ಬೆಳಗಾವಿ: ಸಮಾಜಘಾತು (anti-social) ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ ಆರೋಪಿಗಳಿಗೆ (accused) ಬೆಳಗಾವಿ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ. ಮಟ್ಕಾ ಕೇಸ್ನಲ್ಲಿ ಆ್ಯಕ್ಟಿವ್ ಆಗಿದ್ದ 10 ಜನ ಮತ್ತು ಅಕ್ರಮ ಮರಳು ಸಾಗಣೆ ಕೇಸ್ನಲ್ಲಿ ಇಬ್ಬರು ಆರೋಪಿಗಳನ್ನು ಜಿಲ್ಲೆಯಿಂದ ಬೇರೆ ಜಿಲ್ಲೆಗಳಿಗೆ ಗಡಿಪಾರು ಮಾಡಲಾಗಿದೆ. ಮೀರಸಾಬ್ ಬಾಗಡಿ, ಸದಾಶಿವ ಗೊಡಮಾಲೆ, ಮಹದೇವ ಕಾಂಬಳೆ, ರವಿ ಶಿಂಗೆ, ಕಾಶಪ್ಪ ಕಾರಿಕೊಳ, ಪ್ರದೀಪ್ ಕರಡಿ, ಅಲಿ ಮುರ್ತುಜಾ ಬಾಬಾಸಾಬ್ ನದಾಫ್, ಸಾಹೆಬಹುಸೇನ್ ಚಮನ ಮಲಿಕ್, ನಜೀರ್ ಲಕ್ಷ್ಮಣ ಪೋಳ, ಅಲ್ತಾಫ್ ಹುಸೇನ್ ಮೇವೆಗಾರ ಗಡಿಪಾರು ಮಾಡಲಾಗಿದೆ ಎಂದು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ಹೇಳಿಕೆ ನೀಡಿದರು. ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಇತ್ತಿಚೀನ ದಿನಗಳಲ್ಲಿ ಕೆಲವರು ಬಾಲ ಬಿಚ್ಚುತ್ತಾ ಅಕ್ರಮ ಚಟುವಟಿಯಲ್ಲಿ ಭಾಗಿಯಾಗಿದ್ದು, ಕಾನೂನು ಕೈಗೆತ್ತಿಕೊಳ್ಳುವ ಪುಡಾರಿಗಳ ವಿರುದ್ದ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಿದೆ.
ಈಗಾಗಲೇ ಹಲವು ಬಾರಿ ವಾರ್ನ್ ಮಾಡುವುದರ ಜತೆಗೆ ಜೈಲಿಗೆ ಕಳುಹಿಸಿ ಬುದ್ಧಿ ಕಲಿಸುವ ಕೆಲಸ ಮಾಡಿದರು ಬದಲಾಗದ ಆಸಾಮಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದರ ಮೂಲಕ ಖಡಕ್ ಸಂದೇಶ ರವಾನಿಸಿದೆ. ಇತ್ತಿಚೀನ ದಿನಗಳಲ್ಲಿ ಮಹಾರಾಷ್ಟ್ರದ ಲಿಂಕ್ ಇಟ್ಟುಕೊಂಡು ಕೆಲವರು ಅಲ್ಲಿ ಅಧಿಕೃತವಾಗಿರುವ ಮಟಕಾ ಮತ್ತು ಲಾಟರಿಯನ್ನ ಗಡಿಯಲ್ಲಿ ಚಾಲ್ತಿಯಲ್ಲಿಡುವ ಕೆಲಸ ಮಾಡಿದ್ದಾರೆ, ಇದೇ ಕಾರಣಕ್ಕೆ ಅಲರ್ಟ್ ಆಗಿರುವ ಬೆಳಗಾವಿ ಪೊಲೀಸರು ಮಟಕಾ ಕಿಂಗ್ ಪೀನ್ ಗಳನ್ನೇ ಊರು ಬಿಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಇದರ ಜತೆಗೆ ಅಕ್ರಮ ಮರಳು ಸಾಗಾಣಿಕೆ ಮಾಡುತ್ತ ದೌರ್ಜನ್ಯ ತೋರುತ್ತಾ ಮೆರೆಯುತ್ತಿದ್ದವರಿಗೂ ಇಲಾಖೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದೆ.
