ಬೆಂಗಳೂರು: ಪ್ರೀತಿ ನಿರಾಕರಿಸಿದ ಕಾರಣಕ್ಕೆ ಅಪ್ರಾಪ್ತ ಬಾಲಕಿ ಮೇಲೆ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ‘ ಸುಮಂತ್ ಎಂಬಾತ ನನ್ನ ಮಗಳಿಗೆ ಬೆದರಿಕೆ ಹಾಕಿದ್ದನು, ನಿನ್ನೆ ಬೆಳಗ್ಗೆಯಿಂದಲೂ ನನ್ನ ಮಗಳಿಗೆ ತೊಂದರೆ ಕೊಡ್ತಿದ್ದ. ಮಧ್ಯಾಹ್ನ ನಮ್ಮ ಮನೆಗೆ ಬಂದು ಕಲ್ಲಿಂದ ಹೊಡೆದಿದ್ದು, ಅದು ನನ್ನ ಮಗಳಿಗೆ ಜಸ್ಟ್ ಮಿಸ್ ಆಗಿತ್ತು. ನನ್ನ ಜೊತೆಗೆ ಇರಬೇಕೆಂದು ನನ್ನ ಪುತ್ರಿಗೆ ಬೆದರಿಕೆ ಹಾಕಿದ್ದನು. ಆಗ ನನ್ನ ಮಗಳು ಮತ್ತು ಮಗ ಹುಡುಗನ ಹತ್ತಿರಕ್ಕೆ ಹೋಗಿದ್ದಾರೆ. ಈ ವೇಳೆ ಕಾಲಿನ ಮೇಲೆ ಬಿದ್ದು ಕ್ಷಮೆ ಕೇಳಬೇಕು ಎಂದು ಆತ ಹೆದರಿಸಿದ್ದು, ಹುಡುಗನ ಕಾಲಿಗೆ ಬೀಳುವ ಸಮಯದಲ್ಲಿ ಆ್ಯಸಿಡ್ ಹಾಕಿದ್ದಾನೆ. ನನ್ನ ಮಗಳಿಗೆ ಆದ ನೋವು ಬೇರೆ ಯಾರಿಗೂ ಆಗಬಾರದು. ಜೊತೆಗೆ ಆ್ಯಸಿಡ್ ಎರಚಿದ ಹುಡುಗನಿಗೆ ಕಾನೂನಿನಡಿ ಶಿಕ್ಷೆ ಆಗಬೇಕು ಎಂದು ಆ್ಯಸಿಡ್ ದಾಳಿಗೊಳಗಾದ ಬಾಲಕಿ ತಾಯಿ ಹೇಳಿದರು.
ಇನ್ನು ಹುಡುಗನ ಬಗ್ಗೆ ನಮಗೆ ಏನು ಗೊತ್ತಿಲ್ಲ. ಆತನನ್ನು ಪೋಲಿಸರು ವಶಕ್ಕೆ ಪಡೆದಿರುವುದು ಟಿವಿ9 ನಲ್ಲಿ ನೋಡಿದ ಬಳಿಕವಷ್ಟೇ ನನಗೆ ಗೊತ್ತಾಗಿದೆ. ನಿನ್ನೆ ನಮ್ಮ ಮನೆಗೆ ಬಂದು ನಾನು ಬೇಕಾ ಅಥವಾ ನಿನ್ನ ಅಮ್ಮ ಬೇಕಾ ಎಂದು ಮಗಳ ಮುಂದೆ ದಮ್ಕಿ ಹಾಕಿದ್ದನಂತೆ. ನೀನು ನನಗೆ ಬೇಕು, ಬೇರೆ ಅವರ ಜೊತೆಗೆ ಇರಲು ನಾನು ಬಿಡಲ್ಲ. ನನ್ನ ಜೊತೆಗೆನೇ ನೀನು ಬಾಳುಬೇಕು ಎಂದಿದ್ದು, ಇದಾದ ಮೇಲೆ ನನ್ನ ಕಾಲಿನ ಮೇಲೆ ಬಿದ್ದು ಕ್ಷಮೆ ಕೇಳಬೇಕು ಎಂದು ನನ್ನ ಮಗಳಿಗೆ ಕೇಳಿದ್ದ. ಹಾಗಾಗಿ ಮಗಳು ಹುಡುಗನ ಕಾಲಿಗೆ ಬೀಳುವ ಸಮಯದಲ್ಲಿ ಆಸಿಡ್ ಹಾಕಿದ್ದಾನೆ. ಆ್ಯಸಿಡ್ ಹಾಕಿದ ನೋವಿಗೆ ನನ್ನ ಮಗಳು ಜೋರಾಗಿ ಕಿರುಚಿದ್ದಾಳೆ. ನನ್ನ ಮಗ ಅಕ್ಕಪಕ್ಕದಲ್ಲಿ ಇರುವ ಜನರನ್ನು ಕರೆದುಕೊಂಡು ಬಂದು ನನ್ನ ಮಗಳಿಗೆ ಹಾಸ್ಪಿಟಲ್ಗೆ ಅಡ್ಮಿಟ್ ಮಾಡಿದ್ದಾರೆ. ಹಾಸ್ಪಿಟಲ್ನಲ್ಲಿ ಅಡ್ಮಿಟ್ ಮಾಡಿದ ಬಳಿಕವಷ್ಟೇ ನನಗೆ ಗೊತ್ತಾಗಿದೆ ಎಂದು ಬಾಲಕಿ ತಾಯಿ ಹೇಳಿದ್ದಾರೆ.
