ಚೆನ್ನೈ: ಚೆನ್ನೈನ ಓಲ್ಡ್ ಮಹಾಬಲಿಪುರಂ ರಸ್ತೆಯಲ್ಲಿ (OMR) ಕ್ಯಾಬ್ ಬುಕ್ ಮಾಡಿದ ಟೆಕಿಯೊಬ್ಬರು ಒಟಿಪಿ ನೀಡುವುದಕ್ಕೆ ತಡ ಮಾಡಿದರೆಂದು ಕೋಪಗೊಂಡ ಓಲಾ ಕ್ಯಾಬ್ ಚಾಲಕ (Ola cab driver) ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಮಾಡಿದ ಘಟನೆ ಭಾನುವಾರ ನಡೆದಿದೆ. ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಾರ ಹತ್ಯೆಗೀಡಾದ ಟೆಕಿಯನ್ನು 34ರ ಹರೆಯದ ಎಚ್ ಉಮೆಂದರ್ ಎಂದು ಗುರುತಿಸಲಾಗಿದೆ. ಉಮೆಂದರ್ ಗುಡುವಾಂಚೇರಿ ನಿವಾಸಿ ಆಗಿದ್ದು, ಕೊಯಂಬತ್ತೂರಿನಲ್ಲಿ ಸಾಫ್ಟ್ವೇರ್ ಡೆವೆಲಪರ್ ಆಗಿ ಕೆಲಸ ಮಾಡುತ್ತಿದ್ದರು. ಭಾನುವಾರ 3.30ಕ್ಕೆ ಸಿನಿಮಾ ನೋಡಲು ನವಲೂರ್ನಲ್ಲಿರುವ ಮಾಲ್ಗೆ ಉಮೆಂದರ್ ಕುಟುಂಬ ಸಮೇತ ಹೊರಟಿದ್ದರು. ಉಮೆಂದರ್ ಅವರು ಪತ್ನಿ ಭವ್ಯಾ, ಇಬ್ಬರು ಮಕ್ಕಳು, ಭವ್ಯಾ ಅವರ ಸಹೋದರಿ ಮತ್ತು ಅವರ ಮಕ್ಕಳು ಜತೆಯಾಗಿ ಹೊರಟಿದ್ದರು. ಒಟಿಪಿ ಹೇಳುವ ಮುನ್ನವೇ ವಾಹನಕ್ಕೆ ಹತ್ತಿದ್ದಕ್ಕೆ ಕ್ಯಾಬ್ ಚಾಲಕ ಎನ್ ರವಿ (41) ಸಿಟ್ಟುಗೊಂಡಿದ್ದರು. ವಾಹನದೊಳಗೆ ಹತ್ತಿದ್ದವರನ್ನು ಕೆಳಗಿಳಿಯುವಂತೆ ರವಿ ಗದರಿಸಿದ್ದರು. ಏಳು ಜನರು ಇರುವ ಕಾರಣ ನೀವು ಎಸ್ಯುವಿ ಬುಕ್ ಮಾಡಬೇಕಿತ್ತು ಎಂದು ಕ್ಯಾಬ್ ಚಾಲಕ ಉಮೆಂದರ್ಗೆ ಹೇಳಿ ಜಗಳ ಶುರು ಮಾಡಿದ್ದಾರೆ. ನಂತರ ಉಮೆಂದರ್ ತಲೆಗೆ ಹೊಡೆದಿದ್ದು, ನೆಲಕ್ಕೆ ಬೀಳುವ ತನಕ ಹಲ್ಲೆ ನಡೆಸಿದ್ದಾರೆ.
ಉಮೆಂದರ್ ಅವರ ಪತ್ನಿಯ ಪ್ರಕಾರ ರವಿಯ ಹೊಡೆತಕ್ಕೆ ತನ್ನ ಪತಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದು, ಕರೆತರುವಾಗಲೇ ಅವರ ಪ್ರಾಣ ಹೋಗಿದೆ ಎಂದು ಆಸ್ಪತ್ರೆಯವರು ಹೇಳಿದ್ದಾರೆ. ಏತನ್ಮಧ್ಯೆ, ಹಲ್ಲೆ ನಡೆಸಿದ ರವಿ ಅಲ್ಲಿಂದ ಓಡಿ ಹೋಗಿದ್ದಾರೆ. ಈ ಪ್ರಕರಣ ಬಗ್ಗೆ ಕೇಳಂಬಾಕಂ ಪೊಲೀಸರು ಪ್ರಕರಣ ದಾಖಲಿಸಿದ್ದು ಆರೋಪಿ ರವಿಯನ್ನು ಬಂಧಿಸಿದ್ದಾರೆ.