Crime News: ಚಾಮರಾಜನಗರದಲ್ಲಿ ಸಾಲ ಕೊಡುವುದಾಗಿ ಆನ್ ಲೈನ್ ಮೂಲಕ ಲಕ್ಷಾಂತರ ರೂ ದೋಖಾ, ಆಮೇಲೇನಾಯ್ತು!?
Online fraud: 50 ಪೈಸೆ ಬಡ್ಡಿ ದರದಲ್ಲಿ 5 ಲಕ್ಷ ಸಾಲ ಕೊಡುವುದಾಗಿ ವ್ಯಕ್ತಿಯೊಬ್ಬ ಹೇಳಿದ್ದ. ಅದರಂತೆ ವಾಟ್ಸ್ ಆಫ್ ಮೂಲಕ ಚಾಟ್ ಮಾಡುತ್ತಾ ಮೋಸ ಹೋಗಿರುವುದು ದೃಢಪಟ್ಟಿದೆ. ಈ ವೇಳೆ 1,75,000 ರೂ ಕಮಿಷನ್ ಕಟ್ಟಬೇಕು ಎಂದು ವಂಚಕ ತನ್ನ ಖಾತೆಗೆ ಹಣ ಹಾಕಿಸಿಕೊಂಡಿದ್ದಾನೆ.
ಚಾಮರಾಜನಗರ: ಸಾಲ ಕೊಡುವುದಾಗಿ ಆನ್ ಲೈನ್ ನಲ್ಲಿ ಲೈಟ್ ಸ್ಟೀಮ್ ಕಂಪನಿ ಹೆಸರಿನಲ್ಲಿ ದೋಖಾ ಮಾಡಿರುವ ಪ್ರಸಂಗ ನಡೆದಿದೆ. ಚಾಮರಾಜನಗರ ತಾಲೂಕಿನ ಕುಮಚಹಳ್ಳಿ ಗ್ರಾಮದ ನಾಗಮಲ್ಲಪ್ಪ ಎಂಬುವವರಿಗೆ ವಂಚನೆ ಮಾಡಲಾಗಿದೆ. 50 ಪೈಸೆ ಬಡ್ಡಿ ದರದಲ್ಲಿ 5 ಲಕ್ಷ ಸಾಲ ಕೊಡುವುದಾಗಿ ವ್ಯಕ್ತಿಯೊಬ್ಬ ಹೇಳಿದ್ದ. ಅದರಂತೆ ವಾಟ್ಸ್ ಆಫ್ ಮೂಲಕ ಚಾಟ್ ಮಾಡುತ್ತಾ ಮೋಸ ಹೋಗಿರುವುದು ದೃಢಪಟ್ಟಿದೆ. ಈ ವೇಳೆ 1,75,000 ರೂ ಕಮಿಷನ್ ಕಟ್ಟಬೇಕು ಎಂದು ವಂಚಕ ತನ್ನ ಖಾತೆಗೆ ಹಣ ಹಾಕಿಸಿಕೊಂಡಿದ್ದಾನೆ. ಬ್ಯಾಂಕ್ ಖಾತೆಗೆ ಹಣ ಹಾಕಿದ ಬಳಿಕ ತಾನು ಮೋಸ ಹೋಗುತ್ತಿರುವುದು ನಾಗಮಲ್ಲಪ್ಪ ಸುಳಿವು ಸಿಕ್ಕಿದೆ. ತಕ್ಷಣ ಎಚ್ಚೆತ್ತುಕೊಂಡ ನಾಗಮಲ್ಲಪ್ಪ ಚಾಮರಾಜನಗರ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ಸಮಾಧಾನದ ಸಂಗತಿಯೆಂದರೆ ನಾಗಮಲ್ಲಪ್ಪ ತಾನು ವರ್ಗಾಯಿಸಿದ್ದ ಹಣ ವಂಚಕ ಹೇಳಿದ್ದ ಬ್ಯಾಂಕ್ ಖಾತೆಯಲ್ಲೆ ಭದ್ರವಾಗಿತ್ತು. ತಕ್ಷಣ ಎಚ್ಚೆತ್ತ ಪೊಲೀಸರು ವಂಚಕನ ಅಕೌಂಟ್ ಅನ್ನು ಫ್ರೀಜ್ ಮಾಡಿಸಿದ್ದಾರೆ. ಬಳಿಕ ಕೋರ್ಟ್ ನಿಂದ ಆದೇಶ ತಂದು ಪೊಲೀಸರು ಸಂತ್ರಸ್ತ ಗ್ರಾಹಕನಿಗೆ ಹಣ ಕೊಡಿಸಿದ್ದಾರೆ. ಕಷ್ಟಾರ್ಜಿತ ಹಣ ಮತ್ತೆ ತನ್ನ ಕೈಸೇರಿದಾಗ ನಾಗಮಲ್ಲಪ್ಪ ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.
