ!

ಒಟ್ಟಿನಲ್ಲಿ ದಸರಾ ಜಂಬೂಸವಾರಿ ನೋಡಲು ಬಂದಿದ್ದ ಯಲ್ಲಪ್ಪ ಕೊಲೆಯಾಗಿದ್ದಾರೆ. ಮದ್ಯಪಾನದ ವೇಳೆ ಜೊತೆಯಲ್ಲಿದ್ದವರ ನಡುವೆ ಕ್ಷುಲ್ಲಕ ವಿಚಾರಕ್ಕೆ ಕೊಲೆ ನಡೆಯಿತಾ ಅಥವಾ ಅಪರಿಚಿತರು ಈ ಕೃತ್ಯ ಎಸಗಿದ್ರಾ ಎನ್ನುವ ಬಗ್ಗೆ ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಕೊಂಡು ಆರೋಪಿಗಳಿಗಾಗಿ ಪತ್ತೆಗೆ ಬಲೆ ಬೀಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಾಮು, ಆನೇಕಲ್​

ರಾಮು, ಟಿವಿ9 ವಾಹಿನಿ ಮುಖ್ಯ ಕಚೇರಿಯ ಬೆಂಗಳೂರಿನಲ್ಲಿ11 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದು,2023 ಜುಲೈ ತಿಂಗಳಿಂದ ಆನೇಕಲ್ ತಾಲೂಕು ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ, ನಾನು ಕ್ರೈಂ ಪೊಲಿಟಿಕಲ್ ಸಿನಿಮಾ ಮತ್ತು ಮೆಟ್ರೋ ಸ್ಟೋರೀಸ್ ಗಳನ್ನು ಕವರೇಜ್ ಮಾಡುತ್ತೇನೆ .

Read More
Loading...
Unable to load recommendations.
Follow Us