ಬೆಂಗಳೂರು: ಅಂಡರ್ವರ್ಲ್ಡ್ನಲ್ಲಿ ಅಮಾಯಕರ ಮೇಲೆ ಅಟ್ಯಾಕ್ ಮಾಡುವುದಿಲ್ಲ ಎಂಬ ಮಾತಿತ್ತು. ಆದರೆ ಹೇಮಂತ್ ಕೊಲೆ ನಡೆದ ನಂತರ ಆ ಮಾತು ಸುಳ್ಳಾಗಿದೆ. ಏಕೆಂದರೆ ಕೊಲೆ ಮಾಡಿದ್ದೇ ಅಂಡರ್ವರ್ಲ್ಡ್ನಲ್ಲಿದ್ದ ಕುಳ್ಳು ರಿಜ್ವಾನ್ ಶಿಷ್ಯಂದಿರು. ಬಾಸ್ ಯಾರು ಗೊತ್ತಿಲ್ಲಾ ಅಂದಿದ್ದಕ್ಕೆ ಅಮಾಯಕ ಹೇಮಂತ್ನಲ್ಲಿ ಮುಖದ ಗುರುತೇ ಸಿಗದಂತೆ ಸುಮಾರು ನೂರು ಬಾರಿ ಕೊಚ್ಚಿ ಕೊಲೆ ಮಾಡಿದ್ದಾರೆ. ಸಾಲುದು ಎಂಬಂತೆ ವಿಡಿಯೋ ಮಾಡಿದ ಕಿರಾತಕರು ಅದನ್ನು ತನ್ನ ಬಾಸ್ಗೆ ಕಳುಹಿಸಿ ಬಾಸ್ ನಿಮ್ಮ ಬಗ್ಗೆ ಮಾತನಾಡಿದವನನ್ನು ಹೊಡೆದು ಹಾಕಿದ್ದೇವೆ ಎಂದು ಹೇಳಿ ಸ್ಥಳದಿಂದ ಪರಾರಿಯಾಗಿರುವುದು ಇದೀಗ ತಿಳಿದುಬಂದಿದೆ.
ರೌಡಿಸಂ ವಿಚಾರ ಬಂದಾಗ ಹೇಮಂತ್ ಯಾವ ರೌಡಿಗಳು? ಏನು ಇಲ್ಲಾ ಈಗ ಅಂದಿದ್ದಾನೆ. ಈ ವೇಳೆ ಅಲ್ಲೇ ಇದ್ದ ರೌಡಿ ಕುಳ್ಳು ರಿಜ್ವಾನ್ ಶಿಷ್ಯಂದಿರು ಹೇಮಂತ್ ಮಾತನ್ನು ಕೇಳಿಸಿಕೊಂಡು ಆಕ್ರೋಶಗೊಂಡಿದ್ದರು. ಅದರಂತೆ ರೌಡಿ ಕುಳ್ಳು ರಿಜ್ವಾನ್ ಯಾರು ಎಂದು ಗೊತ್ತಿಲ್ಲಾ ನಿನಗೆ ಎಂದು ಹೇಮಂತ್ನನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಹೇಮಂತ್ ಗೊತ್ತಿಲ್ಲಾ ಎಂದಾಗ ಮಾರಕಾಸ್ತ್ರಗಳಿಂದ ಮುಖವನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ಹಂತಕರ ವಿಕೃತಿ ಎಷ್ಟರ ಮಟ್ಟಿಗೆ ಇತ್ತು ಎಂದರೆ ನೂರಕ್ಕು ಹೆಚ್ಚು ಬಾರಿ ಮಚ್ಚಿನಲ್ಲಿ ಕೊಚ್ಚಿಸಿದ್ದಾರೆ. ತನ್ನ ಸ್ವಂತ ತಾಯಿಗೆನೇ ಮಗನ ಮುಖದ ಗುರುತು ಪತ್ತೆಹಚ್ಚಲಾಗದಂತೆ ಇಡೀ ಮುಖವೇ ಕಲಸಿ ಹೋಗಿತ್ತು. ಸಾಲದೆಂಬಂತೆ ಅದನ್ನು ವಿಡಿಯೋ ಮಾಡಿ ರೌಡಿ ಕುಳ್ಳು ರಿಜ್ವಾನ್ಗೆ ಕಳುಹಿಸಿ ಪರಾರಿಯಾಗಿದ್ದಾರೆ.