ಚಾಮರಾಜನಗರ: ಮನೆಯ ಬಾಗಿಲು ಮುರಿದು ಕಳ್ಳತನ
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಮನೆಯ ಬಾಗಿಲು ಮುರಿದು ಮನೆಯಲ್ಲಿದ್ದ 35 ಗ್ರಾಂ ಚಿನ್ನಾಭರಣ ಕಳವು ಮಾಡಲಾಗಿದೆ. ಪಟ್ಟಣದ ರಾಮಸ್ವಾಮಿ ಬಡಾವಣೆಯ ಮಹಮ್ಮದ್ ಇಸ್ಮಾಯಿಲ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ. ಇಸ್ಮಾಯಿಲ್ ಕುಟುಂಬದವರು ಮೂರು ದಿನಗಳ ಕಾಲ ಮನೆಗೆ ಬೀಗ ಹಾಕಿ ಚಿಕ್ಕಮಗಳೂರಿಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದನ್ನು ನೋಡಿ ಕಳ್ಳತನ ಮಾಡಲಾಗಿದೆ. ಸ್ಥಳಕ್ಕೆ ಕೊಳ್ಳೇಗಾಲ ಠಾಣೆ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾವಣಗೆರೆ: ಯುವತಿಗೆ ಫೇಸ್ ಬುಕ್ ನಲ್ಲಿ ಅಶ್ಲೀಲ ಮೆಸೇಜ್, ಪೋಟೋ ಹಾಕಿದ ಯುವಕನಿಗೆ ಕುಟುಂಬಸ್ಥರಿಂದ ಧರ್ಮದೇಟು
ಯುವತಿಗೆ ಫೇಸ್ ಬುಕ್ ನಲ್ಲಿ ಅಶ್ಲೀಲ ಮೆಸೇಜ್ ಮಾಡಿ, ಪೋಟೋ ಹಾಕಿದ ಯುವಕನಿಗೆ ಯುವತಿಯ ಕುಟುಂಬಸ್ಥರು ಧರ್ಮದೇಟು ಕೊಟ್ಟಿದ್ದಾರೆ. ದಾವಣಗೆರೆ ಜಿಲ್ಲೆಯ ಮಾಯಕೊಂಡ ಹೋಬಳಿಯ ಅತ್ತಿಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅತ್ತಿಗೆರೆ ಗ್ರಾಮದ ಗಣೇಶ್ ಎಂಬ ಯುವಕ ಅದೇ ಗ್ರಾಮದ ಯುವತಿಗೆ ಕಾಟ ಕೊಡುತ್ತಿದ್ದ. ವಾಟ್ಸಾಪ್ ನಲ್ಲಿ ಮೆಸೇಜ್ ಮಾಡುವುದು, ಫೇಸ್ ಬುಕ್‌ನಲ್ಲಿ ಯುವತಿಯ ಪೋಟೋ ಹಾಕಿ ಕವನ ಬರೆಯುವುದು ಮಾಡುತ್ತಿದ್ದ. ಇದೆಲ್ಲಾ ಯುವತಿಯ ಕುಟುಂಬಸ್ಥರಿಗೆ ಗೊತ್ತಾಗಿ ಯುವಕನಿಗೆ ಧರ್ಮದೇಟು ನೀಡಿದ್ದಾರೆ. ಗ್ರಾಮಸ್ಥರು ಸಹ ಯುವಕನಿಗೆ ಧರ್ಮದೇಟು ನೀಡಿ, ಅರೆಬೆತ್ತಲೆಯಾಗಿ ಓಡಾಡಿಸಿದ್ದಾರೆ. ದೇವಸ್ಥಾನದ ಬಳಿ ಕಂಬಕ್ಕೆ ಕಟ್ಟಿ ಹಾಕಿ ಧರ್ಮದೇಟು ನೀಡಿದ್ದಾರೆ. ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ದಾವಣಗೆರೆ: ರೈಲ್ವೆ ಪೊಲೀಸರ ಸಮಯಪ್ರಜ್ಞೆಯಿಂದ ಬದುಕಿ ಉಳಿದ ವೃದ್ದೆ
ರೈಲ್ವೆ ಪೊಲೀಸರ ಸಮಯಪ್ರಜ್ಞೆಯಿಂದ ವೃದ್ದೆಯೊಬ್ಬರು ಬದುಕಿ ಉಳಿದಿದ್ದಾರೆ. ನೇರವಾಗಿ ರೈಲಿನ ಕೆಳಗೆ ಬೀಳಲಿದ್ದ ವೃದ್ದೆಯನ್ನು ರೈಲ್ವೆ ಪೊಲೀಸರು ರಕ್ಷಿಸಿದ್ದಾರೆ. ದಾವಣಗೆರೆಯ ರೈಲ್ವೆ ನಿಲ್ದಾಣದ ಬಳಿ ಈ ಆಕಸ್ಮಿಕ ಘಟನೆ ನಡೆದಿದೆ. ರೈಲ್ವೆ ಪೊಲೀಸ್ ಕಾನ್ಸ್‌ಟೇಬಲ್ ಟಿ ಆರ್ ಚೇತನ್ ವೃದ್ದೆಯನ್ನು ರಕ್ಷಣೆ ಮಾಡಿದ್ದಾರೆ. ಶನಿವಾರ ಮಧ್ಯಾಹ್ನ 2 ಗಂಟೆಗೆ ವಿಶ್ವಮಾನವ ಎಕ್ಸ್‌ಪ್ರೆಸ್ ರೈಲು ಚಲಿಸುತ್ತಿದ್ದಾಗ ಕೆಳಗಿಳಿಯಲು ವೃದ್ದೆ ಮುಂದಾದಾಗ ಈ ಅಚಾತುರ್ಯ ನಡೆದಿದೆ. 60 ವರ್ಷದ ಈ ವೃದ್ದೆ ಬೆಂಗಳೂರಿನಿಂದ ಮೀರಜ್ ಗೆ ಹೋಗುತ್ತಿದ್ದರು. ನೀರು ಕುಡಿಯಲೆಂದು ರೈಲು ಚಲಿಸುತ್ತಿರುವುದು ಗೊತ್ತಾಗದೆ ಇಳಿದಾಗ ಅಪಾಯ ಎದುರಾಗಿದೆ. ಆಯತಪ್ಪಿ ರೈಲಿನ ಕೆಳಗೆ ಬೀಳುವಾಗ ಸರಿಯಾದ ಸಮಯಕ್ಕೆ ರೈಲ್ವೆ ಕಾನ್ಸ್‌ಟೇಬಲ್ ಚೇತನ್ ರಕ್ಷಣೆ ಮಾಡಿದ್ದಾರೆ. ಚೇತನ್ ರಕ್ಷಣೆ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಚೇತನ್ ಕಾರ್ಯಕ್ಕೆ ಪ್ರಶಂಸೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:12 pm, Sat, 14 May 22