ಇನ್ನು ಘಟನೆ ಬಳಿಕ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತೆಯ ಆರೋಗ್ಯ ವಿಚಾರಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ನಿನ್ನೆ(ಫೆ.17) ಪ್ರಾಥಮಿಕ ಚಿಕಿತ್ಸೆ ನೀಡಿ ಸಂತ್ರಸ್ತೆಯನ್ನು ವೈದ್ಯರು ಡಿಸ್ಚಾರ್ಜ್ ಮಾಡಿದ್ದು, ಮತ್ತೆ ಚಿಕಿತ್ಸೆಗೆ ಬರುವಂತೆ ಸೂಚಿಸಿದ್ದರು. ಇನ್ನು ಆ್ಯಸಿಡ್ ದಾಳಿ ವೇಳೆ ಬಾಲಕಿ ಕಣ್ಣು, ಮುಖ, ಕುತ್ತಿಗೆ ಭಾಗ, ಎಡ ಭಾಗದ ಕಣ್ಣಿಗೆ ಹಾನಿಯಾಗಿದೆ. ಈ ಹಿನ್ನಲೆ ಸಂತ್ರಸ್ತೆಗೆ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ತಪ್ಪಿತಸ್ಥನ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತೆ
ಇನ್ನು ಬಾಲಕಿ ಭೇಟಿ ಬಳಿಕ ಮಾತನಾಡಿದ ಸಚಿವ ಹಾಲಪ್ಪ ಆಚಾರ್, ನಿನ್ನೆ(ಫೆ.17) ಕನಕಪುರ ಟೌನ್ ನಲ್ಲಿ ಬಾಲಕಿ ಮೇಲೆ ಕಿಡಿಗೇಡಿಯೊಬ್ಬ ರಾಸಾಯನಿಕ ಎರಚಿದ್ದಾನೆ. ಬಾಲಕಿಯ ಕಣ್ಣಿಗೆ ಗಾಯ ಆಗಿದೆ. ನಿನ್ನೆ ರಾತ್ರಿ ನನಗೆ ವಿಷಯ ಗೊತ್ತಾಗಿ ಇಂದು ಹೋಗಿ ಮಗುವಿಗೆ ಧೈರ್ಯ ಹೇಳಿ ಬಂದಿದ್ದೇನೆ. ಸಂತ್ರಸ್ತೆ ಹಾಗೂ ಆಕೆಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದೇನೆ. ಸಂತ್ರಸ್ತೆಯ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸುತ್ತೆ. ಘಟನೆ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಪ್ಪಿತಸ್ಥನ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತೆ. ಯಾವುದೇ ಸಮಸ್ಯೆ ಬಂದರೂ ಭಯಪಡ್ಬೇಡಿ. ಇಲ್ಲಿರುವ ವೈದ್ಯರಿಂದ ಯುವತಿಗೆ ಉತ್ತಮ ಚಿಕಿತ್ಸೆ ಸಿಗಲಿದೆ. ಹೆಚ್ಚಿನ ಚರ್ಚೆ ಬೇಡ, ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೆ. ಕೆಲವು ಹುಚ್ಚು ಕ್ರಿಮಿಗಳು ಇರ್ತಾವೆ, ಇಂಥವರನ್ನು ಸುಮ್ಮನೆ ಬಿಡಲ್ಲ ಎಂದರು.
ಬಾಲಕಿಯ ಕುಟುಂಬಕ್ಕೆ ಆರೋಪಿ ಕಡೆಯಿಂದ ಬೆದರಿಕೆ ಇದೆಯಾ? ಈ ಬಗ್ಗೆ ಪರಿಶೀಲನೆ ನಡೆಸುವಂತೆ ರಾಮನಗರ ಎಸ್ಪಿಗೆ ಸೂಚಿಸಿದ್ದೇನೆ. ಬಾಲಕಿಯ ಕುಟುಂಬಸ್ಥರಿಗೆ ಸೂಕ್ತ ಭದ್ರತೆ ನೀಡುವಂತೆ ಸೂಚಿಸಿದ್ದೇನೆ. ಇಂತಹ ದುಷ್ಕರ್ಮಿಗಳು ನಮ್ಮ ಸಮಾಜದಲ್ಲಿ ಇರಬಾರದು ಎಂದರು.