ಅಷ್ಟಕ್ಕೂ ಜು.16ರಂದು ನಡೆದಿದ್ದೇನು?
ಜು.16ರಂದು ಹೇಮಂತ್ನ ಬರ್ತ್ಡೆ. ಹೀಗಾಗಿ ಸ್ನೇಹಿತರೊಂದಿಗೆ ಸೇರಿಕೊಂಡು ಪಾರ್ಟಿ ಆಯೋಜಿಸಿದ್ದರು. ಪಾರ್ಟಿ ವೇಳೆ ರೌಡಿಸಂ ವಿಚಾರ ಬಂದಾಗ ಹೇಮಂತ್, ಯಾವ ರೌಡಿಗಳು? ಈಗ ಅದೆಲ್ಲಾ ಏನು ಇಲ್ಲ ಎಂದು ಹೇಳಿದ್ದಾನೆ. ಈ ವೇಳೆ ಅಲ್ಲೇ ಇದ್ದ ರೌರಿ ಕುಳ್ಳು ರಿಜ್ವಾನ್ ಶಿಷ್ಯರು ಮಾತು ಕೇಳಿಸಿ ಕೋಪಗೊಂಡಿದ್ದರು. ಪಾರ್ಟಿ ಮುಗಿಸಿ ಹೊರಗೆ ಬರುತ್ತಿದ್ದಂತೆ ರಿಜ್ವಾನ್ ಶಿಷ್ಯಂದಿರು ತಡೆದು ನಮ್ ಬಾಸ್ ನಮ್ಮ ಡಾನ್ ಕುಳ್ಳು ರಿಜ್ವಾನ್ ಗೊತ್ತಿಲ್ವಾ ಎಂದು ಪ್ರಶ್ನಿಸಿದ್ದರು. ಈ ವೇಳೆ ಗೊತ್ತಿಲ್ಲಾ ಎಂದು ಕೂಗಾಡಿದಾಗ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿತ್ತು. ಹೇಮಂತ್ ಮುಖದ ಗುರುತು ಸಿಗದಂತೆ ಕೊಚ್ಚಿ ಹಾಕಿ ಪರಾರಿಯಾಗಿದ್ದರು.
ಕುಳ್ಳು ಶಿಷ್ಯಂದಿರೇ ಕೊಲೆ ನಡೆಸಿದ್ದಾರೆ ಎಂದು ತಿಳಿದದ್ದೇ ರೋಚಕ
ಹೇಮಂತ್ನ ಕೊಲೆಯನ್ನು ಕುಳ್ಳು ರಿಜ್ವಾನ್ನ ಶಿಷ್ಯಂದಿರೇ ಮಾಡಿದ್ದಾರೆ ಎಂದು ತಿಳಿದದ್ದೇ ಒಂದು ರೋಚಕ. ಆರಂಭದಲ್ಲಿ ಕೆಂಗೇರಿ ಪೊಲೀಸರು ತನಿಖೆ ನಡೆಸಿದಾಗ ಸ್ನೇಹಿತರೇ ಮದ್ಯದ ನಶೆಯಲ್ಲಿ ಕೊಲೆ ಮಾಡಿರಬಹುದು ಎಂದು ಶಂಕಿಸಿದ್ದರು. ಅದರಂತೆ ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರು ಕೊಲೆ ಮಾಡಿಲ್ಲ ಎಂಬುದು ತಿಳಿದುಬರುತ್ತದೆ. ಆದರೇ ಕೊಲೆಯ ನಿಜವಾದ ಹಂತಕರ ಬಗ್ಗೆ ಸುಳಿವು ಸಿಕ್ಕಿದ್ದೇ ಕೆಂಪೇಗೌಡ ನಗರ ಪೊಲೀಸರು ರೌಡಿ ಕುಳ್ಳು ರಿಜ್ವಾನ್ನನ್ನು ಬಂಧಿಸಿದಾಗ.
ಕೆಂಗೇರಿ ಪೊಲೀಸರು ಹೇಮಂತ್ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವಾಗ ಕೆಂಪೇಗೌಡ ನಗರ ಪೊಲೀಸರು ಶಿವಮೊಗ್ಗದಲ್ಲಿ ಕುಳ್ಳು ರಿಜ್ವಾನ್ನನ್ನು ಬಂಧಿಸಿದ್ದಾರೆ. ಈ ವೇಳೆ ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಹೇಮಂತ್ನನ್ನು ಕೊಲೆ ಮಾಡಿದಾಗ ಚಿತ್ರೀಕರಿಸಿದ ವಿಡಿಯೋ ಪತ್ತೆಯಾಗಿದೆ. ಇದನ್ನು ನೀಡಿದ ಪೊಲೀಸರೇ ಒಮ್ಮೆ ಶಾಕ್ ಆಗಿದ್ದಾರೆ.
