ಬೆಂಗಳೂರು, ಫೆಬ್ರವರಿ 25): ಬೆಂಗಳೂರನ್ನೇ ಬೆಚ್ಚಿಬೀಳಿಸಿರುವ ರೌಡಿ ಶೀಟರ್ ಹೈದರ್ ಅಲಿ ಹತ್ಯೆ ನಡೆದು ಮೂರು ದಿನವೇ ಕಳೆದೊಯ್ತು. ಆದರೆ ನಡುರಸ್ತೆಯಲ್ಲಿ ಹೈದರ್ ಅಲಿಯನ್ನ ಭೀಕರವಾಗಿ ಕೊಲೆಗೈದ ಆರೋಪಿಗಳು ಮಾತ್ರ ಪತ್ತೆಯಾಗಿಲ್ಲ.. ಅಶೋಕ್ ನಗರ ಪೊಲೀಸರು ಸದ್ಯ ಪ್ರಕರಣ ಸಂಬಂಧ ನಾಲ್ವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಕೊಲೆಗಾರರ ಬೆನ್ನು ಹತ್ತಿದ್ದಾರೆ.
ಶಾಂತಿನಗರ ಕಾಂಗ್ರೆಸ್ ಮುಖಂಡನ ಸಹೋದರ. ಮತ್ತು ಶಾಸಕ ಹ್ಯಾರಿಸ್ ಬಳಗದಲ್ಲಿ ಗುರುತಿಸಿಕೊಂಡಿದ್ದ ಹೈದರ್ ಅಲಿಯನ್ನ ಶನಿವಾರ ರಾತ್ರಿ ಭೀಕರವಾಗಿ ಹತ್ಯೆ ಮಾಡಲಾಯ್ತು. ಈ ಪ್ರಕರಣದ ತನಿಖೆ ನಡೆಸುತ್ತಿರೋ ಅಶೋಕ್‌ನಗರ ಪೊಲೀಸರು ನಾಲ್ವರು ಶಂಕಿತರನ್ನ ವಶಕ್ಕೆ ತೆಗೆದುಕೊಂಡಿದ್ರು. ವಶಕ್ಕೆ ಪಡೆದವರನ್ ತೀವ್ರ ವಿಚಾರಣೆ ನಡೆಸಿ ಕೆಲವು ಮಹತ್ವದ ಮಾಹಿತಿ ಸಂಗ್ರಹಿಸಲಾಗಿದೆ. ಈ ಮಾಹಿತಿ ಆಧಾರದ ಮೇಲೆಯೇ ಪೊಲೀಸರು ಕೊಲೆಗಾರರ ಹುಡುಕಾಟ ಮುಂದುವರಿಸಿದ್ದಾರೆ. ಇನ್ನೂ ಹೈದರ್ ಅಲಿ ಕೊಲೆಗೆ ಹಳೇ ದ್ವೇಷವೇ ಕಾರಣ ಎನ್ನಲಾಗಿದೆ.
ಸದ್ಯ ಪೊಲೀಸರು ಕೊಲೆ ಹಿಂದಿನ ಕಾರಣ ಏನು ಅನ್ನೋದನ್ನೂ ಪತ್ತೆ ಹಚ್ಚುತ್ತಿದ್ದಾರೆ. ಹಾಗೆ ಆರೋಪಿಗಳ ಜಾಡಿ ಹಿಡಿದು ಹೊರ ಜಿಲ್ಲೆಗಳಲ್ಲೂ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಹೈದರ್ ಅಲಿ ಕೊಲೆಗೆ ಸುಪಾರಿ ಕೊಡಲಾಗಿದೆ ಎನ್ನಲಾಗ್ತಿದ್ದು, ಕೊಲೆ ಹಿಂದಿನ ಮಾಸ್ಟರ್ ಮೈಂಡ್ ಯಾರು ಎನ್ನುವುದೇ ನಿಗೂಢವಾಗಿದೆ.
ಬೆಂಗಳೂರಿನ ರೆಸಿಡೆನ್ಸಿ ರಸ್ತೆಯ ಬಾರ್‌ನಲ್ಲಿ ತಡರಾತ್ರಿವರೆಗೆ ಪಾರ್ಟಿ ಮಾಡಿದ್ದ ಹೈದರ್ ಅಲಿ, ಸ್ನೇಹಿತನ ಜತೆ ಕಾರಿನಲ್ಲಿಆನೆಪಾಳ್ಯದ ತನ್ನ ಮನೆಗೆ ಹೋಗುತ್ತಿದ್ದಾಗ ನಾಲ್ಕೈದು ದುಷ್ಕರ್ಮಿಗಳು ದಾಳಿ ಮಾಡಿದ್ದರು. ಮತ್ತೊಂದು ಕಾರಿನಲ್ಲಿ ಹಿಂಬಾಲಿಸಿ ಬಂದು ಫುಟ್ಬಾಲ್ ಸ್ಟೇಡಿಯಂ ಬಳಿ ಅಡ್ಡಗಟ್ಟಿದ್ದರು. ಆಗ ಕಾರಿನಿಂದ ಕೆಳಗಿಳಿದು ತಪ್ಪಿಸಿಕೊಳ್ಳಲು ಮುಂದಾದ ಹೈದರ್ ಅಲಿಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಂದಿದ್ದರು. ಈ ವೇಳೆ ಹೈದರ್ ಅಲಿಯನ್ನು ರಕ್ಷಿಸಲು ಮುಂದಾದ ಆತನ ಸ್ನೇಹಿತನ ಮೇಲೂ ದುಷ್ಕರ್ಮಿಗಳು ಹಲ್ಲೆನಡೆಸಿದ್ದರು.
ವರದಿ: ಪ್ರದೀಪ್ ಚಿಕ್ಕಾಟಿ, Tv9, ಬೆಂಗಳೂರು