ಬೆಳಗಾವಿ: ಮದುವೆ ಪಾರ್ಟಿಯಲ್ಲಿ ಚಿಕನ್ ಪೀಸ್​ಗಾಗಿ ಜಗಳ, ಸ್ನೇಹಿತನ ಕೊಲೆ

ಮದುವೆಯಾದ ಖುಷಿಗೆ ತನ್ನೆಲ್ಲ ಸ್ನೇಹಿತರಿಗೆ ಎಣ್ಣೆ ಹಾಗೂ ನಾನ್ ವೆಜ್ ಪಾರ್ಟಿ ಏರ್ಪಡಿಸಿದ್ದನು. ಪಾರ್ಟಿಯಲ್ಲಿ ಚಿಕನ್ ಪೀಸ್ ಜಾಸ್ತಿ ಹಾಕಲಿಲ್ಲ ಎಂದು ಆರಂಭವಾದ ಜಗಳ, ಕೊಲೆಯಲ್ಲಿ ಅಂತ್ಯವಾಗಿದೆ. ಚಿಕನ್ ಮಾಡಲು ತಂದಿದ್ದ ಚಾಕುನಿಂದ ಇರಿದು ಯುವಕನೊಬ್ಬನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಎಣ್ಣೆ ಪಾರ್ಟಿ ಓರ್ವನ ಜೀವ ಬಲಿ ಪಡೆದಿದೆ.

ಬೆಳಗಾವಿ: ಮದುವೆ ಪಾರ್ಟಿಯಲ್ಲಿ ಚಿಕನ್ ಪೀಸ್​ಗಾಗಿ ಜಗಳ, ಸ್ನೇಹಿತನ ಕೊಲೆ
ಕೊಲೆಯಾದ ವಿನೋದ್​
Edited By:

Updated on: Jul 14, 2025 | 7:32 PM

ಬೆಳಗಾವಿ, ಜುಲೈ 14: ಯರಗಟ್ಟಿ (Yaragatti) ತಾಲೂಕಿನ ಸೊಪಡ್ಲ ಗ್ರಾಮದ ಹೊರ ವಲಯದಲ್ಲಿ ರವಿವಾರ (ಜು.13) ರಾತ್ರಿ ನಡೆದ ಎಣ್ಣೆ ಪಾರ್ಟಿಯಲ್ಲಿ ಚಿಕನ್ (Chicken) ಪೀಸ್​ಗಾಗಿ ಓರ್ವ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ವಿನೋದ್ ಮಲಶಟ್ಟಿ (30 ವರ್ಷ) ಕೊಲೆಯಾದ ಯುವಕ. ವಿಠ್ಠಲ್​ ಹಾರಗೊಪ್ಪ ಕೊಲೆ ಮಾಡಿದ ಆರೋಪಿ.

ಮೃತ ವಿನೋದ್​ ಕೂಲಿ ಕೆಲಸ ಮಾಡಿಕೊಂಡು ಸಂಸಾರದ ಬಂಡಿಯನ್ನು ಎಳೆದುಕೊಂಡು ಹೋಗುತ್ತಿದ್ದನು. ವಿನೋದ್ ಮಲಶೆಟ್ಟಿಯ ಸ್ನೇಹಿತ ಅಭಿಷೇಕ ಕೊಪ್ಪದ ಎಂಬುವರು ಎರಡು ತಿಂಗಳ ಹಿಂದೆ ಮದುವೆಯಾಗಿದ್ದಾರೆ. ಮದುವೆಯಾದ ಸಂಭ್ರಮದಲ್ಲಿ ಅಭಿಷೇಕ ಭಾನುವಾರ ತನ್ನ ಸ್ನೇಹಿತರಾದ ವಿನೋದ್ ಮಲಶೆಟ್ಟಿ ಹಾಗೂ ವಿಠ್ಠಲ್ ಹಾರೋಗೊಪ್ಪ ಸೇರಿದಂತೆ 30ಕ್ಕೂ ಹೆಚ್ಚು ಜನರಿಗೆ ಸೊಪಡ್ಲ ಗ್ರಾಮದ ಹೊರ ವಲಯದಲ್ಲಿ ಎಣ್ಣೆ ಪಾರ್ಟಿ ಆಯೋಜನೆ ಮಾಡಿದ್ದರು.

ಪಾರ್ಟಿಯಲ್ಲಿ ಚಿಕನ್​ ಪೀಸ್​ಗಾಗಿ ವಿನೋದ​ನು​ ವಿಠ್ಠಲ್ ಹಾರೊಗೊಪ್ಪ ಜೊತೆ ಜಗಳ ತೆಗೆದಿದ್ದಾನೆ. ಜಗಳ ತಾರಕಕ್ಕೇರಿದೆ. ಆಗ, ವಿಠ್ಠಲ್ ಹಾರೊಗೊಪ್ಪ ಅಡುಗೆಗೆ ಬಳಿಸಿದ್ದ ಚಾಕುವಿನಿಂದ ವಿನೋದ್​ನ ಎದೆಗೆ ಇರಿದು ಕೊಲೆ ಮಾಡಿದ್ದಾನೆ. ಘಟನೆ ನಡೆದ ತಕ್ಷಣ ಮುರಗೋಡ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಚ್ಚುವರಿ ಎಸ್ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಮಾಹಿತಿ ಪಡೆದರು. ಕೊಲೆ ಮಾಡಿದ ಆರೋಪಿ ವಿಠ್ಠಲ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಯುವ ಗಾಯಕನ ಕೊಲೆ, ಕೇವಲ 5000 ಹಣಕ್ಕೆ ಉತ್ತರ ಕರ್ನಾಟಕ ಜನಪದ ಹಾಡುಗಾರ ದುರಂತ ಅಂತ್ಯ

ಕೇವಲ ಚಿಕನ್​ಗಾಗಿ ಜಗಳ ನಡೆಯಿತಾ? ಅಥವಾ ಬೇರೆ ಏನಾದರು ಕಾರಣ ಇದೆಯಾ? ಪಾರ್ಟಿಯಲ್ಲಿ ಸಾಕಷ್ಟು ಜನ ಸ್ನೇಹಿತರು ಇದ್ದರೂ ಕೂಡ ಏಕೆ ಕೊಲೆಯನ್ನು ತಡೆಯಲಿಲ್ಲ ಎಂಬ ಅನುಮಾನ ಮುರುಗೋಡ ಪೊಲೀಸರಿಗೆ ಮೂಡಿದ್ದು ತನಿಖೆ ನಡೆಸುತ್ತಿದ್ದಾರೆ.

ಚಿಕನ್ ವಿಷಯಕ್ಕೆ ಜಗಳವಾದರೂ ಇಬ್ಬರ ನಡುವೆ ಆಗಾಗ ಹಣಕಾಸಿನ ವಿಚಾರಕ್ಕೂ ಕೂಡ ಗಲಾಟೆಯಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದ್ದು, ಈ ಆಯಾಮದಲ್ಲೂ ಕೂಡ ತನಿಖೆ ನಡೆಯುತ್ತಿದೆ. ಒಟ್ಟಾರೆಯಾಗಿ ಖುಷಿ ಖುಷಿಯಾಗಿ ನಡೆಯಬೇಕಿದ್ದ ಮದುವೆ ಪಾರ್ಟಿಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:05 pm, Mon, 14 July 25