ವಿಡಿಯೋ ನೋಡಿದ ಪೊಲೀಸರು ರಿಜ್ವಾನ್ನನ್ನು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೊಲೆ ರಹಸ್ಯ ಬಯಲಿಗೆ ಬಂದಿದೆ. ಬೆಂಗಳೂರಿನ ಹಲವೆಡೆ ಡ್ರಗ್ಸ್ ಪೂರೈಕೆ, ರಾಬರಿ, ಕೊಲೆಯತ್ನ, ಹಫ್ತಾ ವಸೂಲಿ, ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಸೇರಿದಂತೆ ಹಲವಾರು ಕೃತ್ಯಗಳಲ್ಲಿ ರಿಜ್ವಾನ್ ಭಾಗಿಯಾಗಿರುವುದು ತಿಳಿದುಬಂದಿದೆ.
ಕುಳ್ಳು ರುಜ್ವಾನ್ ಟೀಂನಲ್ಲಿದ್ದಾರೆ ನೂರಾರು ರೌಡಿಗಳು
ಕುಳ್ಳು ರಿಜ್ವಾನ್ ಅಂತಿಂತಹ ರೌಡಿಯಲ್ಲ. ಈತನ ಹಿಂದೆ 200ಕ್ಕೂ ಹೆಚ್ಚು ರೌಡಿಗಳು ಇರುವ ಮಾಹಿತಿ ಬಹಿರಂಗವಾಗಿದೆ. ಈ ರೌಡಿಗಳೆಲ್ಲಾ ರಿಜ್ವಾನ್ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ. ಸದ್ಯ ಸೈಕಲ್ ರವಿ ಮತ್ತು ಬೇಕರಿ ರಘುನನ್ನು ಮುಗಿಸಿ ಬೆಂಳೂರು ದಕ್ಷಿಣ ಭಾಗದ ಏಕೈಕ ಡಾನ್ ಆಗಬೇಕು ಎಂಬ ಲೆಕ್ಕಾಚಾರದಲ್ಲಿ ಕುಳ್ಳು ರಿಜ್ವಾನ್ ಇದ್ದ ಎನ್ನುವುದು ತಿಳಿದುಬಂದಿದೆ.
ರಿಜ್ವಾನ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ
ಹಲವು ಅಪರಾಧಗಳಲ್ಲಿ ಭಾಗಿಯಾಗಿದ್ದ ಕುಳ್ಳು ರಿಜ್ವಾನ್ ಬಂಧನಕ್ಕೆ ನ್ಯಾಯಾಲಯದಿಂದ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಈ ಬಗ್ಗೆ ದಕ್ಷಿಣ ವಿಭಾಗ ಡಿಸಿಪಿ ಕೃಷ್ಣಕಾಂತ್ ಹೇಳಿಕೆ ನೀಡಿದ್ದು, ಅರೋಪಿ ವಿರುದ್ದ ನಗರದ ಹಲವು ಠಾಣೆಗಳಲ್ಲಿ ಕೊಲೆ ಯತ್ನ, ಕೊಲೆ, ಡರೋಡೆ, ಗಾಂಜಾ ಮಾರಾಟ ಸೇರಿ ಹಲವು ಪ್ರಕರಣಗಳು ದಾಖಲಾಗಿವೆ. ಕಳೆದ ಎರಡು ವರ್ಗಳಿಂದ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆ ಆರೋಪಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಅದರಂತೆ ರಿಜ್ವಾನ್ ಬಂಧನಕ್ಕೆ ಕೆಜಿ ನಗರ ಇನ್ಸ್ಪೆಕ್ಟರ್ ನೇತೃತ್ವದ ತಂಡವನ್ನು ರಚನೆ ಮಾಡಲಾಗಿತ್ತು. ಇನ್ಸ್ಪೆಕ್ಟರ್ ರಕ್ಷಿತ್ ಮತ್ತು ತಂಡ ಶಿವಮೊಗ್ಗದ ಗುರುಪುರದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
Published On - 7:15 am, Sat, 23 July 22