ಬೆಂಗಳೂರು: ನಗರದಲ್ಲಿ ಕಸದ ಲಾರಿಯ ಅಪಘಾತ(Accident)ಕ್ಕೆ ನಾಗಕರಿಕರು ಬಲಿಯಾಗುತ್ತಿದ್ದು, ಇದೀಗ ಮತ್ತೊಬ್ಬ ವ್ಯಕ್ತಿಯನ್ನು ಬಿಬಿಎಂಪಿ(BBMP) ಕಸದ ಲಾರಿ ಬಲಿ ಪಡೆದುಕೊಂಡಿದೆ. ಯಮಸ್ವರೂಪಿಯಂತೆ ಬಂದ ಬಿಬಿಎಂಪಿ ಕಸದ ಲಾರಿ(Truck), ಥಣಿಸಂದ್ರ ರೈಲ್ವೇ ಮೇಲ್ಸೇತುವೆ ಬಳಿ ಫುಡ್ ಡೆಲಿವರಿ ಬಾಯ್ ಮೇಲೆ ಹರಿದುಹೋಗಿದೆ. ಪರಿಣಾಮವಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೃತರನ್ನು ಯಾದಗಿರಿಯ ಸುರಪುರ ಮೂಲದ ದೇವಣ್ಣ (25) ಎಂದು ಗುರುತಿಸಲಾಗಿದೆ.
ದೇವಣ್ಣ ಅವರು ನಾಗವಾರದಿಂದ ಹೆಗ್ಗಡೆ ನಗರದ ಕಡೆಗೆ ಸಾಗುತ್ತಿದ್ದಾಗ ಹಿಂದಿನಿಂದ ಯಮಸ್ವರೂಪಿಯಂತೆ ಬಂದ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ದೇವಣ್ಣ ಅವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಪ್ರಕರಣ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕಜಾಲ ಸಂಚಾರಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಕಸದ ಲಾರಿ ಚಾಲಕ ದಿನೇಶ್ ನಾಯ್ಕ್ (40) ಎಂಬವರನ್ನು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ಕಳೆದ 2 ತಿಂಗಳಿನಲ್ಲಿ ಕಸದ ಲಾರಿಗೆ ನಾಲ್ಕು ಮಂದಿ ಬಲಿಯಾಗಿದ್ದಾರೆ. ಮಾ.21ರಂದು ಹೆಬ್ಬಾಳದ ಬಳಿಯ ಬಳಿಯ ಅಂಡರ್ ಪಾಸ್ನಲ್ಲಿ ನೀರು ನಿಂತಿದೆ ಎಂದು ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿ ಅಕ್ಷಯ ಕಸದ ಲಾರಿ ಅಡಿಗೆ ಬಿದ್ದು ಸಾವನ್ನಪ್ಪಿದ್ದಳು. ಈ ಸಂಬಂಧ ಆರ್ಟಿ ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಮಾ.31ರಂದು ಬಾಗಲೂರು ಥಣಿಸಂದ್ರ ಮುಖ್ಯ ರಸ್ತೆಯಲ್ಲಿ ರಾಮಯ್ಯ (70) ಎಂಬ ವ್ಯಕ್ತಿ, ಏ.18ರಂದು ಪದ್ಮಿನಿ ಎಂಬ ಎಸ್ಬಿಐ ಉದ್ಯೋಗಿ ಬಲಿಯಾಗಿದ್ದರು.
ಅಬಕಾರಿ ಇಲಾಖೆ ಡಿಸಿ ಸೆಲೀನಾ ಎಸಿಬಿ ಬಲೆಗೆ
ಕೊಪ್ಪಳ: ಲಂಚಕ್ಕೆ ಕೈಯೊಡ್ಡುತ್ತಿದ್ದಾಗ ಅಬಕಾರಿ ಡಿಸಿಯೊಬ್ಬರು ಭ್ರಷ್ಟಾಚಾರ ನಿಗ್ರಹ ದಳ(ACB)ದ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಹೊಸ ಬಾರ್ಗೆ ಲೈಸೆನ್ಸ್ ನೀಡಲು 3 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅದಿಕಾರಿಗಳು ದಾಳಿ ನಡೆಸಿ ಕೊಪ್ಪಳ ಅಬಕಾರಿ ಇಲಾಖೆ ಡಿಸಿ ಸೆಲೀನಾ ಅವರನ್ನು ಬಂಧಿಸಿದ್ದಾರೆ. ಹೊಸ ಬಾರ್ಗೆ ಲೈಸೆನ್ಸ್ ನೀಡಲು ಶೈಲಜಾ ಪ್ರಭಾಕರಗೌಡ ಎಂಬುವರಿಗೆ ಸೆಲೀನಾ ಅವರು 3 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಕುಷ್ಟಗಿ ಪಟ್ಟಣದಲ್ಲಿ ಶೈಲಜಾ ಅವರಿಂದ 3 ಲಕ್ಷ ಹಣದ ಪೈಕಿ 1 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಸೆಲೀನಾ, ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.