ಬೆಳಗಾವಿ ಜಿಲ್ಲಾ ಪೊಲೀಸರು ಯಾರೆಲ್ಲಾ ಅಕ್ರಮ ಚಟುವಟಿಕೆಗಳಲ್ಲಿ ಪದೇ ಪದೇ ಭಾಗಿಯಾಗುತ್ತಿದ್ದರು ಅಂತರ ಪಟ್ಟಿ ಮಾಡಿದ್ದು, ಒಂದಲ್ಲಾ ಎರಡಲ್ಲಾ ಬರೋಬ್ಬರಿ ಹತ್ತು ಜನರನ್ನ ಜಿಲ್ಲೆಯಿಂದ ಗಡಿಪಾರು ಮಾಡಿದೆ. ಪ್ರತಿಯೊಬ್ಬರ ಡಿಟೈಲ್ ಸಮೇತ ಚಿಕ್ಕೋಡಿ ಉಪ ವಿಭಾಗಾಧಿಕಾರಿಗೆ ಎಸ್.ಪಿ ಸಂಜೀವ್ ಪಾಟೀಲ್ ಕಳುಹಿಸಿದ್ದು ಇದೀಗ ಉಪ ವಿಭಾಗಾಧಿಕಾರಿ ಹತ್ತು ಜನರನ್ನ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ತಪ್ಪಿತಸ್ಥರಿಗೆ ಉಳಿಗಾಲ ಇಲ್ಲಾ ಅನ್ನೋದನ್ನ ಇಲಾಖೆ ಮತ್ತೊಮ್ಮೆ ಎಚ್ಚರಿಸುವ ಕೆಲಸ ಮಾಡಿದೆ.
ಇನ್ನೂ ಹನ್ನೆರಡು ಜನರ ಪೈಕಿ ಹತ್ತು ಜನರು ಮಟಕಾ ಕೇಸ್ಗಳಲ್ಲೇ ಭಾಗಿಯಾಗಿದ್ದು, ಇನ್ನಿಬ್ಬರು ಅಕ್ರಮ ಮರಳು ಸಾಗಾಣಿಕೆ ಹಾಗೂ ಕಳ್ಳತನ ಪ್ರಕರಣದಲ್ಲಿ ಭಾಗಿಯಾದವರಿದ್ದಾರೆ. ಎಲ್ಲರನ್ನೂ ಇದೀಗ ಗಡಿಪಾರು ಮಾಡಲಾಗಿದೆ. ಈ ಕುರಿತಾಗಿ ಮಾತನಾಡಿದ ಎಸ್.ಪಿ ಡಾ.ಸಂಜೀವ ಪಾಟೀಲ್ ಸಮಾಜಘಾತುಕ ಶಕ್ತಿಗಳನ್ನ ಬಿಡುವುದಿಲ್ಲ. ಜತೆಗೆ ಯಾರಿಂದಾದ್ರೂ ಅನ್ಯಾಯ ಆಗುತ್ತಿದ್ದರೆ, ಯಾರಾದ್ರೂ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದ್ದು ಗೊತ್ತಾದ್ರೇ ಸಾರ್ವಜನಿಕರು ಮಾಹಿತಿ ನೀಡುವಂತೆ ಎಸ್.ಪಿ ಮನವಿ ಮಾಡಿದ್ದಾರೆ. ಸದ್ಯ ಮಹಾರಾಷ್ಟ್ರದಲ್ಲಿ ಮಟಕಾ ಜೋರಾಗಿದ್ದು, ಅಲ್ಲಿಂದ ಲಿಂಕ್ ಇಟ್ಟುಕೊಂಡು ಕೆಲವರು ಗಡಿ ಭಾಗದಲ್ಲಿ ಮಟಕಾ ದಂಧೆ ಜೋರಾಗಿ ನಡೆಸುತ್ತಿದ್ದು, ಇದೀಗ ಅಂತವರ ಮೇಲೆ ಕಣ್ಣೀಟ್ಟಿರುವ ಪೊಲೀಸರು ಅವರನ್ನ ಹೆಡೆಮುರಿ ಕಟ್ಟಲು ಈ ಗಡಿಪಾರು ಅಸ್ತ್ರ ಪ್ರಯೋಗ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:14 pm, Wed, 2 November 22