ಕೆವೈಸಿ ಅಪ್ಡೇಟ್ ಹೆಸರಿನಲ್ಲಿ ಬರುವ ಲಿಂಕ್ ತೆರೆಯುವ ಮುನ್ನ ಎಚ್ಚರ… ಬೆಂಗಳೂರಿನಲ್ಲಿ ಒಂದೇ ದಿನ ಹತ್ತಾರು ಖಾತೆಗಳಿಗೆ ಕನ್ನ
ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್, ಕೆವೈಸಿ ಅಪ್ಡೇಟ್ ಹೆಸರಿನಲ್ಲಿ ನಕಲಿ ಲಿಂಕ್ ಕಳುಹಿಸಿ ಒಂದೇ ದಿನ ಹತ್ತಾರು ಖಾತೆಗಳಿಗೆ ಕನ್ನ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು: ಮೆಸೆಜ್ ಮೂಲಕ ಕ್ರೆಡಿಟ್ ಕಾರ್ಡ್ (Credit Card) ರಿವಾರ್ಡ್ ಪಾಯಿಂಟ್, ಕೆವೈಸಿ ಅಪ್ಡೇಟ್ (KYC Update) ಹೆಸರಿನಲ್ಲಿ ನಕಲಿ ಲಿಂಕ್ ಕಳುಹಿಸಿ ಒಂದೇ ದಿನ ಹತ್ತಾರು ಖಾತೆಗಳಿಗೆ ಕನ್ನ ಹಾಕಿದ ಘಟನೆಗಳು ನಗರದಲ್ಲಿ ಹೆಚ್ಚುತ್ತಿವೆ. ಸೈಬರ್ ವಂಚನೆ ಅಪರಾಧ ಸಂಬಂಧ ನಗರದ ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆ (CEN Police Station)ಯಲ್ಲಿ ಸಾಲು ಸಾಲು ದೂರುಗಳು ದಾಖಲಾಗುತ್ತಿವೆ. ನವೆಂಬರ್ 30ರಂದು ಹತ್ತಾರು ಜನರಿಗೆ ಇದೇ ರೀತಿ ನಕಲಿ ಲಿಂಕ್ (Fake Link) ಕಳಿಸಿ ವಂಚನೆ ಎಸಗಲಾಗಿದ್ದು, ಲಿಂಕ್ ಓಪನ್ ಮಾಡಿದ 70 ವರ್ಷದ ನಿವೃತ್ತ ಇಂಜಿನಿಯರ್ ಖಾತೆಯಲ್ಲಿದ್ದ ಒಂದೂವರೆ ಲಕ್ಷಕ್ಕೂ ಅಧಿಕ ಹಣ ವಂಚಕರ ಖಾತೆಗೆ ಸೇರಿದೆ. ಇದೇ ದಿನ ಪ್ರೀತಿ ಶೆಟ್ಟಿ ಎಂಬಾಕೆಯ ಖಾತೆಯಲ್ಲಿದ್ದ ಸಾವಿರಾರು ರೂಪಾಯಿ ನೋಯ್ಡಾ ಮೂಲದ ಪೇಟಿಎಂ ಖಾತೆಗೆ ವರ್ಗಾವಣೆಯಾಗಿದೆ.
ನವೆಂಬರ್ 30ರಂದು ವಂಚಕರ ಜಾಲ ನಗರದ ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವೃತ್ತ ಇಂಜಿನಿಯರ್ ಒಬ್ಬರಿಗೆ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್, ಕೆವೈಸಿ ಅಪ್ಡೇಟ್ ಹೆಸರಿನಲ್ಲಿ ಲಿಂಕ್ ಕಳುಹಿಸಿದೆ. ಈ ಲಿಂಕ್ ಅನ್ನು ನಿವೃತ್ತ ಇಂಜಿನಿಯರ್ ತೆರೆದ ಕೂಡಲೇ ಅವರ ಖಾತೆಯಲ್ಲಿದ್ದ 1.93 ಲಕ್ಷ ರೂಪಾಯಿ ವಂಚಕರ ಪಾಲಾಗಿದೆ.
ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರೀತಿ ಶೆಟ್ಟಿ ಎಂಬಾಕೆಗೆ ಇದೇ ರೀತಿ ಮೆಸೆಜ್ ಕಳುಹಿಸಲಾಗಿದೆ. ವಂಚನೆಯ ಬಗ್ಗೆ ಮಾಹಿತಿ ಇಲ್ಲದ ಈಕೆ ಲಿಂಕ್ ತೆರೆದಿದ್ದಾಳೆ. ಈ ಕೂಡಲೇ ಪ್ರೀತಿಯ ಬ್ಯಾಂಕ್ ಖಾತೆಯಲ್ಲಿದ್ದ 8 ಸಾವಿರ ರೂಪಾಯಿ ಡೆಬಿಟ್ ಆಗಿದೆ. ನೋಯ್ಡಾ ಮೂಲದ ಪೇಟಿಎಂ ಖಾತೆಗೆ ಈ ಹಣ ವರ್ಗಾವಣೆಯಾಗಿರುವುದು ತಿಳಿದುಬಂದಿದೆ. ಸದ್ಯ ವಂಚನೆ ಪ್ರಕರಣ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:54 am, Fri, 2 December 22