ಇನ್ನು ಮತ್ತೊಂದೆಡೆ ಘಟನೆ ಸಂಬಂಧ ರಾಮನಗರ ಎಸ್ ಪಿ ಕಾರ್ತಿಕ್ ರೆಡ್ಡಿ ಮಾಹಿತಿ ನೀಡಿದ್ದಾರೆ. ನಿನ್ನೆ ಸಂಜೆ ಆರು ಗಂಟೆ ಸುಮಾರಿಗೆ ದಾಳಿ ನಡೆದಿದೆ. ಕನಕಪುರ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಪ್ರೀತಿ ಮಾಡುವಂತೆ ಯುವಕ ಬಲವಂತ ಮಾಡಿದ್ದ. ತಮ್ಮನ ಜೊತೆ ವಾಕಿಂಗ್ ಮಾಡುತ್ತಿದ್ದ ವೇಳೆ ಆ್ಯಸಿಡ್ ದಾಳಿ ನಡೆದಿದೆ. ಸಾರ್ವಜನಿಕರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಮಿಂಟೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಡಗಣ್ಣು ಭಾಗಕ್ಕೆ ಗಂಭೀರ ಗಾಯವಾಗಿದೆ. ಆರೋಪಿ ಕನಕಪುರ ಸಿವಾಸಿ, ಕನಕಪುರದ ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. 22 ವರ್ಷದ ಆರೋಪಿ ಸುಮಂತ್, ಕಳೆದ ಒಂದು ವರ್ಷದಿಂದ ಪ್ರೀತಿಸುವಂತೆ ಪೀಡಿಸುತ್ತಿದ್ದ. ಐಪಿಸಿ ಸೆಕ್ಷನ್ 326(ಎ)ಹಾಗೂ ಪೋಕ್ಸೋ ಅಡಿ ಪ್ರಕರಣ ದಾಖಲಾಗಿದೆ ಎಂದರು.
ನಾವು ಕಣ್ಣಿನ ಪರೀಕ್ಷೆ ಮಾಡುವಾಗ ಕಣ್ಣಿನ ಕಪ್ಪುಗುಡ್ಡೆಗೆ ತೊಂದರೆ ಆಗಿದೆ
ಮಿಂಟೋ ಹಾಸ್ಪಿಟಲ್ ನ ವೈದ್ಯಕೀಯ ಅಧ್ಯಕ್ಷೆ ಡಾಕ್ಟರ್ ಕಲ್ಪನ ಬಾಲಕಿ ಚಿಕಿತ್ಸೆ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆ ರಾತ್ರಿ ಸುಮಾರು ಒಂಬತ್ತು ಗಂಟೆಯಲ್ಲಿ ಸಂತ್ರಸ್ತೆ ಹುಡುಗಿ ಕಣ್ಣಿನ ಸಮಸ್ಯೆ ಎಂದು ಬಂದಿದ್ದಾರೆ. ಮೊದಲು ರಾಮನಗರ ಹಾಸ್ಪಿಟಲ್ ನಲ್ಲಿ ತೋರಿಸಿ ಬಂದಿದ್ದು ರಸಾಯನವನ್ನು ಮುಖಕ್ಕೆ ಎಸೆದಿದ್ದಾರೆ ಎನ್ನಲಾಗಿದೆ. ನಾವು ಕಣ್ಣಿನ ಪರೀಕ್ಷೆ ಮಾಡುವಾಗ ಕಣ್ಣಿನ ಕಪ್ಪುಗುಡ್ಡೆಗೆ ತೊಂದರೆ ಆಗಿದೆ ಎಂದು ತಿಳಿದು ಬಂದಿದೆ. ರಸಾಯನ ಪರಿಣಾಮವಾಗಿ ಪಾರದರ್ಶಕತೆ ಕಳೆದು ಸದ್ಯ ಕಣ್ಣು 20% ಹಾನಿ ಆಗಿದೆ. ಹಾಗೆ ಕಣ್ಣಿನ ಸುತ್ತ ಮುತ್ತ ಚರ್ಮ ಕೂಡ ಸ್ವಲ್ಪ ಮಟ್ಟಿಗೆ ಹಾನಿಯಾಗಿದೆ. ಸದ್ಯ ಆ್ಯಸಿಡ್ ಅಥವಾ ಯಾವ ರಾಸಾಯನಿಕ ಎನ್ನುವುದು ಗೊತ್ತಾಗ್ತಿಲ್ಲ ಎಂದು ಮಾಹಿತಿ ನೀಡಿದರು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